ಭಾನುವಾರ, ಏಪ್ರಿಲ್ 18, 2021
24 °C

ಸಂಪಾದಕೀಯ | ದಿಶಾ ‘ದೇಶದ್ರೋಹ’ ಪ್ರಕರಣ: ಪ್ರಭುತ್ವಕ್ಕೆ ವಿವೇಕ ಮೂಡೀತೇ?

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ದೇಶದ್ರೋಹದ ಅಪರಾಧವೆಂದರೆ ಏನು ಎಂಬುದನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124(ಎ) ವ್ಯಾಖ್ಯಾನಿಸುತ್ತದೆ. ಆದರೆ, ಈ ಸೆಕ್ಷನ್‌ ಅನ್ನು ಅಕ್ಷರಶಃ ವ್ಯಾಖ್ಯಾನಿಸುವುದು, ಅರ್ಥ ಮಾಡಿ ಕೊಳ್ಳುವುದು ಸರಿಯಲ್ಲ ಎಂಬುದನ್ನು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿ ದಶಕಗಳೇ ಸರಿದಿವೆ. ಕೇದಾರನಾಥ ಸಿಂಗ್‌ ಮತ್ತು ಬಿಹಾರ ಸರ್ಕಾರದ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು, ಸೆಕ್ಷನ್‌ 124(ಎ)ಯನ್ನು ಅರ್ಥ ಮಾಡಿಕೊಳ್ಳಬೇಕಿರುವುದು ಹೇಗೆ ಎಂಬುದಕ್ಕೆ ಮಾರ್ಗದರ್ಶಿಯಂತೆ ಇದೆ. ಕಾನೂನು ಪಂಡಿತರ ವಲಯದಲ್ಲೂ ಸಾರ್ವಜನಿಕ ಬುದ್ಧಿಜೀವಿಗಳ ವಲಯದಲ್ಲೂ ವ್ಯಾಪಕವಾಗಿ ಚರ್ಚೆಯಾಗಿರುವ ತೀರ್ಪು ಇದು. ‘ಯಾವುದೇ ಕ್ರಿಯೆ, ದೇಶದ್ರೋಹಕ್ಕೆ ಸಮ ಎಂಬುದಾಗಿ ಪರಿಗಣಿತ ಆಗಬೇಕಾದರೆ, ಅದು ಹಿಂಸಾ ಮಾರ್ಗ ಅನುಸರಿಸಿ ಸರ್ಕಾರವನ್ನು ಬುಡಮೇಲು ಮಾಡುವ ಪರಿಣಾಮ ಹೊಂದಿರಬೇಕು. ಹಿಂಸೆ ಸೃಷ್ಟಿಸಿ, ಸಾರ್ವಜನಿಕ ಶಾಂತಿಗೆ ಧಕ್ಕೆ ತರುವಂಥದ್ದಾಗಿರಬೇಕು. ಈ ಆಯಾಮಗಳನ್ನು ಹೊಂದಿಲ್ಲದ ಅನಿಸಿಕೆ, ಅಭಿಪ್ರಾಯಗಳು ದೇಶದ್ರೋಹದ ವ್ಯಾಪ್ತಿಗೆ ಬರುವುದಿಲ್ಲ’ ಎಂಬುದು ಆ ಪ್ರಕರಣದಲ್ಲಿ ನ್ಯಾಯಾಲಯ ಹೇಳಿರುವ ಮಾತು. ಇದು ಸಾರ್ವಜನಿಕ ಅವಗಾಹನೆಗೆ ಲಭ್ಯವಿದ್ದರೂ, ಅಭಿಪ್ರಾಯ ಭೇದ ವ್ಯಕ್ತಪಡಿಸುವವರ ವಿರುದ್ಧ ಪೊಲೀಸರು ಹಿಂದೆ–ಮುಂದೆ ನೋಡದೆ ದೇಶದ್ರೋಹದ ಆರೋಪ ಹೊರಿಸುತ್ತಿರುವುದು ಪ್ರಜಾತಂತ್ರ ವ್ಯವಸ್ಥೆಯ ತೀರಾ ವಿಷಾದಕರ ಅಧ್ಯಾಯವೆನ್ನದೆ ವಿಧಿಯಿಲ್ಲ. ರೈತರ ಪ್ರತಿಭಟನೆಗಳಿಗೆ ಬೆಂಬಲ ಸೂಚಿಸಲು ಸಿದ್ಧಪಡಿಸಿದ್ದ ಆನ್‌ಲೈನ್‌ ಟೂಲ್‌ಕಿಟ್‌ಗೆ ಒಂದಿಷ್ಟು ಬದಲಾವಣೆಗಳನ್ನು ತಂದು, ಕಾನೂನುಬಾಹಿರ ಚಟುವಟಿಕೆ ನಡೆಸು ತ್ತಿರುವವರು ಎನ್ನಲಾದ ವ್ಯಕ್ತಿಗಳು ಉಪಸ್ಥಿತರಿದ್ದ ಆನ್‌ಲೈನ್‌ ಸಭೆಯೊಂದರಲ್ಲಿ ಪಾಲ್ಗೊಂಡು ‘ದೇಶದ್ರೋಹ’ ಎಸಗಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದು ಈ ಕಾನೂನಿನ ದುರ್ಬಳಕೆಯ ಹೊಸದೊಂದು ನಿದರ್ಶನದಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಈಗ ದಿಶಾ ಅವರಿಗೆ ದೆಹಲಿಯ ನ್ಯಾಯಾಲಯವೊಂದು ಜಾಮೀನು ನೀಡಿದೆ.

ದಿಶಾ ಅವರು ತಿದ್ದುಪಡಿ ಮಾಡಿದ್ದರು ಎಂದು ಹೇಳಲಾಗಿರುವ ಟೂಲ್‌ಕಿಟ್‌ನಲ್ಲಿ ಹಿಂಸೆಗೆ ಕರೆ ನೀಡುವ ಯಾವ ಅಂಶವೂ ಇಲ್ಲ ಎಂದು ನ್ಯಾಯಾ ಲಯ ಹೇಳಿದೆ. ಅನುಮಾನಾಸ್ಪದ ಚಾರಿತ್ರ್ಯದ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದರು ಅಂದಮಾತ್ರಕ್ಕೆ ಅವರ ಮೇಲೆ ತಪ್ಪು ಹೊರಿಸಲಾಗದು; ಅಂತಹ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದರ ಕಾರಣ ಏನಿತ್ತು ಎಂಬುದನ್ನೂ ಗಮನಿಸಬೇಕು. ದಿಶಾ ಅವರಿಗೂ ದೆಹಲಿಯಲ್ಲಿ ಜನವರಿ 26ರಂದು ನಡೆದ ಅಹಿತಕರ ಘಟನೆಗಳಿಗೂ ನೇರ ಸಂಬಂಧ ತೋರಿಸಲು ಪೊಲೀಸರು ಯಾವ ಆಧಾರವನ್ನೂ ನೀಡಿಲ್ಲ ಎಂದು ಕೋರ್ಟ್‌ ಹೇಳಿದೆ. ವಾಟ್ಸ್‌ಆ್ಯಪ್‌ ಗುಂಪೊಂದನ್ನು ಸೃಷ್ಟಿಸುವುದು, ನಿರುಪದ್ರವಿಯಂತೆ ಕಾಣಿಸುವ ಟೂಲ್‌ಕಿಟ್‌ನಲ್ಲಿ ಕೆಲವು ಬದಲಾವಣೆಗಳನ್ನು ತರುವುದು ಅಪರಾಧ ಅಲ್ಲ ಎಂದೂ ದಿಶಾ ಅವರಿಗೆ ಜಾಮೀನು ನೀಡಿದ ಆದೇಶದಲ್ಲಿ ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಆದೇಶದಲ್ಲಿ ನ್ಯಾಯಾಲಯ ಹೇಳಿರುವ ಮಾತುಗಳನ್ನೂ ಪೊಲೀಸರು ದಿಶಾ ವಿರುದ್ಧ ಹೊರಿಸಿರುವ ಆರೋಪಗಳನ್ನೂ ಒಟ್ಟಾಗಿ ನೋಡಿದರೆ, ಪ್ರಭುತ್ವದ ಯೋಚನಾಕ್ರಮ ಕ್ಕಿಂತ ಭಿನ್ನವಾಗಿ ಆಲೋಚಿಸುವ ವ್ಯಕ್ತಿಗಳ ದನಿ ಅಡಗಿಸಲೆಂದೇ ಈ ರೀತಿಯ ಆರೋಪಗಳನ್ನು ಉದ್ದೇಶಪೂರ್ವಕವಾಗಿ ಹೊರಿಸಲಾಗುತ್ತದೆಯೇ ಎಂಬ ಅನುಮಾನ ಮೂಡುತ್ತದೆ. ವ್ಯಕ್ತಿ ಎಸಗಿದ ಅಪರಾಧ ಎಂಥದ್ದು, ಅದಕ್ಕೆ ಸೂಕ್ತವಾದ ಸೆಕ್ಷನ್ ಯಾವುದು ಎಂಬುದನ್ನು ಗುರುತಿಸಿ, ಅಂತಹ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಿ ತನಿಖೆ ನಡೆಸಬೇಕಾದುದು ವೃತ್ತಿಪರ ಪೊಲೀಸರ ಕರ್ತವ್ಯ. ಅಡಿಕೆ ಕಳ್ಳತನದ ಅನುಮಾನ ಬಂದಾಗ, ಆನೆಯನ್ನು ಕೊಂದಿದ್ದಕ್ಕೆ ಬಳಸುವ ಸೆಕ್ಷನ್‌ ಅಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸುವುದು ವೃತ್ತಿಪರತೆ ಅನ್ನಿಸಿಕೊಳ್ಳುವುದಿಲ್ಲ. ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸುವ ಹೊಣೆಯನ್ನೂ ಹೊತ್ತಿರುವ ಪೊಲೀಸರು, ದಿಶಾ ಪ್ರಕರಣದಲ್ಲಿ ಯಾರದ್ದೋ ಒತ್ತಡಕ್ಕೆ ಒಳಗಾಗಿ ವರ್ತಿಸಿದಂತೆ ಕಾಣುತ್ತಿದೆ. ದಿಶಾ ಎಸಗಿದ ಅಪರಾಧವಾದರೂ ಏನು ಎಂಬುದನ್ನು ಸರಿಯಾಗಿ ಗಮನಿಸದೆ, ಅವರ ವಿರುದ್ಧ ಮನಸೋಇಚ್ಛೆ ಆರೋಪಗಳನ್ನು ಹೊರಿಸುವ ಕೆಲಸವನ್ನಷ್ಟೇ ಪೊಲೀಸರು ಮಾಡಿದ್ದಾರೆ ಎಂದು ಯಾರಿಗಾದರೂ ಅನ್ನಿಸಿದರೆ ಅದರಲ್ಲಿ ಆಶ್ಚರ್ಯಪಡುವಂಥದ್ದು ಏನೂ ಇಲ್ಲ. ಈ ದೇಶದ ಸಹಸ್ರಾರು ವರ್ಷಗಳ ಇತಿಹಾಸದಲ್ಲಿ ಬಹುಜನರು ನಂಬಿರುವ ಸಿದ್ಧಾಂತಕ್ಕೆ ವಿರುದ್ಧವಾದ ನಿಲುವನ್ನು ಪ್ರತಿಪಾದಿಸಿದವರಿಗೆ ‘ದೇಶದ್ರೋಹಿ’ ಅಥವಾ ‘ರಾಜದ್ರೋಹಿ’ ಎಂಬ ಹಣೆಪಟ್ಟಿ ಅಂಟಿಸಿದ ನಿದರ್ಶನಗಳು ಕಾಣುವುದಿಲ್ಲ. ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿರುವಂತೆ ‘ಆನೋ ಭದ್ರಾಃ ಕೃತವೋ ಯಂತು ವಿಶ್ವತಃ’ ಎಂಬ ಮಾತನ್ನು ಜೀವನಮೌಲ್ಯವಾಗಿ ಕಂಡ ಪರಂಪರೆ ಭಾರತಕ್ಕಿದೆ. ಭಿನ್ನ ನಿಲುವು ತಾಳಿದವರಿಗೆಲ್ಲ ‘ದೇಶದ್ರೋಹಿ’ ಎಂಬ ಹಣೆಪಟ್ಟಿ ಕಟ್ಟುವುದರಿಂದ ದೇಶದ ಬೌದ್ಧಿಕ ವಿಕಾಸ ಕುಂದುತ್ತದೆ, ಪ್ರಜಾತಂತ್ರವೆಂಬುದು ಅಪಹಾಸ್ಯಕ್ಕೆ ಈಡಾಗುತ್ತದೆ ಎಂಬ ವಿವೇಕ ಪ್ರಭುತ್ವಕ್ಕೆ ಮೂಡಿದರೆ ಕ್ಷೇಮ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು