ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಹವಾಮಾನ ಬದಲಾವಣೆಯ ಸಂಕಟ: ತಡವಾಗಿದೆ, ಈಗಲೇ ಎಚ್ಚೆತ್ತುಕೊಳ್ಳಿ

ಭೂತಾಪ ನಿಯಂತ್ರಣಕ್ಕೆ ತುರ್ತಾಗಿ ಪ್ರಬಲವಾದ ಕ್ರಮ ಕೈಗೊಳ್ಳಲೇಬೇಕಾದ ಅನಿವಾರ್ಯ ಸಂದರ್ಭ ಇದಾಗಿದೆ
Published 22 ಮಾರ್ಚ್ 2024, 23:30 IST
Last Updated 22 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ವಿಶ್ವ ಪವನವಿಜ್ಞಾನ ಸಂಸ್ಥೆಯು (ಡಬ್ಲ್ಯುಎಂಒ) ಇತ್ತೀಚೆಗೆ ಬಿಡುಗಡೆ ಮಾಡಿರುವ ‘ಜಾಗತಿಕ ಹವಾಮಾನ ಸ್ಥಿತಿಗತಿ’ ವರದಿಯು ಪ್ರಪಂಚದ ಎಲ್ಲ ದೇಶಗಳಿಗೂ ಬಲು ಗಂಭೀರವಾದ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮಗಳ ಕುರಿತು ವ್ಯಕ್ತವಾಗುತ್ತಿರುವ ಭೀತಿ ಮತ್ತು ಆತಂಕಗಳು ಸಕಾರಣದಿಂದ ಕೂಡಿವೆ ಎಂಬುದನ್ನು ಈ ವರದಿಯು ಒತ್ತಿ ಹೇಳಿದೆ. ವರದಿಯೊಂದಿಗೆ ಒದಗಿಸಲಾಗಿರುವ ಅಂಕಿ ಅಂಶಗಳು ಹವಾಮಾನ ಬದಲಾವಣೆಯ ಸಂಕಟದ ಮುನ್ಸೂಚನೆಯನ್ನು ಢಾಳಾಗಿ ನೀಡುತ್ತಿವೆ. 2023ನೇ ವರ್ಷವು ಅತ್ಯಧಿಕ ಭೂತಾಪದ ವರ್ಷವಾಗಿ ದಾಖಲೆ ಬರೆದಿದೆ ಮತ್ತು ಸದ್ಯದ ದಶಕ, ಚರಿತ್ರೆಯಲ್ಲೇ ಅತ್ಯಧಿಕ ಉಷ್ಣತೆಯಿಂದ ಬಳಲಿದ ದಶಕವಾಗಿ ಗುರುತಿಸಿಕೊಂಡಿದೆ. ಭೂತಾಪಮಾನವು ಕೈಗಾರಿಕಾ ಕ್ರಾಂತಿಯ ಹಿಂದಿನ ದಿನಗಳಿಗೆ ಹೋಲಿಸಿದರೆ, 2023ರಲ್ಲಿ ಸರಾಸರಿ 1.45 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚು ದಾಖಲಾಗಿದೆ. ಭೂತಾಪದ ಏರಿಕೆ ಪ್ರಮಾಣವನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಮಿತಗೊಳಿಸಬೇಕು ಎಂದು ಪ್ಯಾರಿಸ್‌ ಶೃಂಗದ ಒಪ್ಪಂದದಲ್ಲಿ ಘೋಷಿಸಲಾಗಿತ್ತು. ಆ ಮಿತಿಯನ್ನು ಮೀರುವ ಎಲ್ಲ ಲಕ್ಷಣಗಳು ಈಗ ಗೋಚರಿಸುತ್ತಿದ್ದು, ಕಳೆದ ವರ್ಷಕ್ಕಿಂತ ಈ ಸಲದ ತಾಪಮಾನ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಮುನ್ಸೂಚನೆ ನೀಡಿದ್ದಾರೆ. ಹವಾಮಾನ ಶೃಂಗಗಳಲ್ಲಿ ಒಪ್ಪಿಕೊಂಡ ಗುರಿಗಳನ್ನು ತಲುಪುವಲ್ಲಿ ಎಲ್ಲ ರಾಷ್ಟ್ರಗಳು ವಿಫಲವಾಗಿರುವುದನ್ನೂ ವರದಿ ಎತ್ತಿ ತೋರಿದೆ.

ಹಸಿರುಮನೆ ಅನಿಲಗಳ ಹೊರಸೂಸುವಿಕೆಯ ಪ್ರಮಾಣವು ಕಡಿಮೆಯಾಗುವ ಬದಲು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದನ್ನು ಸಹ ಡಬ್ಲ್ಯುಎಂಒ ವರದಿ ಗುರುತಿಸಿದೆ. ಅದರ ಪರಿಣಾಮವಾಗಿ ಭೂ ಮತ್ತು ಜಲತಾಪದಲ್ಲಿ ಏರಿಕೆ ಆಗುತ್ತಿದೆ. ನೀರ್ಗಲ್ಲುಗಳು ಕರಗುವ ಪ್ರಮಾಣವು ತೀವ್ರಗತಿಯನ್ನು ಪಡೆದುಕೊಂಡಿದ್ದು, ಇದರಿಂದ ಸಮುದ್ರದ ಮಟ್ಟವು ಏರಿಕೆಯಾಗುತ್ತಿದೆ. ಮೂವತ್ತು ವರ್ಷಗಳಲ್ಲಿ ಆಗಿರುವ ಸಮುದ್ರ ಮಟ್ಟದ ಏರಿಕೆಯಲ್ಲಿ, ಕಳೆದ ಮೂರು ವರ್ಷಗಳ ಪಾಲೇ ಶೇ 10ರಷ್ಟು ಎನ್ನುವ ಸಂಗತಿಯು ತಾಪಮಾನ ಯಾವ ಗತಿಯಲ್ಲಿ ಹೆಚ್ಚುತ್ತಿದೆ ಎನ್ನುವುದರ ದ್ಯೋತಕ. ಸ್ವಿಟ್ಜರ್ಲೆಂಡ್‌ನ ಆಲ್ಪ್ಸ್‌ ಪರ್ವತಶ್ರೇಣಿಯು ಕಳೆದ ಎರಡೇ ವರ್ಷಗಳಲ್ಲಿ ಶೇ 10ರಷ್ಟು ನೀರ್ಗಲ್ಲುಗಳನ್ನು ಕಳೆದುಕೊಂಡಿದೆ. ಜಗತ್ತಿನ ಎಲ್ಲ ಹಿಮನದಿಗಳು ಹಿಮವನ್ನು ಶರವೇಗದಲ್ಲಿ ಕಳೆದುಕೊಳ್ಳುತ್ತಿವೆ. ಅಂಟಾರ್ಕ್ಟಿಕಾ ಭೂಪ್ರದೇಶವು ಪ್ರತಿವರ್ಷ 15 ಸಾವಿರ ಕೋಟಿ ಟನ್‌ ಮಂಜುಗಡ್ಡೆಯನ್ನು ಕರಗಿಸಿಕೊಳ್ಳುತ್ತಿದೆ ಎಂದು ಲೆಕ್ಕ ಹಾಕಲಾಗಿದೆ. ಬಿಸಿ ಮಾರುತ, ಬರ, ಅತಿಯಾದ ಮತ್ತು ಅಕಾಲಿಕ ಮಳೆ, ಮಹಾಪೂರ ಜಗತ್ತಿನ ಬಹುತೇಕ ಭಾಗಗಳಲ್ಲಿ ಈಗ ಸಾಮಾನ್ಯವಾಗಿವೆ. ಜನವಸತಿ ಪ್ರದೇಶಗಳ ಸ್ಥಳಾಂತರ, ಗುಳೆ, ಜೀವವೈವಿಧ್ಯದ ಹಾನಿ, ಆಹಾರದ ಅಭದ್ರತೆ – ಎಲ್ಲವೂ ಹವಾಮಾನ ವೈಪರೀತ್ಯದ ಪರಿಣಾಮಗಳೇ ಆಗಿವೆ. ಜಗತ್ತಿನ ಎಲ್ಲ ಕಡೆಗಳಲ್ಲೂ ಈ ಸಮಸ್ಯೆಗಳು ತಲೆಎತ್ತಿ ನಿಂತಿವೆ.

ಭೂಮಿಯ ಮೇಲಿನ ಜೀವಮಂಡಲದ ಬದುಕು ಹಾಗೂ ಬದುಕಿನ ಶೈಲಿಯು ಹವಾಮಾನ ಹಾಗೂ ಪರಿಸರದ ಇತರ ಸೂಕ್ಷ್ಮ ಸಂಗತಿಗಳೊಂದಿಗೆ ಜೋಡಣೆಯಾಗಿವೆ. ಪರಿಸರದಲ್ಲಿ ಆಗುವ ಬದಲಾವಣೆಗಳು ಎಲ್ಲ ಜೀವಿಗಳ ಬದುಕಿನ ಮೇಲೂ ವ್ಯತಿರಿಕ್ತ ಪರಿಣಾಮ ಬೀರಬಲ್ಲವು ಮತ್ತು ಜೀವಿಗಳ ಅಸ್ತಿತ್ವವನ್ನೇ ಅಸ್ಥಿರಗೊಳಿಸುವಷ್ಟು ಪ್ರಭಾವವನ್ನು ಉಂಟುಮಾಡಬಲ್ಲವು. ಹಿಮಗಡ್ಡೆಗಳ ಕರಗುವ ಪ್ರಮಾಣ ಇದೇ ರೀತಿ ಹೆಚ್ಚುತ್ತಾ ಹೋದರೆ, ಸಮುದ್ರ ಮಟ್ಟವು ಇನ್ನೂ ತೀವ್ರಗತಿಯಲ್ಲಿ ಏರಿಕೆಯಾಗುತ್ತಾ ಹೋಗಿ, ಪ್ರತಿಕೂಲ ಹವಾಮಾನದ ಸನ್ನಿವೇಶಗಳೂ ದುಪ್ಪಟ್ಟಾಗಲಿವೆ. ಇದರಿಂದ ಜಗತ್ತೇ ಅಪಾಯದ ದವಡೆಗೆ ಸಿಲುಕಲಿದೆ. ಪರಿಸರಕ್ಕೆ ನಾವು ಮಾಡಿರುವ ಅನಾಹುತ ಹೇಗಿದೆ ಎಂದರೆ, ಬಹುಪಾಲನ್ನು ಮತ್ತೆ ಮುಂಚಿನ ಸ್ಥಿತಿಗೆ ತರುವುದು ಸಾಧ್ಯವೇ ಇಲ್ಲ. ಹಲವು ದಶಕಗಳಿಂದಲೂ ಜಾಗತಿಕ ನಾಯಕರು ಹವಾಮಾನ ಬದಲಾವಣೆ ತಡೆ ಕುರಿತು ಮಾತನಾಡುತ್ತಿದ್ದಾರೆಯೇ ವಿನಾ ಕೃತಿಯಲ್ಲಿ ಆ ಬದ್ಧತೆ ಕಾಣುತ್ತಿಲ್ಲ. ಕಾಲ ಮಿಂಚುತ್ತಿದೆ. ಭೂತಾಪ ನಿಯಂತ್ರಣಕ್ಕೆ ತುರ್ತಾಗಿ ಗಟ್ಟಿಕ್ರಮ ಕೈಗೊಳ್ಳದಿದ್ದರೆ ಜೀವಮಂಡಲಕ್ಕೆ ಉಳಿಗಾಲವಿಲ್ಲ. ಕಳೆದ 30 ವರ್ಷಗಳಿಂದ ಶೃಂಗಸಭೆ, ಆಶ್ವಾಸನೆ, ಪೊಳ್ಳು ಘೋಷಣೆಗಳೇ ಆಗುತ್ತಿವೆ, ಕಾರ್ಬನ್‌ ಮಟ್ಟ ಏರುತ್ತಲೇ ಇದೆ. ತುರ್ತುಕ್ರಮ ಅಗತ್ಯವಾಗಿದೆ. ಕಾರ್ಮೋಡದಂಚಿನ ಬೆಳ್ಳಿರೇಖೆ ಎಂಬಂತೆ ವರದಿಯಲ್ಲಿ ಕೆಲವು ಆಶಾಕಿರಣಗಳೂ ಗೋಚರಿಸಿವೆ. ಪುನರ್‌ನವೀಕರಿಸಬಹುದಾದ ಇಂಧನದ ಬಳಕೆ ಜಗತ್ತಿನ ಎಲ್ಲ ಕಡೆಗಳಲ್ಲಿ ದೊಡ್ಡಪ್ರಮಾಣದಲ್ಲಿಯೇ ಹೆಚ್ಚಾಗಿದೆ ಎಂದು ವರದಿ ವಿವರಿಸಿದೆ. ‘ದುರಂತದಿಂದ ಪಾರಾಗಲು ಮಾನವ ಜನಾಂಗಕ್ಕೆ ಈಗಲೂ ದಾರಿಯಿದೆ’ ಎಂಬ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಮಾತಿನಲ್ಲಿ ಸತ್ಯವಿದೆ. ಅಂತಹ ದಾರಿಯನ್ನು ಜಗತ್ತು ಈಗ ತುರ್ತಾಗಿ ಹುಡುಕಿಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT