ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಸಹಕಾರ ಬ್ಯಾಂಕ್‌ಗಳ ಸಂಕಷ್ಟ; ವೃತ್ತಿಪರರು ಬೇಕು, ಕಣ್ಗಾವಲು ಇರಬೇಕು

Published 27 ಜುಲೈ 2023, 19:12 IST
Last Updated 27 ಜುಲೈ 2023, 19:12 IST
ಅಕ್ಷರ ಗಾತ್ರ

ಸಣ್ಣ ಸಮುದಾಯಗಳಿಗೆ ಬೃಹತ್ ಪ್ರಮಾಣದ ಬ್ಯಾಂಕುಗಳಲ್ಲಿ ಸಿಗುವುದಕ್ಕಿಂತಲೂ ಹೆಚ್ಚಿನ ಹಣಕಾಸಿನ ನೆರವು ಸಿಗುವುದು ನಿರ್ದಿಷ್ಟ ಉದ್ದೇಶಗಳನ್ನು ಇಟ್ಟುಕೊಂಡು ಜನ್ಮತಳೆವ ಸಹಕಾರ ಬ್ಯಾಂಕುಗಳಿಂದ. ತಾತ್ವಿಕ ನೆಲೆಯಲ್ಲಿ ನೋಡಿದಾಗ ಇದು ಬಹಳ ಸರಿಯಾದ ಮಾತು ಅನಿಸುತ್ತದೆ. ಬೃಹತ್ ಪ್ರಮಾಣದ ವಹಿವಾಟು ಹೊಂದಿರುವ, ದೇಶದಾದ್ಯಂತ ಶಾಖೆಗಳನ್ನು ಹಾಗೂ ಗ್ರಾಹಕರನ್ನು ಹೊಂದಿರುವ ಬ್ಯಾಂಕಿಂಗ್ ಕಂಪನಿಗಳು ತೀರಾ ಸಣ್ಣ ಗ್ರಾಹಕರ ಅಗತ್ಯಗಳನ್ನು ಸರಿಯಾಗಿ ಗಮನಿಸದೆಯೂ ಇರಬಹುದು. ಆದರೆ ಸಣ್ಣ ಸಮುದಾಯಗಳಿಗೆ ಸೇವೆ ಒದಗಿಸುವ ಉದ್ದೇಶದಿಂದ ಕಾರ್ಯಾಚರಣೆ ನಡೆಸಬೇಕಿರುವ ಸಹಕಾರ ಬ್ಯಾಂಕುಗಳು ಸಣ್ಣ ಗ್ರಾಹಕರ ಅಗತ್ಯಗಳಿಗೆ ಸ್ಪಂದಿಸಬೇಕಿರುತ್ತದೆ. ಈ ಎಲ್ಲ ಮಾತುಗಳು ಕಾಗದದ ಮೇಲೆ ಬಹಳ ಚೆನ್ನಾಗಿ ಕಾಣಿಸುತ್ತವೆ. ವಾಸ್ತವದಲ್ಲಿ ಸಹಕಾರ ಬ್ಯಾಂಕ್‌ಗಳು ಗ್ರಾಹಕರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ವಿಫಲವಾಗುತ್ತಿವೆ. ಬೆಂಗಳೂರಿನ ಗುರುರಾಘವೇಂದ್ರ ಬ್ಯಾಂಕ್‌ನಲ್ಲಿನ ಅವ್ಯವಹಾರದಿಂದಾಗಿ ಅಮಾಯಕ ಠೇವಣಿದಾರರು ಸಂಕಷ್ಟಕ್ಕೆ ಸಿಲುಕಿರುವ ಸಂಗತಿ ನೆನಪಿನಿಂದ ಮರೆಯಾಗುವ ಮುನ್ನವೇ, ಬೆಂಗಳೂರಿನ ನ್ಯಾಷನಲ್ ಸಹಕಾರ ಬ್ಯಾಂಕ್‌ಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಆರು ತಿಂಗಳ ಅವಧಿಗೆ ಹಣಕಾಸಿನ ನಿರ್ಬಂಧಗಳನ್ನು ಹೇರಿದೆ. ಈ ಸಹಕಾರ ಬ್ಯಾಂಕ್‌ ಇನ್ನು ಆರು ತಿಂಗಳವರೆಗೆ ಹೊಸದಾಗಿ ಸಾಲ ಕೊಡುವಂತೆ ಇಲ್ಲ, ಹೊಸದಾಗಿ ಠೇವಣಿಗಳನ್ನು ಸ್ವೀಕರಿಸುವಂತೆ ಇಲ್ಲ. ಈ ಬ್ಯಾಂಕಿನ ವಹಿವಾಟುಗಳ ಮೇಲೆ ವಿಶ್ವಾಸ ಇರಿಸಿ, ಇಲ್ಲಿ ಹಣ ಠೇವಣಿ ಇರಿಸಿದ್ದವರು ಈಗಿನ ಪರಿಸ್ಥಿತಿಯಲ್ಲಿ ₹ 50 ಸಾವಿರಕ್ಕಿಂತ ಹೆಚ್ಚಿನ ಮೊತ್ತವನ್ನು ಹಿಂದಕ್ಕೆ ಪಡೆಯಲು ಆಗುವುದಿಲ್ಲ. ತಮ್ಮದೇ ಹಣವನ್ನು ಅವರು ಪೂರ್ತಿಯಾಗಿ ವಾಪಸ್ ಪಡೆಯಲು ಇನ್ನೆಷ್ಟು ಕಾಲ ಕಾಯಬೇಕು ಎಂಬುದು ಸದ್ಯಕ್ಕಂತೂ ಸ್ಪಷ್ಟವಾಗುವುದಿಲ್ಲ.

ರಾಜ್ಯದಲ್ಲಿ ಇನ್ನೂ ಕೆಲವು ಸಹಕಾರ ಬ್ಯಾಂಕುಗಳು ಆರ್‌ಬಿಐ ನಿರ್ಬಂಧಕ್ಕೆ ಒಳಗಾಗಿವೆ. ಮಹಾರಾಷ್ಟ್ರ ಮೂಲದ ಪಿಎಂಸಿ ಬ್ಯಾಂಕ್‌ ಮೇಲೆ ಆರ್‌ಬಿಐ ವಿಧಿಸಿದ್ದ ನಿರ್ಬಂಧವು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಏಕೆಂದರೆ ಆ ಬ್ಯಾಂಕಿನ ವಹಿವಾಟು ಹಲವು ರಾಜ್ಯಗಳಲ್ಲಿ ವಿಸ್ತರಿಸಿತ್ತು. ಆ ಪ್ರಕರಣವು ಸಹಕಾರ ಬ್ಯಾಂಕ್‌ಗಳ ವಹಿವಾಟುಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಹಣಕಾಸಿನ ಒಳಗೊಳ್ಳುವಿಕೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಬೇಕಿರುವ ಸಹಕಾರ ಬ್ಯಾಂಕುಗಳು ದಿವಾಳಿಯ ಸ್ಥಿತಿ ತಲುಪುತ್ತಿರುವುದು ಏಕೆ ಎಂಬ ಪ್ರಶ್ನೆಯೂ ಮೂಡಿತ್ತು. ವಾಣಿಜ್ಯ ಬ್ಯಾಂಕುಗಳ ಮೇಲೆ ಇಡುವಂತಹ ಬಿಗಿ ಕಣ್ಗಾವಲನ್ನು ಆರ್‌ಬಿಐ ಸಹಕಾರ ಬ್ಯಾಂಕುಗಳ ವಿಚಾರದಲ್ಲಿ ಇಡುವುದಿಲ್ಲ. ಇದು ಈ ಬ್ಯಾಂಕುಗಳ ಹಣಕಾಸು ಸ್ಥಿತಿ ತೀರಾ ಹದಗೆಡುವವರೆಗೂ ‘ಎಲ್ಲವೂ ಸರಿ ಇದೆ’ ಎಂಬ ಚಿತ್ರಣವು ಠೇವಣಿದಾರರಲ್ಲಿ ಮೂಡುವಂತೆ ಮಾಡುತ್ತಿದೆ. ವಾಣಿಜ್ಯ ಬ್ಯಾಂಕುಗಳು ಬಂಡವಾಳ ಮಾರುಕಟ್ಟೆಗೆ ಉತ್ತರದಾಯಿ ಆಗಿರುತ್ತವೆ. ಪ್ರತಿ ಮೂರು ತಿಂಗಳಿಗೊಮ್ಮೆ ಅವು ತಮ್ಮ ಹಣಕಾಸಿನ ಸ್ಥಿತಿಯ ಬಗ್ಗೆ ಬಂಡವಾಳ ಮಾರುಕಟ್ಟೆಗಳಿಗೆ ವಿವರಣೆ ನೀಡಬೇಕು. ತಾವು ಪಾರದರ್ಶಕವಾಗಿ ಇರಬೇಕು ಎಂಬ ಒತ್ತಡವೇ ಒಂದಿಷ್ಟು ಸಮಸ್ಯೆಗಳು ಸೃಷ್ಟಿಯಾಗದಂತೆ ನೋಡಿಕೊಳ್ಳುತ್ತದೆ. ಸಹಕಾರ ಬ್ಯಾಂಕುಗಳು ಕೂಡ ತಮ್ಮ ಹಣಕಾಸಿನ ಸ್ಥಿತಿಯನ್ನು ಕಾಲಕಾಲಕ್ಕೆ ಪ್ರಕಟಿಸಬೇಕು ಎಂಬ ಒತ್ತಡವೊಂದು ಸೃಷ್ಟಿಯಾಗಬೇಕು. ಅಲ್ಲದೆ, ಈ ಬ್ಯಾಂಕುಗಳ ಲೆಕ್ಕಪತ್ರಗಳು ಮೂರು ತಿಂಗಳಿಗೆ ಒಮ್ಮೆಯಾದರೂ ಕಠಿಣ ಪರಿಶೀಲನೆಗೆ ಒಳಗಾಗಬೇಕು. ಸಹಕಾರ ಬ್ಯಾಂಕುಗಳ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟ ನಂತರದಲ್ಲಿ ಆ ಬ್ಯಾಂಕಿನ ಮೇಲೆ ನಿರ್ಬಂಧಗಳನ್ನು ವಿಧಿಸುವ ಬದಲು, ಆರ್ಥಿಕ ಸ್ಥಿತಿಯನ್ನು ಕಾಲಕಾಲಕ್ಕೆ ಪರಿಶೀಲಿಸುತ್ತ, ಪರಿಸ್ಥಿತಿಯು ಕೈಮೀರಿ ಹೋಗದಂತೆ ನಿಗಾ ವಹಿಸುವ ವ್ಯವಸ್ಥೆ ರೂಪುಗೊಳ್ಳಬೇಕು.

ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿಗಳು ರಾಜಕೀಯ ವ್ಯಕ್ತಿಗಳ ಪಾಲಿಗೆ ಆಶ್ರಯ ಕೇಂದ್ರದಂತೆ ಆಗಬಾರದು. ಇಂತಹ ಬ್ಯಾಂಕುಗಳನ್ನು ಕೂಡ ವೃತ್ತಿಪರರು ಮುನ್ನಡೆಸಿಕೊಂಡು ಹೋಗುವ ವ್ಯವಸ್ಥೆ ಆಗಬೇಕು. ಇಲ್ಲಿ ಹೆಚ್ಚಿನ ಹೊಣೆಗಾರಿಕೆ ಇರುವುದು ಬ್ಯಾಂಕುಗಳ ಷೇರುದಾರರ ಮೇಲೆ. ಆಡಳಿತ ಮಂಡಳಿಯಲ್ಲಿ ಹಾಗೂ ಆಡಳಿತದ ಪ್ರಮುಖ ಹುದ್ದೆಗಳಲ್ಲಿ ವೃತ್ತಿಪರರೇ ಇರುವಂತೆ ಆಗಲು ಪೂರಕವಾದ ನೀತಿಗಳನ್ನು ಸರ್ಕಾರ ರೂಪಿಸಬೇಕು. ಸಹಕಾರ ಬ್ಯಾಂಕುಗಳ ಆಯಕಟ್ಟಿನ ಜಾಗಗಳಲ್ಲಿ ವೃತ್ತಿಪರರು ಮಾತ್ರ ಇರುವಂತೆ ಮಾಡುವ ಕೆಲಸವನ್ನು ಷೇರುದಾರರು ಚುನಾವಣೆಗಳಲ್ಲಿ ತಮ್ಮ ಹಕ್ಕನ್ನು ಜವಾಬ್ದಾರಿಯಿಂದ ಚಲಾಯಿಸುವ ಮೂಲಕವೂ ಮಾಡಬೇಕು. ನಿಯಮಗಳಲ್ಲಿ ಬದಲಾವಣೆ ಆಗದೇ ಇದ್ದರೆ, ಸಹಕಾರ ಬ್ಯಾಂಕುಗಳ ಸಂರಚನೆಯಲ್ಲಿ ಅಗತ್ಯ ಮಾರ್ಪಾಡುಗಳು ಆಗದೇ ಇದ್ದರೆ ಈಗ ನ್ಯಾಷನಲ್ ಸಹಕಾರ ಬ್ಯಾಂಕಿನ ಗ್ರಾಹಕರಂತೆಯೇ ಮುಂದೆ ಬೇರೆ ಕೆಲವು ಸಹಕಾರ ಬ್ಯಾಂಕುಗಳ ಗ್ರಾಹಕರೂ ಸಮಸ್ಯೆಗೆ ಸಿಲುಕಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT