ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ಹರಳುಗಟ್ಟಬೇಕಿರುವ ಬಿಜೆಪಿ ವಿರೋಧಿ ಮಹಾಮೈತ್ರಿ

ಇತಿಹಾಸದ ಪಾಠಗಳನ್ನು ನಿರ್ಲಕ್ಷಿಸುವುದು ಮೈತ್ರಿಕೂಟ ರಾಜಕಾರಣದ ಆರೋಗ್ಯಕ್ಕೆ ಹಾನಿಕರ
Last Updated 22 ಜನವರಿ 2019, 20:00 IST
ಅಕ್ಷರ ಗಾತ್ರ

ಆರು ತಿಂಗಳ ಹಿಂದೆ ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಿತು. ರಾಜ್ಯಸಭೆಯಲ್ಲಿ ತನಗೆ ಬಹುಮತ ಇಲ್ಲದಿದ್ದರೂ ಈ ಚುನಾವಣೆಯನ್ನು ನರೇಂದ್ರ ಮೋದಿ ಅವರ ಸಂಗಾತಿಗಳು ಗೆದ್ದುಕೊಂಡರು. ಬಿಜೆಪಿಯ ಯುಕ್ತಿ ಮತ್ತು ರಾಜಕೀಯ ತಂತ್ರಗಾರಿಕೆಯು ಗಣಿತವನ್ನಷ್ಟೇ ನೆಚ್ಚಿದ್ದ ವಿರೋಧ ಪಕ್ಷಗಳನ್ನು ಮಕಾಡೆ ಮಲಗಿಸಿತ್ತು.

ಆ ಹೊತ್ತಿಗಾಗಲೇ ಆರಂಭ ಆಗಿದ್ದ ಮಹಾಮೈತ್ರಿಯ ಆಡಂಬರದ ಮಾತುಗಳಿಗೆ ಮೊದಲ ಹೊಡೆತ ಬಿದ್ದಿತ್ತು. ಬೆಂಗಳೂರಿನಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರದ ಪ್ರಮಾಣವಚನ ಸ್ವೀಕಾರದ ಹೊತ್ತಿನಲ್ಲಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ವಿರೋಧಪಕ್ಷಗಳ ತಲೆಯಾಳುಗಳು ಒಟ್ಟಿಗೆ ನಿಂತು ಕೈ ಕಲೆಸಿದ್ದರು. ಆದರೆ ಅಂದಿನ ದೃಶ್ಯ ಭಾವಚಿತ್ರದ ಚೌಕಟ್ಟಿನಿಂದ ಹೊರಬಿದ್ದು ವಾಸ್ತವತೆಯತ್ತ ಹೆಜ್ಜೆ ಹಾಕಲಿಲ್ಲ.

ಈ ಹಿನ್ನೆಲೆಯಲ್ಲಿ ಮೊನ್ನೆ ಕೋಲ್ಕತ್ತದಲ್ಲಿ ನಡೆದ ಪ್ರತಿಪಕ್ಷಗಳ ರ‍್ಯಾಲಿ ಗಮನಾರ್ಹ. ಆದರೆ ಇಲ್ಲಿಯೂ ಮಹಾಮೈತ್ರಿ ಒಂದು ದೇಹ ಧರಿಸಿ ಎದ್ದು ನಿಂತಿಲ್ಲ. ವೈರುಧ್ಯಗಳು ಕರಗಿಲ್ಲ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುಂದೆ ನಿಂತು ಸಂಘಟಿಸಿದ ಈ ರ‍್ಯಾಲಿಗೆ ಜನಸಮುದ್ರವೇ ಹರಿದು ಬಂದಿತ್ತು. 20ಕ್ಕೂ ಹೆಚ್ಚು ಪ್ರಾದೇಶಿಕ ಪಕ್ಷಗಳ ನಾಯಕರು ವೇದಿಕೆಯಲ್ಲಿದ್ದರು. ಮಮತಾ ಅವರ ಸಂಘಟನಾ ಚಾತುರ್ಯ ಮತ್ತು ನಾಯಕತ್ವದ ಗುಣಗಳು ಬಿಂಬಿತವಾಗಿದ್ದು ಬಿಟ್ಟರೆ ಪ್ರತಿಪಕ್ಷಗಳು ನಿಜವಾದ ಮೈತ್ರಿಕೂಟ ಆಗುವ ನಿಸ್ಸಂದೇಹ ಸಂದೇಶವೇನೂ ಈ ರ‍್ಯಾಲಿಯಿಂದ ಹೊರಬೀಳಲಿಲ್ಲ. ಮೋದಿ ಅವರನ್ನು ಟೀಕೆ ಮಾಡಿದರಷ್ಟೇ ಸಾಲದು. ಪರ್ಯಾಯವನ್ನು ಕಟ್ಟಿ ತೋರಿಸಬೇಕು.

ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪರ್ಯಾಯ ಪ್ರಣಾಳಿಕೆ- ಕಾರ್ಯಸೂಚಿ ತಯಾರಿಸಬೇಕು ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಸಲಹೆ ನೀಡಿರುವುದು ಸ್ವಾಗತಾರ್ಹ. ಇನ್ನು ಪ್ರಧಾನಿ ಅಭ್ಯರ್ಥಿಯ ಪ್ರಶ್ನೆ. ಮೈತ್ರಿಕೂಟದಲ್ಲಿ ಪ್ರಧಾನಿ ಆಕಾಂಕ್ಷಿಗಳೇ ಕಿಕ್ಕಿರಿದಿದ್ದಾರೆ ಎಂಬ ಮೋದಿಯವರ ಟೀಕೆಯಲ್ಲಿ ಹುರುಳಿದೆ. ಸರ್ವಾಧಿಕಾರಿ ಮೋದಿ- ಶಾ ಜೋಡಿಯನ್ನು ಕಿತ್ತೊಗೆಯುವುದೇ ಮುಂಬರುವ ಲೋಕಸಭಾ ಚುನಾವಣೆಯ ಉದ್ದೇಶವಾಗಬೇಕೇ ವಿನಾ ಮೈತ್ರಿಕೂಟದ ಪ್ರಧಾನಿ ಯಾರೆಂಬುದು ಮುಖ್ಯವಲ್ಲ ಎಂಬ ವಾದ ಮುಂದಿಡಲಾಗುತ್ತಿದೆ. 1977ರಲ್ಲಿ ಇಂದಿರಾ ಗಾಂಧಿ ವಿರುದ್ಧ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿಯನ್ನು ಬಿಂಬಿಸಲಾಗಿತ್ತೇ ಎಂಬ ಸಮರ್ಥನೆಯನ್ನು ನೀಡಲಾಗುತ್ತಿದೆ. ಆದರೆ ಹಾಲಿ ಮೈತ್ರಿಕೂಟದಲ್ಲಿ ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟ ಹಲವಾರು ನಾಯಕರಿರುವುದು ವಾಸ್ತವ. ಪ್ರಧಾನಿ ಆಗುವ ಬಯಕೆ ತಪ್ಪಲ್ಲ. ಆದರೆ ಅದಕ್ಕಾಗಿ ಅನಾರೋಗ್ಯಕರ ಪೈಪೋಟಿ ಒಳಿತಲ್ಲ.

ಹುದ್ದೆಯ ಹೆಬ್ಬಯಕೆ ಮತ್ತು ನಾನು ಹೆಚ್ಚು ತಾನು ಹೆಚ್ಚು ಎಂಬ ಅಹಮಿಕೆಗಳು ಮೈತ್ರಿಕೂಟಗಳನ್ನು ಮುರಿಯುವುದು ನಿಶ್ಚಿತ. ವಿಘಟನೆಯ ದುರಂತ ಬೀಜವನ್ನು ಒಡಲಲ್ಲಿ ಇಟ್ಟುಕೊಂಡೇ ಮೈತ್ರಿಕೂಟಗಳು ಹುಟ್ಟುತ್ತವೆ. ಇಂದಿರಾ ಗಾಂಧಿ ಹೇರಿದ್ದ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಹುಟ್ಟಿದ ಜನತಾ ಪಕ್ಷದ ಸರ್ಕಾರ ಮತ್ತು 1989ರಲ್ಲಿ ಬಿಜೆಪಿ ಮತ್ತು ಎಡಪಕ್ಷಗಳ ಬಾಹ್ಯ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದಿದ್ದ ಜನತಾದಳದ ರಾಷ್ಟ್ರೀಯ ರಂಗ ಸರ್ಕಾರ ಈ ಮಾತಿಗೆ ಉದಾಹರಣೆಗಳು. ಪ್ರಧಾನಿ ಯಾರಾಗಬೇಕೆಂಬ ಕಿತ್ತಾಟದ ನಡುವೆ 1977ರಲ್ಲಿ ಅಧಿಕಾರಕ್ಕೆ ಬಂದ ಜನತಾ ಪಕ್ಷದ ಸರ್ಕಾರವು 1979ರಲ್ಲಿ ಪತನಗೊಂಡಿತು. 1989ರಲ್ಲಿ ಅಧಿಕಾರ ಹಿಡಿದ ವಿ.ಪಿ.ಸಿಂಗ್ ನೇತೃತ್ವದ ರಾಷ್ಟ್ರೀಯ ರಂಗ ಸರ್ಕಾರವೂ ಅತಿರಥ ಮಹಾರಥ ನಾಯಕರನ್ನು ಒಳಗೊಂಡಿತ್ತು. ಆದರೆ 1990ರಲ್ಲಿ ಕುಸಿಯಿತು. ಸ್ವತಂತ್ರ ಭಾರತದ ರಾಜಕೀಯ ಇತಿಹಾಸದ ಪಾಠಗಳನ್ನು ನಿರ್ಲಕ್ಷಿಸುವುದು ಮೈತ್ರಿಕೂಟ ರಾಜಕಾರಣದ ಆರೋಗ್ಯಕ್ಕೆ ಹಾನಿಕರ.

ಇಂತಹ ಕೂಟ ರಾಜಕೀಯವು ಕಾಲಪ್ರವಾಹದಲ್ಲಿ ಶಕ್ತಿಗುಂದಿದ್ದರೂ ಗತವೈಭವದ ಸಿಂಹಾಸನದಿಂದ ಇಳಿದು ಬರಲು ಈಗಲೂ ಹಿಂದೆ ಮುಂದೆ ನೋಡುತ್ತಿದೆ ಎಂಬುದಕ್ಕೆ ಕೋಲ್ಕತ್ತ ರ‍್ಯಾಲಿಯೇ ಸಾಕ್ಷಿ. ಕೋಲ್ಕತ್ತದ ರ‍್ಯಾಲಿಯಲ್ಲಿ ಎಡಪಕ್ಷಗಳ ಗೈರುಹಾಜರಿ ಎದ್ದು ಕಂಡಿತು. ಇತಿಹಾಸದ ಈ ಮೈತ್ರಿಕೂಟಗಳು ಎದುರಿಸಿದ ಮಿತಿಗಳನ್ನು ಹಾಲಿ ಮಹಾಮೈತ್ರಿ ಮೀರಿ ಮೈತಳೆಯುವ ಸಾಧ್ಯತೆಗಳನ್ನು ಈ ಹಂತದಲ್ಲಿಯೂ ತಳ್ಳಿಹಾಕಲು ಬರುವುದಿಲ್ಲ. ಆದರೆ ಆ ದಿಸೆಯಲ್ಲಿ ಸ್ವಾರ್ಥರಹಿತ ಮತ್ತು ಪ್ರಾಮಾಣಿಕ ಪ್ರಯತ್ನಗಳು ಅತ್ಯಗತ್ಯ. 1977 ಮತ್ತು 1989ರ ಮೈತ್ರಿ ಪ್ರಯೋಗಗಳಲ್ಲಿ ಅಂದಿನ ಜನಸಂಘ ಮತ್ತು ಮರುಹುಟ್ಟು ಪಡೆದ ಬಿಜೆಪಿ ಭಾಗವಹಿಸಿದ್ದವು. ಇಂದಿನ ಮಹಾಮೈತ್ರಿಯ ಪ್ರಯತ್ನಗಳನ್ನು ತಮ್ಮನ್ನು ಸೋಲಿಸುವ ಏಕೈಕ ಉದ್ದೇಶ ಹೊಂದಿದ ಸ್ವಾರ್ಥಭರಿತ ಅವಕಾಶವಾದಿ ಮೈತ್ರಿ ಎಂದು ಮೋದಿ ಜರೆದಿದ್ದಾರೆ. ಆದರೆ ಇಂದಿರಾ ವಿರುದ್ಧ ಮತ್ತು ಆನಂತರ ರಾಜೀವ್ ವಿರುದ್ಧ ಜನಸಂಘ- ಬಿಜೆಪಿಯೂ ಭಾಗವಹಿಸಿದ್ದ ಮೈತ್ರಿಗಳನ್ನು ಏನೆಂದು ಕರೆಯುವರು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT