ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಲ್‌ ದೇಶಮುಖ್‌: ಸಚಿವ ಸ್ಥಾನ ತೊರೆದುನೈತಿಕ ರಾಜಕಾರಣ ಎತ್ತಿ ಹಿಡಿಯಲಿ

Last Updated 24 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ನಮ್ಮ ವ್ಯವಸ್ಥೆಯಲ್ಲಿ ರಾಜಕಾರಣಿಗಳು, ಪೊಲೀಸರು ಮತ್ತು ಅಪರಾಧಿಗಳ ನಡುವಣ ಅಪವಿತ್ರ ಮೈತ್ರಿಯು ಸಾಮಾನ್ಯ ಜನರಿಗೆ ಜುಗುಪ್ಸೆ ಹುಟ್ಟಿಸುವಷ್ಟು ಗಾಢವಾಗಿದೆ. ರಾಜಕಾರಣಿಗಳ ನೈತಿಕತೆ, ಪೊಲೀಸರ ವೃತ್ತಿಪರತೆ ಪಾತಾಳಕ್ಕೆ ಕುಸಿದಿವೆ. ಎಲ್ಲರೂ ಹೀಗೆ ಎಂದೇನೂ ಅಲ್ಲ; ಆದರೆ, ಇಂಥವರ ಸಂಖ್ಯೆ ಹೆಚ್ಚು ಎಂಬುದು ವಾಸ್ತವ. ಅಧಿಕಾರಸ್ಥರ ಅನೈತಿಕತೆಯು ಜನರ ಮನಸ್ಸಿನಿಂದ ಮಾಸದಂತೆ ಮಾಡುವ ವಿದ್ಯಮಾನಗಳು ಪದೇ‍ಪದೇ ನಡೆಯುತ್ತಿವೆ. ಮಹಾರಾಷ್ಟ್ರದ ಗೃಹ ಸಚಿವ ಅನಿಲ್‌ ದೇಶಮುಖ್‌ ಅವರ ಮೇಲೆ ಮುಂಬೈನ ಮಾಜಿ ಪೊಲೀಸ್‌ ಆಯುಕ್ತ ಪರಮ್‌ವೀರ್‌ ಸಿಂಗ್‌ ಮಾಡಿರುವ ಲಂಚ ಮತ್ತು ಸುಲಿಗೆಯ ಆರೋಪ ಈ ಸಾಲಿಗೆ ಸೇರುವ ತೀರಾ ಇತ್ತೀಚಿನ ಪ್ರಕರಣ. ಸಚಿನ್‌ ವಾಜೆ ಎಂಬ ವಿವಾದಾತ್ಮಕ ಹಿನ್ನೆಲೆಯ ಪೊಲೀಸ್‌ ಅಧಿಕಾರಿಯ ಸುತ್ತಲೂ ಈ ಪ್ರಕರಣ ಗಿರಕಿ ಹೊಡೆಯುತ್ತಿದೆ. ‘ಎನ್‌ಕೌಂಟರ್’‌ನಲ್ಲಿ ತೀರಾ ಪಳಗಿದವರು ಎಂಬ ಹೆಸರನ್ನು ಈ ಅಧಿಕಾರಿ ಪಡೆದು ಕೊಂಡಿದ್ದರು. ಆದರೆ, ಯುವಕನೊಬ್ಬನ ಕಸ್ಟಡಿ ಸಾವಿಗೆ ಸಂಬಂಧಿಸಿ ಅಮಾನತಾಗಿದ್ದರು. ಬಳಿಕ, ಶಿವಸೇನಾವನ್ನು ಸೇರಿ ರಾಜಕಾರಣಿಯಾಗಿದ್ದರು. ಪ್ರಕರಣದಿಂದ ಖುಲಾಸೆ ಆಗದಿದ್ದರೂಅಮಾನತಾಗಿ 16 ವರ್ಷಗಳ ಬಳಿಕ ಅವರನ್ನು ಸೇವೆಗೆ ಸೇರಿಸಿ ಕೊಂಡಿದ್ದೇ ಒಂದು ವಿವಾದ. ಉದ್ಯಮಿ ಮುಕೇಶ್‌ ಅಂಬಾನಿ ಮನೆಯ ಸಮೀಪ ಸ್ಫೋಟಕ ತುಂಬಿದ್ದ ಕಾರು ಇರಿಸಿದ್ದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ವಾಜೆ ಅವರನ್ನು ಬಂಧಿಸಿದೆ. ತಿಂಗಳಿಗೆ ₹100 ಕೋಟಿ ಸುಲಿಗೆಯ ಹೊಣೆಯನ್ನು ಈ ಅಧಿಕಾರಿಗೆ ದೇಶಮುಖ್‌ ವಹಿಸಿದ್ದರು ಎಂದು ಪರಮ್‌ವೀರ್‌ ಸಿಂಗ್‌ ಹೇಳಿದ್ದಾರೆ. ಅಂಬಾನಿ ಮನೆ ಮುಂದೆ ನಿಲ್ಲಿಸಲಾಗಿದ್ದ ಕಾರಿನ ಮಾಲೀಕ ಮನ್‌ಸುಖ್‌ ಹಿರೇನ್‌ ಅಸಹಜ ಸಾವಿನ ಹಿಂದೆಯೂ ವಾಜೆ ಕೈವಾಡ ಇದೆ ಎಂಬ ಆರೋಪವೂ ಕೇಳಿ ಬಂದಿದೆ.

ಆರೋಪ ಹೊರಿಸಿದವರು ಮತ್ತು ಆರೋಪಿ ಇಬ್ಬರ ವಿಶ್ವಾಸಾರ್ಹತೆಯೂ ಪ್ರಶ್ನಾರ್ಹ ಎಂಬುದು ವಿಷಾದಕರ ಸತ್ಯ. ಗೃಹ ಸಚಿವ ಸ್ಥಾನದಲ್ಲಿರುವ ವ್ಯಕ್ತಿಯ ಮೇಲೆ ಮುಂಬೈ ನಗರದ ಪೊಲೀಸ್‌ ಆಯುಕ್ತ ಹುದ್ದೆಯಲ್ಲಿದ್ದ ಅಧಿಕಾರಿಯು ಮಾಡಿದ ಆರೋಪ ಗಂಭೀರವಾದುದು. ಈ ಆರೋಪದಿಂದ ಮುಕ್ತವಾಗುವವರೆಗೆ ಸಚಿವ ಸ್ಥಾನದಿಂದ ದೂರ ಇರುವುದು ನೈತಿಕತೆ ಇರುವ ರಾಜಕಾರಣಿ ಮಾಡಬೇಕಾದ ಮೊದಲ ಕೆಲಸ. ‘ತಿಂಗಳಿಗೆ ₹100 ಕೋಟಿ ಸುಲಿಗೆ ಮಾಡುವ ಹೊಣೆಯನ್ನು ತಮ್ಮ ಅಧೀನದ ಅಧಿಕಾರಿಯೊಬ್ಬರಿಗೆ ಸಚಿವರು ವಹಿಸಿದ್ದಾರೆ’ ಎಂಬುದನ್ನು ಪೊಲೀಸ್‌ ಆಯುಕ್ತ ಸ್ಥಾನದಿಂದ ಹೊರಹೋಗುವವರೆಗೂ ಮುಚ್ಚಿಟ್ಟದ್ದು ಸಣ್ಣ ಅಪರಾಧ ಏನಲ್ಲ. ಅಂತಹ ವ್ಯಕ್ತಿ ಮುಂಬೈನಂತಹ ಮಹಾನಗರದ ಪೊಲೀಸ್‌ ಆಯುಕ್ತ ಹುದ್ದೆಯಲ್ಲಿ ಮಾತ್ರವಲ್ಲ, ಸರ್ಕಾರದ ಯಾವುದೇ ಹುದ್ದೆಯಲ್ಲಿ ಇರುವುದಕ್ಕೂ ಅರ್ಹರಲ್ಲ. ದೇಶಮುಖ್‌, ಪರಮ್‌ವೀರ್‌ ಮತ್ತು ವಾಜೆ ಅವರ ಬಗ್ಗೆ ಸಮಗ್ರವಾದ ತನಿಖೆ ನಡೆಸಬೇಕಾಗಿದೆ. ಆದರೆ, ತನಿಖೆಯ ಬಗ್ಗೆ ವಿಶ್ವಾಸವೇ ಇಲ್ಲದ ಸ್ಥಿತಿ ನಿರ್ಮಾಣ ಆಗಿರುವುದು ದುರದೃಷ್ಟಕರ. ಮಹಾರಾಷ್ಟ್ರದಲ್ಲಿರುವ ರಾಜಕೀಯ ಪರಿಸ್ಥಿತಿಯೂ ಇದಕ್ಕೆ ಒಂದು ಕಾರಣ. ಸೈದ್ಧಾಂತಿಕವಾಗಿ ಭಿನ್ನ ನೆಲೆಯ ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ಮೈತ್ರಿಕೂಟವಾದ ಮಹಾ ವಿಕಾಸ ಅಘಾಡಿಯು ಕೇಂದ್ರದ ಆಡಳಿತಾರೂಢ ಬಿಜೆಪಿಗೆ ಸಡ್ಡು ಹೊಡೆದೇ ಅಧಿಕಾರಕ್ಕೆ ಬಂದಿದೆ. ಇದು ಬಿಜೆಪಿ ನಾಯಕರ ಅಹಂಗೆ ಬಹುದೊಡ್ಡ ಹೊಡೆತ ನೀಡಿದೆ. ಹಾಗಾಗಿ, ಈ ಸರ್ಕಾರವನ್ನು ಉರುಳಿಸುವುದು ಹೇಗೆ ಎಂಬ ಕಾರ್ಯತಂತ್ರವನ್ನು ಬಿಜೆಪಿ ಹೆಣೆಯುತ್ತಲೇ ಇದೆ ಎಂಬ ಆರೋಪದಲ್ಲಿ ಹುರುಳಿಲ್ಲದೇ ಇಲ್ಲ. ಕೇಂದ್ರ ಮತ್ತು ಮಹಾರಾಷ್ಟ್ರದ ನಡುವೆ ಒಕ್ಕೂಟ ವ್ಯವಸ್ಥೆಗೆ ತಕ್ಕುದಾದ ಸಂಬಂಧ ಇಲ್ಲ.ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರಗಳು ಪರಸ್ಪರರ ಮುಖಭಂಗಕ್ಕೆ ಕಾನೂನುಜಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡ ಹಲವು ವಿದ್ಯಮಾನಗಳು ನಡೆದಿವೆ. ಹಾಗಾಗಿ, ಕೇಂದ್ರದ್ದೇ ಆಗಲಿ ರಾಜ್ಯದ್ದೇ ಆಗಲಿ ತನಿಖಾ ಸಂಸ್ಥೆಗಳ ಬಗ್ಗೆ ಸಂಪೂರ್ಣ ನಂಬಿಕೆ ಇಡುವಂತೆ ಇಲ್ಲ ಎಂಬುದು ಬೇಸರದ ಸಂಗತಿ. ಇಂತಹ ಜಟಿಲ ಸನ್ನಿವೇಶವನ್ನು ಸವಾಲು ಎಂದು ಪರಿಗಣಿಸಿ, ನ್ಯಾಯಯುತ ಮತ್ತು ನಿಷ್ಠುರ ತನಿಖೆ ನಡೆಸುವ ಮೂಲಕ ತಮ್ಮ ವಿಶ್ವಾಸಾರ್ಹತೆಯ ಮರುಸ್ಥಾಪನೆಗೆ ತನಿಖಾ ಸಂಸ್ಥೆಗಳಿಗೆ ಇದು ಉತ್ತಮ ಅವಕಾಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT