ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಅರಣ್ಯದ ಅರ್ಥವ್ಯಾಪ್ತಿ ಹೆಚ್ಚಿಸಿದ ಕೋರ್ಟ್: ಸಮಾಧಾನ ತಂದ ಆದೇಶ

Published 25 ಫೆಬ್ರುವರಿ 2024, 23:30 IST
Last Updated 25 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಎಲ್ಲ ರಾಜ್ಯಗಳಲ್ಲಿ ಅರಣ್ಯ ಜಮೀನನ್ನು ಗುರುತಿಸುವ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರವು ‘ಅರಣ್ಯ’ಕ್ಕೆ ಶಬ್ದಕೋಶಗಳಲ್ಲಿ ಇರುವ ಅರ್ಥವನ್ನೇ ಅನ್ವಯಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿರುವುದು, 2023ರಲ್ಲಿ ಜಾರಿಗೆ ತರಲಾಗಿರುವ ಅರಣ್ಯ (ಸಂರಕ್ಷಣೆ) ತಿದ್ದುಪಡಿ ಕಾಯ್ದೆಯಿಂದ ಆಗಿರುವ ಹಾನಿಯನ್ನು ಕಡಿಮೆ ಮಾಡಲು ನೆರವಾಗಲಿದೆ. ಈ ತಿದ್ದುಪಡಿಯು ಅರಣ್ಯ ಎಂಬ ಪದದ ಅರ್ಥವನ್ನು ಕುಗ್ಗಿಸಿ, ಅರಣ್ಯ ಜಮೀನಿಗೆ ಇರುವ ರಕ್ಷಣೆಯನ್ನು ಕಡಿಮೆ ಮಾಡುವಂತಿತ್ತು. ನಿರ್ದಿಷ್ಟವಾಗಿ ಅರಣ್ಯ ಎಂದು ವರ್ಗೀಕೃತ ಆಗಿರುವ ಅರಣ್ಯ ಜಮೀನನ್ನು ಮಾತ್ರ ಕಾಯ್ದೆಯು ‘ಅರಣ್ಯ’ ಎಂದು ಒಪ್ಪಿಕೊಳ್ಳುತ್ತದೆ. ಈ ಕಾಯ್ದೆಯ ಅಡಿಯಲ್ಲಿ ಅರಣ್ಯ ಜಮೀನನ್ನು ಅರಣ್ಯೇತರ ಉದ್ದೇಶಗಳಿಗೆ ಬಳಕೆ ಮಾಡಬಹುದು, ಪೂರ್ವಾನುಮತಿ ಇಲ್ಲದೆಯೂ ವಾಣಿಜ್ಯ ಉದ್ದೇಶಕ್ಕೆ ಅದನ್ನು ಬಳಸಬಹುದು. 1996ರಲ್ಲಿ ಟಿ.ಎನ್.ಗೋದಾವರ್ಮನ್ ಪ್ರಕರಣದಲ್ಲಿ ನೀಡಿದ ಮಹತ್ವದ ತೀರ್ಪನ್ನು ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್‌, ಅರಣ್ಯ ಎಂಬ ಪದಕ್ಕೆ ಶಬ್ದಕೋಶಗಳಲ್ಲಿ ಸಿಗುವ ಅರ್ಥಕ್ಕೆ ಸರಿಹೊಂದುವಂತೆ ಇರುವ ಯಾವುದೇ ಭೂಪ್ರದೇಶವನ್ನು ಅರಣ್ಯ ಎಂದು ಗುರುತಿಸಬೇಕು ಹಾಗೂ ಅದನ್ನು ರಕ್ಷಿಸಬೇಕು ಎಂದು ಸ್ಪಷ್ಟಪಡಿಸಿದೆ.

ಬೆಂಗಳೂರಿನ ಸ್ವಯಂಸೇವಾ ಸಂಘಟನೆ ‘ವನಶಕ್ತಿ’ ಸೇರಿದಂತೆ ಹಲವು ಸಂಘಟನೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಸೂಚನೆ ನೀಡಿದೆ. 2023ರ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಈ ಅರ್ಜಿಗಳು ಪ್ರಶ್ನಿಸಿವೆ. ಅರಣ್ಯ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಿರುವ ಭೂಪ್ರದೇಶವನ್ನು ಅಥವಾ ಭಾರತೀಯ ಅರಣ್ಯ ಕಾಯ್ದೆಯಲ್ಲಿ, 1980ರ ನಂತರದ ಯಾವುದೇ ಸರ್ಕಾರಿ  ದಾಖಲೆಗಳಲ್ಲಿ ಅರಣ್ಯ ಎಂದು ನಮೂದಾಗಿರುವ ಭೂಪ್ರದೇಶವನ್ನು ಮಾತ್ರ ‘ಅರಣ್ಯ’ ಎಂದು ಈ ಕಾಯ್ದೆಯು ಮಾನ್ಯ ಮಾಡುತ್ತದೆ. ಈ ಕ್ರಮದ ಪರಿಣಾಮವಾಗಿ, ಗಣನೀಯ ಪ್ರಮಾಣದ ಅರಣ್ಯ ಪ್ರದೇಶವು ‘ಅರಣ್ಯ’ ಎಂಬ ವ್ಯಾಖ್ಯಾನದಿಂದ ಹೊರಗೆ ಉಳಿಯುವಂತಾಯಿತು, ಆ ಭೂಪ್ರದೇಶದ ದುರ್ಬಳಕೆಗೆ ಅವಕಾಶ ನಿರ್ಮಾಣವಾಯಿತು. 1996ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಅನುಗುಣವಾಗಿ ಅರಣ್ಯ ಎಂದು ಪರಿಭಾವಿತವಾಗಿರುವ, ಆದರೆ ಅರಣ್ಯ ಎಂದು ಅಧಿಸೂಚನೆಯಲ್ಲಿ ಗುರುತಿಸಿರದ 1.97 ಲಕ್ಷ ಚದರ ಕಿಲೊ ಮೀಟರ್ ಪ್ರದೇಶವು ‘ಅರಣ್ಯ’ ಎಂಬ ವ್ಯಾಖ್ಯಾನದಿಂದ ಹೊರಗೆ ಉಳಿಯುವಂತೆ ಆಗುತ್ತದೆ, ಆ ಭೂಪ್ರದೇಶವನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ಸೃಷ್ಟಿಯಾಗು
ತ್ತದೆ ಎಂಬುದು ಅರ್ಜಿದಾರರ ವಾದ. ಕಾಯ್ದೆಯ ಅಡಿಯಲ್ಲಿ ರೂಪಿಸಿರುವ ಕಾನೂನುಗಳು 2023ರ ಡಿಸೆಂಬರ್ 1ರಿಂದ ಜಾರಿಗೆ ಬಂದಿವೆ. ಕಾಯ್ದೆಯು ಅಧಿಸೂಚನೆಯಲ್ಲಿ ಪ್ರಕಟವಾದ ಒಂದು ವರ್ಷದ ಅವಧಿಯೊಳಗೆ, ಎಲ್ಲ ಕೇಂದ್ರಾಡಳಿತ ಪ್ರದೇಶಗಳು ಹಾಗೂ ರಾಜ್ಯಗಳು ಅರಣ್ಯ ಪ್ರದೇಶವನ್ನು ಗುರುತಿಸಿ, ಅವುಗಳ ದಾಖಲೆ ಸಿದ್ಧಪಡಿಸಬೇಕು ಎಂದು ನಿಯಮಗಳು ಹೇಳುತ್ತವೆ. ಆದರೆ ಹೊಸ ಕಾಯ್ದೆಯು ಅರಣ್ಯವನ್ನು ಸಂರಕ್ಷಿಸುವ ಅಗತ್ಯ ಹಾಗೂ ಹೊಸದಾಗಿ ಅರಣ್ಯವನ್ನು ಸೃಷ್ಟಿಸಬೇಕಾದ ಅಗತ್ಯಕ್ಕೆ
ವಿರುದ್ಧವಾಗಿತ್ತು. ಹಾಗಾಗಿಯೇ ಇದು ಕಳವಳಕ್ಕೆ ಕಾರಣವಾಗಿತ್ತು. ಹಲವು ಕಾರಣಗಳನ್ನು ನೀಡಿ ಅರಣ್ಯ ಪ್ರದೇಶದ ನಾಶಕ್ಕೆ ಕೂಡ ಈ ಕಾಯ್ದೆಯು ಕಾನೂನಿನ ಮುದ್ರೆ ನೀಡುವಂತಿದೆ.

1980ರ ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಅರಣ್ಯ ಸಂರಕ್ಷಿಸುವ ಉದ್ದೇಶದಿಂದ ರೂಪಿಸಲಾಗಿದೆ ಹಾಗೂ ಈ ಕಾಯ್ದೆಯು ಎಲ್ಲ ಅರಣ್ಯ ಪ್ರದೇಶಗಳಿಗೂ ಅವು ಅರಣ್ಯ ಎಂದು ವರ್ಗೀಕೃತ ಆಗಿರಲಿ ಅಥವಾ ಆಗಿರದೆ ಇರಲಿ, ಅನ್ವಯವಾಗುತ್ತದೆ ಎಂದು ಗೋದಾವರ್ಮನ್ ಪ್ರಕರಣದಲ್ಲಿನ ತೀರ್ಪು ಹೇಳುತ್ತದೆ. ಈಗ ಅರಣ್ಯ ಪ್ರದೇಶವನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಮಾರ್ಗದರ್ಶಿ ತತ್ವವಾಗಿ ಇದು ಕೆಲಸ ಮಾಡಲಿದೆ. ಕೋರ್ಟ್ ಅಂತಿಮ ತೀರ್ಪು ನೀಡುವವರೆಗೆ ಈ ನಿರ್ದೇಶನವು ಜಾರಿಯಲ್ಲಿ ಇರುತ್ತದೆ. ಶಬ್ದಕೋಶಗಳಲ್ಲಿ ಅರಣ್ಯಕ್ಕೆ ಇರುವ ಅರ್ಥಕ್ಕೆ ಅನುಗುಣವಾಗಿರುವ ಪ್ರದೇಶಗಳನ್ನು ಈಗ ಕೂಡ ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆದು ಅನ್ಯ ಉದ್ದೇಶಗಳಿಗೆ ಬಳಸಿಕೊಳ್ಳಲು ಅವಕಾಶ ಇದೆ ಎಂಬುದನ್ನು ಮರೆಯುವಂತಿಲ್ಲ. ಅರಣ್ಯ ಪ್ರದೇಶಗಳಲ್ಲಿ ಪೂರ್ವಾನುಮತಿ ಇಲ್ಲದೆಯೂ ಮೃಗಾಲಯ ಹಾಗೂ ಸಫಾರಿ ಆರಂಭಿಸಲು ತಿದ್ದುಪಡಿ ಕಾಯ್ದೆಯು ಅವಕಾಶ ಮಾಡಿಕೊಟ್ಟಿತ್ತು. ಆದರೆ ಇನ್ನು ಮುಂದೆ ಸಫಾರಿ ಹಾಗೂ ಮೃಗಾಲಯ ಆರಂಭಕ್ಕೆ ಸಂಬಂಧಿಸಿದ ಪ್ರಸ್ತಾವಗಳನ್ನು ತನ್ನ ಅನುಮತಿ ಇಲ್ಲದೆ ಅನುಮೋದಿಸುವಂತೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಜುಲೈ ತಿಂಗಳಲ್ಲಿ ಈ ಪ್ರಕರಣದ ಅಂತಿಮ ವಿಚಾರಣೆ ನಡೆಯಲಿದೆ. ತಿದ್ದುಪಡಿ ಕಾಯ್ದೆಯು ಅರಣ್ಯದ ವ್ಯಾಖ್ಯಾನವನ್ನು ದುರ್ಬಲಗೊಳಿಸಿದ್ದನ್ನು ಕೋರ್ಟ್
ಸರಿಪಡಿಸಬಹುದು ಎಂಬ ಆಶಾಭಾವನೆಯನ್ನು ಹೊಂದಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT