ಶುಕ್ರವಾರ, ಮಾರ್ಚ್ 5, 2021
17 °C

ವಾಯುಮಾಲಿನ್ಯಕ್ಕೆ ಕಡಿವಾಣ ಹಾಕಿ ಆರೋಗ್ಯಪೂರ್ಣ ಸಮಾಜ ನಿರ್ಮಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ದೇಶದಲ್ಲಿ ಸಂಭವಿಸುವ ಪ್ರತೀ ಎಂಟು ಸಾವುಗಳಲ್ಲಿ ಒಂದು, ವಾಯು ಮಾಲಿನ್ಯದ ಕಾರಣದಿಂದ ಆಗುತ್ತಿದ್ದು, ಉಸಿರಾಡಲು ಶುದ್ಧಗಾಳಿಯಿಲ್ಲದೆ ಭಾರತೀಯರ ಸರಾಸರಿ ಆಯಸ್ಸು 1.7 ವರ್ಷಗಳಷ್ಟು ಕಡಿಮೆಯಾಗಿದೆ ಎಂಬ ಕಳವಳಕಾರಿ ಸಂಗತಿ ಗ್ಲೋಬಲ್‌ ಬರ್ಡನ್‌ ಆಫ್‌ ಡಿಸೀಸ್‌ (ಜಿಬಿಡಿ) ಸಮೀಕ್ಷೆಯಿಂದ ಹೊರಬಿದ್ದಿದೆ. ಶ್ವಾಸಕೋಶದ ಕ್ಯಾನ್ಸರ್‌, ಹೃದಯಾಘಾತ, ಲಕ್ವ, ಉಸಿರಾಟದ ತೊಂದರೆ ಹಾಗೂ ಮಧುಮೇಹದಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ವಾಯುಮಾಲಿನ್ಯದ ಈ ವಿಷವರ್ತುಲವೇ ತಂದೊಡ್ಡುತ್ತಿರುವುದು ದೃಢಪಟ್ಟಿದೆ.

ಕಟ್ಟಡ ನಿರ್ಮಾಣ ಕಾಮಗಾರಿ ಹಾಗೂ ರಸ್ತೆಗಳ ಅಸಮರ್ಪಕ ನಿರ್ವಹಣೆಯಿಂದ ಏಳುವ ದೂಳು, ವಾಹನಗಳು ಹೊರಸೂಸುವ ಇಂಗಾಲ, ಕಸ ಮತ್ತು ಬೆಳೆಯ ತ್ಯಾಜ್ಯಕ್ಕೆ ಬೆಂಕಿ ಹಾಕುವುದರಿಂದ ಆವರಿಸುವ ಹೊಗೆ– ಇವು ದೇಶದ ಪರಿಸರವನ್ನೇ ಸಂಪೂರ್ಣ ಮಾಲಿನ್ಯಗೊಳಿಸಿವೆ. ದೇಶದ ಬಹುತೇಕ ಹಳ್ಳಿಗಳಲ್ಲಿ ಅಡುಗೆ ಮಾಡಲು ಈಗಲೂ ಉರುವಲನ್ನೇ ಬಳಸಲಾಗುತ್ತಿದೆ. ಉತ್ತರ ಭಾರತದಲ್ಲಿ ಈ ಪ್ರವೃತ್ತಿ ಅತಿಹೆಚ್ಚು. ಇದರಿಂದ ಪರಿಸರಕ್ಕೆ ಅತ್ಯಧಿಕ ಪ್ರಮಾಣದ ಇಂಗಾಲ ಸೇರುತ್ತಿದೆ. ಮಾಲಿನ್ಯದ ವಿಷಯಬಂದಾಗಲೆಲ್ಲ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ಚಾಟಿಯನ್ನು ಬೀಸುತ್ತಲೇ ಬಂದಿದೆ. ಪರಿಸರ ವಿಜ್ಞಾನಿಗಳು, ಸ್ವಯಂಸೇವಾ ಸಂಘಟನೆಗಳ ಕಾರ್ಯಕರ್ತರು ಸಹ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಆದರೆ, ಆಡಳಿತದ ಹೊಣೆ ಹೊತ್ತವರದು ದಪ್ಪ ಚರ್ಮ, ಕೆಪ್ಪ ಕಿವಿ. ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತವರನ್ನೂ ಹೊರಗಿನ ಮಾಲಿನ್ಯ ಕಾಡದೇ ಬಿಡುವುದಿಲ್ಲ ಎಂಬುದು ಗೊತ್ತಿದ್ದೂ ಪರಿಸರದ ವಿಷಯದಲ್ಲಿ ಆಡಳಿತಗಾರರು ಅಷ್ಟೊಂದು ಅಸೂಕ್ಷ್ಮವಾಗಿ ವರ್ತಿಸಿದ್ದೇ ಇಂದಿನ ಎಲ್ಲ ಗಂಡಾಂತರಗಳಿಗೆ ಮುಖ್ಯ ಕಾರಣ.

ಉತ್ತರಪ್ರದೇಶ, ಬಿಹಾರ, ರಾಜಸ್ಥಾನ ಹಾಗೂ ಜಾರ್ಖಂಡ್‌ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿನ ಮಾಲಿನ್ಯದ ಪ್ರಮಾಣ ತುಸು ಕಡಿಮೆ. ಹಾಗೆಂದ ಮಾತ್ರಕ್ಕೆ ನಾವು ನೆಮ್ಮದಿಯ ನಿಟ್ಟುಸಿರು ಬಿಡುವ ಹಾಗಿಲ್ಲ. ಏಕೆಂದರೆ, ಅತೀ ಹೆಚ್ಚು ಮಾಲಿನ್ಯದಿಂದ ಬಳಲುತ್ತಿರುವ ದೇಶದ ಮಹಾನಗರಗಳಲ್ಲಿ ಬೆಂಗಳೂರು ಕೂಡ ಒಂದು.

‘ಗ್ಯಾಸ್‌ ಚೇಂಬರ್‌’ ಆಗಲು ನವದೆಹಲಿ ಜತೆ ಅದೀಗ ಪೈಪೋಟಿಗೆ ಇಳಿದಂತಿದೆ. ದೇಶದ ಇತರ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಹೆಚ್ಚಿನ ಹಸಿರಿದೆ. ಬೇರೆ ನಗರಗಳ ಸರಹದ್ದಿನಲ್ಲಿ ಇರುವಂತೆ ಬೃಹತ್‌ ಕೈಗಾರಿಕೆಗಳು ಸಹ ಇಲ್ಲಿಲ್ಲ. ಹೀಗಿದ್ದೂ ಇಲ್ಲಿ ಅಪಾಯಕಾರಿ ಪ್ರಮಾಣದಲ್ಲಿ ವಾಯುಮಾಲಿನ್ಯ ಉಂಟಾಗಲು ಸುಮಾರು 80 ಲಕ್ಷದಷ್ಟಿರುವ ವಾಹನಗಳು ಉಗುಳುವ ಹೊಗೆಯೇ ಕಾರಣ. ಬಿಎಂಟಿಸಿ ಬಸ್‌ಗಳು ಸಹ ಹೆಚ್ಚಿನ ಪ್ರಮಾಣದ ಇಂಗಾಲ ಹೊರಹಾಕುತ್ತಿರುವುದು ಮಾಲಿನ್ಯ ನಿಯಂತ್ರಣದ ವಿಷಯದಲ್ಲಿ ಸರ್ಕಾರ ಎಷ್ಟೊಂದು ಹೊಣೆಗೇಡಿತನ ಪ್ರದರ್ಶಿಸುತ್ತಿದೆ ಎನ್ನುವುದಕ್ಕೆ ನಿದರ್ಶನ.

ಮಾಲಿನ್ಯದಿಂದ ರೋಗಪೀಡಿತರಾದ ವ್ಯಕ್ತಿಗಳು ದುಡಿಯಲಾಗದೆ, ಮಾನವ ಅಭಿವೃದ್ಧಿ ಸೂಚ್ಯಂಕ ಕುಸಿಯುತ್ತಿರುವುದು ಸರ್ಕಾರಗಳ ಕಣ್ಣನ್ನು ತೆರೆಸಿಲ್ಲ. ಮಾನವರೇ ಸೃಷ್ಟಿಸಿಕೊಂಡ ವಿಷವರ್ತುಲದಲ್ಲಿ ಸಿಲುಕಿ ಮಾನವ ಸಂಪನ್ಮೂಲ ಪೋಲಾದರೆ ಪರಿಸರ ಹೇಗೆ ತಾನೆ ನೆರವಿಗೆ ಬಂದೀತು? ಗ್ರಾಮಾಂತರ ಭಾಗದ ಪ್ರತೀ ಮನೆಗೂ ಜೈವಿಕ ಅನಿಲ ಇಲ್ಲವೆ ಸೌರಶಕ್ತಿಯಿಂದ ಉರಿಯುವ ಒಲೆಗಳನ್ನು ಪೂರೈಸಬೇಕು. ಬೆಳೆಯ ತ್ಯಾಜ್ಯವನ್ನು ಸುಡುವ ಬದಲು ಭೂಮಿಯಲ್ಲೇ ಕೊಳೆಯುವಂತೆ ಮಾಡಿದರೆ ಒಳ್ಳೆಯ ಗೊಬ್ಬರವಾಗುತ್ತದೆ ಎಂಬ ಅರಿವನ್ನು ಮೂಡಿಸಬೇಕು.

ನಗರ ಪ್ರದೇಶಗಳಲ್ಲಿ ಸಮೂಹ ಸಾರಿಗೆ ಹಾಗೂ ಸ್ವಚ್ಛ ಇಂಧನದ ಬಳಕೆಯನ್ನು ಉತ್ತೇಜಿಸಬೇಕು. ಡೀಸೆಲ್ ಜನರೇಟರ್ ಬಳಕೆಯ ಮೇಲೆ ನಿರ್ಬಂಧ ವಿಧಿಸಬೇಕು. ತ್ಯಾಜ್ಯ ಸುಡುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಕುಂಭಕರ್ಣ ನಿದ್ರೆಯಿಂದ ಬಡಿದೆಬ್ಬಿಸಿ, ಅದು ಮಾಡಬೇಕಾಗಿರುವ ಕೆಲಸಗಳನ್ನು ನೆನಪಿಸಬೇಕು. ಎಲ್ಲವೂ ಆಗಬೇಕು ನಿಜ. ಆದರೆ, ಆಡಳಿತದ ಸೂತ್ರ ಹಿಡಿದವರ ಮನಸ್ಥಿತಿ ಮೊದಲು ಬದಲಾಗಬೇಕಲ್ಲ? ನಾಗರಿಕರೆಲ್ಲ ಒಟ್ಟಾಗಿ ಒತ್ತಡ ತಂದು, ಮಾಲಿನ್ಯ ನಿಯಂತ್ರಣವೇ ಚುನಾವಣಾ ವಿಷಯವಾಗುವಂತೆ ನೋಡಿಕೊಂಡರೆ ಮುಂದಿನ ದಿನಗಳಲ್ಲಿ ಒಳ್ಳೆಯದನ್ನು ನಿರೀಕ್ಷೆ ಮಾಡಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು