ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ದುರಂತಕ್ಕೆ ಹೊಣೆ ಯಾರು?ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಿ

Last Updated 25 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಪಾಂಡವಪುರ ತಾಲ್ಲೂಕಿನ ಕನಗನಮರಡಿ ಗ್ರಾಮದ ಬಳಿ 30 ಪ್ರಯಾಣಿಕರನ್ನು ಬಲಿ ಪಡೆದ ಬಸ್‌ ಅಪಘಾತ ಅತ್ಯಂತ ದುರದೃಷ್ಟಕರ. ಈ ಅಪಘಾತಕ್ಕೆ ಯಾರು ಹೊಣೆ? ಇದಕ್ಕೆ ಚಾಲಕನ ನಿರ್ಲಕ್ಷ್ಯ ಕಾರಣವೇ? ಯಾಂತ್ರಿಕ ದೋಷ ಕಾರಣ ಇರಬಹುದೇ? ನಾಲೆ ಪಕ್ಕದ ತಿರುವನ್ನು ದೂರಬೇಕೇ? ಸಾರಿಗೆ, ಪೊಲೀಸ್, ಲೋಕೋಪಯೋಗಿ ಇಲಾಖೆಗಳ ವೈಫಲ್ಯದ ಕಡೆ ಬೆರಳು ಮಾಡಬೇಕೇ...? ಯಾರೋ ಒಬ್ಬರ ಕಡೆ ಬೊಟ್ಟು ಮಾಡಿ ನುಣುಚಿಕೊಳ್ಳುವುದು ಸುಲಭ. ಆದರೆ, ಇದರಲ್ಲಿ ಎಲ್ಲರ ವೈಫಲ್ಯವೂ ಇದೆ ಎಂಬ ಸತ್ಯವನ್ನು ಒಪ್ಪಿಕೊಳ್ಳಲೇಬೇಕು. 15 ವರ್ಷ ದಕ್ಷಿಣ ಕನ್ನಡದಲ್ಲಿ ಓಡಾಡಿದ್ದ ಬಸ್‌ ಮಂಡ್ಯಕ್ಕೆ ಬಂದದ್ದು ಹೇಗೆ? ದಕ್ಷಿಣ ಕನ್ನಡದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಪರ್ಮಿಟ್‌ ನವೀಕರಿಸಲು ನಿರಾಕರಿಸಿದ ಬಳಿಕ ಇಲ್ಲಿ ಹೇಗೆ ಪರ್ಮಿಟ್ ಕೊಡಲಾಯಿತು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಮಂಡ್ಯ ಜಿಲ್ಲೆಯಲ್ಲಿ ಓಡಾಡುತ್ತಿರುವ ಬಹಳಷ್ಟು ಹಳೇ ಬಸ್‌ಗಳನ್ನು ದಕ್ಷಿಣ ಕನ್ನಡದಿಂದ ಅತ್ಯಂತ ಕಡಿಮೆ ಬೆಲೆ ಕೊಟ್ಟು ಖರೀದಿಸಲಾಗಿದೆ ಎಂದು ಸಾರಿಗೆ ಇಲಾಖೆ ಮೂಲಗಳೇ ಹೇಳುತ್ತವೆ.

ಜಿಲ್ಲಾ ಮಟ್ಟದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು 15 ವರ್ಷ ಹಳೆಯದಾದ ಬಸ್‌ಗಳಿಗೆ ‍‍ಪರ್ಮಿಟ್‌ ನೀಡಬಾರದು ಎಂಬ ನಿಯಮಗಳನ್ನು ರೂಪಿಸಿವೆ. ಇದು ದಕ್ಷಿಣ ಕನ್ನಡದಲ್ಲಿ ಮಾತ್ರ ಕಟ್ಟುನಿಟ್ಟಾಗಿ ಜಾರಿ ಆಗಿದೆ. ನ್ಯಾಯಾಲಯದ ತಡೆಯಾಜ್ಞೆ ಇರುವುದರಿಂದ ಅನೇಕ ಜಿಲ್ಲೆಗಳಲ್ಲಿ ಅನುಷ್ಠಾನಗೊಂಡಿಲ್ಲ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು 10 ವರ್ಷದಷ್ಟು ಹಳೆಯದಾದ ಡೀಸೆಲ್‌ ವಾಹನಗಳು ಹಾಗೂ 15 ವರ್ಷ ಹಳೆಯದಾದ ಪೆಟ್ರೋಲ್‌ ವಾಹನಗಳನ್ನು ದೆಹಲಿಯಲ್ಲಿ ನಿಷೇಧಿಸುವಂತೆ ಆದೇಶಿಸಿದೆ. ಈ ಆದೇಶವನ್ನು ಸುಪ್ರೀಂ ಕೋರ್ಟ್‌ ಕೂಡಾ ಎತ್ತಿ ಹಿಡಿದಿದೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಇದೇ ಪ್ರಸ್ತಾವವನ್ನು ರಾಜ್ಯ ಸರ್ಕಾರಕ್ಕೆ ಹಿಂದೆಯೇ ಸಲ್ಲಿಸಿದೆ. ಕೋರ್ಟ್‌ ಆದೇಶಗಳು ಇದ್ದಾಗ್ಯೂ ಇಂಥದೊಂದು ನೀತಿಯನ್ನು ಅನುಷ್ಠಾನಕ್ಕೆ ತರುವ ದೃಢ ಸಂಕಲ್ಪ ಕೇಂದ್ರಕ್ಕಾಗಲೀ ಅಥವಾ ರಾಜ್ಯಕ್ಕಾಗಲೀ ಇಲ್ಲ.

ಹಳೇ ವಾಹನಗಳ ನಿಷೇಧದಿಂದ ಮಾಲಿನ್ಯ ಪ್ರಮಾಣ ತಗ್ಗುವುದಷ್ಟೇ ಅಲ್ಲ, ಅಪಘಾತಗಳ ಸಂಖ್ಯೆಯೂ ಇಳಿಯಲಿದೆ ಎಂಬ ಕನಿಷ್ಠ ಪ್ರಜ್ಞೆ ಅಧಿಕಾರದ ಗದ್ದುಗೆಯಲ್ಲಿ ಕುಳಿತಿರುವ ನಾಯಕರಿಗೆ ಇರಬೇಕು. ವಾಹನ ಮಾಲೀಕರ ಲಾಬಿಗೆ ಮಣಿದು ಸರ್ಕಾರ ಇಂಥ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ಸುಳ್ಳಲ್ಲ. ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗಲೇ ಹಳೇ ವಾಹನಗಳನ್ನು ನಿಷೇಧಿಸಲು ಮುಂದಾಗಿದ್ದರು. ಅವರ ಮೇಲೆ ಒತ್ತಡ ಬಂದಿದ್ದರಿಂದ ತೀರ್ಮಾನ ಕೈಬಿಡಲಾಯಿತು. ಅಧಿಕ ಅಪಘಾತಗಳು ನಡೆಯುತ್ತಿರುವ ಐದು ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಇದಕ್ಕೆ ವಾಹನ ಚಾಲನಾ ಪರವಾನಗಿ ವಿತರಣಾ ವ್ಯವಸ್ಥೆ ಮತ್ತು ವಾಹನಗಳ ತಪಾಸಣೆ ಕ್ರಮದಲ್ಲಿರುವ ದೋಷಗಳೇ ಕಾರಣ. ಎಲ್ಲ ಇಲಾಖೆಗಳಲ್ಲಿರುವಂತೆ ಸಾರಿಗೆ ಇಲಾಖೆಯಲ್ಲೂ ಭ್ರಷ್ಟಾಚಾರ ವ್ಯಾಪಕವಾಗಿದೆ. ‘ಫಿಟ್‌ನೆಸ್‌ ಸರ್ಟಿಫಿಕೇಟ್‌’ ಪಡೆಯಲು ಬರುವ ಪ್ರತೀ ವಾಹನಕ್ಕೆ ಮಾಮೂಲು ನಿಗದಿಪಡಿಸಲಾಗಿದೆ. ಇಂಥ ವ್ಯವಸ್ಥೆಯಲ್ಲಿ ವಾಹನಗಳ ತಪಾಸಣೆ ಯಾವ ರೀತಿ ನಡೆಯುತ್ತದೆ ಎಂಬುದನ್ನು ಯಾರಾದರೂ ಊಹಿಸಬಹುದು. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿರುವ ರಸ್ತೆ ಸುರಕ್ಷತಾ ಸಮಿತಿ ಸಭೆ ಎರಡು ತಿಂಗಳಿಗೊಮ್ಮೆ ನಡೆಯುತ್ತದೆ. ರಸ್ತೆ ಸುರಕ್ಷತೆ ಕುರಿತು ಕೈಗೊಳ್ಳಬೇಕಾದ ಕ್ರಮಗಳನ್ನು ಚರ್ಚಿಸುತ್ತದೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಇರುತ್ತಾರೆ. ಆದರೆ, ಸಭೆಯಲ್ಲಿ ಕೈಗೊಳ್ಳುವ ತೀರ್ಮಾನಗಳು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ.

ನಾಲೆಗಳು ಮತ್ತು ಕೆರೆಗಳು ಇರುವ ಕಡೆಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸಬೇಕು ಎಂದಿದೆ. ಇದುವರೆಗೂ ಅದು ಆಗಿಲ್ಲ. ಆದ್ಯತೆ ಮೇಲೆ ಸರ್ಕಾರ ಈ ಕೆಲಸ ಕೈಗೆತ್ತಿಕೊಳ್ಳಬೇಕು. ಸಾಧ್ಯವಾದರೆ ಕೆರೆ, ನಾಲೆಗಳ ಪಕ್ಕ ಇರುವ ರಸ್ತೆಗಳಿಗೆ ಪರ್ಯಾಯವಾಗಿ ಹೊಸ ರಸ್ತೆಗಳನ್ನು ನಿರ್ಮಿಸಬೇಕು. ಈ ಕೆಲಸ ಸರ್ಕಾರಕ್ಕೆ ದೊಡ್ಡ ಹೊರೆಯಾಗಲಾರದು. ಖಾಸಗಿ ಬಸ್‌ ಹಾಗೂ ಟ್ರಕ್ಕುಗಳನ್ನು ಎಷ್ಟೋ ಸಂದರ್ಭಗಳಲ್ಲಿ ಅನುಭವ ಇಲ್ಲದವರು, ಲೈಸೆನ್ಸ್‌ ಇಲ್ಲದವರು, ಕ್ಲೀನರ್‌ಗಳು ಓಡಿಸುತ್ತಿರುತ್ತಾರೆ. ಹೀಗಾಗಿ, ತಪಾಸಣಾ ವ್ಯವಸ್ಥೆಯನ್ನು ಬಿಗಿಗೊಳಿಸಬೇಕು. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳದಿದ್ದರೆ ಅಪಘಾತಗಳು ಹೆಚ್ಚುತ್ತಲೇ ಇರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT