ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಜನರ ತೀರ್ಪಿನ ಹಿಂದೆ ಸಂದೇಶ: ಕಿವಿಗೊಡುವ ಕೆಲಸ ಆಗಬೇಕಿದೆ

Published 7 ಜೂನ್ 2024, 23:51 IST
Last Updated 7 ಜೂನ್ 2024, 23:51 IST
ಅಕ್ಷರ ಗಾತ್ರ

ಎರಡು ರಾಜ್ಯಗಳ ಲೋಕಸಭಾ ಕ್ಷೇತ್ರಗಳಿಂದ ಚುನಾವಣಾ ಕಣಕ್ಕೆ ಇಳಿದಿದ್ದ ಇಬ್ಬರು ಅಭ್ಯರ್ಥಿಗಳ ಗೆಲುವು ದೇಶದ ಗಮನ ಸೆಳೆದಿದೆ. ಇವರಿಬ್ಬರೂ ಜೈಲಿನಿಂದ ಸ್ಪರ್ಧಿಸಿದ್ದರು, ಇಬ್ಬರ ವಿರುದ್ಧವೂ ರಾಷ್ಟ್ರೀಯ
ಭದ್ರತಾ ಕಾಯ್ದೆ (ಎನ್‌ಎಸ್‌ಎ) ಹಾಗೂ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯ (ಯುಎಪಿಎ) ಅಡಿಯಲ್ಲಿ ಗಂಭೀರ ಸ್ವರೂಪದ ಪ್ರಕರಣಗಳು ದಾಖಲಾಗಿವೆ. ಮತೀಯ ತೀವ್ರಗಾಮಿಯಾಗಿ ಗುರುತಿಸಿಕೊಂಡಿರುವ ಇನ್ನೊಬ್ಬ ವ್ಯಕ್ತಿ ಕೂಡ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇವರೆಲ್ಲರೂ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದು, ಮುಖ್ಯವಾಹಿನಿಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಎದುರು ಜಯ ಸಾಧಿಸಿದ್ದಾರೆ. ವಾರಿಸ್ ಪಂಜಾಬ್ ಡೆ ಮುಖ್ಯಸ್ಥ ಹಾಗೂ ಧಾರ್ಮಿಕ ಬೋಧಕ, ಡಿಬ್ರುಗಢ ಜೈಲಿನಲ್ಲಿ ಬಂದಿಯಾಗಿರುವ ಅಮೃತಪಾಲ್ ಸಿಂಗ್ ಅವರು ಪಂಜಾಬ್‌ನ ಖಡೂರ್ ಸಾಹಿಬ್ ಕ್ಷೇತ್ರದಲ್ಲಿ ಗೆಲುವು ಕಂಡಿದ್ದಾರೆ. ಇಂದಿರಾ ಗಾಂಧಿ ಅವರನ್ನು ಹತ್ಯೆ ಮಾಡಿದ ಬೇಅಂತ್ ಸಿಂಗ್ ಪುತ್ರ ಸರಬ್ಜಿತ್ ಸಿಂಗ್ ಖಾಲ್ಸಾ ಅವರು ಫರೀದ್‌ಕೋಟ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ.
ಭಯೋತ್ಪಾದನಾ ಕೃತ್ಯವೊಂದಕ್ಕೆ ಹಣದ ನೆರವು ಒದಗಿಸಿದ ಆರೋಪದ ಅಡಿ ತಿಹಾರ್ ಜೈಲಿನಲ್ಲಿ ಇರುವ ಎಂಜಿನಿಯರ್ ರಶೀದ್ ಅವರು ನ್ಯಾಷನಲ್‌ ಕಾನ್ಫರೆನ್ಸ್‌ ಮುಖಂಡ ಒಮರ್ ಅಬ್ದುಲ್ಲಾ ಅವರನ್ನು ಬಾರಾಮುಲ್ಲಾ ಕ್ಷೇತ್ರದಲ್ಲಿ ಸೋಲಿಸಿದ್ದಾರೆ. ಮುಖ್ಯವಾಹಿನಿಯ ರಾಜಕೀಯ ಪಕ್ಷಗಳಿಗೆ ಈ
ಕ್ಷೇತ್ರಗಳಲ್ಲಿ ಜನರ ಭಾವನೆಗಳಿಗೆ ಸ್ಪಂದಿಸಲು, ಅವರ ನಿರ್ದಿಷ್ಟ ಸಮಸ್ಯೆಗಳಿಗೆ ಸ್ಪಂದಿಸಲು ಆಗಲಿಲ್ಲ ಎಂಬುದನ್ನು ಈಗಷ್ಟೇ ಕೊನೆಗೊಂಡಿರುವ ಲೋಕಸಭಾ ಚುನಾವಣೆಯು ಹೇಳುತ್ತಿದೆ.

ಅಮೃತಪಾಲ್ ಸಿಂಗ್ ಮತ್ತು ಸರಬ್ಜಿತ್ ಸಿಂಗ್ ಅವರು ಕಾಂಗ್ರೆಸ್, ಎಎಪಿ ಹಾಗೂ ಅಕಾಲಿದಳದ ಅಭ್ಯರ್ಥಿಗಳನ್ನು ಭಾರಿ ಅಂತರದಿಂದ ಸೋಲಿಸಿದ್ದಾರೆ. ಕಳೆದ ಕೆಲವು ವರ್ಷಗಳ ಅವಧಿಯಲ್ಲಿ ಪಂಜಾಬ್‌ನ ಸಾಮಾಜಿಕ ಹಾಗೂ ರಾಜಕೀಯ ಬದುಕಿನಲ್ಲಿ ಬಹಳಷ್ಟು ಬದಲಾವಣೆಗಳು ಆಗಿವೆ. ಭಿಂದ್ರನ್‌ವಾಲೆ ನೇತೃತ್ವದ ಉಗ್ರಗಾಮಿ ಚಟುವಟಿಕೆಗಳು 1990ರ ದಶಕದಲ್ಲಿ ಕೊನೆಗೊಂಡಿದ್ದರೂ, ನಂತರದ ವರ್ಷಗಳಲ್ಲಿ ರಾಜ್ಯವು ಆರ್ಥಿಕತೆಯ ಕುಸಿತ, ನಿರುದ್ಯೋಗ ಹೆಚ್ಚಳ, ಮಾದಕ ವಸ್ತುಗಳ ವ್ಯಾಪಕ ಬಳಕೆ, ಅಲ್ಲಿ–ಇಲ್ಲಿ ವರದಿಯಾಗುವ ಭಯೋತ್ಪಾದಕ ಕೃತ್ಯಗಳ ಸಮಸ್ಯೆಯನ್ನು ಎದುರಿಸಿದೆ. ಅಕಾಲಿದಳ ಹಾಗೂ ಬಿಜೆಪಿ ನಡುವಿನ ಹೊಂದಾಣಿಕೆಯು ಮುರಿದುಬಿದ್ದಿದ್ದು, ಕೆಲವು ಪ್ರದೇಶಗಳಲ್ಲಿ ರಾಜಕೀಯದ ಹಿಂದೆ ಇರುವ ಕೋಮುವಾದಿ ನೆಲೆಗಳ ಮೇಲೆ ಒಂದಿಷ್ಟು ಬೆಳಕು ಚೆಲ್ಲುವ ಕೆಲಸ ಮಾಡಿದೆ. ಎಎಪಿಯು ಪ್ರವರ್ಧಮಾನಕ್ಕೆ ಬಂದ ನಂತರದಲ್ಲಿ ಹಲವು ಕಡೆಗಳಲ್ಲಿ ಮುಖ್ಯವಾಹಿನಿಯ ರಾಜಕಾರಣವು ದುರ್ಬಲಗೊಂಡಿತು. ಅಮೃತಪಾಲ್ ಸಿಂಗ್ ಅವರು ತಮ್ಮ ಚುನಾವಣಾ ಪ್ರಚಾರಗಳಲ್ಲಿ ಹಾಗೂ ಕಳೆದ ವರ್ಷ ತಮ್ಮ ಬಂಧನ ಆಗುವುದಕ್ಕೂ ಮೊದಲು ಪ್ರಮುಖವಾಗಿ ಹೇಳಿದ್ದ ಒಂದು ಸಂಗತಿ ರಾಜ್ಯದಲ್ಲಿ ವ್ಯಾಪಕವಾಗಿರುವ ಮಾದಕವಸ್ತು ಸೇವನೆಯ ಕುರಿತಾಗಿತ್ತು. ಹರಿಯಾಣ ಜೊತೆ ನೀರು ಹಂಚಿಕೆ, 1984ರ ಸಿಖ್ ವಿರೋಧಿ ಗಲಭೆ, ಸಿಖ್ ರಾಜಕೀಯ ಕೈದಿಗಳ ಪೈಕಿ ಹಲವರನ್ನು ಇನ್ನೂ ಜೈಲಿನಲ್ಲಿಯೇ ಇರಿಸಿರುವುದು ಪಂಜಾಬ್‌ನಲ್ಲಿ ಜನರು ಸ್ಪಂದಿಸುವಂತೆ ಮಾಡುವ ಕೆಲವು ಪ್ರಮುಖ ವಿಷಯಗಳು. ರಶೀದ್ ಅವರು ಕಾಶ್ಮೀರದಲ್ಲಿ ಜಯ ಸಾಧಿಸಿರುವುದು ಕೂಡ ಸಾಂಪ್ರದಾಯಿಕ ರಾಜಕಾರಣದ ವಿರುದ್ಧ ದಾಖಲಾಗಿರುವ ಒಂದು ಗೆಲುವು. ಪಿಡಿಪಿ ನಾಯಕಿ, ಕಾಶ್ಮೀರದ ಕುಟುಂಬ ರಾಜಕಾರಣದ ಮುಖವಾಗಿರುವ ಮೆಹಬೂಬಾ ಮುಫ್ತಿ ಅವರು ಅನಂತನಾಗ್-ರಜೌರಿಯಲ್ಲಿ ಸೋಲು ಕಂಡಿದ್ದಾರೆ. ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು
ಮರಳಿ ನೀಡುವುದಾಗಿ, ಅಲ್ಲಿ ವಿಧಾನಸಭಾ ಚುನಾವಣೆಯನ್ನು ನಡೆಸುವುದಾಗಿ ಕೇಂದ್ರ ಸರ್ಕಾರ ಹೇಳಿದೆಯಾದರೂ ಆ ಭರವಸೆಗಳು ಈಡೇರಿಲ್ಲ. ಆದರೆ ಲೋಕಸಭಾ ಚುನಾವಣೆಯಲ್ಲಿ ಇಲ್ಲಿ ಜನ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ. ಇಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಂತೆ ನೀಡಿದ ಕೆಲವು ಭರವಸೆಗಳು ಕೂಡ ಈಡೇರಿಲ್ಲ. ಆದರೆ ಕಾಶ್ಮೀರದ ಜನ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿರುವುದು ಅವರು ಪ್ರಜಾತಂತ್ರದಲ್ಲಿ ಇರಿಸಿರುವ ನಂಬಿಕೆಯನ್ನು ತೋರಿಸುತ್ತಿದೆ. ಚುನಾವಣಾ ಫಲಿತಾಂಶವು ಅಲ್ಲಿನ ರಾಜಕಾರಣದ ಕುರಿತು ಜನರಲ್ಲಿ ಆಗಿರುವ ಭ್ರಮನಿರಸನವನ್ನು ತೋರಿಸುತ್ತಿದೆ. 

ಸಾಂಪ್ರದಾಯಿಕ ದೃಷ್ಟಿಕೋನದಿಂದ ನೋಡಿದಾಗ, ಜಯ ಸಾಧಿಸಿರುವ ಮೂರೂ ಮಂದಿ
ತೀವ್ರಗಾಮಿಗಳಾಗಿ, ಪಕ್ಷಗಳು ಕಟ್ಟಿದ ವ್ಯವಸ್ಥೆಗೆ ಹೊರಗಿನವರಾಗಿ ಕಾಣಿಸುತ್ತಾರೆ. ಆದರೆ ಅವರನ್ನು ಚುನಾಯಿಸಿದ ಜನರು ಒಂದು ಸಂದೇಶವನ್ನು ರವಾನಿಸಿ ಆಗಿದೆ. ಆ ಸಂದೇಶಕ್ಕೆ ಕಿವಿಗೊಡುವ ಕೆಲಸ ಆಗಬೇಕಿದೆ. ಜಯ ಸಾಧಿಸಿರುವವರನ್ನು ಜೊತೆಗೆ ಸೇರಿಸಿಕೊಳ್ಳುವ ಕೆಲಸ ಆಗಬೇಕು, ಅವರ ಜಯದ ಹಿಂದಿನ ಕಾರಣಗಳಿಗೆ ಸ್ಪಂದಿಸುವ ಕೆಲಸವೂ ಆಗಬೇಕು. ಇವನ್ನೆಲ್ಲ ಪ್ರಜಾತಂತ್ರ ವ್ಯವಸ್ಥೆಯ ಚೌಕಟ್ಟಿನಲ್ಲಿ ಮಾತ್ರ ಮಾಡಲು ಸಾಧ್ಯ. ಭಿನ್ನಮತವನ್ನು ಮೃದುವಾಗಿಸುವ ಶಕ್ತಿಯು ಪ್ರಜಾತಂತ್ರ ವ್ಯವಸ್ಥೆಗೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT