ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡ್ಡಾದಿಡ್ಡಿ ಬೆಳವಣಿಗೆ ಬೇಡ ಕಡಿವಾಣದ ಬಾಧಕ ಚರ್ಚೆಯಾಗಲಿ

Last Updated 28 ಜೂನ್ 2019, 20:00 IST
ಅಕ್ಷರ ಗಾತ್ರ

ತೀವ್ರಗೊಂಡ ನೀರಿನ ಅಭಾವ, ಹೆಚ್ಚಿದ ಸಂಚಾರ ದಟ್ಟಣೆ, ಕಾಡುತ್ತಿರುವ ಕಲುಷಿತ ಗಾಳಿ ಹಾಗೂ ಗುಡ್ಡೆ ಬೀಳುತ್ತಿರುವ ತ್ಯಾಜ್ಯ– ಬೆಂಗಳೂರು ಮಹಾನಗರವನ್ನು ಸದ್ಯ ಬಾಧಿಸುತ್ತಿರುವ ಪ್ರಮುಖ ಸಮಸ್ಯೆಗಳು. ಈ ಎಲ್ಲ ಸಮಸ್ಯೆಗಳ ಮೂಲ ಒಂದೇ. ಯದ್ವಾತದ್ವಾ ಬೆಳೆದ ಜನಸಂಖ್ಯೆ ಹಾಗೂ ಅದರಿಂದ ಉಂಟಾದ ಸೂರಿನ ದಾಹವನ್ನು ತಣಿಸಲು ಕೆರೆ–ಕಾಲುವೆಗಳ ಪಾತ್ರವನ್ನೂ ಬಿಡದಂತೆ ನಿರ್ಮಾಣವಾದ ಕಟ್ಟಡಗಳು. ಸಮಸ್ಯೆಗಳ ಸಿಕ್ಕು ಬಿಡಿಸುವಂತಹ ಮಾರ್ಗೋಪಾಯಗಳನ್ನು ಸ್ಪಷ್ಟಪಡಿಸಿಕೊಳ್ಳದೆ ಬರೀ ಮಾತನಾಡುತ್ತಲೇ ಕಾಲಹರಣ ಮಾಡಿದ ರಾಜ್ಯ ಸರ್ಕಾರ, ಇದೀಗ ರಾಜಧಾನಿಯಲ್ಲಿ ಅಪಾರ್ಟ್‌ಮೆಂಟ್‌ಗಳ ನಿರ್ಮಾಣದ ಮೇಲೆ ಐದು ವರ್ಷಗಳವರೆಗೆ ನಿರ್ಬಂಧ ವಿಧಿಸುವ ಚಿಂತನೆಯನ್ನು ತೇಲಿಬಿಟ್ಟಿದೆ. ಇದೇನು ನೈಜ ಕಳಕಳಿಯೋ ಅಥವಾ ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಮುಂದೆ ತಂದು ನಿಲ್ಲಿಸಿದಂತಹ ಗುಮ್ಮವೋ ತಿಳಿಯದು. ನಗರದ ಬೆಳವಣಿಗೆಯನ್ನು ಹದ್ದುಬಸ್ತಿನಲ್ಲಿ ಇಡುವ ಕ್ರಮ ಅಗತ್ಯವಾದರೂ ಅಪಾರ್ಟ್‌ಮೆಂಟ್‌ ಗಳ ನಿರ್ಮಾಣದ ಮೇಲೆ ಏಕಾಏಕಿ ನಿರ್ಬಂಧ ವಿಧಿಸುವುದು ಕಾರ್ಯಸಾಧುವೇ? ರಿಯಲ್‌ ಎಸ್ಟೇಟ್‌ ಹಾಗೂ ನಿರ್ಮಾಣ ಸಂಬಂಧಿ ಉದ್ಯಮ, ಅದರಿಂದ ಬೊಕ್ಕಸಕ್ಕೆ ಸಿಗುವ ವರಮಾನ, ನಿರ್ಮಾಣ ವಲಯವನ್ನು ನೆಚ್ಚಿಕೊಂಡ ಕಾರ್ಮಿಕರ ಭವಿಷ್ಯ ಈ ಎಲ್ಲದರ ಮೇಲೆ ಆಗುವ ಪರಿಣಾಮಗಳ ಕುರಿತೂ ಅಧ್ಯಯನ ನಡೆಯಬೇಕು. ಸಾಧಕಬಾಧಕಗಳ ಕುರಿತು ಚರ್ಚೆ ಆಗಬೇಕು. ನಾಲ್ಕು ಶತಮಾನಗಳಲ್ಲಿ ಬೆಂಗಳೂರು 400 ಪಟ್ಟು ಹಿಗ್ಗಿದೆ ಎಂದರೆ ಯಾವ ಪರಿಯಲ್ಲಿ ಈ ನಗರ ಬೆಳೆದಿದೆ ಎಂಬುದನ್ನು ಊಹಿಸಬಹುದು. ಅಭಿವೃದ್ಧಿ ಎಂಬ ಹುಚ್ಚು ಕುಣಿತದಲ್ಲಿ ನೂರಾರು ಹಳ್ಳಿಗಳು ಈ ಮಾಯಾ ನಗರಿಯಲ್ಲಿ ಕರಗಿಹೋಗಿವೆ. 1890ರ ದಶಕದಲ್ಲಿ ಈ ನಗರದ ಜನಸಂಖ್ಯೆ ಬರೀ 1.80 ಲಕ್ಷ. ಈಗ ಅದು 1.20 ಕೋಟಿ ದಾಟಿದೆ ಎಂದು ಅಂದಾಜಿಸಲಾಗಿದೆ. ಅಂದರೆ ರಾಜ್ಯದ ಆರನೇ ಒಂದು ಭಾಗದಷ್ಟು ಜನಸಂಖ್ಯೆ ರಾಜಧಾನಿಯಲ್ಲೇ ಸಾಂದ್ರಗೊಂಡಿದೆ. ತನ್ನ ಸಾಮರ್ಥ್ಯಕ್ಕಿಂತ ಮೂರು ಪಟ್ಟು ಅಧಿಕ ಜನಸಂಖ್ಯೆಯನ್ನು ಈ ನಗರದ ಮೂಲಸೌಕರ್ಯ ಹೇಗೆತಾನೆ ತಾಳಿಕೊಳ್ಳಬೇಕು? ರಾಜ್ಯದ ಉಳಿದ ಪ್ರದೇಶಗಳ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸುತ್ತಾ, ಪರೋಕ್ಷವಾಗಿ ವಲಸೆಯನ್ನು ಉತ್ತೇಜಿಸುತ್ತಾ ಬಂದ ಸರ್ಕಾರದ ಧೋರಣೆಗಳೇ ಇಂತಹ ಸಂದಿಗ್ಧ ಸ್ಥಿತಿಗೆ ನೇರ ಕಾರಣ.

ಉದ್ಯೋಗ ಹಾಗೂ ಭವಿಷ್ಯ ಹುಡುಕಿಕೊಂಡು ರಾಜಧಾನಿಗೆ ಬಂದ ಜನರಿಗೆಲ್ಲ ತಲೆ ಮೇಲೊಂದು ಸೂರು ಬೇಕಲ್ಲ? ಐ.ಟಿ. ಭರಾಟೆ ಹೆಚ್ಚಿ ವಲಸೆ ಪ್ರಮಾಣ ಪ್ರವಾಹದ ರೂಪ ತಾಳಿದಂತೆ ರಿಯಲ್‌ ಎಸ್ಟೇಟ್‌ ಉದ್ಯಮ ಕೂಡ ದೈತ್ಯಾಕಾರವಾಗಿ ಬೆಳೆಯಿತು. ಒಂದೊಮ್ಮೆ ನಗರಕ್ಕೆ ನೀರು ಪೂರೈಸುತ್ತಿದ್ದ ಜಲಮೂಲಗಳನ್ನೇ ಸ್ವಾಹಾ ಮಾಡಿದ ಹಲವು ಭೂಗಳ್ಳರು, ಅಲ್ಲಿ ಭವ್ಯವಾದ ಅಪಾರ್ಟ್‌ಮೆಂಟ್‌ ಗಳನ್ನು ಕಟ್ಟಿ, ಮಾರಿದರು. ತಾವು ಕಟ್ಟಿದ ಕಟ್ಟಡಗಳಿಗೆ ಕಾಯಂ ಆದ ನೀರಿನ ಮೂಲ ಯಾವುದು ಎಂಬುದನ್ನು ಮಾರುವವರು ಹೇಳಲಿಲ್ಲ. ಕೊಳ್ಳುವವರೂ ಅದನ್ನು ಖಚಿತಪಡಿಸಿಕೊಳ್ಳಲಿಲ್ಲ. ಸಾವಿರಾರು ಅಪಾರ್ಟ್‌ಮೆಂಟ್‌ಗಳಿಗೆ ಈಗ ಸರಿಯಾದ ನೀರಿನ ಮೂಲವೇ ಇಲ್ಲ. ವೈಟ್‌ಫೀಲ್ಡ್‌ನಂತಹ ಐ.ಟಿ. ತಾಣದ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ಟ್ಯಾಂಕರ್‌ ನೀರಿಗಾಗಿ ಕಾಯುತ್ತಾ ಕೂರುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಅಪಾರ್ಟ್‌ಮೆಂಟ್‌ಗಳ ಹಾವಳಿ ಒಂದೆಡೆಯಾದರೆ ಫ್ಲೋರ್‌ ಏರಿಯಾ ಅನುಪಾತ (ಎಫ್‌ಎಆರ್‌) ಹಾಗೂ ಕಟ್ಟಡ ನಕ್ಷೆ ಉಲ್ಲಂಘಿಸಿ ಮಹಡಿಗಳ ಮೇಲೆ ಮಹಡಿ ಕಟ್ಟುವ ದುಸ್ಸಾಹಸ ಇನ್ನೊಂದೆಡೆ. ಅಂಥವರೊಂದಿಗೆ ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳು ಶಾಮೀಲಾಗಿ ವ್ಯವಸ್ಥೆಯನ್ನು ಇನ್ನಷ್ಟು ಕುಲಗೆಡಿಸಿದರು. ಅಕ್ರಮವಾಗಿ ಹೆಚ್ಚಿನ ಮಹಡಿಗಳನ್ನು ಕಟ್ಟಿದವರಿಗೆ ಮಳೆನೀರು ಸಂಗ್ರಹದಂತಹ ಪರಿಸರಸ್ನೇಹಿ ವ್ಯವಸ್ಥೆಗಳು ಅಪಥ್ಯವಾದವು. ಅಕ್ರಮ ಎಸಗಿದವರನ್ನೂ ಅದಕ್ಕೆ ಸಹಕರಿಸಿದವರನ್ನೂ ಮಟ್ಟಹಾಕುವ ಕೆಲಸ ಯಾವ ಪಕ್ಷದ ಆಡಳಿತದ ಅವಧಿಯಲ್ಲೂ ಆಗಲಿಲ್ಲ. ಸಮಸ್ಯೆಯ ಮೂಲದತ್ತ ಯಾರೂ ಕಣ್ತೆರೆದು ನೋಡಲಿಲ್ಲ. ರಾಜ್ಯದ ಎಲ್ಲ ಭಾಗಗಳಲ್ಲೂ ಉದ್ಯೋಗಾವಕಾಶಗಳು ಸೃಷ್ಟಿಯಾಗಿದ್ದರೆ, ರಾಜಧಾನಿಯಲ್ಲಿ ಸಿಗುತ್ತಿದ್ದಂತಹ ಸೌಲಭ್ಯಗಳು ಜನರಿಗೆ ತಮ್ಮ ಊರುಗಳಲ್ಲೇ ಸಿಕ್ಕಿದ್ದರೆ ವಲಸೆ ಸಮಸ್ಯೆ ದೈತ್ಯಾಕಾರವಾಗಿ ಕಾಡುತ್ತಿರಲಿಲ್ಲ. ಅಕ್ರಮ ನಿರ್ಮಾಣಗಳಿಗೆ ಕಡಿವಾಣ ಹಾಕಿದ್ದರೆ ಸಮಸ್ಯೆ ಇಷ್ಟೊಂದು ಬಿಗಡಾಯಿಸುತ್ತಿರಲಿಲ್ಲ. ಅಷ್ಟೇ ಅಲ್ಲ, ಅಪಾರ್ಟ್‌ಮೆಂಟ್‌ಗಳ ನಿರ್ಮಾಣದ ಮೇಲೆ ನಿರ್ಬಂಧ ಹೇರುವಂತಹ ಚಿಂತನೆ ಮಾಡುವ ಪ್ರಸಂಗ ಕೂಡ ಬರುತ್ತಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT