ಆರ್ಥಿಕ ಸೇರ್ಪಡೆ: ‘ಗ್ರಾಮಭಾರತ’ದಲ್ಲಿ ಇನ್ನೂ ಮರೀಚಿಕೆ

7

ಆರ್ಥಿಕ ಸೇರ್ಪಡೆ: ‘ಗ್ರಾಮಭಾರತ’ದಲ್ಲಿ ಇನ್ನೂ ಮರೀಚಿಕೆ

Published:
Updated:
Deccan Herald

ಬ್ಯಾಂಕ್‌ಗಳ ತೊಟ್ಟಿಲು ಎಂದೇ ಖ್ಯಾತವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ನೂರಕ್ಕೂ ಹೆಚ್ಚು ಹಳ್ಳಿಗಳಲ್ಲಿ ಬ್ಯಾಂಕ್‌ ಶಾಖೆಗಳೇ ಇಲ್ಲ. ಆರ್ಥಿಕ ಸೇರ್ಪಡೆಯ ಮಹತ್ವಾಕಾಂಕ್ಷೆ ಯೋಜನೆ ಅನುಷ್ಠಾನದ ಮಂದಗತಿಗೆ ಇದು ಪ್ರತೀಕ. ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾನದಂಡಗಳ ಪ್ರಕಾರ, 5000ದಷ್ಟು ಜನಸಂಖ್ಯೆ ಇರುವ ಹಳ್ಳಿಗಳಲ್ಲಿ ಬ್ಯಾಂಕಿಂಗ್‌ ಸೌಲಭ್ಯವು ಕಡ್ಡಾಯವಾಗಿ ಇರಬೇಕು. ಆದರೆ ಕೇಂದ್ರೀಯ ಬ್ಯಾಂಕ್‌ನ ಈ ಮಾರ್ಗದರ್ಶಿ ಸೂತ್ರವಿನ್ನೂ ವಾಸ್ತವದಲ್ಲಿ ಸಾಕಾರವಾಗಿಲ್ಲ. ಒಂದು ಜಿಲ್ಲೆಯ ಕಥೆಯಲ್ಲ ಇದು. ಗ್ರಾಮೀಣ ಪ್ರದೇಶಗಳ ಜನರಿಗೆ ದೇಶದಾದ್ಯಂತ ಬ್ಯಾಂಕಿಂಗ್‌ ಸೇವಾ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿಲ್ಲ ಎನ್ನುವುದಕ್ಕೆ ಇಂತಹ ಅನೇಕ ನಿದರ್ಶನಗಳಿವೆ.

ಗ್ರಾಮೀಣ ಭಾರತದಲ್ಲಿ ಶಾಖೆಗಳ ವಿಸ್ತರಣೆಯಲ್ಲಿ ನಿರ್ಲಕ್ಷ್ಯ ತೋರಿಸಿರುವುದನ್ನು ನೋಡಿದರೆ, ಅಭಿವೃದ್ಧಿಯ ಹಲವು ಆಯಾಮಗಳನ್ನು ಹಳ್ಳಿಗರಿಗೆ ತಲುಪಿಸುವಲ್ಲಿ ಬ್ಯಾಂಕ್‌ಗಳು ವಿಫಲವಾಗಿವೆ ಎಂದೇ ಅರ್ಥ. ವಸೂಲಾಗದ ಸಾಲದ ಸುಳಿಗೆ ಸಿಲುಕಿರುವ ಬ್ಯಾಂಕಿಂಗ್‌ ಕ್ಷೇತ್ರವು ಹಲವಾರು ವಿಧದಲ್ಲಿ ‘ಗ್ರಾಮ ಭಾರತ’ವನ್ನು ನಿರ್ಲಕ್ಷಿಸಿರುವುದು ಅಭಿವೃದ್ಧಿ ಫಲವು ಎಲ್ಲರಿಗೂ ಸಮಾನವಾಗಿ ಹಂಚಿಕೆ ಮಾಡುವಲ್ಲಿನ ವಂಚನೆಯಾಗಿದೆ ಎಂದರೆ ಅತಿಶಯೋಕ್ತಿ ಎನಿಸದು. ಕೆನರಾ, ಸಿಂಡಿಕೇಟ್‌, ಕಾರ್ಪೊರೇಷನ್‌, ಕರ್ಣಾಟಕ ಬ್ಯಾಂಕ್‌ಗಳ ಹುಟ್ಟಿಗೆ ಕಾರಣವಾದ ಜಿಲ್ಲೆಯಲ್ಲಿಯೇ ಈ ಪರಿಸ್ಥಿತಿ ಇರುವುದು ನೀತಿ ನಿರೂಪಕರ ಕಣ್ತೆರೆಸಬೇಕಾಗಿದೆ. ರಾಜ್ಯಮಟ್ಟದ ಬ್ಯಾಂಕರುಗಳ ಸಮಿತಿಯು ಆರ್ಥಿಕ ಸೇರ್ಪಡೆ ಕಾರ್ಯಕ್ರಮ ಜಾರಿ ಮೇಲೆ ನಿರಂತರವಾಗಿ ನಿಗಾ ಇರಿಸಿದ್ದರೂ, ಸೌಲಭ್ಯ ವಂಚಿತ ಗ್ರಾಮಗಳ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲೇ ಇದೆ ಎಂಬುದನ್ನು ಆರ್‌ಬಿಐ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಬ್ಯಾಂಕ್‌ ಶಾಖೆಗಳೇ ಇಲ್ಲದ ಗ್ರಾಮಗಳಲ್ಲಿ, ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆಯು ಪರಿಣಾಮಕಾರಿ ಆಗುವುದು ಅಸಾಧ್ಯ.

ದೇಶದಾದ್ಯಂತ ಗ್ರಾಮೀಣ ಪ್ರದೇಶದ ಶೇ 61ರಷ್ಟು ಜನಸಂಖ್ಯೆ ಈಗಲೂ ಬ್ಯಾಂಕಿಂಗ್‌ ಸೌಲಭ್ಯಗಳಿಂದ ವಂಚಿತವಾಗಿದೆ. ಒಟ್ಟಾರೆ ಜನಸಂಖ್ಯೆಯಲ್ಲಿನ ಶೇ 41ರಷ್ಟು ಜನರೂ ಬ್ಯಾಂಕಿಂಗ್‌ ಸೇವಾ ಸೌಲಭ್ಯಗಳಿಂದ ದೂರ ಉಳಿದಿದ್ದಾರೆ. ಸೂಕ್ತ ವಹಿವಾಟಿನ ಮಾದರಿ ಇಲ್ಲದಿರುವುದು, ಅಸಮರ್ಪಕ ವ್ಯವಸ್ಥೆ, ತಂತ್ರಜ್ಞಾನ ಸೇರಿದಂತೆ ಮೂಲಸೌಕರ್ಯಗಳ ಕೊರತೆಯೇ ಇದಕ್ಕೆ ಕಾರಣ. ಬ್ಯಾಂಕ್‌ಗಳ ಕಾರ್ಯನಿರ್ವಹಣೆಯಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಳಗೊಳ್ಳದಿದ್ದರೆ, ಮೂಲ ಸೌಕರ್ಯಗಳ ಹೆಚ್ಚಳಕ್ಕೆ ಆದ್ಯತೆ ಸಿಗದಿದ್ದರೆ ಸಂಪೂರ್ಣ ಆರ್ಥಿಕ ಸೇರ್ಪಡೆ ಕನಸಾಗಿಯೇ ಉಳಿಯಲಿದೆ. ಸರ್ಕಾರಗಳ ಕಲ್ಯಾಣ ಕಾರ್ಯಕ್ರಮಗಳಿಂದಲೂ ಗ್ರಾಮೀಣ ಜನರು ವಂಚಿತರಾಗುತ್ತಾರೆ. ವೃದ್ಧಾಪ್ಯ ವೇತನ ಮತ್ತಿತರ ಕ್ಷೇಮಾಭಿವೃದ್ಧಿ ಯೋಜನೆಗಳ ಹಣ ಪಡೆಯಲು ದೂರದ ಊರಿನ ಬ್ಯಾಂಕ್‌ಗೆ ತೆರಳಲು ಅನಗತ್ಯ ವೆಚ್ಚ ಮಾಡುವ ಸ್ಥಿತಿ ಮುಂದುವರಿಯುತ್ತದೆ. ಚಿಕ್ಕ ಹಿಡುವಳಿದಾರರೂ ಕೃಷಿ ಸಾಲ ಸೌಲಭ್ಯದಿಂದ ದೂರವೇ ಉಳಿದಿದ್ದಾರೆ. ಈಗ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಜನ ಧನ್‌ ಯೋಜನೆಯಡಿ ಲಕ್ಷಾಂತರ ಜನರು ಔಪಚಾರಿಕ ಬ್ಯಾಂಕಿಂಗ್‌ ಸೇವೆಗಳ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಆದರೂ, ಬ್ಯಾಂಕ್‌ ಶಾಖೆ, ಎಟಿಎಂಗಳಿಲ್ಲದೆ ಗ್ರಾಮೀಣ ಭಾಗದ ಜನರು ಬ್ಯಾಂಕಿಂಗ್‌ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸಮೀಪದ ಅರೆ ಪಟ್ಟಣಗಳಲ್ಲಿ ಇರುವ ಎಟಿಎಂಗಳಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ನಗದು ಲಭ್ಯತೆಯೂ ಇರುವುದಿಲ್ಲ. ಇದು ಗ್ರಾಮೀಣ ಜನರಲ್ಲಿ ಹತಾಶೆ ಮೂಡಿಸುತ್ತದೆ.

ಗ್ರಾಮೀಣ ಭಾರತ ಕುರಿತ ಬ್ಯಾಂಕ್‌ಗಳ ಇಂತಹ ನಿರ್ಲಕ್ಷ್ಯದ ಧೋರಣೆ ಆಮೂಲಾಗ್ರವಾಗಿ ಬದಲಾಗಬೇಕು. ಅರ್‌ಬಿಐ ಈ ವಿಷಯದಲ್ಲಿ ಮನವೊಲಿಕೆ ಇಲ್ಲವೇ ಕಟ್ಟುನಿಟ್ಟಿನ ದಂಡನಾ ಕ್ರಮ ಕೈಗೊಳ್ಳುವ ಅಗತ್ಯ ಹೆಚ್ಚಿದೆ. ಒಂದು ಗ್ರಾಮದಲ್ಲಿ ಎರಡೆರಡು ಬ್ಯಾಂಕ್ ಶಾಖೆಗಳು ಇರುವುದಕ್ಕೆ ಕಡಿವಾಣ ಹಾಕಿ, ಶಾಖೆಗಳೇ ಇಲ್ಲದ ಗ್ರಾಮಗಳಿಗೆ ಕನಿಷ್ಠ ಒಂದು ಬ್ಯಾಂಕ್‌ನ ಸೌಲಭ್ಯ ವಿಸ್ತರಿಸಲು ಆದ್ಯತೆ ನೀಡಬೇಕಾಗಿದೆ. ಕೇಂದ್ರೀಯ ಬ್ಯಾಂಕ್‌ನ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಡಳಿತವೂ ಬ್ಯಾಂಕ್‌ಗಳ ಮೇಲೆ ಒತ್ತಡ ಹೇರಬೇಕು. ಅಭಿವೃದ್ಧಿಯ ಪ್ರಯೋಜನವು ಎಲ್ಲರಿಗೂ ದೊರೆಯುವಂತೆ ಮಾಡುವ ಆರ್ಥಿಕ ಸೇರ್ಪಡೆ ಜಾರಿ ಜತೆಗೆ ಗ್ರಾಮೀಣ ಜನರಲ್ಲಿ ಹಣಕಾಸು ಮತ್ತು ಡಿಜಿಟಲ್‌ ಸಾಕ್ಷರತೆ ಹೆಚ್ಚಿಸಲೂ ಆದ್ಯತೆ ನೀಡಬೇಕಾಗಿದೆ. ತಂತ್ರಜ್ಞಾನದ ನೆರವಿನಿಂದ ಬ್ಯಾಂಕಿಂಗ್‌ ಸೌಲಭ್ಯ ವಿಸ್ತರಿಸಿದಷ್ಟೂ ದೇಶದ ಅಭಿವೃದ್ಧಿಯಲ್ಲಿ ಗ್ರಾಮೀಣ ಭಾರತದ ಕೊಡುಗೆ ಗಮನಾರ್ಹವಾಗಿ ಹೆಚ್ಚಲಿದೆ ಎನ್ನುವುದನ್ನು ಸರ್ಕಾರಿ, ಖಾಸಗಿ ಬ್ಯಾಂಕ್‌ಗಳು ಮರೆಯಬಾರದು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !