ವಿಧಾನಪರಿಷತ್ ಸದಸ್ಯ, ಬಿಜೆಪಿಯ ಎನ್. ರವಿಕುಮಾರ್ ಅವರು ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ‘ಪಾಕಿಸ್ತಾನದವರೋ ಅಥವಾ ಭಾರತದವರೋ ಎಂಬುದು ಖಚಿತವಾಗಿಲ್ಲ’ ಎಂದು ಹೇಳಿರುವುದು ಖಂಡನೆಗೆ ಅರ್ಹ. ಈ ಮಾತು ಅಪಮಾನಕಾರಿ ಮಾತ್ರವೇ ಅಲ್ಲ ಅಪಾಯಕಾರಿಯೂ ಹೌದು. ಬಿಜೆಪಿಯ ನಾಯಕರು ಮುಸ್ಲಿಮರನ್ನು ಗುರಿಯಾಗಿಸಿಕೊಂಡು, ಅವರಿಗೆ ದೇಶದ ಬಗ್ಗೆ ‘ನಿಷ್ಠೆ ಇಲ್ಲ’ ಎಂಬ ಅನುಮಾನ ಇತರರಲ್ಲಿ ಮೂಡಬೇಕು ಎಂಬ ಉದ್ದೇಶದಿಂದ ಇಂತಹ ಮಾತಿನ ದಾಳಿಗಳನ್ನು ಮಾಡುತ್ತಿದ್ದಾರೆ. ಅದರ ಭಾಗ ರವಿಕುಮಾರ್ ಆಡಿರುವ ಮಾತುಗಳು. ಇಂತಹ ಮಾತುಗಳು ಮುಸ್ಲಿಮರನ್ನು ಸಮಾಜದ ಮುಖ್ಯವಾಹಿನಿಯಿಂದ ದೂರ ಸರಿಸುವುದಕ್ಕೆ ಇಂಬು ಕೊಡುವಂಥವು.

ಬಿಜೆಪಿಯಿಂದ ಉಚ್ಚಾಟಿತರಾಗಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಮನೆಯಲ್ಲೇ ‘ಅರ್ಧ ಪಾಕಿಸ್ತಾನ ಇದೆ’ ಎಂದು ಹಿಂದೊಮ್ಮೆ ನಿಂದಿಸಿದ್ದರು. ದಿನೇಶ್ ಅವರು ಮುಸ್ಲಿಂ ಮಹಿಳೆಯನ್ನು ಮದುವೆಯಾಗಿರುವ ಕಾರಣಕ್ಕೆ ಯತ್ನಾಳ ಈ ಬಗೆಯಲ್ಲಿ ಮಾತನಾಡಿದ್ದರು. ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರು, ‘ಪಾಕಿಸ್ತಾನದಲ್ಲಿ ಇರುವ ಸಮುದಾಯದವರ ಸಹೋದರಿ’ ಎಂದು ಕರೆದಿದ್ದರು. ಇಂತಹ ಮಾತುಗಳು ಮುಸ್ಲಿಮರ ತ್ಯಾಗ, ಸೇವೆ, ಸಾಂವಿಧಾನಿಕವಾಗಿ ಅವರು ಹೊಂದಿರುವ ಸ್ಥಾನ ಏನೇ ಇದ್ದರೂ ಅವರನ್ನು ಅನುಮಾನಕ್ಕೆ ಗುರಿಮಾಡುವ ಉದ್ದೇಶದ ಪ್ರಯತ್ನದ ಭಾಗ.

ಐಎಎಸ್ ಅಧಿಕಾರಿಯಾಗಿರುವ ಫೌಜಿಯಾ ಅವರ ನಿಷ್ಠೆಯನ್ನು ಅವರ ಧರ್ಮದ ಕಾರಣಕ್ಕೆ ಪ್ರಶ್ನಿಸುವುದು ವೈಯಕ್ತಿಕ ಮಟ್ಟದ ನಿಂದೆಯಷ್ಟೇ ಅಲ್ಲ, ಅದು ನಾಗರಿಕ ಸೇವೆಗಳಿಗೆ ಹಾಗೂ ದೇಶದ ಅಧಿಕಾರಿಶಾಹಿಯ ಧರ್ಮನಿರಪೇಕ್ಷ ನೆಲಗಟ್ಟಿಗೆ ಮಾಡುವ ಅವಮಾನವೂ ಹೌದು. ರವಿಕುಮಾರ್ ಆಡಿರುವ ಮಾತುಗಳನ್ನು ಐಎಎಸ್ ಅಧಿಕಾರಿಗಳ ಸಂಘವು ಖಂಡಿಸಿರುವುದು ಸರಿಯಾಗಿಯೇ ಇದೆ. ಆದರೆ ಇಂತಹ ಮಾತುಗಳಿಗೆ ಈ ಬಗೆಯ ಖಂಡನೆ ಮಾತ್ರವೇ ಸಾಕಾಗುವುದಿಲ್ಲ. ಇಂತಹ ಮಾತು ಆಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ಸಾರ್ವಜನಿಕ ಸೇವೆಯಲ್ಲಿ ಇರುವವರನ್ನು ಅವರ ಧರ್ಮದ ಕಾರಣಕ್ಕೆ ನಿಂದಿಸಿದಾಗ, ಸರ್ಕಾರದ ಕರ್ತವ್ಯದಲ್ಲಿ ಇರುವ ಅಲ್ಪಸಂಖ್ಯಾತ ಸಮುದಾಯದವರಲ್ಲಿ ಭೀತಿ ಮೂಡಿಸುವ ಸಂದೇಶವೊಂದು ರವಾನೆಯಾಗುತ್ತದೆ. ಅಂದರೆ, ಯಾವುದೇ ಹುದ್ದೆಯಲ್ಲಿ, ಎಷ್ಟೇ ದೊಡ್ಡ ಸ್ಥಾನದಲ್ಲಿ ಇದ್ದರೂ ಪೂರ್ವಗ್ರಹಪೀಡಿತ ವಾಗ್ದಾಳಿಗಳಿಂದ ತಮಗೆ ರಕ್ಷಣೆ ಇಲ್ಲ ಎಂಬ ಸಂದೇಶವು ಅವರಿಗೆ ರವಾನೆಯಾಗುತ್ತದೆ. ರವಿಕುಮಾರ್, ವಿಜಯ್ ಶಾ ಅವರಂತಹ ಮುಖಂಡರ ವಿರುದ್ಧ ಕ್ರಮ ಜರುಗಿಸಲು ಬಿಜೆಪಿಯು ಹಿಂದೇಟು ಹಾಕುತ್ತಿರುವುದು, ಅಂತಹ ಮಾತುಗಳನ್ನು ಪಕ್ಷವು ಒಪ್ಪುತ್ತದೆ ಎಂಬ ಪರೋಕ್ಷ ಸಂದೇಶವನ್ನು ನೀಡುತ್ತಿದೆ. ‘ನಾನು ಬಾಯಿತಪ್ಪಿ ಹಾಗೆ ಮಾತನಾಡಿದೆ’ ಎಂಬ ಕಾರಣ ನೀಡಿ ಮುಖಂಡರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾದರೆ, ಅಂತಹ ಮಾತುಗಳನ್ನು ಮತ್ತೆ ಆಡಲು ಇತರರಿಗೆ ಧೈರ್ಯ ಬರುತ್ತದೆ. ದ್ವೇಷದ ನೆಲೆಯಲ್ಲಿ ಮಾತನಾಡುವವರ ವಿರುದ್ಧ ಬಿಜೆಪಿಯು ಕ್ರಮ ಜರುಗಿಸಬೇಕು, ಅದಾಗದಿದ್ದರೆ ಈ ಬಗೆಯಲ್ಲಿ ವಿಷ ಉಗುಳುವುದು ತನ್ನ ರಾಜಕೀಯದ ಒಂದು ಭಾಗ ಎಂಬುದನ್ನು ಒಪ್ಪಿಕೊಳ್ಳಬೇಕು.

ಇಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ್ದೂ ಒಂದಿಷ್ಟು ತಪ್ಪುಗಳಿವೆ. ಇಂತಹ ಪ್ರಕರಣಗಳನ್ನು ಎಷ್ಟು ಗಂಭೀರವಾಗಿ ನಿರ್ವಹಿಸಬೇಕೋ ಅಷ್ಟು ಗಂಭೀರವಾಗಿ ನಿರ್ವಹಿಸುವ ಕೆಲಸ ಕಾಂಗ್ರೆಸ್ಸಿನಿಂದ ಆಗುತ್ತಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುವಂತೆ ಮಾಡುವ ಉದ್ದೇಶ ಇಲ್ಲದೆ, ಎಫ್ಐಆರ್ ಮಾತ್ರ ದಾಖಲಿಸುವುದರಿಂದ ‘ತಪ್ಪು ಮಾಡಿದರೂ ಶಿಕ್ಷೆ ಆಗದು’ ಎಂಬ ಸಂದೇಶ ಹೋಗುತ್ತದೆ. ಇದರಿಂದಾಗಿ ಕಾನೂನಿನ ಮೇಲಿನ ವಿಶ್ವಾಸಕ್ಕೆ ಚ್ಯುತಿ ಬರುತ್ತದೆ, ದ್ವೇಷದ ಮಾತುಗಳು ಇನ್ನಷ್ಟು ಹೆಚ್ಚಾಗುತ್ತವೆ.

ಭಾರತದ ಶಕ್ತಿ ಇರುವುದು ಬಹುತ್ವದಲ್ಲಿ, ಎಲ್ಲರನ್ನೂ ಒಳಗೊಳ್ಳುವ ಸಮಾಜವನ್ನು ಕಾಪಾಡುವಲ್ಲಿ. ಐಎಎಸ್ ಅಧಿಕಾರಿಯೊಬ್ಬರ ನಿಷ್ಠೆಯನ್ನು ಅವರ ಧರ್ಮದ ಕಾರಣಕ್ಕಾಗಿ ಪ್ರಶ್ನಿಸಿದಾಗ, ಸೇನೆಯ ಕರ್ನಲ್ ಒಬ್ಬರನ್ನು ಅವರ ಧರ್ಮದ ಕಾರಣಕ್ಕಾಗಿ ನಿಂದಿಸಿದಾಗ ಆಗುವ ಹಾನಿಯು ವ್ಯಕ್ತಿಗಳ ಹಂತದಲ್ಲಿ ಮಾತ್ರವೇ ಉಳಿದು
ಕೊಳ್ಳುವುದಿಲ್ಲ. ಈ ರೀತಿಯ ಪ್ರಕರಣಗಳು ಭಾರತದ ಹೃದಯಕ್ಕೆ ಗಾಯ ಉಂಟುಮಾಡುತ್ತವೆ. ರಾಜಕೀಯ ಮುಖಂಡರು, ಸಮಾಜ ಮತ್ತು ನ್ಯಾಯಾಂಗವು ಇಂತಹ ವಿಭಜನಕಾರಿ ವರ್ತನೆಗಳ ವಿರುದ್ಧ ಕಠಿಣವಾದ ಕ್ರಮವನ್ನು ತೆಗೆದುಕೊಳ್ಳದೇ ಇದ್ದರೆ, ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಬುನಾದಿಗೆ ಪೆಟ್ಟು ಬೀಳುತ್ತದೆ. ಇಂತಹ ಕೋಮುವಾದಿ ಕೃತ್ಯಗಳ ಬಗ್ಗೆ ಗಂಭೀರವಾಗಿ ಗಮನ ಹರಿಸಲು, ಇಂತಹ ಕೃತ್ಯಗಳಿಗೆ ಇಂಬು ಕೊಡುವ ಮೌನವನ್ನು ಕೊನೆಗೊಳಿಸಲು ಇದು ಸಕಾಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.