ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಕೊನೆಗೊಂಡ ಕೋವಿಡ್‌ ತುರ್ತು– ಕೊನೆಗೊಳ್ಳದ ಸೋಂಕಿನ ಆತಂಕ

Published 11 ಮೇ 2023, 19:34 IST
Last Updated 12 ಮೇ 2023, 2:09 IST
ಅಕ್ಷರ ಗಾತ್ರ

ಕೋವಿಡ್‌–19ಕ್ಕೆ ಸಂಬಂಧಿಸಿದ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಕೊನೆಗೊಂಡಿದೆ ಎನ್ನುವ ವಿಶ್ವ ಆರೋಗ್ಯ ಸಂಸ್ಥೆಯ ಘೋಷಣೆ ಒಂದು ಔಪಚಾರಿಕ ಪ್ರಕಟಣೆಯಾಗಿದ್ದರೂ, ಜನರಿಗೆ ನಿರಾಳಭಾವ ಉಂಟುಮಾಡುವಂತಹದ್ದು.

ಚೀನಾದಲ್ಲಿ ಮೊದಲು ಹಾಗೂ ಇತರ ದೇಶಗಳಲ್ಲಿ ಬಳಿಕ ಕೊರೊನಾ ಸೋಂಕು ಉಲ್ಬಣಿಸಿದ ಕಾರಣದಿಂದ, ‘ಕೋವಿಡ್‌–19 ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ’ಯನ್ನು ವಿಶ್ವ ಆರೋಗ್ಯ ಸಂಸ್ಥೆಯು 2020ರ ಜನವರಿಯಲ್ಲಿ ಘೋಷಿಸಿತ್ತು. ಆ ಪ್ರಕಟಣೆಯ ನಂತರದ ಮೂರು ವರ್ಷಗಳಲ್ಲಿ ಕೊರೊನಾ ಕಾರಣದಿಂದಾಗಿ ಜಗತ್ತು ಅನುಭವಿಸಿದ ಸಾವುನೋವು ಹಾಗೂ ತೆತ್ತ ಬೆಲೆ ಊಹೆಗೆ ನಿಲುಕದಷ್ಟು ಅಸಹನೀಯವಾದುದು.

70 ಲಕ್ಷಕ್ಕೂ ಹೆಚ್ಚು ಜನರು ಕೋವಿಡ್‌ಗೆ ಬಲಿಯಾದರು. ಸೋಂಕನ್ನು ನಿಯಂತ್ರಿಸುವ ಸಲುವಾಗಿ ಜಾರಿಗೆ ತರಲಾದ ಲಾಕ್‌ಡೌನ್‌ನಿಂದ ಜಗತ್ತು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಯಿತು ಹಾಗೂ ಜನಸಾಮಾನ್ಯರ ಜೀವನ ನಿರ್ವಹಣೆ ದುಸ್ತರವಾಯಿತು. ಬೀದಿಗೆ ಬಿದ್ದ ವಲಸೆ ಕಾರ್ಮಿಕರ ದಾರುಣ ಚಿತ್ರಗಳು ದುಃಸ್ವಪ್ನದಂತೆ ಕಾಡಿದವು. ಶಾಲಾ ಕಾಲೇಜುಗಳು ಮುಚ್ಚಿದ್ದರಿಂದಾಗಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳು ಡಿಜಿಟಲ್‌ ಜಗತ್ತಿಗೆ ಸೀಮಿತಗೊಂಡವು. ಕೊರೊನಾ ಕಾಲಘಟ್ಟ ಎಲ್ಲ ವರ್ಗದ ಜನರನ್ನೂ ದೈಹಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ತತ್ತರಗೊಳಿಸಿತು. ವಿಜ್ಞಾನ ಮತ್ತು ತಂತ್ರಜ್ಞಾನದ ಮಿತಿ, ಸಾಮರ್ಥ್ಯಗಳನ್ನು ಒರೆಗೆ ಹಚ್ಚಲು ಕೊರೊನಾ ಕಾರಣವಾಯಿತು.

ಕೋವಿಡ್‌ ಬಾಧೆಯ ವಿಪತ್ತಿನ ಕಾಲಘಟ್ಟವನ್ನು ಹಾದು ಜಗತ್ತು ಆತಂಕದಿಂದ ಹೊರಬಂದಿರುವ ಸಮಯದಲ್ಲಿ, ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಕೊನೆಗೊಂಡಿರುವ ಪ್ರಕಟಣೆ ಹೊರಬಿದ್ದಿದೆ. ಇದರ ಬೆನ್ನಿಗೇ, ಅಮೆರಿಕಕ್ಕೆ ಬರಲು ಬಯಸುವ ವಿದೇಶಿಯರು ಕೋವಿಡ್‌ ಲಸಿಕೆಯನ್ನು ಕಡ್ಡಾಯವಾಗಿ ಪಡೆದಿರಬೇಕು ಎನ್ನುವ ನಿಯಮವನ್ನು ಅಲ್ಲಿನ ಸರ್ಕಾರ ಹಿಂಪಡೆದಿದೆ. ಈ ನಿರ್ಧಾರ, ಕೊರೊನಾ ಸೋಂಕಿನ ನಿರ್ವಹಣೆಯ ಕುರಿತು ಜಾಗತಿಕವಾಗಿ ಮೂಡಿರುವ ಆತ್ಮವಿಶ್ವಾಸದ ಸೂಚನೆಯಾಗಿದೆ.

ನಾಲ್ಕೈದು ವಾರಗಳ ಹಿಂದಷ್ಟೇ ಕೊರೊನಾ ಸೋಂಕಿನ ಪ್ರಕರಣಗಳು ದೇಶದ ವಿವಿಧ ಭಾಗಗಳಲ್ಲಿ ಹೆಚ್ಚಾಗುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗಿತ್ತು. ದೈನಂದಿನ ಸೋಂಕು ಹರಡುವಿಕೆ ಪ್ರಮಾಣ ಶೇ 6.78ಕ್ಕೆ ತಲುಪಿತ್ತು ಹಾಗೂ ಸುಮಾರು ಹತ್ತು ಜಿಲ್ಲೆಗಳಲ್ಲಿ ಸೋಂಕು ಹರಡುವಿಕೆ ಪ್ರಮಾಣ ಶೇ 10ಕ್ಕೂ ಹೆಚ್ಚಾಗಿತ್ತು. ಹೊಸ ಪ್ರಕರಣಗಳಿಗೆ ಒಮಿಕ್ರಾನ್‌ ರೂಪಾಂತರಿ ತಳಿ ‘ಎಕ್ಸ್‌ಬಿಬಿ 1.16’ ಕಾರಣವೆಂದು ಗುರುತಿಸಲಾಗಿತ್ತು. ಕರ್ನಾಟಕದಲ್ಲಿ ಕೂಡ ‘ಎಕ್ಸ್‌ಬಿಬಿ 1.16’ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದವು. ಅದೃಷ್ಟವಶಾತ್‌ ಈ ರೂಪಾಂತರಿ ತಳಿ ಹೆಚ್ಚಿನ ಅವಾಂತರ ಸೃಷ್ಟಿಸದೆ, ಸೋಂಕು ತಹಬಂದಿಗೆ ಬಂದಿದೆ. ಈಗ ವಿಶ್ವ ಆರೋಗ್ಯ ಸಂಸ್ಥೆಯೂ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಕೊನೆಗೊಂಡಿದೆ ಎಂದು ಹೇಳಿದೆ.

ಈ ಘೋಷಣೆಯಿಂದಾಗಿ, ಕೋವಿಡ್ ಪಿಡುಗು ಕೊನೆಗೊಂಡಿದೆ ಎಂದು ಭಾವಿಸುವಂತಿಲ್ಲ. ಭಾರತವೂ ಸೇರಿದಂತೆ ಜಗತ್ತಿನ ವಿವಿಧ ಭಾಗಗಳಲ್ಲಿ ಕೋವಿಡ್ ಪ್ರಕರಣಗಳು ಈಗಲೂ ಸಕ್ರಿಯವಾಗಿವೆ ಹಾಗೂ ಮುಂದಿನ ದಿನಗಳಲ್ಲೂ ಇರಲಿವೆ. ಆದರೆ, ಸೋಂಕಿನಿಂದ ಉಂಟಾಗುವ ಸಾವುನೋವು ಕನಿಷ್ಠ ಪ್ರಮಾಣದಲ್ಲಿರುವ ಹಾಗೂ ಅದರ ವಿರುದ್ಧ ಪ್ರತಿರೋಧಕ ಶಕ್ತಿ ಜನರಲ್ಲಿ ಹೆಚ್ಚಾಗಿರುವ ಕಾರಣ, ಕೊರೊನಾ ಈಗ ಭಯ ಹುಟ್ಟಿಸುವ ಸಂಗತಿಯಾಗಿ ಉಳಿದಿಲ್ಲ. ಕಳೆದೊಂದು ವರ್ಷದ ಅವಧಿಯಲ್ಲಿ ಕೋವಿಡ್ ಪ್ರಕರಣಗಳು ವಿಶ್ವದೆಲ್ಲೆಡೆ ನಿಯಂತ್ರಣದಲ್ಲಿವೆ ಹಾಗೂ ನೂರಾರು ಕೋಟಿ ನಾಗರಿಕರು ಲಸಿಕೆಗಳ ಸುರಕ್ಷತಾ ವಲಯದೊಳಗಿದ್ದಾರೆ. ಸೋಂಕಿನ ಕುರಿತ ಆತಂಕ ತಿಳಿಗೊಂಡಿದ್ದರೂ ಸಂಕಷ್ಟದ ಕಾಲ ಕಲಿಸಿದ ಪಾಠಗಳು ಮುಂದುವರಿಯುವುದು ಅನಿವಾರ್ಯ.

ಕೋವಿಡ್‌ ಕಾಲಘಟ್ಟ ನಮ್ಮ ಜೀವನವಿಧಾನವನ್ನೇ ಬದಲಿಸಿದೆ. ಸ್ವಚ್ಛತೆಯ ಕುರಿತಂತೆ ಎಂದೂ ಮರೆಯಬಾರದ ಪಾಠಗಳನ್ನು ಕಲಿಸಿಕೊಟ್ಟಿದೆ. ಕೊರೊನಾ ಅಥವಾ ಕೊರೊನಾದಂಥ ಅಪಾಯಕಾರಿ ಸೋಂಕು ಯಾವ ಕ್ಷಣದಲ್ಲಾದರೂ ಜಗತ್ತನ್ನು ಬಾಧಿಸಬಹುದು ಎನ್ನುವ ಎಚ್ಚರವನ್ನು ಮನದಟ್ಟು ಮಾಡಿಸಿದೆ. ಇದೆಲ್ಲಕ್ಕೂ ಮಿಗಿಲಾಗಿ, ವೈದ್ಯಕೀಯ ವ್ಯವಸ್ಥೆ ಮಗ್ಗುಲು ಬದಲಿಸುವ ಅನಿವಾರ್ಯವನ್ನು ಸೋಂಕಿನ ಅವಧಿ ಸೃಷ್ಟಿಸಿದೆ. ತುರ್ತು ಸಂದರ್ಭವನ್ನು ಎದುರಿಸಲು ವೈದ್ಯಕೀಯ ಸೇವಾಕ್ಷೇತ್ರವನ್ನು ಸಜ್ಜುಗೊಳಿಸುವ ಪ್ರಯತ್ನಗಳು ಭಾರತ ಸೇರಿದಂತೆ ವಿಶ್ವದೆಲ್ಲೆಡೆ ನಡೆದಿವೆ. ಅತ್ಯಂತ ಕಡಿಮೆ ಅವಧಿಯಲ್ಲಿ ಲಸಿಕೆಗಳನ್ನು ಅಭಿವೃದ್ಧಿಪಡಿಸಿದ ಸಾಧನೆ ಸಾಮಾನ್ಯವಾದುದಲ್ಲ. ಈ ಸಾಧನೆ, ವಿಜ್ಞಾನದ ಔನ್ನತ್ಯವನ್ನು ಹಾಗೂ ಮನುಷ್ಯನ ಸಂಕಲ್ಪಶಕ್ತಿಯನ್ನು ಸೂಚಿಸುವಂತಿದೆ. ಕೊರೊನಾ ಉಂಟುಮಾಡಿದ ಹಾನಿ, ತವಕತಲ್ಲಣಗಳ ಜೊತೆಗೆ ವೈಜ್ಞಾನಿಕ ಸಾಧನೆ ಹಾಗೂ ಮಾನವೀಯ ಸ್ಪಂದನದ ಕಥನಗಳೂ ಇತಿಹಾಸದಲ್ಲಿ ಉಳಿಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT