ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಲ್ಯಾಟರಲ್ ಎಂಟ್ರಿ ರದ್ದು: ಕೇಂದ್ರದ ತೀರ್ಮಾನ ಸ್ವಾಗತಾರ್ಹ

Published : 25 ಆಗಸ್ಟ್ 2024, 23:30 IST
Last Updated : 25 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಲ್ಯಾಟರಲ್ ಎಂಟ್ರಿ ಮೂಲಕ 45 ಮಂದಿ ತಜ್ಞರನ್ನು ವಿವಿಧ ಇಲಾಖೆಗಳಿಗೆ ನೇರವಾಗಿ ನೇಮಕ ಮಾಡಿಕೊಳ್ಳುವ ಉದ್ದೇಶದಿಂದ ನೀಡಿದ್ದ ಜಾಹೀರಾತನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ. ಮಧ್ಯಮ ಶ್ರೇಣಿಯ ಅಧಿಕಾರಿಗಳನ್ನಾಗಿ ತಜ್ಞರನ್ನು ಲ್ಯಾಟರಲ್ ಎಂಟ್ರಿ ಮೂಲಕ ನೇಮಕ ಮಾಡಿಕೊಳ್ಳಲು ಮುಂದಾಗಿದ್ದ ಕೇಂದ್ರ ಸರ್ಕಾರವು ಈಗ ಹೆಜ್ಜೆ ಹಿಂದಕ್ಕೆ ಇರಿಸಿದೆ. ಆದರೆ, ಕೇಂದ್ರವು ಹೀಗೆ ಮಾಡಿದ್ದಕ್ಕೆ ಕಾರಣ, ಪ್ರಧಾನಿ ಸಚಿವಾಲಯದ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ಅವರು ಹೇಳಿರುವಂತೆ ‘ಸಾಮಾಜಿಕ ನ್ಯಾಯದ ವಿಚಾರವಾಗಿ ಸಂವಿಧಾನ ಹೇಳಿರುವುದನ್ನು’ ಎತ್ತಿಹಿಡಿಯುವ ಉದ್ದೇಶದಿಂದ ಅಲ್ಲ; ಬದಲಿಗೆ, ಸಂದರ್ಭವು ಸೃಷ್ಟಿಸಿದ ಒತ್ತಡದ ಪರಿಣಾಮವಾಗಿ ಸರ್ಕಾರ ಈ ರೀತಿ ಇಟ್ಟ ಹೆಜ್ಜೆ ಹಿಂದಕ್ಕಿರಿಸಿದೆ. ‘ಲ್ಯಾಟರಲ್ ಎಂಟ್ರಿ ಪ್ರಕ್ರಿಯೆಯು ಸಮಾನತೆಯ ತತ್ವಕ್ಕೆ ಅನುಗುಣವಾಗಿ ಇರಬೇಕು ಎಂದು ಪ್ರಧಾನಿ ಬಯಸಿದ್ದರು. ಹೀಗಾಗಿ, ಜಾಹೀರಾತು ನೀಡಿದ ಮೂರು ದಿನಗಳ ನಂತರ ಅಧಿಸೂಚನೆಯನ್ನು ರದ್ದುಪಡಿಸಲಾಯಿತು’ ಎಂದು ಸಚಿವರು ಹೇಳಿದ್ದಾರೆ. ಲ್ಯಾಟರಲ್ ಎಂಟ್ರಿ ತೀರ್ಮಾನವು ಮೀಸಲಾತಿಯ ಪ್ರಯೋಜನವನ್ನು ದುರ್ಬಲಗೊಳಿಸುವ ಉದ್ದೇಶ ಹೊಂದಿದೆ ಎಂದು ಕಾಂಗ್ರೆಸ್ ಹಾಗೂ ಇತರ ಕೆಲವು ವಿರೋಧ ಪಕ್ಷಗಳು ಟೀಕಿಸಿದ್ದವು. ಅಲ್ಲದೆ, ಎನ್‌ಡಿಎ ಮೈತ್ರಿಕೂಟದ ಕೆಲವು ಪಕ್ಷಗಳು ಕೂಡ ಈ ನಡೆಯ ಬಗ್ಗೆ ಅತೃಪ್ತಿ ದಾಖಲಿಸಿದ್ದವು. ಜಾಹೀರಾತು ನೀಡಿದ್ದನ್ನು ಸಮರ್ಥಿಸಿಕೊಂಡಿದ್ದ ಕೇಂದ್ರ ಸರ್ಕಾರವು ಟೀಕೆಗಳ ಪರಿಣಾಮವಾಗಿ ತೊಂದರೆ ಎದುರಾಗಬಹುದು ಎಂಬುದನ್ನು ಅರಿತ ನಂತರದಲ್ಲಿ ಜಾಹೀರಾತನ್ನು ರದ್ದುಪಡಿಸಿತು. ಬಿಜೆಪಿಯು ಮೀಸಲಾತಿ ನೀತಿಯನ್ನು ದುರ್ಬಲಗೊಳಿಸುವ ಉದ್ದೇಶ ಹೊಂದಿದೆ ಎಂದು ವಿರೋಧ ಪಕ್ಷಗಳು ಮಾಡಿದ್ದ ಆರೋಪದ ಪರಿಣಾಮವಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಂದಿಷ್ಟು ಹಿನ್ನಡೆ ಅನುಭವಿಸಬೇಕಾಯಿತು ಎಂದು ವಿಶ್ಲೇಷಿಸಲಾಗಿದೆ. ಲ್ಯಾಟರಲ್ ಎಂಟ್ರಿ ವಿಚಾರದಲ್ಲಿ ಈ ಪರಿಯ ವಿರೋಧ ವ್ಯಕ್ತವಾಗಬಹುದು ಎಂಬ ನಿರೀಕ್ಷೆ ಬಿಜೆಪಿಗೆ ಇದ್ದಿರಲಿಕ್ಕಿಲ್ಲ.

ಲ್ಯಾಟರಲ್ ಎಂಟ್ರಿ ವಿಚಾರವಾಗಿ ಸರ್ಕಾರ ಕೈಗೊಂಡಿದ್ದ ತೀರ್ಮಾನವು ಮೀಸಲಾತಿಯ ನಿಯಮಗಳನ್ನು ಉಲ್ಲಂಘಿಸಿತ್ತು. ಈ ವಿಚಾರವಾಗಿ ವ್ಯಕ್ತವಾಗಿದ್ದ ಕಳವಳಗಳಿಗೆ ಸಮರ್ಥನೆ ಇತ್ತು. ಈ ಹಿಂದೆ ಮನಮೋಹನ್ ಸಿಂಗ್ ಅವರನ್ನೋ ನಂದನ್ ನಿಲೇಕಣಿ ಅವರನ್ನೋ ಮಹತ್ವದ ಹುದ್ದೆಗಳಿಗೆ ನೇಮಕ ಮಾಡಿದಂತೆ ಇದು ಬಹಳ ಅಪರೂಪದ ನೇಮಕಾತಿ ಆಗಿರಲಿಲ್ಲ. ಹಲವರನ್ನು ಅಧಿಕಾರಿಶಾಹಿಗೆ ನೇಮಕ ಮಾಡುವ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಮೀಸಲಾತಿಯ ನೀತಿಯನ್ನು ಉಲ್ಲಂಘಿಸಬಾರದಿತ್ತು. ನಿರ್ದಿಷ್ಟ ಹುದ್ದೆಗಳಿಗೆ, ನಿರ್ದಿಷ್ಟ ಅವಧಿಗೆ ತಜ್ಞರನ್ನು, ನಾಯಕತ್ವದ ಗುಣಗಳು ಇರುವವರನ್ನು ನೇಮಕ ಮಾಡುವುದು ತನ್ನ ಉದ್ದೇಶ ಎಂದು ಕೇಂದ್ರವು ಹೇಳಿತ್ತು. ಇದರಿಂದಾಗಿ ಅಧಿಕಾರಿಶಾಹಿ ವ್ಯವಸ್ಥೆಯಲ್ಲಿ ಹೊಸತನ ಬರುತ್ತದೆ, ಹೊಸ ಆಲೋಚನೆಗಳಿಗೆ ಅಲ್ಲಿ ಅವಕಾಶ ಸಿಗುತ್ತದೆ ಎಂದು ಹೇಳಲಾಗಿತ್ತು. ಆದರೆ ಈ ರೀತಿಯ ನೇಮಕಾತಿಗಳು ನಡೆಯುವಾಗ ತಮಗೆ ಹತ್ತಿರದವರನ್ನೇ ನೇಮಿಸುವ, ಪಾರದರ್ಶಕತೆ ಇಲ್ಲವಾಗುವ ಸಾಧ್ಯತೆಗಳೂ ಇರುತ್ತವೆ. ಲ್ಯಾಟರಲ್ ಎಂಟ್ರಿ ಪ್ರಸ್ತಾವಕ್ಕೆ ವಿರೋಧ ದಾಖಲಿಸಲು ಇದು ಕೂಡ ಒಂದು ಸಮರ್ಥನೀಯ ಕಾರಣ ಆಗಬಲ್ಲದು.

ಖಾಸಗಿ ವಲಯದಿಂದ ನೇಮಕ ಮಾಡಿದ ವ್ಯಕ್ತಿಗಳಿಗೆ ಅವರದ್ದೇ ಆದ ಅನುಭವಗಳು ಇರುತ್ತವೆ. ಆ ಅನುಭವಗಳೇ ಅವರ ನಡೆ, ನುಡಿಯ ಮೇಲೆ ಪ್ರಭಾವ ಬೀರುತ್ತಿರುತ್ತವೆ. ಹೀಗೆ ನೇಮಕ ಆದವರು ಜಂಟಿ ಕಾರ್ಯದರ್ಶಿ ಮಟ್ಟದಲ್ಲಿ ನೀತಿ ನಿರೂಪಣೆಯ ಕೆಲಸ ಮಾಡಬಹುದಿತ್ತು. ಈ ನೇಮಕಾತಿಗಳಲ್ಲಿ ರಾಜಕೀಯವು ಪ್ರಭಾವ ಬೀರುವ ಅಪಾಯವೂ ಇತ್ತು. ಸರ್ಕಾರದ ಹಲವು ಹಂತಗಳಲ್ಲಿ ಆಗುವ ತೀರ್ಮಾನಗಳ ಮೇಲೆ ರಾಜಕೀಯ ಪ್ರಭಾವ ಕೆಲಸ ಮಾಡುವುದು ಹೊಸದೇನೂ ಅಲ್ಲ. ಬಿಜೆಪಿಯ ಸೈದ್ಧಾಂತಿಕ ಮಾತೃ ಸಂಘಟನೆಯಾದ ಆರ್‌ಎಸ್‌ಎಸ್‌ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗಿಯಾಗಲು ಇದ್ದ ನಿರ್ಬಂಧವನ್ನು ತೆಗೆದುಹಾಕಿದ ಕೆಲವೇ ದಿನಗಳಲ್ಲಿ ಈ ಜಾಹೀರಾತು ಪ್ರಕಟವಾಗಿತ್ತು. ಆಡಳಿತ ವ್ಯವಸ್ಥೆಯಲ್ಲಿ ಇರುವ ಕೆಲವು ಪಿಡುಗುಗಳನ್ನು, ಕಾಯಿಲೆಗಳನ್ನು ನಿವಾರಿಸಲು ಲ್ಯಾಟರಲ್ ಎಂಟ್ರಿ ವ್ಯವಸ್ಥೆಯು ಮದ್ದು ಎಂದು ಹೇಳಲು ಆಗದು. ಪ್ರತಿಭೆಗೆ ಅವಕಾಶ ಒದಗಿಸುವುದು ಹಾಗೂ ಸಾಮಾಜಿಕ ನ್ಯಾಯವನ್ನು ಖಾತರಿಪಡಿಸುವುದು ಒಂದಕ್ಕೊಂದು ಸಂಬಂಧ ಇಲ್ಲದ ಸಂಗತಿಗಳು ಎಂದು ಪರಿಗಣಿಸಲು ಅವಕಾಶ ಇಲ್ಲ. ಕೇಂದ್ರ ಲೋಕಸೇವಾ ಆಯೋಗವು ತನ್ನ ನೇಮಕಾತಿ ನಿಯಮಗಳನ್ನು ಪಾಲಿಸುತ್ತಲೇ, ತಜ್ಞರನ್ನು ನೇಮಕ ಮಾಡಿದ ಅನುಭವ ಹೊಂದಿದೆ. ಸರ್ಕಾರ ಈಗ ಹಿಂದಕ್ಕೆ ಹೆಜ್ಜೆ ಇರಿಸಿರುವುದು ಅದು ದುರ್ಬಲವಾಗಿದೆ ಎಂಬುದನ್ನೂ ತೋರಿಸುತ್ತಿದೆ. ಈಗ ಸರ್ಕಾರವು ಎನ್‌ಡಿಎ ಮೈತ್ರಿಕೂಟದಲ್ಲಿನ ಇತರ ರಾಜಕೀಯ ಪಕ್ಷಗಳ ಮಾತಿಗೆ ಕಿವಿಗೊಡಬೇಕಿದೆ ಹಾಗೂ ವಿರೋಧ ಪಕ್ಷಗಳ ಧ್ವನಿಗೂ ಬೆಲೆ ಕೊಡಬೇಕಿದೆ. ನಿರ್ಣಯಗಳನ್ನು ಕೈಗೊಳ್ಳುವ ಪ್ರಕ್ರಿಯೆಯು ಪ್ರಜಾತಾಂತ್ರಿಕವಾಗಿ ಇರುವಂತೆ ನೋಡಿಕೊಳ್ಳುವ ದೃಷ್ಟಿಯಿಂದ ಇದು ಒಳ್ಳೆಯದೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT