ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಉದ್ಯಮದ ಚೇತರಿಕೆಗೆ ಸ್ಪಷ್ಟವಾದ ಕ್ರಮ ಕೈಗೊಳ್ಳಿ

Last Updated 11 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಮೋಟಾರು ವಾಹನಗಳ ಮಾರಾಟವು ದೇಶದಲ್ಲಿ ಹತ್ತು ತಿಂಗಳುಗಳಿಂದ ಸತತವಾಗಿ ಕುಸಿತ ಕಂಡಿದೆ. ಆಟೊಮೊಬೈಲ್ ವಲಯ ತೀವ್ರ ಹಿನ್ನಡೆ ಅನುಭವಿಸುತ್ತಿದೆ. ಕಳೆದ ವರ್ಷದ ಆಗಸ್ಟ್‌ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಆಗಸ್ಟ್‌ನಲ್ಲಿ ಒಟ್ಟಾರೆ ವಾಹನಗಳ ಮಾರಾಟ ಶೇಕಡ 23.55ರಷ್ಟು ಕುಸಿತ ಕಂಡಿದ್ದು, 20 ವರ್ಷಗಳಲ್ಲೇ ಇದು ಅತ್ಯಧಿಕ ಕುಸಿತ ಎಂದು ದಾಖಲಾಗಿದೆ. ಪ್ರಯಾಣಿಕ ವಾಹನ ಮಾತ್ರವಲ್ಲ, ವಾಣಿಜ್ಯ ವಾಹನಗಳ ಮಾರಾಟದಲ್ಲೂ ಕುಸಿತ ದಾಖಲಾಗಿದೆ. ಗ್ರಾಮೀಣ ಆರ್ಥಿಕತೆಯ ಚೈತನ್ಯದ ಮಾಪಕವಾದ ದ್ವಿಚಕ್ರ ವಾಹನಗಳ ಮಾರಾಟವೂ ಆಗಸ್ಟ್‌ನಲ್ಲಿ ಶೇ 22.24ರಷ್ಟು ಕಡಿಮೆಯಾಗಿದೆ. ಭಾರತದ ಪ್ರಮುಖ ವಾಹನ ತಯಾರಿಕಾ ಕಂಪನಿಗಳಾದ ಮಾರುತಿ ಸುಜುಕಿ, ಹುಂಡೈ ಮೋಟರ್ಸ್, ಮಹೀಂದ್ರಾ ಅಂಡ್ ಮಹೀಂದ್ರಾ, ಹೀರೊ ಮೋಟರ್ಸ್, ಟಿವಿಎಸ್ ಮೋಟರ್ಸ್, ಅಶೋಕ್ ಲೇಲ್ಯಾಂಡ್ ಮುಂತಾಗಿ ಬಹುತೇಕ ಕಂಪನಿಗಳು ವಾರದಲ್ಲಿ ಇಂತಿಷ್ಟು ದಿನ ಎಂದು ತಯಾರಿಕೆ ಸ್ಥಗಿತ ಪ್ರಕಟಿಸಿದ್ದು, ಕೆಲವು ಕಂಪನಿಗಳು ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿವೆ. ಆಟೊಮೊಬೈಲ್ ವಲಯದಲ್ಲಿ ಈಗಾಗಲೇ ಭಾರಿ ಪ್ರಮಾಣದಲ್ಲಿ ಉದ್ಯೋಗಗಳು ಕಡಿತಗೊಂಡಿವೆ. ದೇಶವು ಆರ್ಥಿಕ ಹಿಂಜರಿತದ ಸುಳಿಯಲ್ಲಿ ಸಿಲುಕಿರುವುದು ಸ್ವಯಂವೇದ್ಯ. ಈ ವರ್ಷದ ಏಪ್ರಿಲ್- ಜೂನ್ ತ್ರೈಮಾಸಿಕದ ಆರ್ಥಿಕ ವೃದ್ಧಿ ದರವೂ ಶೇ 5ಕ್ಕೆ ಕುಸಿದಿದ್ದು, ಯಾವ ಕ್ಷೇತ್ರದಲ್ಲೂ ಚೇತರಿಕೆಯ ಲಕ್ಷಣಗಳು ಕಾಣಿಸುತ್ತಿಲ್ಲ.

ಆಟೊಮೊಬೈಲ್ ಕ್ಷೇತ್ರಕ್ಕೆ ಚೇತರಿಕೆ ತುಂಬುವ ಕ್ಷಿಪ್ರ ಕ್ರಮಗಳನ್ನು ಸರ್ಕಾರ ತುರ್ತಾಗಿ ಕೈಗೊಳ್ಳಬೇಕಿದೆ. ಪರಿಸ್ಥಿತಿ ಗಂಭೀರವಾಗಿರುವುದನ್ನು ಒಪ್ಪಿಕೊಂಡು, ವಾಹನಗಳ ಮಾರಾಟ ವೃದ್ಧಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಬೇಕಾದ ಸರ್ಕಾರವು ಕಾರಣಗಳನ್ನು ಸ್ಪಷ್ಟವಾಗಿ ಗುರುತಿಸಲು ವಿಫಲವಾಗಿರುವುದು ವಿಪರ್ಯಾಸದ ಸಂಗತಿ. ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ವಾಹನ ಕ್ಷೇತ್ರದ ಹಿಂಜರಿತಕ್ಕೆ ತಮ್ಮದೇ ಆದ ಕಾರಣಗಳನ್ನು ಕೊಡುತ್ತಿದ್ದಾರೆ. ‘ಬಿಎಸ್-6 ಮಾನದಂಡಗಳಿಗೆ ವಾಹನಗಳ ಪರಿವರ್ತನೆ ಆಗುತ್ತಿರುವುದು ಮತ್ತು ಹೊಸ ಪೀಳಿಗೆಯವರು ಸ್ವಂತ ಕಾರಿಗಿಂತ ಹೆಚ್ಚಾಗಿ ಓಲಾ, ಉಬರ್‌ಗಳಲ್ಲಿ ಪಯಣಿಸಲು ಇಷ್ಟಪಡುತ್ತಿರುವುದುವಾಹನಗಳ ಮಾರಾಟ ಕುಸಿತಕ್ಕೆ ಕಾರಣ’ ಎಂಬ ಅವರ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿದೆ. ವಾಹನಗಳಿಂದ ಉಂಟಾಗುವ ಪರಿಸರ ಮಾಲಿನ್ಯ ತಡೆಯಲು ಹಲವು ವರ್ಷಗಳಿಂದ ಹೊಸ ಮಾನದಂಡಗಳನ್ನು ರೂಪಿಸುತ್ತಲೇ ಬಂದಿದ್ದೇವೆ. ಬಿಎಸ್-5ರವರೆಗೆ ಈ ಮಾನದಂಡಗಳ ಉನ್ನತೀಕರಣ ನಡೆದಾಗ ಉಂಟಾಗದ ಇಂತಹ ತೀವ್ರ ಕುಸಿತ ಈಗ ಬಿಎಸ್-6ಕ್ಕೆ ಮಾತ್ರ ಏಕೆ ಕಾಣಿಸಿಕೊಂಡಿದೆ? ಹೊಸಪೀಳಿಗೆಯ ಮನೋಧರ್ಮ ಕೂಡ ಇದಕ್ಕೊಂದು ಕಾರಣ ಎನ್ನುವುದು ಸಚಿವರು ಮುಂದೊಡ್ಡಿರುವ ಇನ್ನೊಂದು ವಾದ. ‘ಈ ಮನೋಭಾವದವರು ಬಸ್, ಲಾರಿಗಳನ್ನೂ ಖರೀದಿಸುವುದು ಕಡಿಮೆ ಮಾಡಿದ್ದಾರೆಯೇ?’ ಎಂದು ವಿರೋಧ ಪಕ್ಷಗಳ ನಾಯಕರು, ಸಚಿವರನ್ನು ಪ್ರಶ್ನಿಸಿರುವುದು ತರ್ಕಬದ್ಧವಾಗಿದೆ. ದೇಶದ ಎಷ್ಟು ನಗರಗಳಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಓಲಾ, ಉಬರ್ ಮತ್ತು ಮೆಟ್ರೊ ರೈಲುಗಳಿವೆ ಎನ್ನುವುದನ್ನು ಲೆಕ್ಕ ಹಾಕಿದರೆ ಸಚಿವರ ಈ ವಾದದಲ್ಲಿ ಹುರುಳಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ‘ಮೋಟಾರು ವಾಹನಗಳ ಮಾರಾಟ ಚೇತರಿಕೆಗೆ ಸರ್ಕಾರವು ಕ್ರಮ ಕೈಗೊಳ್ಳುತ್ತಿದೆ. ಸರ್ಕಾರದ ಬಳಿ ಇರುವ 15 ವರ್ಷಗಳಿಗಿಂತ ಹಳೆಯದಾದ ವಾಹನಗಳನ್ನು ಮಾರಾಟ ಮಾಡಿ ಹೊಸ ವಾಹನಗಳನ್ನು ಖರೀದಿಸಲಾಗುವುದು’ ಎಂದು ಇದೇ ಸಚಿವರು ಇತ್ತೀಚೆಗೆ ಹೇಳಿಕೆ ನೀಡಿದ್ದೂ ಲೇವಡಿಗೆ ಕಾರಣವಾಗಿತ್ತು. ಆಟೊಮೊಬೈಲ್ ವಲಯಕ್ಕೆ ಸದ್ಯ ಕೇಂದ್ರ ಸರ್ಕಾರವು ಶೇ 28ರಷ್ಟು ಜಿಎಸ್‍ಟಿ ದರ ವಿಧಿಸಿದೆ. ಅದೂ ಅಲ್ಲದೆ ವಾಹನಗಳ ಉದ್ದ, ಎಂಜಿನ್ ಸಾಮರ್ಥ್ಯ ಮತ್ತು ವೈವಿಧ್ಯಗಳಿಗೆ ಅನುಸಾರವಾಗಿ ಹೆಚ್ಚುವರಿ ಕರವನ್ನೂ ಹೇರಲಾಗಿದೆ. ಇದನ್ನು ಕಡಿಮೆ ಮಾಡಬೇಕೆಂದು ಉದ್ಯಮ ವಲಯ ಒಂದು ವರ್ಷದಿಂದ ಒತ್ತಾಯಿಸುತ್ತಿರುವುದರ ಕಡೆಗೆ ಸರ್ಕಾರ ಗಮನಹರಿಸಿಲ್ಲ. ಒಣ ಸಬೂಬುಗಳು ಮತ್ತು ಹುಸಿ ಭರವಸೆಗಳನ್ನು ಪುನರುಚ್ಚರಿಸುವ ಬದಲು, ಕೇಂದ್ರ ಸರ್ಕಾರವು ಆರ್ಥಿಕ ಚೇತರಿಕೆಗೆ ಸ್ಪಷ್ಟ ಕ್ರಮಗಳನ್ನು ಕೈಗೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT