ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಹತ್ತು ವರ್ಷಗಳ ಹಿಂದೆ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯು ಮಾನ್ಯತೆ ಕಳೆದುಕೊಂಡಿದೆ ಎಂಬ ನಿರ್ಣಯಕ್ಕೆ ಬಂದಿರುವ ರಾಜ್ಯ ಸರ್ಕಾರವು ಹೊಸದಾಗಿ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ ನಡೆಸಲು ತೀರ್ಮಾನಿಸಿದೆ.

ಆಯೋಗದ ನೇತೃತ್ವದಲ್ಲೇ 90 ದಿನಗಳ ಕಾಲಮಿತಿಯಲ್ಲಿ ಸಮೀಕ್ಷೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸರ್ಕಾರದ ಆದೇಶದ ಅನ್ವಯ ಆಯೋಗವು ಜಾತಿ ಜನಗಣತಿ ಎಂದೇ ಹೆಸರಾಗಿರುವ ಈ ಸಮೀಕ್ಷೆಯನ್ನು 2015ರಲ್ಲಿ ನಡೆಸಿತ್ತು. ಪ್ರತಿ ಮನೆಗೂ ಭೇಟಿ ನೀಡಿ 54 ಪ್ರಶ್ನೆಗಳನ್ನು ಮುಂದಿಟ್ಟು ಮಾಹಿತಿ ಸಂಗ್ರಹಿಸಲಾಗಿದೆ ಎಂದು ಸರ್ಕಾರ ಹೇಳಿತ್ತು.

ರಾಜ್ಯದ ಎರಡು ಪ್ರಬಲ ಸಮುದಾಯಗಳಾದ ಒಕ್ಕಲಿಗ ಮತ್ತು ಲಿಂಗಾಯತ ಮುಖಂಡರು ಸಮೀಕ್ಷೆ ಬಗ್ಗೆ ಆಕ್ಷೇಪ ಎತ್ತಿದ್ದರು. 2018ರ ಆರಂಭದಲ್ಲಿ ವರದಿ ತಯಾರಾಗಿತ್ತು. ಚುನಾವಣೆ ಬಂದಿದ್ದರಿಂದಾಗಿ ಅದು ನನೆಗುದಿಗೆ ಬಿದ್ದಿತು. ಯಾವುದೇ ಸಮೀಕ್ಷೆಯ ವರದಿಯು 10 ವರ್ಷಗಳ ಬಳಿಕ ಪ್ರಸ್ತುತತೆ ಕಳೆದುಕೊಳ್ಳಬಹುದು ಎಂಬ ವಾದವನ್ನು ಒಪ್ಪಬಹುದಾದರೂ ವರದಿಯನ್ನು ಅಷ್ಟೊಂದು ದೀರ್ಘ ಅವಧಿಗೆ ಅತಂತ್ರ ಸ್ಥಿತಿಯಲ್ಲಿ ಇರಿಸಿದ್ದು ಜವಾಬ್ದಾರಿಯುತ ನಡೆಯಾಗಿ ಕಾಣುವುದಿಲ್ಲ. ಈ ಅವಧಿಯಲ್ಲಿ ಜೆಡಿಎಸ್ ಪಕ್ಷದ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿಯ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ನ ಸಿದ್ದರಾಮಯ್ಯ ಅವರು ಸರ್ಕಾರವನ್ನು ಮುನ್ನಡೆಸಿದ್ದಾರೆ. ವರದಿಯು ಪ್ರಸ್ತುತತೆ ಕಳೆದುಕೊಂಡಿದ್ದರೆ ಅದಕ್ಕೆ ಇವರೆಲ್ಲ ಉತ್ತರದಾಯಿ ಆಗಬೇಕಾಗುತ್ತದೆ.

₹165 ಕೋಟಿ ವಿನಿಯೋಗಿಸಿ ನಡೆಸಲಾದ ಸಮೀಕ್ಷೆಯ ವರದಿಯನ್ನು ಕಪಾಟಿನಲ್ಲಿ ಮುಚ್ಚಿಡುವಂತಹ ಅಗತ್ಯ ಇರಲಿಲ್ಲ. ಸಚಿವ ಸಂಪುಟ ಸಭೆಗೆ ತಂದು ಚರ್ಚಿಸಬೇಕಿತ್ತು. ವರದಿಯನ್ನು ಒಪ್ಪಬಹುದಿತ್ತು, ಸರಿ ಎನಿಸದಿದ್ದರೆ ತಿರಸ್ಕರಿಸಬಹುದಿತ್ತು ಅಥವಾ ಪರಿಷ್ಕರಣೆಗೆ ಸೂಚಿಸುವ ಅವಕಾಶ ಇತ್ತು. ಎಚ್.ಕಾಂತರಾಜ ಆಯೋಗದ ವರದಿಯನ್ನು ಜಾರಿ ಮಾಡಿಯೇ ಸಿದ್ಧ ಎಂದು ಕಾಂಗ್ರೆಸ್ ನಾಯಕರು 2023ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದರು. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರ ಹಿಡಿದ ಬಳಿಕ, ವರದಿ ಮಂಡನೆಯ ಪರ–ವಿರೋಧದ ಕೂಗು ಜೋರಾಯಿತು.

ಅಷ್ಟರಲ್ಲೇ, 2024ರ ಲೋಕಸಭೆ ಚುನಾವಣೆ ಎದುರಾಯಿತು. ಅದು ಪೂರ್ಣಗೊಂಡ ಬಳಿಕವಾದರೂ ವರದಿಯ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಬಹುದಿತ್ತು. ಅದೂ ಆಗಲಿಲ್ಲ. ಪರ–ವಿರೋಧದ ಮಾತುಗಳು ಪುನಃ ಬಿರುಸು ಪಡೆದವು. ಈ ಮಧ್ಯೆಯೇ, ಮುಚ್ಚಿದ ಲಕೋಟೆಯಲ್ಲಿದ್ದ ವರದಿಯನ್ನು ಸಚಿವ ಸಂಪುಟದ ಮುಂದೆ ತೆರೆದು, ಅದರ ಪ್ರತಿಗಳನ್ನು ಸಚಿವರಿಗೆ ನೀಡಲಾಯಿತು. ಇದರ ಚರ್ಚೆಗಾಗಿಯೇ ವಿಶೇಷ ಸಂಪುಟ ಸಭೆಯೂ ನಿಗದಿಯಾಗಿತ್ತು. ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಂಡ ಕಾಂಗ್ರೆಸ್ ಪಕ್ಷದ ವರಿಷ್ಠರು, ಮರು ಸಮೀಕ್ಷೆ ನಡೆಸಲು ನಿರ್ದೇಶನ ನೀಡಿದರು. ಇದರ ಹಿಂದಿನ ಬೆಳವಣಿಗೆ ಗಳನ್ನು ಗಮನಿಸಿದರೆ, ಪ್ರಭಾವಿ ಜಾತಿಗಳ ಒತ್ತಡಕ್ಕೆ ಪಕ್ಷ ಮಣೆ ಹಾಕಿರಬಹುದು ಎಂಬ ಅನುಮಾನ ಮೂಡುವುದು ಸಹಜ.

‘ಮರು ಸಮೀಕ್ಷೆಗೆ ತೀರ್ಮಾನ ಕೈಗೊಂಡಿರುವುದು ಹೈಕಮಾಂಡ್; ನಾನಲ್ಲ’ ಎಂದು ಮೊದಲು ಹೇಳಿದ್ದ ಸಿದ್ದರಾಮಯ್ಯ, ಸಚಿವ ಸಂಪುಟ ಸಭೆಯ ಬಳಿಕ ‘10 ವರ್ಷಗಳ ಹಿಂದೆ ನಡೆಸಿದ್ದ ಸಮೀಕ್ಷೆಯ ವರದಿಯು ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆಯ ಅನುಸಾರ ಮಾನ್ಯತೆ ಕಳೆದುಕೊಂಡಿರುವುದರಿಂದ ಹೊಸ ಸಮೀಕ್ಷೆ ನಡೆಸಲಾಗುವುದು. ಇದಕ್ಕೆ ಹೈಕಮಾಂಡ್ ಮಾರ್ಗದರ್ಶನವೂ ಇದೆ’ ಎಂದರು. ಯಾವುದೇ ಅಪಸ್ವರ ಹಾಗೂ ಸಂಶಯಗಳಿಗೆ ಕಿಂಚಿತ್ತೂ ಆಸ್ಪದ ಕೊಡದಂತೆ ಪೂರ್ವಸಿದ್ಧತೆ ನಡೆಸಿ, ಸಮೀಕ್ಷೆ ನಡೆಸಬೇಕಾದ ಹೊಣೆ ಸರ್ಕಾರದ ಮೇಲಿದೆ. ಜಾತಿ ಸಂಘಟನೆಗಳ ಪ್ರತಿನಿಧಿಗಳು, ಜನ
ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಸಮೀಕ್ಷೆ ಆರಂಭಿಸುವುದು ಸೂಕ್ತ. ತಂತ್ರಜ್ಞಾನದ ಬಳಕೆ, ಆಧಾರ್ ಸಂಖ್ಯೆಯ ನೆರವು ಪಡೆದರೆ ನಿಖರ ದತ್ತಾಂಶವುಳ್ಳ ವರದಿ ಸಿದ್ಧಪಡಿಸಬಹುದು. ಸಮೀಕ್ಷೆಗೆ ಕಾಲಮಿತಿ ನಿಗದಿ ಮಾಡಿದಂತೆ, ವರದಿಯ ಬಗ್ಗೆ ಕ್ರಮಕೈಗೊಳ್ಳುವುದಕ್ಕೂ ಕಾಲಮಿತಿ ನಿಗದಿ ಮಾಡುವುದು ಒಳ್ಳೆಯದು. ಸಮುದಾಯಗಳ ಒಳಿತಿನ ಉದ್ದೇಶದಿಂದ ನಡೆಯುವ ಈ ದತ್ತಾಂಶ ಸಂಗ್ರಹದ ವಿಚಾರದಲ್ಲಿ ಕೆಟ್ಟ ರಾಜಕೀಯ ಮಾಡುವುದು ತರವಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.