ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಚೀನಾ ಗಡಿಯಲ್ಲಿ ಹಿಂಸೆಗೆ ತಡೆ ಎರಡೂ ದೇಶಗಳ ಹೊಣೆಗಾರಿಕೆ

Last Updated 18 ಜೂನ್ 2020, 12:49 IST
ಅಕ್ಷರ ಗಾತ್ರ

ಭಾರತ ಮತ್ತು ಚೀನಾ ನಡುವಣ ವಾಸ್ತವ ನಿಯಂತ್ರಣ ರೇಖೆಯಲ್ಲಿ ) ಕೆಲ ವಾರಗಳಿಂದ ಸೃಷ್ಟಿಯಾಗಿರುವ ಉದ್ವಿಗ್ನ ಸ್ಥಿತಿಯು ಸೋಮವಾರ ರಾತ್ರಿ ಅನಪೇ‌ಕ್ಷಿತ ತಿರುವು ಪಡೆದುಕೊಂಡಿದೆ. ಗಾಲ್ವನ್‌ ಕಣಿವೆಯಲ್ಲಿ ಎರಡೂ ದೇಶಗಳ ಸೈನಿಕರು ಕೈ ಕೈ ಮಿಲಾಯಿಸಿಕೊಂಡು ಭಾರತದ 20 ಯೋಧರು ಹುತಾತ್ಮರಾಗಿ, ಹಲವರು ಗಾಯಗೊಂಡಿರುವುದು ದುರದೃಷ್ಟಕರ. ಚೀನಾದ ಭಾಗದಲ್ಲಿ ಇನ್ನೂ ಹೆಚ್ಚಿನ ಜೀವಹಾನಿ ಆಗಿದೆ ಎಂದು ಹೇಳಲಾಗುತ್ತಿದೆ. ಆ ದೇಶ, ಸಾವು– ನೋವಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಎರಡೂ ದೇಶಗಳ ನಡುವೆ ಗಡಿ ತಕರಾರು 1947ರಿಂದಲೂ ಇದೆ.

ಗಡಿಯಲ್ಲಿ ಭಾರತ–ಚೀನಾ ಸೈನಿಕರ ನಡುವೆ ಮುಖಾಮುಖಿ ಹೊಸದೇನಲ್ಲ. 1996ರಲ್ಲಿ ಆಗಿರುವ ದ್ವಿಪಕ್ಷೀಯ ಒಪ್ಪಂದದ ಪ್ರಕಾರ, ಇಲ್ಲಿ ಪರಸ್ಪರರು ಗುಂಡು, ಸ್ಫೋಟಕಗಳನ್ನು ಬಳಸುವಂತಿಲ್ಲ. ಹಾಗಾಗಿ,ತಳ್ಳಾಟ, ದೊಣ್ಣೆ ಏಟಿಗೆ ಈ ಮುಖಾಮುಖಿ ಸೀಮಿತ. ಈ ಬಾರಿ, ಕಬ್ಬಿಣದ ಸರಳುಗಳು, ಮುಳ್ಳುತಂತಿ ಮತ್ತು ಮೊಳೆ ಹೊಡೆದ ಬಿದಿರಿನ ಗಳಗಳನ್ನು ಹಿಡಿದು ಸೈನಿಕರು ಬಡಿದಾಡಿದ್ದಾರೆ. ಮಧ್ಯಯುಗೀನ ಕಾಲದ ಹತಾರಗಳನ್ನು ಬಳಸಿ, ಹೊಡೆದು ಕೊಲ್ಲುವುದು ಅಮಾನವೀಯ ಕ್ರೌರ್ಯ. ಗಡಿಯಲ್ಲಿ ಈ ರೀತಿಯ ಮುಖಾಮುಖಿ ಮರುಕಳಿಸದಂತೆ ಎರಡೂ ರಾಷ್ಟ್ರಗಳು ಎಚ್ಚರ ವಹಿಸುವುದು ಅಗತ್ಯ. ಚೀನಾದ ಈಗಿನ ಆಕ್ರಮಣಕಾರಿ ವರ್ತನೆಯನ್ನು ಭಾರತವು ಅತ್ಯಂತ ಎಚ್ಚರಿಕೆಯಿಂದ ವಿಶ್ಲೇಷಣೆಗೆ ಒಳಪಡಿಸಬೇಕು. ಯಾಕೆಂದರೆ, ಗಡಿ ಸಮಸ್ಯೆ ಇರುವ ಇಷ್ಟೂ ವರ್ಷಗಳಲ್ಲಿ ಗಾಲ್ವನ್‌ ಕಣಿವೆಯು ಭಾರತದ ವಶದಲ್ಲಿಯೇ ಇದೆ. ಎರಡೂ ದೇಶಗಳ ಗಡಿ ಸಮಸ್ಯೆ ಪರಿಹರಿಸುವುದಕ್ಕಾಗಿಯೇ ವಿಶೇಷ ಪ್ರತಿನಿಧಿ
ಗಳನ್ನು ನೇಮಿಸಲಾಗಿದೆ. ಇವರ ನಡುವೆ 22 ಸಭೆಗಳು ನಡೆದಿವೆ. ಈ ಯಾವ ಸಭೆಯಲ್ಲಿಯೂ ಗಾಲ್ವನ್‌ ಕಣಿವೆಯ ವಿಚಾರ ಈವರೆಗೆ ಪ್ರಮುಖವಾಗಿ ಪ್ರಸ್ತಾಪವೇ ಆಗಿಲ್ಲ. ಗಾಲ್ವನ್‌ ಕಣಿವೆಯ ಮೇಲೆ ಚೀನಾಕ್ಕೆ ದಿಢೀರನೆ ಉಂಟಾದ ವಿಶೇಷ ಆಸಕ್ತಿಗೆ ಕಾರಣ ಏನು ಎಂಬುದನ್ನು ಭಾರತ ಅರ್ಥ ಮಾಡಿಕೊಂಡು, ಅದಕ್ಕೆ ಅನುಗುಣವಾಗಿ ಮುಂದಿನ ನಡೆಯನ್ನು ರೂಪಿಸಬೇಕಿದೆ.

ಎಲ್‌ಎಸಿಯ ಸಮೀಪದಲ್ಲಿ ಭಾರತವು ಕೈಗೆತ್ತಿಕೊಂಡ ರಸ್ತೆ, ಸೇತುವೆ ಮತ್ತು ಇತರ ಮೂಲ ಸೌಕರ್ಯ ಯೋಜನೆಗಳೇ ಚೀನಾದ ಈಗಿನ
ಆಕ್ರಮಣಶೀಲತೆಗೆ ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ಇವು ಅಷ್ಟೇ ಕಾರಣ ಎಂದು ಹೇಳಲಾಗದು. ಯಾಕೆಂದರೆ, ಭಾರತದ ಭಾಗದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿವೆ. ಭಾರತವು ಇತ್ತೀಚಿನ ವರ್ಷಗಳಲ್ಲಿ ಅಮೆರಿಕಕ್ಕೆ ಹೆಚ್ಚು ಹತ್ತಿರವಾಗುತ್ತಿರುವುದು ಚೀನಾದ ಆಕ್ರೋಶಕ್ಕೆ ಕಾರಣವಾಗಿದೆ ಎಂಬುದಕ್ಕೆ ಪುರಾವೆಗಳಿವೆ. ಚೀನಾ ಸರ್ಕಾರದ ಮುಖವಾಣಿ ಎಂದೇ ಪರಿಗಣಿಸಬಹುದಾದ ‘ಗ್ಲೋಬಲ್‌ ಟೈಮ್ಸ್‌’ ಪತ್ರಿಕೆಯಲ್ಲಿ ಬಂದ ವರದಿಯೊಂದರಲ್ಲಿ ಭಾರತಕ್ಕೆ ಕೆಲವು ‘ಹಿತವಚನ’ ಹೇಳಲಾಗಿತ್ತು. ಚೀನಾ–ಅಮೆರಿಕ ನಡುವಣ ತಿಕ್ಕಾಟದಲ್ಲಿ ಭಾರತವು ನಡುವೆ ಬರಬಾರದು ಎಂಬುದು ಆ ವರದಿಯಲ್ಲಿದ್ದ ಒಂದು ಸಲಹೆಯಾಗಿತ್ತು. ಚೀನಾವು ಈಗ ತನ್ನನ್ನು ಅಮೆರಿಕದ ಜತೆ ಸಮೀಕರಿಸಿ
ಕೊಳ್ಳುತ್ತಿದೆ.

ಅಮೆರಿಕಕ್ಕೆ ಪ್ರತಿಯಾಗಿ ತಾನೊಂದು ‘ಶಕ್ತಿಕೇಂದ್ರ’ ಎಂದು ಬಿಂಬಿಸಲು ಯತ್ನಿಸುತ್ತಿದೆ. ಮುಂದಿನ ಶೀತಲ ಸಮರವು ಅಮೆರಿಕ–ಚೀನಾ ನಡುವೆ ಎಂದು ಪ್ರಚುರಪಡಿಸುವ ಯತ್ನ ನಡೆಯುತ್ತಿದೆ. ಗಡಿಯ ವಿಚಾರದಲ್ಲಿ ಭಾರತವು ಗಟ್ಟಿ ನಿಲುವು ತಳೆದಿರುವುದರ ಹಿಂದೆ ಅಮೆರಿಕದ ಒತ್ತಾಸೆ ಇದೆ ಎಂದು ಚೀನಾ ಭಾವಿಸಿದಂತಿದೆ. ಚೀನಾವನ್ನು ಕಟ್ಟಿಹಾಕಲು ಭಾರತವನ್ನು ಬಳಸಿಕೊಳ್ಳುವುದು ಅಮೆರಿಕಕ್ಕೂ ಅನಿವಾರ್ಯ ಎಂಬ ಸ್ಥಿತಿ ಇದೆ. ಹಾಗಾಗಿ, ಈ ಎರಡೂ ದೇಶಗಳ ಬಲೆಗೆ ಭಾರತವು ಬೀಳಬಾರದು. ಮೂರನೆಯ ದೇಶವೊಂದು ಭಾರತದ ವಿದೇಶಾಂಗ ನೀತಿಯ ಮೇಲೆ ಪ್ರಭಾವ ಬೀರಲು ಅವಕಾಶ ನೀಡಬಾರದು.

ಸುತ್ತಲಿನ ಪರಿಸ್ಥಿತಿ ಕೂಡ ಭಾರತಕ್ಕೆ ಈಗ ಅಷ್ಟೊಂದು ಪೂರಕವಾಗಿಲ್ಲ. ಪಾಕಿಸ್ತಾನವು ಈಗಲೂ ಪ್ರತಿಕೂಲವಾಗಿಯೇ ಇದೆ. ನೇಪಾಳವು ಗಡಿ ವಿವಾದವನ್ನು ಕೆದಕಿ, ಅದನ್ನು ಬೆಳೆಸಲು ಸಜ್ಜಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ ವಿಚಾರದಲ್ಲಿ ಬಾಂಗ್ಲಾದೇಶ ಸ್ವಲ್ಪ ಮುನಿಸಿಕೊಂಡಂತಿದೆ. ದ್ವೀಪರಾಷ್ಟ್ರ ಶ್ರೀಲಂಕಾದ ನಾಯಕತ್ವಕ್ಕೆ ಚೀನಾದತ್ತ ವಾಲುವ ಒಲವೇ ಹೆಚ್ಚು. ಭಾರತವು ಯುದ್ಧದಾಹಿ ರಾಷ್ಟ್ರವಲ್ಲ; ಹಾಗೆಂದು ತನ್ನ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳಲಾಗದಷ್ಟು ದುರ್ಬಲವೂ ಅಲ್ಲ. ಈಗಿನಸನ್ನಿವೇಶದಲ್ಲಿ ಹೆಚ್ಚು ಎಚ್ಚರಿಕೆಯ ನಡೆ ಭಾರತದ ಪಾಲಿಗೆ ಅನಿವಾರ್ಯ. ಚೀನಾ–ಅಮೆರಿಕ ಮೇಲಾಟದಲ್ಲಿ ಭಾರತ ದಾಳವಾಗಬಾರದು; ಹಾಗೆಯೇ, ಏಷ್ಯಾದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ತನ್ನ ಪ್ರತಿಷ್ಠೆಗೆ ಧಕ್ಕೆಯಾಗದ ರೀತಿಯ ಸ್ವತಂತ್ರವಾದ ವಿದೇಶಾಂಗ ನೀತಿಯನ್ನು ಅನುಸರಿಸಬೇಕು. ಗಡಿಯಲ್ಲಿ ನೆತ್ತರು ಹರಿಯುವುದನ್ನು ತಡೆಯುವ ಕೆಲಸವು ತಕ್ಷಣಕ್ಕೆ ಆಗಬೇಕು. ಈ ಜರೂರು ಕೆಲಸವು ಎರಡೂ ದೇಶಗಳ ಹೊಣೆಗಾರಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT