ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟತೆಯ ಕೊಂಡಿ ಕಳಚಿದರೆ ಗುಂಡಿ ರಹಿತ ರಸ್ತೆ ಸಾಧ್ಯ

Last Updated 6 ನವೆಂಬರ್ 2019, 1:28 IST
ಅಕ್ಷರ ಗಾತ್ರ

ರಸ್ತೆಗುಂಡಿಗಳನ್ನು ಸಕಾಲದಲ್ಲಿ ಮುಚ್ಚದಿದ್ದರೆ ಸಂಬಂಧಪಟ್ಟ ಎಂಜಿನಿಯರ್‌ಗಳ ಕಾರ್ಯನಿರ್ವಹಣಾ ವರದಿಯಲ್ಲಿ ಅದನ್ನು ಕರ್ತವ್ಯಲೋಪ ಎಂದು ನಮೂದಿಸಿ, ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗುವುದು ಎಂದು ಲೋಕೋಪಯೋಗಿ ಸಚಿವರು ಕಠಿಣ ಎಚ್ಚರಿಕೆ ಕೊಟ್ಟಿದ್ದಾರೆ. ಇಂತಹ ಎಚ್ಚರಿಕೆ ಕೊಡುವ ಪರಿಪಾಟ ಹಿಂದಿನಿಂದಲೂ ಇದೆ. ಸಚಿವರು ಹೊಸಬರಾಗಿರುವುದರಿಂದ ಮತ್ತೊಮ್ಮೆ ಈ ಎಚ್ಚರಿಕೆಯ ಸಂದೇಶ ಹೊರಬಿದ್ದಿದೆ. ರಸ್ತೆಯ ಗುಂಡಿಗಳಿಗೂ ಭ್ರಷ್ಟಾಚಾರಕ್ಕೂ ನಿಕಟ ನಂಟಿದೆ.

ಅಧಿಕಾರಿಗಳು, ಗುತ್ತಿಗೆದಾರರು, ನಿರ್ಮಾಣ ಕ್ಷೇತ್ರದ ಕಚ್ಚಾವಸ್ತು ಪೂರೈಕೆದಾರರಿಗೆ ರಸ್ತೆಯ ಗುಂಡಿಗಳು ನಿಯಮಿತವಾಗಿ ಆದಾಯ ತಂದುಕೊಡುವ ಮೂಲ. ಗುಂಡಿಗಳ ವಿರುದ್ಧ ಜನಾಕ್ರೋಶ ತೀವ್ರವಾಗುತ್ತಿದ್ದಂತೆ ಅವುಗಳನ್ನು ಮುಚ್ಚಬೇಕಾಗುತ್ತದೆ. ತುರ್ತಾಗಿ ದುರಸ್ತಿ ಮಾಡಬೇಕಾಗಿರುವುದರಿಂದಾಗಿ ಟೆಂಡರ್‌ ಪ್ರಕ್ರಿಯೆಯ ಎಲ್ಲ ನಿಯಮಗಳು ಇಲ್ಲಿ ಅನ್ವಯ ಆಗುವುದಿಲ್ಲ.

ಹೀಗಾಗಿ ಆಗಿದ್ದಷ್ಟೇ ಕೆಲಸ, ಮಾಡಿದ್ದೇ ಬಿಲ್‌ ಎಂಬುದು ಗುಂಡಿ ಮುಚ್ಚುವ ಕಾಮಗಾರಿಗಳ ವಿಷಯದಲ್ಲಿ ಚಾಲ್ತಿಯಲ್ಲಿರುವ ಮಾತು. ಇದೇ ಕಾರಣಕ್ಕೆ ಲೋಕೋಪಯೋಗಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಸ್ತೆ ಕಾಮಗಾರಿಗಳನ್ನು ನಿರ್ವಹಿಸುವ ಹುದ್ದೆಗಳಿಗೆ ಹೆಚ್ಚಿನ ‘ಬೇಡಿಕೆ’ ಇರುವುದು ರಹಸ್ಯವೇನಲ್ಲ.ರಸ್ತೆಗಳ ಗುಂಡಿ ಮುಚ್ಚಲು ಗಡುವು ನೀಡಿರುವುದೇನೋ ಸರಿ. ಇದರ ಜತೆಗೆ ಇನ್ನು ಮುಂದಾದರೂ ಹೆಚ್ಚು ಬಾಳಿಕೆ ಬರುವ ರಸ್ತೆಗಳನ್ನು ನಿರ್ಮಿಸುವತ್ತ ಆಳುವವರು ಯೋಚಿಸಬೇಕು. ಭ್ರಷ್ಟಾಚಾರದ ಕೊಂಡಿಗಳನ್ನು ಕಿತ್ತುಹಾಕಿದರೆ ಈ ಹಾದಿಯ ಮೊದಲ ಸವಾಲು ಬಹುಮಟ್ಟಿಗೆ ನಿವಾರಣೆಯಾಗುತ್ತದೆ. ರಸ್ತೆ ನಿರ್ಮಾಣ ಕಾಮಗಾರಿಗಳ ಗುಣಮಟ್ಟ ಕಳಪೆ ಎಂಬುದು ಸಂಬಂಧಪಟ್ಟ ಸಚಿವರಿಗೆ, ಹಿರಿಯ ಅಧಿಕಾರಿಗಳಿಗೆ ಗೊತ್ತಿಲ್ಲದ ಸಂಗತಿಯಲ್ಲ. ಮಳೆ ಬಿದ್ದಾಗ ನೀರು ಸರಾಗವಾಗಿ ಹರಿದು ಚರಂಡಿ ಸೇರುವಂತೆ, ರಸ್ತೆಯಲ್ಲಿ ನೀರು ನಿಲ್ಲದಂತೆ ಕಾಮಗಾರಿ ನಿರ್ವಹಿಸಿದರೆ ಗುಂಡಿಗಳು ಬೀಳುವುದು ತಪ್ಪುತ್ತದೆ. ರಸ್ತೆ ನಿರ್ಮಾಣ ಮಾಡುವಾಗ ದೀರ್ಘ ಬಾಳಿಕೆ, ಗುಂಡಿ ಬೀಳದಂತೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಇಂಡಿಯನ್ ರೋಡ್ ಕಾಂಗ್ರೆಸ್‌ (ಐಆರ್‌ಸಿ) ತನ್ನದೇ ನಿಯಮಗಳನ್ನು ರೂಪಿಸಿದೆ.

ಪ್ರತಿವರ್ಷ ನಡೆಯುವ ಐಆರ್‌ಸಿ ಸಮ್ಮೇಳನದಲ್ಲಿ ಈ ಬಗ್ಗೆ ಬಹಳಷ್ಟು ಚರ್ಚೆ ನಡೆಯುತ್ತದೆ. ಐಆರ್‌ಸಿ ಸಮ್ಮೇಳನದಲ್ಲಿ ಚರ್ಚೆ ನಡೆಸುವ ಎಂಜಿನಿಯರ್‌ಗಳು ಅದನ್ನು ಅನುಷ್ಠಾನ ಮಾಡುವತ್ತ ಆಸ್ಥೆ ವಹಿಸದಿರುವುದು ವಿಪರ್ಯಾಸ. ಮಳೆನೀರು ಹರಿದುಹೋಗುವ ಚರಂಡಿಯ ಹೂಳು ತೆಗೆಯದೇ ಇರುವುದರಿಂದ ನೀರು ರಸ್ತೆಗಳ ಮೇಲೆ ಹರಿಯುತ್ತದೆ ಮತ್ತು ನಿಲ್ಲುತ್ತದೆ. ಇದನ್ನು ತಪ್ಪಿಸಬೇಕು.ಡಾಂಬರು ಕಿತ್ತುಹೋದ ಕೂಡಲೇ ಅದರ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಇಲ್ಲದೇ ಇದ್ದರೆ ಸಣ್ಣ ಗುಂಡಿ, ದೊಡ್ಡದಾಗುತ್ತಾ ಹೋಗುತ್ತದೆ. ಗುಂಡಿಗಳ ಸಂಖ್ಯೆ ಹೆಚ್ಚಿದರೆ ಹೆಚ್ಚಿನ ಹಣ ಸಿಗುತ್ತದೆ ಎಂಬ ಎಂಜಿನಿಯರ್‌ಗಳ ಕಮಿಷನ್‌ ಲೆಕ್ಕಾಚಾರವು ವಿಳಂಬ ಮತ್ತು ಉದಾಸೀನಕ್ಕೆ ದಾರಿಮಾಡಿಕೊಟ್ಟಿದೆ ಎಂಬ ಆರೋಪದಲ್ಲಿ ಹುರುಳಿಲ್ಲದೇ ಇಲ್ಲ. ಬೆಂಗಳೂರಿನ ಮೂರು ವಿಧಾನಸಭಾ ಕ್ಷೇತ್ರಗಳ ಅಕ್ರಮ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಿದ ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನದಾಸ್‌ ನೇತೃತ್ವದ ಸಮಿತಿಯು, ಗುಂಡಿ ಮುಚ್ಚಲು ಮಾಡಿದ ದುಂದುವೆಚ್ಚ ಹಾಗೂ ನಿಯಮಬಾಹಿರ ನಡವಳಿಕೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ರುವುದನ್ನು ಸಚಿವರು ಗಮನಿಸಬೇಕು.

ಬೆಂಗಳೂರು ನಗರ ಮಾತ್ರವಲ್ಲದೆ, ರಾಜ್ಯದ ಎಲ್ಲ ಮಾದರಿಯ ರಸ್ತೆಗಳಲ್ಲೂ ಹಲವಾರು ಕಡೆ ಗುಂಡಿ ಮಧ್ಯೆ ರಸ್ತೆಯನ್ನು ಹುಡುಕಿಕೊಂಡು ವಾಹನ ಚಲಾಯಿಸಬೇಕಾದ ದುಃಸ್ಥಿತಿ ಇದೆ. ಗುಂಡಿ ಮುಚ್ಚಲು ದುಡ್ಡಿನ ಕೊರತೆಯೇನಿಲ್ಲ. 2019ರಲ್ಲಿ ಮೋಟಾರು ವಾಹನ ತೆರಿಗೆ ರೂಪದಲ್ಲಿ ₹6,652 ಕೋಟಿ ಸಂಗ್ರಹದ ಗುರಿ ಇಟ್ಟುಕೊಳ್ಳಲಾಗಿದೆ. ತೆರಿಗೆ ಕಟ್ಟುವವರು ಸುರಕ್ಷಿತ ರಸ್ತೆ ಬಯಸುವುದು ಪ್ರಜಾತಂತ್ರದ ಹಕ್ಕು. ಅದನ್ನು ಪೂರೈಸುವುದು ಚುನಾಯಿತ ಸರ್ಕಾರದ ಕರ್ತವ್ಯ. ದಶಕದ ಹಿಂದೆ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಗುಣ ನಿಯಂತ್ರಣ ಕಾರ್ಯಪಡೆ ರಚಿಸಿ, ಕಾಮಗಾರಿಗಳ ಮೇಲುಸ್ತುವಾರಿಯನ್ನು ಅದಕ್ಕೆ ವಹಿಸಲಾಗಿತ್ತು. ಅದು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಲಿಲ್ಲ ಎಂದು, ನಂತರ ಚುಕ್ಕಾಣಿ ಹಿಡಿದ ಕಾಂಗ್ರೆಸ್ ನೇತೃತ್ವದ ಸರ್ಕಾರ ಅದನ್ನು ರದ್ದು ಮಾಡಿತು. ಈಗ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಗುಣ ಭರವಸೆ ವಿಭಾಗ ಇದೆ. ರಾಜ್ಯ ಮಟ್ಟದಲ್ಲಿ ಒಬ್ಬ ಮುಖ್ಯ ಎಂಜಿನಿಯರ್‌, ಕಂದಾಯ ವಿಭಾಗ ಮಟ್ಟಕ್ಕೆ ಒಬ್ಬ ಸೂಪರಿಂಟೆಂಡೆಂಟ್‌ ಎಂಜಿನಿಯರ್ ಸೇರಿದಂತೆ ನೂರಕ್ಕೂ ಹೆಚ್ಚು ಅಧಿಕಾರಿಗಳು ಈ ವಿಭಾಗದಲ್ಲಿದ್ದಾರೆ. ಆದರೆ ಈ ವಿಭಾಗವು ಇದ್ದೂ ಇಲ್ಲದಂತಹ ಸ್ಥಿತಿಯಲ್ಲಿ ಇದೆ.

ಉತ್ತಮ ರಸ್ತೆಗಳು ಇರಬೇಕು ಎಂಬ ಕಾಳಜಿಯಿದ್ದರೆ ಕಾಮಗಾರಿಯ ಗುಣಮಟ್ಟದ ಬಗ್ಗೆ ನಿರಂತರ ನಿಗಾ ವಹಿಸುವ ಪರಿಣಾಮಕಾರಿಯಾದ ಸಾಂಸ್ಥಿಕ ವ್ಯವಸ್ಥೆಯೊಂದನ್ನು ಅಸ್ತಿತ್ವಕ್ಕೆ ತಂದು, ಲಂಚಗುಳಿತನವಿಲ್ಲದ ಅಧಿಕಾರಿಗಳನ್ನು ಗುಣಮಟ್ಟ ಖಾತರಿ ಕೆಲಸಕ್ಕೆ ನಿಯೋಜಿಸಿದರೆ ಗುಂಡಿರಹಿತ ರಸ್ತೆ ವಾಸ್ತವವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT