ಮಂಗಳವಾರ, ಸೆಪ್ಟೆಂಬರ್ 21, 2021
26 °C

ವಾಹನ ತಯಾರಿಕೆ ಉದ್ದಿಮೆಯ ಬಿಕ್ಕಟ್ಟಿಗೆ ತುರ್ತು ಕ್ರಮ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇಶದಲ್ಲಿ ವಾಹನ ತಯಾರಿಕೆ ಉದ್ದಿಮೆ ಎದುರಿಸುತ್ತಿರುವ ಮಾರಾಟ ಕುಸಿತದ ಬಿಕ್ಕಟ್ಟು ದಿನೇ ದಿನೇ ವಿಷಮಗೊಳ್ಳುತ್ತಿದೆ. ಜುಲೈ ತಿಂಗಳಲ್ಲಿ ಕಾರ್‌, ಲಘು ಮತ್ತು ಭಾರಿ ಸರಕು ಸಾಗಣೆ ವಾಹನ, ತ್ರಿಚಕ್ರ ಹಾಗೂ ದ್ವಿಚಕ್ರ ವಾಹನಗಳ ಶೇಕಡಾವಾರು ಮಾರಾಟವು 19 ವರ್ಷಗಳಲ್ಲಿನ ಗರಿಷ್ಠ ಕುಸಿತ (ಶೇ 18.71) ಕಂಡಿದೆ. ಉದ್ದಿಮೆ ಎದುರಿಸುತ್ತಿರುವ ಅತಿದೊಡ್ಡ ಬಿಕ್ಕಟ್ಟು ಇದಾಗಿದೆ. ಲಕ್ಷಾಂತರ ಉದ್ಯೋಗ ನಷ್ಟದ ಭೀತಿ ಆವರಿಸಿದೆ. ಇದು, ವಾಹನ ಉದ್ದಿಮೆ ಕ್ಷೇತ್ರಕ್ಕೆ ಮಾತ್ರ ಸೀಮಿತವಾದ ಸಮಸ್ಯೆಯಾಗಿ ಉಳಿದಿಲ್ಲ. ಒಟ್ಟಾರೆ ಆರ್ಥಿಕತೆಯ ಪಾಲಿಗೆ ಎದುರಾಗಿರುವ ಗಂಡಾಂತರವೂ ಹೌದು. ತೀವ್ರ ಸ್ವರೂಪ ತಾಳುತ್ತಿರುವ ಈ ಬಿಕ್ಕಟ್ಟನ್ನು ಗಂಭೀರವಾಗಿ ವಿಶ್ಲೇಷಿಸಿ, ಪುನಶ್ಚೇತನಕ್ಕೆ ಕ್ರಮಗಳನ್ನು ಕೈಗೊಳ್ಳುವ ತುರ್ತು ಎದುರಾಗಿದೆ. ಈ ಹಿಂದೆ ಬೇಡಿಕೆ ಪೂರೈಸದಿರುವ, ನೈಸರ್ಗಿಕ ಪ್ರಕೋಪಗಳಿಂದ ತಯಾರಿಕೆ ಮತ್ತು ಪೂರೈಕೆಗೆ ಅಡಚಣೆ ಎದುರಾದ ಪ್ರಸಂಗಗಳಿದ್ದವು. ಸದ್ಯಕ್ಕೆ ವಾಹನಗಳ ಬೇಡಿಕೆಯು ಗರಿಷ್ಠ ಪ್ರಮಾಣದಲ್ಲಿ ತಗ್ಗಿರುವುದು ನಮ್ಮ ಆರ್ಥಿಕತೆಯಲ್ಲಿನ ಅತ್ಯಂತ ವಿರಳ ವಿದ್ಯಮಾನವಾಗಿದೆ. ಈ ಬಿಕ್ಕಟ್ಟಿಗೆ ಹಲವಾರು ಕಾರಣಗಳಿವೆ. ಸಾಲದ ಅಲಭ್ಯತೆ, ಶೇ 28ರ ಗರಿಷ್ಠ ಮಟ್ಟದ ಜಿಎಸ್‌ಟಿ, ಥರ್ಡ್‌ಪಾರ್ಟಿ ವಿಮೆಯ ಕಂತು ಹೆಚ್ಚಳ, ಮಾಲಿನ್ಯ ನಿಯಂತ್ರಣದ ಹೊಸ ಮಾನದಂಡವಾದ ಭಾರತ್ ಸ್ಟೇಜ್ (ಬಿಎಸ್‌)– 6 ಜಾರಿಯ ಪರಿಣಾಮಗಳಿಂದ ಉದ್ದಿಮೆಯು ನಲುಗುತ್ತಿದೆ. ವಾಹನ ಖರೀದಿಗೆ ಅಗತ್ಯವಾದ ಸಾಲದ ನೆರವು ಒದಗಿಸಿ, ಮಾರಾಟ ಉತ್ತೇಜಿಸುವ ಕೀಲೆಣ್ಣೆಯಂತೆ ಕಾರ್ಯನಿರ್ವಹಿಸುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ನಗದು ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿವೆ. ಇದರಿಂದ ತಯಾರಿಕಾ ಕಂಪನಿಗಳು, ವಿತರಕರು ಹಾಗೂ ವಾಹನ ಖರೀದಿದಾರರಿಗೆ ಸುಲಭವಾಗಿ ಸಾಲ ಸಿಗುತ್ತಿಲ್ಲ. ಸದ್ಯದ ಬಿಕ್ಕಟ್ಟಿಗೆ ಇವು ಪ್ರಧಾನ ಕಾರಣವಾಗಿವೆ. ಆರ್‌ಬಿಐನ ಅಗ್ಗದ ಬಡ್ಡಿ ದರದ ಪ್ರಯೋಜನವನ್ನು ಬ್ಯಾಂಕ್‌ ಮತ್ತು ಎನ್‌ಬಿಎಫ್‌ಸಿಗಳು ವಾಹನ ಖರೀದಿದಾರರಿಗೆ ಪೂರ್ಣವಾಗಿ ವರ್ಗಾಯಿಸದಿರುವುದೂ ಪರಿಣಾಮ ಬೀರುತ್ತಿದೆ.

ಈ ಉದ್ದಿಮೆಯು 3.5 ಕೋಟಿ ಜನರಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಜೀವನಾಧಾರವಾಗಿದೆ. ತಯಾರಿಕೆ, ಮಾರಾಟ, ಸೇವೆ, ವಿಮೆ, ಲೈಸನ್ಸ್‌, ಹಣಕಾಸು, ಬಿಡಿಭಾಗ, ಚಾಲಕರು, ಪೆಟ್ರೋಲ್‌ ಪಂಪ್‌, ಸಾರಿಗೆ ಮತ್ತಿತರ ಕ್ಷೇತ್ರಗಳಲ್ಲಿ ಅಪಾರ ಪ್ರಮಾಣದ ಉದ್ಯೋಗ ಅವಕಾಶಗಳನ್ನು ಕಲ್ಪಿಸುತ್ತಿದೆ. ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ) ಶೇ 7ಕ್ಕಿಂತ ಹೆಚ್ಚಿನ ಕೊಡುಗೆ ನೀಡುತ್ತಿರುವ ಉದ್ದಿಮೆಯಲ್ಲಿನ ಈ ಬಿಕ್ಕಟ್ಟು ಆರ್ಥಿಕತೆಯ ಮಂದಗತಿ ಮೇಲೆ ಇನ್ನಷ್ಟು ಪ್ರತಿಕೂಲ ಪರಿಣಾಮ ಬೀರಲಿದೆ. ಗಾಜು, ಉಕ್ಕು, ಲೋಹ, ರಬ್ಬರ್‌ ಉದ್ದಿಮೆ ಮೇಲೂ ಇದರ ಅಡ್ಡ ಪರಿಣಾಮಗಳು ಕಂಡುಬರಲಿವೆ. ಬೇಡಿಕೆ ಕುಸಿತದಿಂದ ತಯಾರಿಕೆಯಲ್ಲೂ ತಾತ್ಕಾಲಿಕವಾಗಿ ಕಡಿತ ಮಾಡಲಾಗುತ್ತಿದೆ. ಬಿಡಿಭಾಗ ತಯಾರಿಕೆಯ ಕಂಪನಿಗಳೂ ಇದೇ ಹಾದಿ ಹಿಡಿದಿವೆ. ಇದರಿಂದಾಗಿ, ಏಪ್ರಿಲ್‌ನಿಂದ ಈಚೆಗೆ 3.5 ಲಕ್ಷದಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಇವರಲ್ಲಿ ಗುತ್ತಿಗೆ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಮಾರಾಟ ಕುಸಿತವು ಇದೇ ರೀತಿ ಮುಂದುವರಿದರೆ ಮುಂಬರುವ ದಿನಗಳಲ್ಲಿ 10 ರಿಂದ 12 ಲಕ್ಷ ಜನರು ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಾಗಿದೆ. ವಾಹನ ಮತ್ತು ಬಿಡಿಭಾಗ ತಯಾರಿಕಾ ಘಟಕಗಳಿಗೆ ಬೀಗಮುದ್ರೆ ಹಾಕಬೇಕಾದ ಪರಿಸ್ಥಿತಿ ಉದ್ಭವಗೊಳ್ಳುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಜಿಎಸ್‌ಟಿಯನ್ನು ಶೇ 28ರಿಂದ ಶೇ 18ಕ್ಕೆ ತಗ್ಗಿಸುವ ಅಗತ್ಯ ಇದೆ. ನೋಂದಣಿ ಶುಲ್ಕ ಕಡಿಮೆ ಮಾಡುವುದರಿಂದ, ಹಳೆಯ ವಾಹನಗಳನ್ನು ಗುಜರಿಗೆ ಹಾಕಲು ಉತ್ತೇಜಿಸುವುದರಿಂದ ಮತ್ತು ಸಾಲದ ಸೌಲಭ್ಯ ಹೆಚ್ಚಿಸುವುದರಿಂದ ಹೊಸ ವಾಹನಗಳ ಮಾರಾಟಕ್ಕೆ ಉತ್ತೇಜನ ಸಿಗಲಿದೆ. ಹಬ್ಬಗಳು ಸಾಲುಗಟ್ಟಿವೆ. ಈ ಸಂದರ್ಭದ ಖರೀದಿ ಉತ್ಸಾಹವು ಉದ್ದಿಮೆಗೆ ಕೆಲಮಟ್ಟಿಗೆ ಚೇತರಿಕೆ ನೀಡುವ ನಿರೀಕ್ಷೆ ಇದೆ. ಅದರಾಚೆಗೆ ಉದ್ದಿಮೆಯ ಚೇತರಿಕೆಗೆ ಕಾಯಂ ಸ್ವರೂಪದ ಜೀವಸೆಲೆ ಬೇಕಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು