ಶುಕ್ರವಾರ, ಸೆಪ್ಟೆಂಬರ್ 24, 2021
27 °C

ಸಂಪಾದಕೀಯ: ಪಾಲಿಕೆ ಚುನಾವಣೆ– ಆತ್ಮವಿಮರ್ಶೆಗೆ ಈಡಾಗಿಸುವ ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉತ್ತರ ಕರ್ನಾಟಕದ ಮೂರು ಮಹಾನಗರ ಪಾಲಿಕೆಗಳು ಮತ್ತು ದೊಡ್ಡಬಳ್ಳಾ‍ಪುರ ನಗರಸಭೆ ಹಾಗೂ ತರೀಕೆರೆ ಪುರಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ ಆಡಳಿತಾರೂಢ ಬಿಜೆಪಿ ಮುನ್ನಡೆ ಸಾಧಿಸಿದೆ. ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಸಫಲವಾಗದಿದ್ದರೂ ಎರಡು ಪಾಲಿಕೆಗಳಲ್ಲಿ ತೀವ್ರ ಸ್ಪರ್ಧೆಯೊಡ್ಡಿದೆ. ಜೆಡಿಎಸ್ ತೀರಾ ನಿರಾಶಾದಾಯಕ ಪ್ರದರ್ಶನ ನೀಡಿದೆ.

ಕುಂದಾನಗರಿ ಬೆಳಗಾವಿಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನಗಳನ್ನು ಪಡೆದು, ಆಡಳಿತದ ಚುಕ್ಕಾಣಿ ಹಿಡಿಯಲು ಬೇಕಾದ ಸ್ಪಷ್ಟ ಬಹುಮತ ಸಾಧಿಸಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುಕ್ಕಾಣಿ ಈ ಹಿಂದೆ ಬಿಜೆಪಿ ಬಳಿಯೇ ಇತ್ತು. ಇದರ ಹೊರತಾಗಿಯೂ ಬಹುಮತ ಪಡೆಯಲು ವಿಫಲವಾಗಿದೆ. ಅದೇ ರೀತಿ ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದರೂ ಬಹುಮತ ಪಡೆಯುವಲ್ಲಿ ಸೋತಿದೆ. ಯಾವುದೇ ಪಕ್ಷ ಇಲ್ಲಿ ಅಧಿಕಾರ ಹಿಡಿಯಬೇಕಾದರೂ ಅದಕ್ಕೆ ಜೆಡಿಎಸ್ ಬೆಂಬಲ ಅನಿವಾರ್ಯ ಎಂಬ ಅತಂತ್ರ ಸ್ಥಿತಿ ತಲೆದೋರಿದೆ. ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್ ಶಾಸಕರು ಇದ್ದರೂ ಅಲ್ಲಿನ ನಗರಸಭೆಯ ಅಧಿಕಾರ ಹಿಡಿಯಲು ಆ ಪಕ್ಷ ವಿಫಲವಾಗಿದೆ. ಇಲ್ಲಿಯೂ ಅತಂತ್ರ ಸ್ಥಿತಿ ಉಂಟಾಗಿದ್ದು, ಉಳಿದ ಪಕ್ಷಗಳಿಗಿಂತ ಬಿಜೆಪಿ ಹೆಚ್ಚು ಸ್ಥಾನ ಪಡೆದಿದೆ. ತರೀಕೆರೆ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ಶಾಸಕ ಪ್ರತಿನಿಧಿಸುತ್ತಿದ್ದರೂ ಇಲ್ಲಿನ ಪುರಸಭೆಯ ಮೇಲಿನ ಹಿಡಿತವನ್ನು ಕಾಂಗ್ರೆಸ್‌ ಉಳಿಸಿಕೊಂಡಿದೆ. ಈ ಮಧ್ಯೆ ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಪಕ್ಷವು ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಪಾಲಿಕೆಗಳಲ್ಲಿ ಖಾತೆ ತೆರೆದಿರುವುದು ಕುತೂಹಲಕರ ರಾಜಕೀಯ ವಿದ್ಯಮಾನ. ಅಲ್ಪಸಂಖ್ಯಾತರ ಮತಗಳನ್ನು ದೊಡ್ಡ ಮಟ್ಟದಲ್ಲಿ ಪಡೆಯುತ್ತಿದ್ದ ಕಾಂಗ್ರೆಸ್‌ಗೆ ಇದು ಚಿಂತೆ ಹುಟ್ಟಿಸುವ ಸಂಗತಿಯೇ ಸರಿ.

ಕೆಲವು ನಗರ ಸ್ಥಳೀಯ ಸಂಸ್ಥೆಗಳ ಉಪಚುನಾವಣೆ ಸೇರಿದಂತೆ ಒಟ್ಟು 260ಕ್ಕೂ ಹೆಚ್ಚು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 117 ಮತ್ತು ಕಾಂಗ್ರೆಸ್ 103 ಸ್ಥಾನಗಳನ್ನು ಗೆದ್ದಿರುವುದು ನೋಡಿದರೆ ಸಂಖ್ಯಾಬಲದ ವಿಷಯದಲ್ಲಿ ಉಭಯ ಪಕ್ಷಗಳ ಮಧ್ಯೆ ಪೈಪೋಟಿ ತೀವ್ರವಾಗಿತ್ತು ಎನ್ನಬಹುದು. ಜೆಡಿಎಸ್ ಬರೀ 16 ಸ್ಥಾನಗಳನ್ನು ಗೆದ್ದಿದ್ದರೂ ಕಲಬುರ್ಗಿ ಪಾಲಿಕೆಯಲ್ಲಿ ಅದು ಪಡೆದಿರುವ ನಾಲ್ಕು ಸ್ಥಾನಗಳು ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ನಿರ್ಣಾಯಕ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಆಡಳಿತ ಪಕ್ಷಕ್ಕೆ ಹೆಚ್ಚು ಅನುಕೂಲ ಇರುತ್ತದೆ. ಆದಕಾರಣ ಫಲಿತಾಂಶ ಸಹಜವಾಗಿಯೇ ಆಡಳಿತ ಪಕ್ಷದ ಪರ ವಾಲುವುದು ಸಹಜ ಎಂಬಂತಾಗಿದೆ. ಸೋಲು–ಗೆಲುವು ನಿರ್ಧರಿಸುವಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಧಾನ ಪಾತ್ರ ವಹಿಸುತ್ತದೆ. ವಾರ್ಡ್‌ ಮಟ್ಟದ ಸೀಮಿತ ವಲಯದಲ್ಲಿ ಅಭ್ಯರ್ಥಿಯ ಶಕ್ತಿ–ಮಿತಿಗಳನ್ನು ಒರೆಗೆ ಹಚ್ಚುವುದು ಮತದಾರರಿಗೆ ಸುಲಭಸಾಧ್ಯ. ಸ್ಥಳೀಯ ಮುಖಂಡರ ಸಕ್ರಿಯ ಪಾಲ್ಗೊಳ್ಳುವಿಕೆ ಅಥವಾ ನಿರಾಸಕ್ತಿಯೂ ಕೆಲವೊಮ್ಮೆ ತಕ್ಕಡಿಯನ್ನು ಏರುಪೇರಾಗಿಸಬಹುದು. ಗುಂಪುಗಾರಿಕೆ ಮತ್ತು ಕಾಲೆಳೆಯುವ ಪ್ರವೃತ್ತಿಯ ಪಾತ್ರವನ್ನೂ ಕಡೆಗಣಿಸುವಂತಿಲ್ಲ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ನಡೆದ ಮೊದಲ ಚುನಾವಣೆ ಇದು. ನಾಯಕತ್ವ ಬದಲಾವಣೆಯಿಂದ ಚುನಾವಣೆಯಲ್ಲಿ ಪಕ್ಷಕ್ಕೆ ನಷ್ಟವುಂಟಾಗಬಹುದೇ ಎಂಬ ಕುತೂಹಲ ಕೆಲವರಲ್ಲಾದರೂ ಇದ್ದಿರಬಹುದು. ಆ ಪ್ರಶ್ನೆಗೆ ಈ ಫಲಿತಾಂಶದಲ್ಲಿ ಉತ್ತರ ಹುಡುಕ ಬಹುದು. ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮೂಲೆಗುಂಪಾಗಿದೆ. ಭಾಷೆ ಹೆಸರಿನಲ್ಲಿ ಏನಾದರೂ ಒಂದು ತಂಟೆ ತೆಗೆಯುತ್ತ, ಅಭಿವೃದ್ಧಿ ಚಟುವಟಿಕೆಗಳಿಗೆ ಅಡ್ಡಗಾಲು ಹಾಕುವ ಎಂಇಎಸ್‌ ಬೆಂಬಲಿತ ಅಭ್ಯರ್ಥಿಗಳನ್ನು ಅಲ್ಲಿನ ಮತದಾರರು ತಿರಸ್ಕರಿಸಿರುವುದು ಕುತೂಹಲಕರ ಬೆಳವಣಿಗೆ.

ಬೆಲೆ ಏರಿಕೆ ವಿರುದ್ಧ ವಿರೋಧ ಪಕ್ಷಗಳು ಧ್ವನಿ ಎತ್ತಿದ್ದವು. ಆದರೆ, ಅದು ಈ ಚುನಾವಣೆಯಲ್ಲಿ ಹೆಚ್ಚಿನ ಪರಿಣಾಮ ಬೀರಿದಂತೆ ಇಲ್ಲ. ಹಾಗಂತ ಆಡಳಿತಕ್ಕೆ ಜನ ನೀಡಿದ ಮನ್ನಣೆ ಎಂದು ಬಿಜೆಪಿ ನಾಯಕರು ಭಾವಿಸಬೇಕಾಗಿಲ್ಲ. ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ, ಕೇಂದ್ರದ ಒಬ್ಬ ‍ಪ್ರಭಾವಿ ಸಚಿವ ಮತ್ತು ಬಿಜೆಪಿಯ ಅನೇಕ ಹಿರಿಯ ನಾಯಕರ ಪ್ರಭಾವದ ಹೊರತಾಗಿಯೂ ಪಾಲಿಕೆಯಲ್ಲಿ ಬಹುಮತ ಪಡೆಯಲು ಆಗಿಲ್ಲ ಎಂಬುದು ಏನನ್ನು ಸೂಚಿಸುತ್ತದೆ? ಈ ಪ್ರಶ್ನೆಯು ಅಧಿಕಾರಸ್ಥರನ್ನು ಆತ್ಮಾವಲೋಕನಕ್ಕೆ ಈಡುಮಾಡಬೇಕಾದುದು ಅಗತ್ಯ. ಕಾಂಗ್ರೆಸ್‌ಗೆ ಗಟ್ಟಿ ನೆಲೆ ಒದಗಿಸಿದ್ದ ಕಲಬುರ್ಗಿಯಲ್ಲಿ ಆ ಪಕ್ಷಕ್ಕೆ ಬಹುಮತ ದೊರೆತಿಲ್ಲ ಎಂಬುದು ಕೂಡ ಆ ಪಕ್ಷದ ನಾಯಕರು ಆತ್ಮವಿಮರ್ಶೆ ನಡೆಸಬೇಕಾದ ಬೆಳವಣಿಗೆ. ಈ ಮೂರೂ ಮಹಾನಗರ ಪಾಲಿಕೆಗಳಲ್ಲಿ ಮತದಾನದ ಪ್ರಮಾಣ ಹಿಂದಿನ ಸಲಕ್ಕಿಂತ ಕಡಿಮೆ ಆಗಿರುವುದನ್ನು ಗಮನಿಸಿದರೆ, ಮತದಾರರು ಎಲ್ಲ ರಾಜಕೀಯ ಪಕ್ಷಗಳ ಬಗೆಗೂ ಅತೃಪ್ತಿ ಹೊಂದಿದ್ದಾರೆ ಎಂದು ಭಾವಿಸ ಬೇಕಾಗುತ್ತದೆ. ಈಗ ಅಧಿಕಾರಕ್ಕೆ ಏರುವ ಪಕ್ಷಗಳು ಈ ಅಂಶವನ್ನು ಗಮನಿಸಿ ಸ್ವಚ್ಛ, ಪಾರದರ್ಶಕ ಮತ್ತು ದಕ್ಷ ಆಡಳಿತವನ್ನು ನೀಡುವತ್ತ ಗಮನ ಹರಿಸಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು