ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಕೋವಿಡ್‌ ತಡೆ ನಿರ್ಬಂಧ ರಾಜಕೀಯ ರ್‍ಯಾಲಿಗಳಿಗೆ ಅನ್ವಯಿಸದೇ?

Last Updated 28 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಕೊರೊನಾ ಸೋಂಕು ಹರಡುವುದನ್ನು ತಡೆಯಲು ಕೆಲವು ರಾಜ್ಯ ಸರ್ಕಾರಗಳು ಕೈಗೊಂಡಿರುವ ನಿರ್ಬಂಧ ಕ್ರಮಗಳ ಉದ್ದೇಶವೇ ಅನುಮಾನಾಸ್ಪದವಾಗಿದೆ. ಅದರಲ್ಲೂ ಉತ್ತರಪ್ರದೇಶ ಸರ್ಕಾರದ ನಡೆ ‘ಹೇಳುವುದೊಂದು ಮಾಡುವುದೊಂದು’ ಎನ್ನುವಂತಿದೆ. ಆ ರಾಜ್ಯದ ವಿವಿಧ ನಗರಗಳಲ್ಲಿ ಸರ್ಕಾರವು ರಾತ್ರಿ ಕರ್ಫ್ಯೂ ವಿಧಿಸಿದೆ. ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರುವುದರಿಂದ ಸೋಂಕು ಹರಡುತ್ತದೆ ಎನ್ನುವುದು ಸರ್ಕಾರದ ವಾದ. ಆದರೆ, ಆಡಳಿತಾರೂಢ ಬಿಜೆಪಿಯೇ ಮಂಗಳವಾರ ಕಾನ್ಪುರದಲ್ಲಿ ಬೃಹತ್‌ ರಾಜಕೀಯ ರ‍್ಯಾಲಿ ಏರ್ಪಡಿಸಿತ್ತು.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರ್‍ಯಾಲಿಯಲ್ಲಿ ಭಾಗವಹಿಸಿದ್ದರು. ಅಲ್ಲದೆ, ರ‍್ಯಾಲಿಗೆ ಕನಿಷ್ಠ 75 ಸಾವಿರ ಜನರನ್ನು ಕರೆತರಬೇಕೆಂದು ಸರ್ಕಾರದ ವಿವಿಧ ಇಲಾಖೆಗಳ ಮೇಲೆ ಜಿಲ್ಲಾ ಆಡಳಿತವು ಒತ್ತಡ ಹೇರಿ, ಅದಕ್ಕಾಗಿ ಅಧಿಕೃತ ಸುತ್ತೋಲೆಯನ್ನೇ ಹೊರಡಿಸಿತ್ತು ಎಂದು ವರದಿಯಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈಚೆಗೆ ಪ್ರಯಾಗ್‌ರಾಜ್‌ನಲ್ಲಿ ನಡೆಸಿದ ರ‍್ಯಾಲಿಯಲ್ಲೂ ಸರ್ಕಾರಿ ನೌಕರರು ಪಾಲ್ಗೊಳ್ಳಬೇಕು ಎಂದು ಅಲ್ಲಿನ ಜಿಲ್ಲಾ ಆಡಳಿತ ಸೂಚಿಸಿತ್ತು. ಉತ್ತರಪ್ರದೇಶದಲ್ಲಿ ಪ್ರಧಾನಿ ಈಚೆಗೆ ಭಾಗವಹಿಸಿದ್ದ ವಿವಿಧ ಸಮಾವೇಶಗಳಲ್ಲೂ ಸರ್ಕಾರಿ ಅಧಿಕಾರಿಗಳೇ ಮುಂದೆ ನಿಂತು ಸಾವಿರಾರು ಜನರನ್ನು ಸೇರಿಸಿರುವುದು ವರದಿಯಾಗಿದೆ. ಹೀಗೆ ರಾಜಕೀಯ ರ‍್ಯಾಲಿಗೆ ಅಪಾರ ಸಂಖ್ಯೆಯಲ್ಲಿ ಜನರನ್ನು ಸೇರಿಸುವುದರಿಂದ ಕೊರೊನಾ ಇಲ್ಲವೇ ಓಮೈಕ್ರಾನ್ ಸೋಂಕು ಹರಡಲು ಆಡಳಿತ ಪಕ್ಷವೇ ಕಾರಣವಾದಂತೆ ಆಗುವುದಿಲ್ಲವೇ? ಅಥವಾ ರಾಜಕೀಯ ರ‍್ಯಾಲಿಗಳಿಂದ ಈ ಸೋಂಕು ಹರಡುವುದಿಲ್ಲ ಎಂದು ಸರ್ಕಾರವೇನಾದರೂ ಭಾವಿಸಿದೆಯೇ?

ಒಂದೆಡೆ ಸೋಂಕು ತಡೆಯಲೆಂದು ಸರ್ಕಾರವು ನಿರ್ಬಂಧ ಹೇರಿ ಜನರ ಆರ್ಥಿಕ ಚಟುವಟಿಕೆ ಗಳನ್ನು ನಿಯಂತ್ರಿಸುತ್ತಿದೆ. ಇನ್ನೊಂದೆಡೆ ರಾಜಕೀಯ ಉದ್ದೇಶಕ್ಕಾಗಿ ಆಡಳಿತ ಪಕ್ಷವೇ ರ್‍ಯಾಲಿಗಳನ್ನು ಏರ್ಪಡಿಸಿ ಸಾವಿರಾರು ಜನರನ್ನು ಒಂದೆಡೆ ಸೇರಿಸು ತ್ತಿದೆ. ಇದು, ಏನನ್ನು ಸೂಚಿಸುತ್ತದೆ? ಸೋಂಕು ತಡೆಯುವ ತನ್ನ ಪ್ರಯತ್ನಗಳಲ್ಲಿ ಸರ್ಕಾರ ಪ್ರಾಮಾಣಿಕವಾಗಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಜನರ ಆರೋಗ್ಯದ ಮೇಲೆ ಏನೇ ದುಷ್ಪರಿಣಾಮವಾದರೂ ಪರವಾಗಿಲ್ಲ, ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಪೂರಕ ವಾತಾವರಣ ನಿರ್ಮಾಣ ಆಗಬೇಕು ಎನ್ನುವುದಷ್ಟೇ ಉತ್ತರಪ್ರದೇಶದ ಬಿಜೆಪಿ ನೇತೃತ್ವದ ಸರ್ಕಾರದ ಉದ್ದೇಶವಿದ್ದಂತಿದೆ. ಸರ್ಕಾರದ ಈ ವಿರೋಧಾಭಾಸದ ಕ್ರಮಗಳಿಂದಾಗಿ, ಜನಸಾಮಾನ್ಯರು ಕೂಡಾ ಓಮೈಕ್ರಾನ್ ಸೋಂಕು ತಡೆಗಾಗಿ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳನ್ನು ಲಘುವಾಗಿ ಪರಿಗಣಿಸುವ ಪರಿಸ್ಥಿತಿ ಉಂಟಾಗಿದೆ. ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುವ ಇಂತಹ ಎಡಬಿಡಂಗಿ ಕ್ರಮಗಳನ್ನು ಉತ್ತರಪ್ರದೇಶ ಸರ್ಕಾರ ತಕ್ಷಣ ನಿಲ್ಲಿಸಬೇಕು. ‘ಚುನಾವಣೆ ಗೆಲ್ಲುವ ಸಲುವಾಗಿ ಆದಿತ್ಯನಾಥ ನೇತೃತ್ವದ ಸರ್ಕಾರವು ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ರಾಜಕೀಯ ರ‍್ಯಾಲಿಗಳನ್ನು ಆಯೋಜಿಸುತ್ತಿದೆ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸಹಿತ ವಿರೋಧ ಪಕ್ಷಗಳ ಹಲವು ನಾಯಕರು ಕಿಡಿಕಾರಿದ್ದಾರೆ. ಬಿಜೆಪಿಯ ಸಂಸತ್ ಸದಸ್ಯರೇ ಆಗಿರುವ ವರುಣ್ ಗಾಂಧಿ ಅವರಂತೂ ‘ರಾತ್ರಿ ಕರ್ಫ್ಯೂ ಹೇರುವುದು ಮತ್ತು ಹಗಲಿನಲ್ಲಿ ರ‍್ಯಾಲಿ ನಡೆಸಿ ಲಕ್ಷಾಂತರ ಜನರನ್ನು ಸೇರಿಸುವುದು ಸಾಮಾನ್ಯ ಜನರ ತರ್ಕಕ್ಕೆ ನಿಲುಕದು’ ಎಂದು ಟೀಕಿಸಿದ್ದಾರೆ. ಸೋಂಕು ಗರಿಷ್ಠ ಪ್ರಮಾಣದಲ್ಲಿ ಹರಡುವುದು ಜನಸಂದಣಿ ಹೆಚ್ಚಿಗೆ ಇರುವ ಹಗಲಿನಲ್ಲೇ ವಿನಾ ರಾತ್ರಿ ವೇಳೆ ಅಲ್ಲ. ರಾತ್ರಿ ವೇಳೆ ಜನಸಂಚಾರ ಹೆಚ್ಚು ಇರುವುದಿಲ್ಲ. ಈ ರಾಜಕೀಯ ರ‍್ಯಾಲಿಗಳು ಕೋವಿಡ್ ಕ್ಲಸ್ಟರ್‌ಗಳಾಗಿ ಸೋಂಕು ಹರಡುವಿಕೆ ವೇಗ ಪಡೆಯಲು ಕಾರಣವಾಗಬಾರದು. ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ನ್ಯೂನತೆಗಳು ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಬಯಲಾಗಿವೆ. ಚುನಾವಣೆ ಗೆಲ್ಲುವ ಏಕೈಕ ಉದ್ದೇಶದಿಂದ ಸರ್ಕಾರವೇ ಪುನಃ ಅಂತಹ ಅಪಾಯಕ್ಕೆ ಜನರನ್ನು ದೂಡುವುದು ಅಕ್ಷಮ್ಯ.ಜನರ ಆರೋಗ್ಯದ ಮೇಲೆ ಏನೇ ದುಷ್ಪರಿಣಾಮ ಉಂಟಾದರೂ ಪರವಾಗಿಲ್ಲ, ತಮ್ಮ ರಾಜಕೀಯ ಪ್ರಚಾರ ಯಾವುದೇ ಅಡೆತಡೆಯಿಲ್ಲದೆ ನಡೆಯಬೇಕು ಎಂದು ದೇಶದ ಪ್ರಧಾನಿ ಮತ್ತು ರಾಜ್ಯವೊಂದರ ಮುಖ್ಯಮಂತ್ರಿಯೇ ತಮ್ಮ ನಡವಳಿಕೆಯ ಮೂಲಕ ತೋರಿಸಿಕೊಡುತ್ತಿರುವುದು ಜನಪರ ನಾಯಕತ್ವದ ಲಕ್ಷಣವಲ್ಲ.

ಕರ್ನಾಟಕದಲ್ಲಿ ‘ರಾತ್ರಿ ಕರ್ಫ್ಯೂ ಹೇರುವುದಿಲ್ಲ’ ಎಂದು ವಾರದ ಹಿಂದೆ ಸಚಿವರೇ ಸ್ಪಷ್ಟಪಡಿಸಿದ್ದರು. ಈಗ ರಾಜ್ಯದಲ್ಲಿ ಹಠಾತ್ತನೆ ರಾತ್ರಿ ಕರ್ಫ್ಯೂ ಘೋಷಿಸಲಾಗಿದೆ. ಹೋಟೆಲ್ ಉದ್ಯಮದ ಮೇಲೆ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ. ಹೊಸ ವರ್ಷ ಆಚರಣೆಯ ಸಂದರ್ಭದಲ್ಲಿ ನಡೆಯಬಹುದಾ ಗಿದ್ದ ವಹಿವಾಟಿನ ನಿರೀಕ್ಷೆಯಲ್ಲಿದ್ದ ಆತಿಥ್ಯ ಉದ್ಯಮವು ಸರ್ಕಾರದ ದಿಢೀರ್‌ ನಿರ್ಧಾರದಿಂದ ಕಂಗಾ ಲಾಗಿದೆ.ನೀತಿ ಆಯೋಗವು ಪ್ರಕಟಿಸಿರುವ 2019–20ನೇ ಸಾಲಿನ ಆರೋಗ್ಯ ಸೂಚ್ಯಂಕ ವರದಿಯನ್ನು ಗಮನಿಸಿದರೆ ಕರ್ನಾಟಕದ ಸಾರ್ವಜನಿಕ ಆರೋಗ್ಯ ಸ್ಥಿತಿ ಕುಸಿಯುತ್ತಿರುವುದನ್ನೂ ಕಾಣಬಹುದು. ಆರೋಗ್ಯ ಸೂಚ್ಯಂಕ ರ‍್ಯಾಂಕಿಂಗ್‌ನಲ್ಲಿ ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶ ಅಗ್ರಸ್ಥಾನ ದಲ್ಲಿವೆ. ಕರ್ನಾಟಕದ ಸ್ಥಾನ ಹಿಂದಿನ ವರ್ಷ ಇದ್ದ 8ನೇ ರ‍್ಯಾಂಕ್‌ನಿಂದ 9ನೇ ರ‍್ಯಾಂಕ್‌ಗೆ ಕುಸಿದಿದೆ. ಉತ್ತರಪ್ರದೇಶವಂತೂ ದೊಡ್ಡ ರಾಜ್ಯಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ರಾಜ್ಯ ಸರ್ಕಾರಗಳು ತಳೆಯುವ ಎಡಬಿಡಂಗಿ ನೀತಿಗಳ ದುಷ್ಪರಿಣಾಮವನ್ನು ಜನಸಾಮಾನ್ಯರು ಅನುಭವಿಸಬೇಕಾಗಿ ಬಂದಿರುವುದು ದಾರುಣ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT