ಬಂಡೀಪುರ: ರಾತ್ರಿ ಸಂಚಾರನಿಷೇಧ ಮುಂದುವರಿಯಲಿ

7

ಬಂಡೀಪುರ: ರಾತ್ರಿ ಸಂಚಾರನಿಷೇಧ ಮುಂದುವರಿಯಲಿ

Published:
Updated:
Deccan Herald

ಬಂಡೀಪುರ ಅರಣ್ಯವನ್ನು ಸೀಳಿ ಕೇರಳವನ್ನು ಪ್ರವೇಶಿಸುವ ರಾಷ್ಟ್ರೀಯ ಹೆದ್ದಾರಿ 212ರಲ್ಲಿ ಈಗಿರುವ ರಾತ್ರಿ ವಾಹನ ಸಂಚಾರ ನಿಷೇಧವನ್ನು ತೆರವು ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಬೇಕು ಎನ್ನುವ ಒತ್ತಡವನ್ನು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯ ಹೇರುತ್ತಿದೆ. ಈ ವಿಷಯ ಸುಪ್ರೀಂ ಕೋರ್ಟ್‌ನಲ್ಲಿ ಇರುವಾಗ ಯಾವುದೇ ನಿರ್ಧಾರವನ್ನು ಕರ್ನಾಟಕ ತೆಗೆದುಕೊಳ್ಳಬಾರದು ಎಂದು ವನ್ಯಜೀವಿಪ್ರಿಯರು ಮಾಡಿರುವ ಮನವಿಯಲ್ಲಿ ಅರ್ಥವಿದೆ.‌ ‘ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಅವರು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ರಾತ್ರಿ ಸಂಚಾರ ನಿಷೇಧ ತೆರವು ಮಾಡಲು ಹಾಗೂ ಮೇಲ್ಸೇತುವೆ ನಿರ್ಮಿಸಲು ಒಪ್ಪಿಗೆ ನೀಡಿದ್ದಾರೆ. ಈ ಬಗ್ಗೆ ಕರ್ನಾಟಕ ಸರ್ಕಾರವು ಅಧಿಕೃತವಾಗಿ ಪತ್ರ ಬರೆದರೆ ಅದನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸುತ್ತೇವೆ ಹಾಗೂ ಕಾಡಿನುದ್ದಕ್ಕೂ ಮೇಲ್ಸೇತುವೆ ನಿರ್ಮಿಸಬಹುದು’ ಎನ್ನುವ ಪತ್ರ ಕೇಂದ್ರ ಸಾರಿಗೆ ಸಚಿವಾಲಯದಿಂದ ಬಂದಿದೆ. ಆದರೆ ಸುಪ್ರೀಂ ಕೋರ್ಟ್‌ನಲ್ಲಿ ವಿವಾದ ಇತ್ಯರ್ಥವಾಗದೆ ರಾತ್ರಿ ಸಂಚಾರ ನಿಷೇಧ ವಾಪಸ್‌ ಪಡೆಯಲಾಗದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.  ರಾತ್ರಿ ಸಂಚಾರ ನಿಷೇಧದ ನಂತರ ಕಾಡು ಪ್ರಾಣಿಗಳ ಅಪಘಾತ ಅರ್ಧದಷ್ಟು ಕಡಿಮೆಯಾಗಿದೆ ಎಂದು ರಾಜ್ಯ ಅರಣ್ಯ ಇಲಾಖೆ ವರದಿ ಸಲ್ಲಿಸಿದೆ. ಇಂತಹ ಬೆಳವಣಿಗೆಯ ನಂತರ ಬಂದಿರುವ ಪತ್ರವನ್ನು ನೋಡಿದರೆ ಅಳಿವಿನಂಚಿನಲ್ಲಿರುವ ಹುಲಿಗಳ ಆವಾಸಸ್ಥಾನ ಸಂರಕ್ಷಣೆ ಬಗ್ಗೆ ಕೇಂದ್ರ ಸಾರಿಗೆ ಸಚಿವಾಲಯಕ್ಕೆ ಕಿಂಚಿತ್ತೂ ಕಾಳಜಿಯಿಲ್ಲ ಎಂದು ತೋರುತ್ತದೆ.

ಈ ವಿಷಯದಲ್ಲಿ ಕೇರಳವು ಕರ್ನಾಟಕದ ಮೇಲೆ 2010ರಿಂದಲೂ ಹಲವು ರೀತಿಯ ಒತ್ತಡ ತಂತ್ರವನ್ನು ಪ್ರಯೋಗಿಸುತ್ತಲೇ ಇದೆ. ಹಿಂದೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು ಈ ಒತ್ತಡಕ್ಕೆ ಮಣಿದಿರಲಿಲ್ಲ. ಆದರೆ ಈ ಸಲ ಕೇಂದ್ರ ಸರ್ಕಾರದ ಮೂಲಕ ಕೇರಳ ಒತ್ತಡ ಹಾಕಿಸಿದೆ ಎಂದು ಪರಿಸರವಾದಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಪ್ರಮುಖ ನಗರವಾದ ಮೈಸೂರು ತಲುಪಲು ಕೇರಳಕ್ಕೆ ಇದೊಂದೇ ದಾರಿಯಲ್ಲ. ಹುಣಸೂರು-ಗೋಣಿಕೊಪ್ಪ-ಕುಟ್ಟ-ಮಾನಂದವಾಡಿ ಮೂಲಕವೂ ಓಡಾಡಬಹುದು. ಈ ದಾರಿಯನ್ನು ಕರ್ನಾಟಕವೇ ₹ 75 ಕೋಟಿ ಖರ್ಚು ಮಾಡಿ ಅಭಿವೃದ್ಧಿಪಡಿಸಿದೆ. ಆದರೆ, ಈ ರಸ್ತೆ ಮೂಲಕ ಹೋಗಲು 35 ಕಿ.ಮೀ. ಹೆಚ್ಚು ದೂರ ಕ್ರಮಿಸಬೇಕು. ಇದಕ್ಕೆ ಹೆಚ್ಚು ಇಂಧನ ಖರ್ಚಾಗುತ್ತದೆ ಎನ್ನುವ ಕೇಂದ್ರ ಸರ್ಕಾರದ ವಾದದಲ್ಲಿ ಅರ್ಥವೇ ಇಲ್ಲ. ಪರ್ಯಾಯ ರಸ್ತೆಯ ಬದಲಾಗಿ ₹ 460 ಕೋಟಿ ವೆಚ್ಚ ಮಾಡಿ ಮೇಲ್ಸೇತುವೆ ನಿರ್ಮಾಣದ ಚಿಂತನೆಯಲ್ಲೇ ದುರುದ್ದೇಶ ಅಡಗಿದೆ. ಇದೇ ಸಚಿವಾಲಯ ಸೂಚನೆ ಮೇರೆಗೆ ಹುಲಿ ಪ್ರಾಧಿಕಾರದ ಸದಸ್ಯರು, ಕೇರಳದ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ ಜೀವ ಜಗತ್ತಿನ ರಕ್ಷಣೆಗಾಗಿ ರಾತ್ರಿ ಸಂಚಾರ ನಿಷೇಧ ಸೂಕ್ತ ಎಂದು ವರದಿ ನೀಡಿದ್ದರು. ಇದನ್ನೂ ಕಡೆಗಣಿಸಲಾಗಿದೆ. ಪರಿಸರ ಸಂರಕ್ಷಣೆಗಿಂತ ಅಭಿವೃದ್ಧಿ ಹೆಸರಿನಲ್ಲಿ ನಡೆಸುವ ಅನಾಹುತವೇ ಕೇರಳ ಸರ್ಕಾರಕ್ಕೆ ಮುಖ್ಯವಾಗುತ್ತಿದೆ ಎನ್ನುವ ವಾದದಲ್ಲಿ ಹುರುಳಿದೆ ಎನ್ನಬಹುದು. ರಾತ್ರಿ ಸಂಚಾರ ನಿಷೇಧದ ನಡುವೆಯೂ ಎರಡೂ ರಾಜ್ಯಗಳ ರಸ್ತೆ ಸಾರಿಗೆ ಸಂಸ್ಥೆಗಳ ತಲಾ ಎಂಟು ಬಸ್‌ಗಳು ಓಡಾಡುತ್ತಿವೆ. ಅದರಲ್ಲಿ ಅರ್ಧದಷ್ಟು ಸೀಟುಗಳು ಭರ್ತಿಯಾಗುತ್ತಿಲ್ಲ. ಅಂದಮೇಲೆ ಯಾರಿಗಾಗಿ ಹಗಲು–ರಾತ್ರಿ ವಾಹನ ಸಂಚಾರ ನಡೆಸಬೇಕು. ಇದರಿಂದ ಕಳ್ಳಸಾಗಣೆ, ಮರಳುಮಾಫಿಯಾ, ಕಾಡುಪ್ರಾಣಿ ಹತ್ಯೆ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಹೊಸದಾಗಿ ಮೇಲ್ಸೇತುವೆ ನಿರ್ಮಾಣ ಸಂದರ್ಭದಲ್ಲಿ ಪರಿಸರದ ಮೇಲೆ ಆಗುವ ಅನಾಹುತವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಕೇಂದ್ರ ಸರ್ಕಾರವು ಪರಿಸರ ಸಂರಕ್ಷಣೆಗೆ ಪೂರಕವಾಗಿ ಕೆಲಸ ಮಾಡಬೇಕೇ ವಿನಾ ಯಾವುದೇ ಲಾಬಿಗೆ ಮಣಿದು ಅರಣ್ಯ ನಾಶಕ್ಕೆ ಮುನ್ನುಡಿ ಬರೆಯಬಾರದು.

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !