ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಕೇರಳ ದೋಣಿ ದುರಂತ ಸುರಕ್ಷತೆಗೆ ಎಚ್ಚರಿಕೆಯ ಸಂದೇಶ

Published 10 ಮೇ 2023, 19:35 IST
Last Updated 10 ಮೇ 2023, 19:35 IST
ಅಕ್ಷರ ಗಾತ್ರ

ಕೇರಳದ ತೂವಲ್‌ತೀರದಲ್ಲಿ ನಡೆದ ದೋಣಿ ದುರಂತವು 22 ಜನರನ್ನು ಬಲಿ ಪಡೆದಿರುವುದಕ್ಕೆ ದೋಣಿಯನ್ನು ನಿರ್ವಹಿಸುತ್ತಿದ್ದವರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ.

ಈ ದುರಂತದಲ್ಲಿ ಮೃತಪಟ್ಟವರಲ್ಲಿ 15 ಮಕ್ಕಳೂ ಸೇರಿದ್ದಾರೆ. ಸಂಜೆಯ ಹೊತ್ತಿನಲ್ಲಿ ವಿಹಾರ ಕೈಗೊಳ್ಳುವ ಉದ್ದೇಶದಿಂದ ಹಲವರು ತಮ್ಮ ಮಕ್ಕಳ ಜೊತೆ ದೋಣಿಯನ್ನು ಏರಿದ್ದರು. ದುರಂತಕ್ಕೆ ತುತ್ತಾದ ದೋಣಿ, ಅದನ್ನು ನಿರ್ವಹಿಸುತ್ತಿದ್ದವರು ಹಾಗೂ ಅದು ಹೊರಟಿದ್ದ ಹಾದಿ... ಇವ್ಯಾವುವೂ ಸರಿಯಿರಲಿಲ್ಲ. ಆ ದೋಣಿಯು ಮೀನುಗಾರಿಕೆಗೆ ಬಳಸುವಂತಹದ್ದಾಗಿತ್ತು. ಅದರಲ್ಲಿ ಒಂದಿಷ್ಟು ಬದಲಾವಣೆಗಳನ್ನು ತಂದು, ಅದನ್ನು ಪ್ರವಾಸಿಗರ ಸುತ್ತಾಟಕ್ಕೆ ಬಳಸಿಕೊಳ್ಳಲಾಗಿತ್ತು. ಆದರೆ ಅಗತ್ಯವಿರುವ ಮೂಲ ಸೌಕರ್ಯಗಳು ಅದರಲ್ಲಿ ಇರಲಿಲ್ಲ. ಬಂದರು ಪ್ರಾಧಿಕಾರದಲ್ಲಿ ಈ ದೋಣಿಯು ನೋಂದಣಿ ಆಗಿರಲಿಲ್ಲ. ವಾಸ್ತವದಲ್ಲಿ ಈ ನೋಂದಣಿ ಕಡ್ಡಾಯ. ದೋಣಿಯು ಸುಸ್ಥಿತಿಯಲ್ಲಿ ಇದೆಯೇ ಎಂಬ ಪರೀಕ್ಷೆ ನಡೆದಿರಲಿಲ್ಲ. ಈ ದೋಣಿ ಹಾಗೂ ಅದನ್ನು ಬಳಸಿ ನಡೆಸುತ್ತಿದ್ದ ವಿಹಾರದ ಬಗ್ಗೆ ಸ್ಥಳೀಯರು ದೂರಿದ್ದರು. ಆದರೆ ಈ ದೂರುಗಳಿಗೆ ಅಧಿಕಾರಿಗಳು ಕಿವಿಗೊಟ್ಟಿರಲಿಲ್ಲ. ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ಅದು ತುಂಬಿಸಿಕೊಂಡಿತ್ತು. ಸಂಜೆಯ ನಂತರ ಕಾರ್ಯಾಚರಿಸಲು ಬೇಕಿರುವ ಸೌಲಭ್ಯಗಳನ್ನು ಕೂಡ ಅದು ಹೊಂದಿರಲಿಲ್ಲ. ದೋಣಿಯ ಚಾಲಕನ ಬಗ್ಗೆ ಒಳ್ಳೆಯ ಅಭಿಪ್ರಾಯ ಇರಲಿಲ್ಲ ಎಂಬ ವರದಿಗಳು ಇವೆ. ಅಂದರೆ, ಈ ದೋಣಿಯ ವಿಚಾರದಲ್ಲಿ ಎಲ್ಲ ಬಗೆಯ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಲಾಗಿತ್ತು.

ದುರಂತದ ಬಗ್ಗೆ ನ್ಯಾಯಾಂಗ ತನಿಖೆಗೆ ಕೇರಳ ಸರ್ಕಾರ ಆದೇಶಿಸಿದೆ. ದುರಂತದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಪರಿಹಾರವನ್ನು ಕೂಡ ಘೋಷಿಸಿದೆ. ಆದರೆ, ಪೊಲೀಸ್ ತನಿಖೆಗಿಂತ ಹೆಚ್ಚಿನ ವಿಚಾರಗಳೇನೂ ನ್ಯಾಯಾಂಗ ತನಿಖೆಯ ಮೂಲಕ ಹೊರಬರಲಿಕ್ಕಿಲ್ಲ. ಕೇರಳದಲ್ಲಿ ಈ ಹಿಂದೆಯೂ ದೋಣಿ ದುರಂತಗಳು ನಡೆದಿವೆ, ಜನ ಪ್ರಾಣ ಕಳೆದುಕೊಂಡಿದ್ದಾರೆ. 2009ರಲ್ಲಿ ನಡೆದ ತೇಕಡಿ ದೋಣಿ ದುರಂತದಲ್ಲಿ 45 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡರು. ದೋಣಿ ದುರಂತ ನಡೆದಾಗಲೆಲ್ಲ ನ್ಯಾಯಾಂಗ ತನಿಖೆಗೆ ಆದೇಶಿಸಲಾಗುತ್ತದೆ. ತನಿಖೆ ನಂತರ ಒಂದಿಷ್ಟು ಶಿಫಾರಸುಗಳನ್ನು ಮಾಡಲಾಗುತ್ತದೆ. ತೇಕಡಿ ದುರಂತ ಸಂಭವಿಸಿದ ಹತ್ತು ವರ್ಷಗಳ ನಂತರ ದೋಷಾರೋಪ ಪಟ್ಟಿ ಸಲ್ಲಿಸಲಾಯಿತು. ಅದರ ವಿಚಾರಣೆಯು ಇನ್ನಷ್ಟೇ ಆರಂಭವಾಗಬೇಕಿದೆ. ಶಿಫಾರಸೊಂದನ್ನು ಆಧರಿಸಿ, ಬೇರೆ ಬೇರೆ ಪ್ರಾಧಿಕಾರಗಳನ್ನು ವಿಲೀನ ಮಾಡಿ, ಕೇರಳದಲ್ಲಿ ಪ್ರತ್ಯೇಕ ಮಂಡಳಿಯೊಂದನ್ನು ರಚಿಸಲಾಯಿತು. ದೋಣಿಗಳಲ್ಲಿ ಸುರಕ್ಷತೆಯನ್ನು ಖಾತರಿಪಡಿಸುವ ಹೊಣೆಯು ಈ ಮಂಡಳಿಯ ಮೇಲಿದೆ. ಆದರೆ ಈಗ ನಡೆದಿರುವ ದುರಂತವು ಹೇಳುತ್ತಿರುವ ಲೋಪಗಳನ್ನು ಗಮನಿಸಿದರೆ, ಈ ಮಂಡಳಿಯು ಅದೆಷ್ಟರಮಟ್ಟಿಗೆ ದಕ್ಷವಾಗಿದೆ ಎಂಬುದು ಗೊತ್ತಾಗುತ್ತಿದೆ. ಈ ಮಂಡಳಿಯಲ್ಲಿ ಅಗತ್ಯ ಜನಸಂಪನ್ಮೂಲ ಇಲ್ಲ, ತಾನು ರೂಪಿಸುವ ನಿಯಮಗಳು ಜಾರಿಗೆ ಬರುವಂತೆ ನೋಡಿಕೊಳ್ಳಲು ಮಂಡಳಿಯ ಬಳಿ ಪ್ರತ್ಯೇಕ ವಿಭಾಗವೂ ಇಲ್ಲ.

ಕೇರಳದಲ್ಲಿ ಪ್ರವಾಸೋದ್ಯಮ ಬಹಳ ಖ್ಯಾತಿ ಪಡೆದಿದೆ. ಅದರಲ್ಲೂ ಅಲ್ಲಿನ ಹಿನ್ನೀರು ಪ್ರದೇಶಗಳಲ್ಲಿ ದೋಣಿಗಳು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಕೆಲವು ಜನಪ್ರಿಯ ತಾಣಗಳಲ್ಲಿ ದೋಣಿಗಳನ್ನು ಬಹಳ ಮುತುವರ್ಜಿಯಿಂದ ನಿರ್ವಹಿಸಲಾಗುತ್ತಿದೆ. ಆದರೆ, ಇನ್ನು ಕೆಲವು ಕಡೆಗಳಲ್ಲಿ ದೋಣಿಗಳನ್ನು ವೃತ್ತಿಪರತೆ ಇಲ್ಲದವರು ನಡೆಸುತ್ತಿದ್ದಾರೆ. ಜಲ ಪ್ರವಾಸೋದ್ಯಮದಲ್ಲಿ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳದಿರುವುದು ಕೇರಳದಲ್ಲಿ ಅವಘಡಕ್ಕೆ ಕಾರಣವಾಗಬಹುದು ಎಂದು ತಜ್ಞರೊಬ್ಬರು ಈಚೆಗೆ ಎಚ್ಚರಿಸಿದ್ದರು. ಪ್ರವಾಸೋದ್ಯಮವು ಸುರಕ್ಷಿತವಾಗಿರಬೇಕು ಎಂದಾದರೆ ಕಟ್ಟುನಿಟ್ಟಿನ ಕ್ರಮಗಳ್ನು ಜಾರಿಗೆ ತರಬೇಕು ಎಂಬ ಪಾಠವನ್ನು ಈ ದುರಂತವು ಹೇಳುತ್ತಿದೆ. ಜಲ ಪ್ರವಾಸೋದ್ಯಮಕ್ಕೆ ದೊಡ್ಡ ಸವಾಲು ಒಡ್ಡುವ ಮುಂಗಾರು ಮಳೆ ಆರಂಭವಾಗುವುದಕ್ಕೆ ಇನ್ನು ಕೆಲವೇ ವಾರಗಳು ಮಾತ್ರ ಬಾಕಿ ಇವೆ. ಇಂತಹ ಸಂದರ್ಭದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಬಹಳ ಮಹತ್ವದ್ದಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT