ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನಶ್ಚೇತನ ಸಾಧ್ಯವೆಂಬ ವಿಶ್ವಾಸ ಕಾಂಗ್ರೆಸ್‌ಗೆ ಬರಲಿ

Last Updated 27 ಮೇ 2019, 3:59 IST
ಅಕ್ಷರ ಗಾತ್ರ

‘ಕುಟುಂಬಕೇಂದ್ರಿತ ಪಕ್ಷ ಕಾಂಗ್ರೆಸ್‌’. 17ನೇ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಬಿಜೆಪಿಯ ನರೇಂದ್ರ ಮೋದಿ ಅವರು ಕಟ್ಟಿದ್ದ ಪ್ರಭಾವಿ ಸಂಕಥನಗಳಲ್ಲಿ ಇದೂ ಒಂದಾಗಿತ್ತು. ಫಲಿತಾಂಶ ಪ್ರಕಟವಾದ ಬಳಿಕ, ಬಿದ್ದ ಏಟನ್ನು ನೆಕ್ಕಿಕೊಂಡು ‘ಆತ್ಮಾವಲೋಕನ’ ನಡೆಸಿದ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ಸಭೆಯಲ್ಲಿ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿಯವರೂ ಇದೇ ಮಾತನ್ನು ಹೇಳಿದ್ದಾರೆ.

‘ಪಕ್ಷದ ಮುಖಂಡರು ತಮ್ಮ ಮಕ್ಕಳನ್ನೇ ಮುನ್ನೆಲೆಗೆ ತರುವ ಮೂಲಕ ಪಕ್ಷದ ಮೇಲಿದ್ದ ‘ವಂಶಾಡಳಿತ’ ಆರೋಪಕ್ಕೆ ಪುಷ್ಟಿ ಕೊಟ್ಟರು’ ಎಂದು ರಾಹುಲ್‌ ಹೇಳಿದ್ದಾರೆ ಎಂದು ವರದಿಯಾಗಿದೆ. ಇಲ್ಲಿ ಬಹುದೊಡ್ಡ ವಿರೋಧಾಭಾಸವೂ ಇದೆ. ದೊಡ್ಡದಾಗಿ ಗೆದ್ದಿರುವ ಬಿಜೆಪಿಯ ಹಲವು ಮುಖಂಡರ ಮಕ್ಕಳು ಸ್ಪರ್ಧಿಸಿ ಗೆದ್ದಿದ್ದಾರೆ. ಆದರೆ, ಬಿಜೆಪಿಯನ್ನು ವಂಶಾಡಳಿತದ ಪಕ್ಷ ಎಂದುಯಾರೂ ಹೇಳುವುದಿಲ್ಲ. ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಮಗಳು ಎಂಬ ಕಾರಣಕ್ಕೆ ಇಂದಿರಾ ಗಾಂಧಿ, ಇಂದಿರಾ ಅವರ ಮಗ ಎಂಬ ಕಾರಣಕ್ಕೆ ರಾಜೀವ್ ಗಾಂಧಿ, ರಾಜೀವ್‌ ಅವರ ಪತ್ನಿ ಎಂಬ ಕಾರಣಕ್ಕೆ ಸೋನಿಯಾ ಗಾಂಧಿ ಮತ್ತು ಈ ಇಬ್ಬರ ಮಗ ಎಂಬ ಕಾರಣಕ್ಕೆ ರಾಹುಲ್‌ ಅವರು ಪಕ್ಷದ ಅಧ್ಯಕ್ಷ ಹುದ್ದೆಗೆ ಏರಿದ್ದಾರೆ ಎಂಬುದನ್ನು ರಾಹುಲ್‌ ಮರೆಯುವುದು ಹೇಗೆ? ಸ್ವಾತಂತ್ರ್ಯದ ಬಳಿಕ ಈ ದೇಶವನ್ನು ಅತಿಹೆಚ್ಚು ಕಾಲ ಆಳಿದ ಪಕ್ಷವೊಂದಕ್ಕೆ ಈಗ ಅಧಿಕೃತ ವಿರೋಧ ಪಕ್ಷದ ಮಾನ್ಯತೆಯೂ ಇಲ್ಲ.

ಬಿಜೆಪಿಅಪಾರವಾದ ಶಕ್ತಿ ಪಡೆದಿದೆ, ಪ್ರತಿಸ್ಪರ್ಧಿಗಳನ್ನು ನೆಲಕಚ್ಚಿಸುವುದರಲ್ಲಿ ನಿಸ್ಸೀಮರಾದ ನರೇಂದ್ರ ಮೋದಿ, ಅಮಿತ್‌ ಶಾ ಅವರಂತಹ ನಾಯಕತ್ವ ಈ ಪಕ್ಷಕ್ಕೆ ಇದೆ ಎಂಬುದಷ್ಟೇ ಕಾಂಗ್ರೆಸ್‌ಈ ಸ್ಥಿತಿ ತಲುಪಿರುವುದಕ್ಕೆ ಕಾರಣ ಅಲ್ಲ. ಅದು, ಪಾತಾಳ ತಲುಪಿರುವುದಕ್ಕೆ ಲೆಕ್ಕ ಇಡಲಾರದಷ್ಟು ಕಾರಣಗಳು ಇವೆ. ಆ ಪಕ್ಷ, ಹತ್ತಾರು ಕಾಯಿಲೆಗಳ ಗೂಡು. ಸೋಲಿನ ಕಾರಣ ಹುಡುಕಲು ನಡೆಸಿದ ಸಿಡಬ್ಲ್ಯುಸಿ ಸಭೆಯಲ್ಲಿಯೂ ಅದು ವೇದ್ಯ. ಎಲ್ಲರ ನಿರೀಕ್ಷೆಯಂತೆ ರಾಹುಲ್‌ ಅವರು ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಹೇಳಿದರು. ‘ಬೇಡವೇ ಬೇಡ’ ಎಂದು ಎಲ್ಲರೂ ಅವರ ಮನವೊಲಿಸಲು ಯತ್ನಿಸಿದರು. ಆಗ, ರಾಹುಲ್‌ ತಂಗಿ ಪ್ರಿಯಾಂಕಾ ವಾದ್ರಾ ಅವರನ್ನು ಈ ಹುದ್ದೆಗೆ ಏರಿಸಬಹುದು ಎಂಬ ಪ್ರಸ್ತಾವ ಬಂತು.

‘ನನ್ನ ತಂಗಿಯನ್ನು ಇದಕ್ಕೆ ಎಳೆದು ತರಬೇಡಿ. ಅಧ್ಯಕ್ಷ ಹುದ್ದೆಯಲ್ಲಿ ಗಾಂಧಿ ಕುಟುಂಬದವರೇ ಇರಬೇಕೆಂದಿಲ್ಲ’ ಎಂದು ರಾಹುಲ್‌ ಹೇಳಿದರು ಎಂದು ವರದಿಯಾಗಿದೆ. ನೆಹರೂ–ಗಾಂಧಿ ಕುಟುಂಬವೇ ಕಾಂಗ್ರೆಸ್‌ ಪಕ್ಷವನ್ನು ಒಟ್ಟಾಗಿಡುವ ಅಂಟು ಎಂದು ಆ ಪಕ್ಷದ ಬಗ್ಗೆ ಅನುಕಂಪ ಇರುವವರು ಹೇಳುತ್ತಿರುತ್ತಾರೆ. ಇದು ನಿಜ ಇರಬಹುದು ಎಂದು ಭಾವಿಸಲು ಪುಷ್ಟಿ ಕೊಡುವಂತಹ ನಿದರ್ಶನಗಳು ಇವೆ. ರಾಜೀವ್‌ ಹತ್ಯೆಯ ಬಳಿಕ ಸ್ವಲ್ಪ ಕಾಲ ಕಾಂಗ್ರೆಸ್‌ ಅಧ್ಯಕ್ಷ ಗಾದಿಯಲ್ಲಿ ನೆಹರೂ–ಗಾಂಧಿ ಕುಟುಂಬ ಇರಲಿಲ್ಲ. ಸೀತಾರಾಂ ಕೇಸರಿ ಅವರ ಮುಂದಾಳತ್ವದಲ್ಲಿ ಪಕ್ಷವು ಅರಾಜಕವಾಗಿತ್ತು. ಕಾಂಗ್ರೆಸ್ಸಿಗರೆಲ್ಲ ಸೇರಿ ದುಂಬಾಲು ಬಿದ್ದು ಸೋನಿಯಾ ಅವರಿಗೆ ಪಕ್ಷದ ಚುಕ್ಕಾಣಿ ಕೊಟ್ಟರು. ಅವರ ನೇತೃತ್ವದಲ್ಲಿ ಪಕ್ಷವು ಸತತ ಎರಡು ಅವಧಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಿತ್ತು. ಆದರೆ, ಮಗ ರಾಹುಲ್‌ಗೆ ಇಂತಹ ಯಶಸ್ಸು ಸಿಗಲಿಲ್ಲ. ಅಷ್ಟೇ ಅಲ್ಲ, ಅವರ ನೇತೃತ್ವದಲ್ಲಿ ಪಕ್ಷವು ಮತ್ತಷ್ಟು ಮತ್ತಷ್ಟು ಕೆಳಗೆ ಜಾರುತ್ತಿದೆ.

ಇಂತಹ ಸಂದರ್ಭದಲ್ಲಿ, ನಾಯಕತ್ವ ಬದಲಾವಣೆ ಪ್ರಸ್ತಾವ ಸಹಜವಾದುದು. ಸೋಲಿಗೆ ಯಾರಾದರೂ ಹೊಣೆ ಹೊರಬೇಕಾದುದು ಅಗತ್ಯ. ಈಗಷ್ಟೇ ಮುಗಿದ ಚುನಾವಣೆ ಮತ್ತು ಫಲಿತಾಂಶ ನಂತರದ ಬೆಳವಣಿಗೆಗಳು ಕಾಂಗ್ರೆಸ್‌ನ ಹುಳುಕುಗಳನ್ನೆಲ್ಲ ಎತ್ತಿ ತೋರಿಸಿವೆ. ಚುನಾವಣಾ ಪ್ರಚಾರದಲ್ಲಿ ಸಂಕಥನವೊಂದನ್ನು ಕಟ್ಟಲು ಈ ಪಕ್ಷಕ್ಕೆ ಆಗಲಿಲ್ಲ. ಮತದಾರರ ಪಟ್ಟಿಯ ಒಂದು ಪುಟಕ್ಕೆ ಒಬ್ಬರನ್ನು ಬಿಜೆಪಿ ನಿಯೋಜಿಸಿದರೆ, ಕೆಲವೆಡೆ ಮತಗಟ್ಟೆಯ ಏಜೆಂಟ್‌ ಆಗಲು ಕೂಡ ಕಾಂಗ್ರೆಸ್‌ನಲ್ಲಿ ಜನ ಇರಲಿಲ್ಲ. ಮಾಧ್ಯಮವನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಸರಿಯಾದ ಯೋಜನೆ ಇರಲಿಲ್ಲ. ನಾಯಕರು, ತಮ್ಮ ಮಕ್ಕಳಿಗೆ ಟಿಕೆಟ್‌ ಸಿಗಲಿ ಎಂದು ಬಯಸಿದರೇ ವಿನಾ ಅದರಿಂದ ಪಕ್ಷದ ಮೇಲಾಗುವ ಪರಿಣಾಮಗಳ ಬಗ್ಗೆ ಯೋಚಿಸಲಿಲ್ಲ. ಐದು ತಿಂಗಳ ಹಿಂದೆ ಪಕ್ಷ ಅಧಿಕಾರಸೂತ್ರ ಹಿಡಿದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಡದಲ್ಲಿ, ಲೋಕಸಭೆ ಚುನಾವಣೆಯಲ್ಲಿಯೂ ಗೆಲ್ಲಬೇಕು ಎಂಬ ಹುಮ್ಮಸ್ಸೇ ಕಾಣಲಿಲ್ಲ. ಇಷ್ಟೆಲ್ಲ ಇರುವಾಗ ಪಕ್ಷ ಗೆಲ್ಲುವುದು ಹೇಗೆ? ನೆಹರೂ–ಗಾಂಧಿ ಕುಟುಂಬದ ಭದ್ರಕೋಟೆ ಅಮೇಠಿಯಲ್ಲಿ ರಾಹುಲ್‌ ಸೋತರು.

16ನೇ ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ದಿಗ್ವಿಜಯ ಸಿಂಗ್‌, ಸತತ 15 ವರ್ಷ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್‌ ಹೀಗೆ ದೊಡ್ಡ ದೊಡ್ಡ ನಾಯಕರೆಲ್ಲ ಸೋತರು. ಈಗ, ‘ರಾಜೀನಾಮೆ ನೀಡುತ್ತೇನೆ’ ಎಂದು ರಾಹುಲ್‌ ಹೇಳಿದರೆ ಆ ಹುದ್ದೆಗೆ ಈ ವ್ಯಕ್ತಿ ಸೂಕ್ತ ಎಂದು ಬೊಟ್ಟು ಮಾಡಲು ಅಲ್ಲಿ ಒಬ್ಬರೂ ಇಲ್ಲ. ಬಿಜೆಪಿಯೂ ಹಿಂದೆ ಶೋಚನೀಯ ಸ್ಥಿತಿಯಲ್ಲಿ ಇತ್ತು. 1984ರ ಚುನಾವಣೆಯಲ್ಲಿ ಬಿಜೆಪಿ ಗೆದ್ದದ್ದು ಎರಡು ಸ್ಥಾನ ಮಾತ್ರ. ಆ ಪಕ್ಷ ಮತ್ತೆ ಅಧಿಕಾರಕ್ಕೆ ಏರಿದೆ, ಮತ್ತೆ ಕುಸಿದಿದೆ, ಮತ್ತೆ ಬೃಹದಾಕಾರವಾಗಿ ಬೆಳೆದಿದೆ. ಹೊಸ ಯೋಚನೆ, ಯೋಜನೆ, ಪಟ್ಟು ಹಿಡಿದು ಕೆಲಸ ಮಾಡುವ ಶಕ್ತಿ ಯಾರೋ ಒಬ್ಬಿಬ್ಬರ ಸ್ವತ್ತಲ್ಲ ಎಂಬುದು ಕಾಂಗ್ರೆಸ್‌ಗೆ ಅರ್ಥವಾಗಲಿ. ಒಬ್ಬ ಬಲಿಷ್ಠ ನಾಯಕನ ನೇತೃತ್ವದ ಸರ್ಕಾರವನ್ನು ಕಟ್ಟೆಚ್ಚರದಿಂದ ಕಾಯುವ ಮೂಲಕ ಪರಿಣಾಮಕಾರಿ ವಿರೋಧ ಪಕ್ಷವಾಗಿ ಕೆಲಸ ಮಾಡುವುದರಿಂದ ಕಾಂಗ್ರೆಸ್ಸನ್ನು ಯಾರೂ ತಡೆಯಲಾಗದು ಎಂಬುದಾದರೂ ಆ ಪಕ್ಷಕ್ಕೆ ಅರಿವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT