ಗುರುವಾರ , ಜೂನ್ 24, 2021
23 °C

ಲೋಕಪಾಲ ನೇಮಕ ತ್ವರಿತ ಕ್ರಮ ಕೈಗೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಚ ತೆಗೆದುಕೊಂಡವರಷ್ಟೇ ಅಲ್ಲ, ಲಂಚ ಕೊಡುವವರನ್ನೂ ಶಿಕ್ಷಿಸುವಂತಹ ಭ್ರಷ್ಟಾಚಾರ ತಡೆ (ತಿದ್ದುಪಡಿ) ಮಸೂದೆಗೆ ಸಂಸತ್ತು ಅನುಮೋದನೆ ನೀಡಿದೆ. ‘ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಲೇ ಒಳ್ಳೆಯ ಕೆಲಸದ ವಾತಾವರಣವನ್ನೂ ನಿರ್ಮಿಸಿಕೊಡುವುದು ಈ ಮಸೂದೆಯ ಉದ್ದೇಶ’ ಎಂದು ಸರ್ಕಾರ ಹೇಳಿದೆ. ಹೀಗಾಗಿ ಪ್ರಾಮಾಣಿಕ ಅಧಿಕಾರಿಗಳನ್ನು ರಕ್ಷಿಸುವ ಪ್ರಯತ್ನವಾಗಿ ಲಂಚ ಕೊಡುವವರನ್ನೂ ಅಪರಾಧಿಯಾಗಿಸಲಾಗಿದೆ.

ಲಂಚ ಕೊಡುವವರನ್ನೂ ಅಪರಾಧಿಯಾಗಿಸುವಂತಹ ಕ್ರಮ ಕೈಗೊಂಡಿರುವುದು ಇದೇ ಮೊದಲು. ಭ್ರಷ್ಟಾಚಾರದಿಂದಾಗಿ ಭಾರತದಲ್ಲಿ ಕೋಟ್ಯಂತರ ರೂಪಾಯಿಗಳ ನಷ್ಟವಾಗಿದೆ. ಅಭಿವೃದ್ಧಿಯೂ ಹಳಿ ತಪ್ಪಿದೆ ಎಂಬುದನ್ನು ಇತ್ತೀಚಿನ ಅನೇಕ ಸಮೀಕ್ಷೆಗಳು ಹೇಳುತ್ತಲೇ ಬಂದಿವೆ. ಇಂತಹ ಸಂದರ್ಭದಲ್ಲಿ ಈ ತಿದ್ದುಪಡಿ ಮಸೂದೆ ಅನುಷ್ಠಾನಗೊಳ್ಳಲು ಸಜ್ಜಾಗಿದೆ. ಭ್ರಷ್ಟಾಚಾರ ಪ್ರಕರಣಗಳನ್ನು ಎರಡು ವರ್ಷಗಳ ಒಳಗೇ ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂಬುದು ಈ ಮಸೂದೆಯ ಮತ್ತೊಂದು ಮುಖ್ಯ ಅಂಶ. ಆದರೆ ಸರ್ಕಾರದ ಅಧಿಕಾರಿಗಳ ವಿರುದ್ಧ ಸ್ವತಂತ್ರವಾಗಿ ತಾವೇ ತನಿಖೆ ಆರಂಭಿಸಲು ಪೊಲೀಸರು ಅಥವಾ ತನಿಖಾ ಸಂಸ್ಥೆಗಳಿಗೆ  ಇನ್ನು ಮುಂದೆ ಅವಕಾಶ ಇರುವುದಿಲ್ಲ.

ಸೂಕ್ತ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದುಕೊಳ್ಳುವುದು ಅವಶ್ಯ. ನಿವೃತ್ತ ಅಧಿಕಾರಿಗಳಿಗೂ ಈ ರಕ್ಷಣೆ ಒದಗಿಸಲಾಗಿದೆ. ಇತ್ತೀಚಿನ ಬ್ಯಾಂಕ್ ಹಗರಣಗಳಿಂದಾಗಿ ಸಾಲ ನೀಡಿಕೆಯ ವಿಚಾರದಲ್ಲಿ ಹಿಂಜರಿಕೆ  ತೋರುವ ಮನಸ್ಥಿತಿ ಬ್ಯಾಂಕ್ ಅಧಿಕಾರಿಗಳಲ್ಲಿತ್ತು. ಈಗ, ಪ್ರಾಮಾಣಿಕ ಬ್ಯಾಂಕ್‌ ಅಧಿಕಾರಿಗಳಿಗೆ ರಕ್ಷಣೆ ಸಿಕ್ಕಿದಂತಾಗಿದೆ ಎಂಬಂಥ ಅಭಿಪ್ರಾಯಗಳಿವೆ. ಸುಪರ್ದಿಗೆ ಕೊಟ್ಟ ಸೊತ್ತಿನ ದುರ್ಬಳಕೆ ಮತ್ತು ಘೋಷಿತ ಆದಾಯಕ್ಕಿಂತ ಹೆಚ್ಚಿನ ಗಳಿಕೆ ಮಾತ್ರ ಕ್ರಿಮಿನಲ್ ದುರ್ನಡತೆ ಎಂದು ಲಂಚದ ವ್ಯಾಖ್ಯಾನವನ್ನು ಸೀಮಿತಗೊಳಿಸಲಾಗಿದೆ. ಇದು ಕಾಯ್ದೆಯನ್ನು ದುರ್ಬಲಗೊಳಿಸುವ ಯತ್ನ ಎಂಬಂಥ ಟೀಕೆಗಳನ್ನು ಗಮನಿಸಬೇಕು.

ಏಕೆಂದರೆ, ಅಧಿಕಾರ ದುರ್ಬಳಕೆ, ಅಕ್ರಮ ಮಾರ್ಗ ಹಾಗೂ ಸಾರ್ವಜನಿಕ ಹಿತಕ್ಕೆ ಧಕ್ಕೆ ತರುವಂತಹದ್ದೆಲ್ಲವನ್ನೂ ಕ್ರಿಮಿನಲ್ ದುರ್ನಡತೆ ಎಂದು ಈ ಕಾಯ್ದೆ ಹಿಂದೆ ವ್ಯಾಖ್ಯಾನಿಸಿತ್ತು. ಎಂದರೆ, ಬ್ಯಾಂಕ್‍ಗಳಲ್ಲಿ ಸಾಲ ನೀಡುವುದನ್ನೂ ಸಹ ಹಣಕಾಸಿನ ಅನುಕೂಲ (ಪೆಕ್ಯುನಿಯರಿ ಅಡ್ವಾಂಟೇಜ್) ಒದಗಿಸಿಕೊಡುವುದಕ್ಕಾಗಿ ಎಂದು ವರ್ಗೀಕರಿಸಿ ಪ್ರಾಸಿಕ್ಯೂಟ್ ಮಾಡಲು ಅವಕಾಶ ಇತ್ತು.

ಸ್ವಾತಂತ್ರ್ಯ ಬಂದ 40 ವರ್ಷಗಳ ನಂತರ 1988ರಲ್ಲಿ ಭ್ರಷ್ಟಾಚಾರ ವಿರುದ್ಧದ ಮೊದಲ ಕಾನೂನು ರಚನೆಯಾಗಿತ್ತು. ಅದಾದ 30 ವರ್ಷಗಳ ನಂತರ ಆ ಕಾನೂನಿಗೆ ಈಗಷ್ಟೇ ತಿದ್ದುಪಡಿಯಾಗಿದೆ. ಭ್ರಷ್ಟಾಚಾರದ ಆಯಾಮಗಳೂ ಕಾಲ ಕಳೆದಂತೆ ಬದಲಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ ಎಂಬುದು ರಾಜಕೀಯ ಅಸ್ತ್ರವಾಗಿ ಬಳಕೆಯಾಗುತ್ತಲೂ ಇದೆ. ರಾಜಕೀಯ ಲಾಭವನ್ನು ಗುರಿಯಾಗಿಸಿಕೊಂಡು ಸಿಬಿಐ ತನಿಖಾ ಸಂಸ್ಥೆಯನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳುವುದೂ ಜನಜನಿತ.

ಈ ಭಾವನೆ ಎಷ್ಟು ಬಲವಾಗಿ ಬೇರೂರಿದೆ ಎಂದರೆ 2013ರಲ್ಲಿ  ‘ಪಂಜರದ ಗಿಳಿ’ ಎಂದು ಸಿಬಿಐ ಅನ್ನು ಸುಪ್ರೀಂ ಕೋರ್ಟ್ ಬಣ್ಣಿಸಿತ್ತು. ಭ್ರಷ್ಟಾಚಾರ ತಡೆ ತಿದ್ದುಪಡಿ ಮಸೂದೆ ಸಂಸತ್ತಿನಲ್ಲಿ ಅನುಮೋದನೆ ಪಡೆದ ದಿನವೇ ಲೋಕಪಾಲ ನೇಮಕಕ್ಕೆ ರಚನೆಯಾಗಬೇಕಾದ ಲೋಕಪಾಲ ಆಯ್ಕೆ ಶೋಧ ಸಮಿತಿ ಸದಸ್ಯರ ನೇಮಕಕ್ಕೆ ಕೇಂದ್ರ ಸರ್ಕಾರ ತೋರುತ್ತಿರುವ ನಿರಾಸಕ್ತಿಗೆ ಸುಪ್ರೀಂ ಕೋರ್ಟ್ ಅಸಮಾಧಾನ ತೋರಿರುವುದು ಕಾಕತಾಳೀಯ. ಹೊಸ ತಿದ್ದುಪಡಿ ಮಸೂದೆ ಪ್ರಕಾರ, ಭ್ರಷ್ಟಾಚಾರ ಎಂಬುದು ಜೈಲುಶಿಕ್ಷೆಗೆ ಕಾರಣವಾಗಬಹುದಾದ ಗಂಭೀರ ಅಪರಾಧವಾಗಿದೆ. ಆದರೆ ಇದನ್ನು ಸಾಧಿಸುವುದು ಕ್ಲಿಷ್ಟಕರ ಆಗಲಿದೆಯೇ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಸರ್ಕಾರಿ ಅಧಿಕಾರಿಗಳ ವಿರುದ್ಧದ ಲಂಚದ ದೂರು ತನಿಖೆಗೆ ಸೂಕ್ತ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯಬೇಕು. ಆದರೆ ಈ ಸೂಕ್ತ ಪ್ರಾಧಿಕಾರ ಯಾವುದು? 2013ರ ಲೋಕಪಾಲ ಹಾಗೂ ಲೋಕಾಯುಕ್ತ ಕಾಯ್ದೆಯ ಪ್ರಕಾರ, ಕೇಂದ್ರದಲ್ಲಿ ಲೋಕಪಾಲ ಹಾಗೂ ರಾಜ್ಯಗಳಲ್ಲಿ ಲೋಕಾಯುಕ್ತ ವ್ಯವಸ್ಥೆ ಇರಬೇಕು. ಈ ಕಾನೂನು ಜಾರಿಯಾಗಿಯೇ ಐದು ವರ್ಷಗಳಾದವು. ಆದರೆ, ಲೋಕಪಾಲರ ನೇಮಕಕ್ಕೇ ಸರ್ಕಾರ ಇನ್ನೂ ಹಿಂದೆ ಮುಂದೆ ನೋಡುತ್ತಿದೆ. ತಾಂತ್ರಿಕ ಸಮಸ್ಯೆಯ ನೆಪ ಹೇಳುತ್ತಿದೆ.

ಪ್ರತಿಪಕ್ಷ ನಾಯಕನ ಸ್ಥಾನಮಾನದ ಮಾನ್ಯತೆ ಇರುವವರು ಇಲ್ಲದಿರುವುದರಿಂದ ಆಯ್ಕೆ ಸಮಿತಿ ಕೆಲಸ ಮಾಡಲಾಗಿಲ್ಲ ಎನ್ನುತ್ತಿದೆ ಕೇಂದ್ರ ಸರ್ಕಾರ. ಆಡಳಿತದಲ್ಲಿ ಪಾರದರ್ಶಕತೆ ತಂದು ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಭ್ರಷ್ಟಾಚಾರಕ್ಕೆ ತಡೆ ಹಾಕುವುದು ಅಗತ್ಯ. ಇದಕ್ಕೆ ಪೂರಕವಾಗಿ ಬಲವಾದ ಲೋಕಪಾಲ ವ್ಯವಸ್ಥೆ ರಚನೆಗೆ ವಿಳಂಬ ನೀತಿ ಅನುಸರಿಸುವುದು ಸಲ್ಲದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.