ತೋರಿಕೆಗಾಗಿ ಪ್ರದರ್ಶನ ಸಾಕು ಪ್ಲಾಸ್ಟಿಕ್‌ ಹಾವಳಿಯನ್ನು ತಡೆಗಟ್ಟಿ

7

ತೋರಿಕೆಗಾಗಿ ಪ್ರದರ್ಶನ ಸಾಕು ಪ್ಲಾಸ್ಟಿಕ್‌ ಹಾವಳಿಯನ್ನು ತಡೆಗಟ್ಟಿ

Published:
Updated:
Deccan Herald

ಬೆಂಗಳೂರಿನಲ್ಲಿ ಒಂದೇ ದಿನ 33 ಟನ್‌ಗಳಷ್ಟು ಪ್ಲಾಸ್ಟಿಕ್‌ ಬಾಟಲಿಗಳನ್ನು ಸಂಗ್ರಹಿಸಲಾಗಿದೆ. ತನ್ನ ಈ ಸಾಹಸಕ್ಕೆ ಗಿನ್ನಿಸ್‌ ದಾಖಲೆಯ ತುರಾಯಿಯೇ ಸಿಗಲಿದೆ ಎಂದು ಬಿಬಿಎಂಪಿ ಬೀಗುತ್ತಿದೆ. ದಾಖಲೆಯ ನಿರ್ಮಾಣಕ್ಕಾಗಿ ಈ ಯತ್ನ ನಡೆದಿದ್ದರೂ ಅಷ್ಟೊಂದು ಪ್ರಮಾಣದ ಪ್ಲಾಸ್ಟಿಕ್‌ ತ್ಯಾಜ್ಯವನ್ನು ನಗರದ ಬೀದಿಗಳಿಂದ ಮುಕ್ತಗೊಳಿಸಿರುವುದು ಸ್ತುತ್ಯರ್ಹ ಕೆಲಸ. ಆದರೆ, ದಾಖಲೆ ನಿರ್ಮಾಣಕ್ಕಾಗಿಯೋ ತೋರಿಕೆಗಾಗಿಯೋ ಬೀದಿಗಳನ್ನು ಸ್ವಚ್ಛಗೊಳಿಸಲು ಬಿಬಿಎಂಪಿಯೇನೂ ಹವ್ಯಾಸಿ ಸಂಘಟನೆಯಲ್ಲ; ಬದಲಾಗಿ ನಗರದ ಆಡಳಿತ ಹಾಗೂ ನೈರ್ಮಲ್ಯದ ಹೊಣೆ ಹೊತ್ತಿರುವ ಶಾಸನಬದ್ಧ ಸಂಸ್ಥೆ. 2016ರ ಮೇ 10ರಿಂದಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ 40 ಮೈಕ್ರಾನ್‌ಗಿಂತ ಕಡಿಮೆ ಗಾತ್ರದ ಪ್ಲಾಸ್ಟಿಕ್‌ ಬಳಕೆ ಮೇಲೆ ಸಂಪೂರ್ಣ ನಿಷೇಧವಿದೆ. ಹೀಗಿದ್ದೂ ನಗರದ ಬೀದಿ, ಬೀದಿಗಳಲ್ಲಿ ಟನ್‌ಗಟ್ಟಲೆ ಕಳಪೆ ಪ್ಲಾಸ್ಟಿಕ್‌ ಸಿಗುತ್ತಿರುವುದಕ್ಕೆ ಮುಜುಗರ ಅನುಭವಿಸುವ ಬದಲು, ‘ಬಾಟಲಿ ಹೆಕ್ಕುವುದರಲ್ಲಿ ದಾಖಲೆ ಮಾಡಿದ್ದೇವೆ’ ಎಂದು ಬಿಬಿಎಂಪಿ ಅಧಿಕಾರಿಗಳು ಹೆಮ್ಮೆಪಡುತ್ತಿರುವುದು ಒಂದು ಕುಚೋದ್ಯ. ಪ್ಲಾಸ್ಟಿಕ್‌ ನಿಷೇಧ ಕಾಗದದಲ್ಲಿ ಇದೆಯೇ ಹೊರತು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬಂದಿಲ್ಲ. ಪ್ರತಿಸಲ ನಿಷೇಧದ ಬಾಣ ಬಿಟ್ಟಾಗಲೂ ರಕ್ತ ಬೀಜಾಸುರನಂತೆ ಅದರ ಬಳಕೆ ಹತ್ತಕ್ಕೆ ನೂರಾಗಿ, ನೂರಕ್ಕೆ ಸಾವಿರವಾಗಿ ಬೆಳೆಯುತ್ತಲೇ ಇದೆ. ಯಾವುದೇ ಅಂಗಡಿ ಇಲ್ಲವೇ ಹೋಟೆಲ್‌ಗೆ ಹೋಗಿ ಪಾರ್ಸಲ್‌ ತೆಗೆದುಕೊಂಡರೆ ಕೈಗೆ ಸಿಗುವ ಪೊಟ್ಟಣದಲ್ಲಿ ಕಳಪೆ ಪ್ಲಾಸ್ಟಿಕ್‌ ಇದ್ದೇ ಇರುತ್ತದೆ. ಮನಸ್ಸಿಗೆ ತೋಚಿದಾಗ ಯಾವುದೋ ಕೆಲವು ಮಳಿಗೆಗಳ ಮೇಲೆ ದಾಳಿ ಮಾಡಿದಂತಹ ನಾಟಕವಾಡಿ ಒಂದಿಷ್ಟು ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ವಶಪಡಿಸಿಕೊಂಡರೆ ಏನು ಪ್ರಯೋಜನ?

ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ ಕಸದಲ್ಲಿ ಶೇ 11ರಷ್ಟು ಪ್ಲಾಸ್ಟಿಕ್‌ ಇದೆ. ಜೈವಿಕ ಕ್ರಿಯೆಯಲ್ಲಿ ಆ ತ್ಯಾಜ್ಯ ಕರಗದು. ಕಸದ ಬೆಟ್ಟ ಕರಗಬೇಕೆಂದರೆ ತ್ಯಾಜ್ಯವೆಲ್ಲ ಸಾವಯವ ಗೊಬ್ಬರ ಆಗಬೇಕು. ಆದರೆ, ಪ್ಲಾಸ್ಟಿಕ್‌ ಮಿಶ್ರಣವಾಗಿರುವ ಕಾರಣ ಕಸ ಕರಗದೆ ‘ಮಂಡೂರು ಗುಡ್ಡ’ಗಳು ನಗರದ ಸುತ್ತಮುತ್ತ ನಿರ್ಮಾಣವಾಗಿವೆ. ನಾವು ಬಳಸಿ ಬಿಸಾಡಿದ ಪ್ಲಾಸ್ಟಿಕ್‌ ಪದಾರ್ಥಗಳು –ವಿಶೇಷವಾಗಿ ಬಾಟಲಿಗಳು ಮತ್ತು ಬ್ಯಾಗ್‌ಗಳು– ತ್ಯಾಜ್ಯದೊಳಗೆ ಸೇರುತ್ತವೆ; ಇಲ್ಲದಿದ್ದರೆ ಹಾರುತ್ತಾ ಹೋಗಿ ಚರಂಡಿಯೊಳಗೆ ಬಿದ್ದು ಹೂಳು ಹೆಚ್ಚಾಗಲು ಕಾರಣವಾಗುತ್ತವೆ. ಚರಂಡಿಯಲ್ಲಿ ಬಿದ್ದ ಕಳಪೆ ಗುಣಮಟ್ಟದ ಪ್ಲಾಸ್ಟಿಕ್‌ ಬ್ಯಾಗ್‌ಗೆ ಕೋಲು ಹಾಕಿ ತೆಗೆಯುವುದು ಕಷ್ಟ. ಅಲ್ಲದೆ, ತೂಕವೇ ಇಲ್ಲದಷ್ಟು ಹಗುರವಾಗಿರುವ ಇಂತಹ ಕಡಿಮೆ ಮೈಕ್ರಾನ್‌ ಬ್ಯಾಗ್‌ಗಳಿಂದ ಚಿಂದಿ ಆಯುವವರಿಗೆ ಹೆಚ್ಚಿನ ಆದಾಯ ಸಿಗುವುದಿಲ್ಲ. ಆದ್ದರಿಂದ ಚರಂಡಿಗಳು ಪ್ಲಾಸ್ಟಿಕ್‌ ತ್ಯಾಜ್ಯದಿಂದ ಸದಾ ತುಂಬಿ ತುಳುಕುತ್ತವೆ. ತನಗೆ ದೊಡ್ಡ ತಲೆನೋವಾಗಿರುವ ಹಲವು ಸಮಸ್ಯೆಗಳಿಗೆ ಪ್ಲಾಸ್ಟಿಕ್‌ ಸಮರ್ಪಕ ನಿರ್ವಹಣೆಯಲ್ಲಿ ಪರಿಹಾರವಿದೆ ಎಂಬುದನ್ನು ಬಿಬಿಎಂಪಿ ಅರ್ಥ ಮಾಡಿಕೊಳ್ಳಬೇಕು. ಕಸದಲ್ಲಿ ಪ್ಲಾಸ್ಟಿಕ್‌ ಸೇರ್ಪಡೆ ಆಗಬಾರದೆಂದರೆ ಅದರ ಮೇಲಿನ ನಿಷೇಧ ಕಟ್ಟುನಿಟ್ಟಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು. ರಾಜಧಾನಿ ಒಂದರಲ್ಲೇ ಪ್ಲಾಸ್ಟಿಕ್‌ ಪುನರ್‌ಬಳಕೆ ಕ್ಷೇತ್ರದಲ್ಲಿ ತೊಡಗಿರುವ 1,200 ಸಂಘಟಿತ ಕೈಗಾರಿಕೆಗಳಿವೆ. ಅವುಗಳ ನೆರವು ಪಡೆಯುವ ಮೂಲಕ ಗುಣಮಟ್ಟದ ಪ್ಲಾಸ್ಟಿಕ್‌ನ ಮರುತಯಾರಿಕೆ, ಮರುಬಳಕೆ ಮತ್ತು ಬಳಕೆ ಮಿತಗೊಳಿಸುವಿಕೆಯತ್ತ ಗಮನಹರಿಸಬೇಕು. ಗಗನದಲ್ಲಿ ಹಾರುವ ವಿಮಾನದಿಂದ ಹಿಡಿದು ಹೃದಯದೊಳಗಿನ ಕೃತಕ ಕವಾಟದವರೆಗೆ ಎಲ್ಲವನ್ನೂ ಆವರಿಸಿಬಿಟ್ಟಿರುವ ಪ್ಲಾಸ್ಟಿಕ್‌, ಮಾನವನ ಬದುಕಿನ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಅದನ್ನು ಸಂಪೂರ್ಣ ಇಲ್ಲವಾಗಿಸುತ್ತೇವೆ ಎನ್ನುವುದಂತೂ ಆಗದ ಮಾತು.

Tags: 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !