ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಕಠಿಣ ನಿರ್ಬಂಧ: ಜನರ ಬದುಕನ್ನು ಕಠಿಣವಾಗಿಸದಂತೆ ನಿಭಾಯಿಸಿ

Last Updated 26 ಏಪ್ರಿಲ್ 2021, 20:39 IST
ಅಕ್ಷರ ಗಾತ್ರ

ಕೋವಿಡ್ ಸೋಂಕು ತಡೆಗೆ ಹರಸಾಹಸ ಪಡುತ್ತಿರುವ ರಾಜ್ಯ ಸರ್ಕಾರವು ರಾಜ್ಯದ ಜನರ ಮೇಲೆ 14 ದಿನಗಳ ಅವಧಿಗೆ ಕಠಿಣ ನಿರ್ಬಂಧ ಹೇರಿದೆ. ರಾಜ್ಯದಲ್ಲಿ ಅತ್ಯಂತ ವೇಗವಾಗಿ ಪಸರಿಸುತ್ತಿರುವ ಕೋವಿಡ್ ಸೋಂಕನ್ನು ತಡೆಯಲು ಇದೊಂದು ಪರಿಣಾಮಕಾರಿ ಕ್ರಮ ಎಂದು ಸರ್ಕಾರ ಭಾವಿಸಿದೆ. ಆದರೆ, ಈ ಕಠಿಣ ಕ್ರಮವೂ ಕೋವಿಡ್ ಸೋಂಕನ್ನು ನಿಯಂತ್ರಣಕ್ಕೆ ತರಬಹುದು ಎನ್ನುವ ಪೂರ್ಣ ವಿಶ್ವಾಸ ಸರ್ಕಾರಕ್ಕೇ ಇದ್ದಂತಿಲ್ಲ.

‘14 ದಿನಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಾರದಿದ್ದರೆ, ನಿರ್ಬಂಧ ಗಳನ್ನು ಮುಂದುವರಿಸುವುದು ಅನಿವಾರ್ಯ ಆಗಬಹುದು’ ಎಂದುಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿರುವುದೇ ಇದಕ್ಕೆ ಸಾಕ್ಷಿ. ನಿರ್ಬಂಧಗಳ ಕುರಿತುಸರ್ಕಾರ ಗೊಂದಲದಲ್ಲಿ ಇರುವಂತಿದೆ. ಅದು, ಸಾರ್ವಜನಿಕರನ್ನೂ ಗೊಂದಲಕ್ಕೆ ದೂಡಬಹುದು.

ತಯಾರಿಕಾ ವಲಯದ ಉದ್ದಿಮೆಗಳು ಮತ್ತು ನಿರ್ಮಾಣ ಕ್ಷೇತ್ರದವರು ಕೆಲಸ ಮಾಡಬಹುದು ಎನ್ನುವ ಸರ್ಕಾರ, ಎಲ್ಲ ಸಾರ್ವಜನಿಕ ಮತ್ತು ಖಾಸಗಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿರುವುದು ಏನನ್ನು ಸೂಚಿಸುತ್ತದೆ? ಈ ಉದ್ದಿಮೆಗಳ ನೌಕರರು ಕಚೇರಿ ಅಥವಾ ಫ್ಯಾಕ್ಟರಿ ತಲುಪುವುದು ಹೇಗೆ? ಬಹುತೇಕ ಅಸಹಾಯಕ ಹೆಣ್ಣುಮಕ್ಕಳೇ ಉದ್ಯೋಗದಲ್ಲಿರುವ ಗಾರ್ಮೆಂಟ್ಸ್ ಉದ್ಯಮವನ್ನು ಸಂಪೂರ್ಣ ಬಂದ್ ಮಾಡಿರುವುದನ್ನು ಹೇಗೆ ಅರ್ಥೈಸಿಕೊಳ್ಳುವುದು? ಕಳೆದ ವರ್ಷ ಸರ್ಕಾರ ಹೇರಿದ ಲಾಕ್‍ಡೌನ್‍ನಲ್ಲಿ ಆರ್ಥಿಕವಾಗಿ ಸದೃಢರಲ್ಲದ ಜನರು ಬಹುದೊಡ್ಡ ಹೊಡೆತವನ್ನು ಅನುಭವಿಸಿದ್ದು ಇನ್ನೂ ನೆನಪಿನಿಂದ ಮರೆಯಾಗಿಲ್ಲ. ಈಗ ಹೇರಿರುವ ನಿರ್ಬಂಧ ಕೂಡಾ ಅದೇ ವರ್ಗವನ್ನು ಕಂಗೆಡಿಸುವ ಸಾಧ್ಯತೆ ಇದೆ.

ಆಟೊ ಚಾಲಕರು, ಕ್ಯಾಬ್ ಚಾಲಕರು, ದಿನಗೂಲಿ ಕಾರ್ಮಿಕರು ಮುಂತಾದವರಿಗೆ ಸೂಕ್ತ ಪರಿಹಾರ ಒದಗಿಸುವ ಹೊಣೆಯನ್ನೂ ಸರ್ಕಾರ ನಿರ್ವಹಿಸಬೇಕಾಗಿದೆ. ಆದರೆ, ಅದರ ಬಗ್ಗೆ ಸರ್ಕಾರ ಯಾವುದೇ ಕ್ರಮ ಪ್ರಕಟಿಸಿಲ್ಲ. ನಗರಗಳಲ್ಲಿ ಇರುವ ಇಂದಿರಾ ಕ್ಯಾಂಟೀನ್‍ಗಳಲ್ಲಿನ ಆಹಾರ ಪೂರೈಕೆಯಲ್ಲಿ ಸರ್ಕಾರದ ಧೋರಣೆಯಿಂದಾಗಿ ವ್ಯತ್ಯಯವಾಗಿದೆ. ನಿರ್ಬಂಧಗಳಿಂದಾಗಿ ಈಗ ದೈನಂದಿನ ಆದಾಯ ಕಳೆದುಕೊಳ್ಳಲಿರುವ ದುರ್ಬಲ ವರ್ಗಗಳ ಜನರಿಗೆ ಆಹಾರ ಖಾತರಿಯೂ ಇಲ್ಲದಂತಾಗುತ್ತದೆ. ಇದಕ್ಕೆ ಪರಿಹಾರವನ್ನು ಸರ್ಕಾರವೇ ಸೂಚಿಸಬೇಕು.

ರಾಜ್ಯದಲ್ಲಿ ಪ್ರತಿದಿನ ವರದಿಯಾಗುತ್ತಿರುವ ಹೊಸ ಸೋಂಕು ಪ್ರಕರಣಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ಬೆಂಗಳೂರು ನಗರವೊಂದರಲ್ಲೇ ಪತ್ತೆಯಾಗುತ್ತಿವೆ. ಬೆಂಗಳೂರು ನಗರಕ್ಕೇ ಪ್ರತ್ಯೇಕವಾದ ಕಾರ್ಯಸೂಚಿಯೊಂದನ್ನು ಜಾರಿಗೊಳಿಸಬೇಕಾದ ಅಗತ್ಯವನ್ನು ಇದು ಒತ್ತಿಹೇಳುತ್ತದೆ. ಆಸ್ಪತ್ರೆಗಳಲ್ಲಿ ಆಮ್ಲಜನಕ ಸಮೇತ ಹಾಸಿಗೆಗಳ ತೀವ್ರ ಕೊರತೆಯನ್ನು ನಿವಾರಿಸುವಲ್ಲಿ ಸರ್ಕಾರ ಕಠಿಣ ಕ್ರಮಗಳನ್ನು ತಕ್ಷಣ ಜಾರಿಗೊಳಿಸಬೇಕಿದೆ.

ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಶೇ 50ರಷ್ಟು ಹಾಸಿಗೆಗಳನ್ನು ಕೊರೊನಾ ಸೋಂಕಿತರಿಗೆ ಮೀಸಲಿಡುವ ತನ್ನ ಆದೇಶವನ್ನು ಕಾರ್ಯಗತಗೊಳಿಸುವಲ್ಲಿ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಈ ಪ್ರಮಾಣವನ್ನು ಶೇ 75ಕ್ಕೆ ಏರಿಸಬೇಕು ಎಂಬ ಆದೇಶವು ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್‌ ಅಸೋಸಿಯೇಷನ್‌ ನಡುವೆ ಜಟಾಪಟಿಗೆ ಕಾರಣವಾಗಿದೆ. ಇದು ಅಸಾಧಾರಣ ಸಂದರ್ಭ.

ಇಂತಹ ಹೊತ್ತಲ್ಲಿ ಬಿಕ್ಕಟ್ಟಿನ ಪರಿಹಾರ ಪ್ರಕ್ರಿಯೆಗೆ ಪ್ರತಿಷ್ಠೆಗಳು ಅಡ್ಡಿಬರಬಾರದು.ನೈರುತ್ಯ ರೈಲ್ವೆಯುಸಿದ್ಧಗೊಳಿಸಿರುವ 4,240 ಹಾಸಿಗೆ ಸಾಮರ್ಥ್ಯದ ಐಸೊಲೇಷನ್ ಬೋಗಿಗಳನ್ನೂ ಸರ್ಕಾರ ತಕ್ಷಣ ಬಳಸಿಕೊಳ್ಳಬೇಕು. ಇದರ ನಡುವೆ, 18ರಿಂದ 45 ವರ್ಷದವರೆಗಿನ ಎಲ್ಲ ವ್ಯಕ್ತಿಗಳಿಗೂ ರಾಜ್ಯ ಸರ್ಕಾರವೇ ಉಚಿತ ಲಸಿಕೆ ನೀಡಲು ನಿರ್ಧರಿಸಿರುವುದು ಸ್ವಾಗತಾರ್ಹ. ಆದರೆ ಈ ಲಸಿಕೆ ಅಭಿಯಾನವನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲು ವಿಶೇಷ ಕ್ರಿಯಾಯೋಜನೆಯನ್ನು ರೂಪಿಸಿ, ಹೊಣೆಗಾರಿಕೆಯನ್ನು ನಿಗದಿ ಮಾಡಬೇಕು. ಸೋಂಕು ಪ್ರಸರಣ ತಡೆಗೆ ನೀಡುವಷ್ಟೇ ಮಹತ್ವವನ್ನು ಸೋಂಕಿತರ ತುರ್ತು ಚಿಕಿತ್ಸೆಗೂ ನೀಡುವ ಮೂಲಕ ಸಾವು–ನೋವು ಕನಿಷ್ಠಗೊಳಿಸಲು ಸರ್ವ ರೀತಿಯಲ್ಲೂ ಯತ್ನಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT