ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಸರ್ಕಾರಿ ಜಮೀನು ಲೆಕ್ಕಪರಿಶೋಧನೆ ರಾಜ್ಯದಾದ್ಯಂತ ನಡೆಯಲಿ

Published 27 ಸೆಪ್ಟೆಂಬರ್ 2023, 0:30 IST
Last Updated 27 ಸೆಪ್ಟೆಂಬರ್ 2023, 0:30 IST
ಅಕ್ಷರ ಗಾತ್ರ

ಒತ್ತುವರಿಗೆ ಕಾರಣರಾದ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೇ ಇದ್ದರೆ, ನಮ್ಮ ಸರ್ಕಾರಿ ಜಮೀನು ಹಾಗೂ ಅರಣ್ಯ ಪ್ರದೇಶಗಳನ್ನು ಭೂಗಳ್ಳರ ಹಾವಳಿಯಿಂದ ರಕ್ಷಿಸಲು ಸಾಧ್ಯವಿಲ್ಲ

ಬೆಂಗಳೂರು ನಗರ ಮತ್ತು ಬೆಂಗಳೂರು ಸುತ್ತಮುತ್ತಲಿನ 100 ಕಿ.ಮೀ. ವ್ಯಾಪ್ತಿಯಲ್ಲಿ ರೆಸಾರ್ಟ್‌ಗಳು ಹಾಗೂ ಹೋಮ್‌ಸ್ಟೇಗಳಿಂದ ಸರ್ಕಾರಿ ಜಮೀನು ಒತ್ತುವರಿಯಾಗಿರುವುದನ್ನು ಪತ್ತೆಹಚ್ಚಲು ಜಮೀನು ಲೆಕ್ಕಪರಿಶೋಧನೆ (ಲ್ಯಾಂಡ್‌ ಆಡಿಟ್‌) ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂದಾಯ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.

ಬೆಂಗಳೂರು ಮತ್ತು ಸುತ್ತಮುತ್ತ 75,000 ಎಕರೆಯಷ್ಟು ಸರ್ಕಾರಿ ಜಮೀನು ಒತ್ತುವರಿಯಾಗಿದ್ದು, ಅದರಲ್ಲಿ 6,000 ಎಕರೆಗೂ ಹೆಚ್ಚು ವಿಸ್ತೀರ್ಣದ ಸರ್ಕಾರಿ ಜಮೀನುಗಳನ್ನು ರೆಸಾರ್ಟ್‌ಗಳ ಹೆಸರಿನಲ್ಲಿ ಕಬಳಿಸಲಾಗಿದೆ ಎಂದು ಕಾಂಗ್ರೆಸ್‌ ಮುಖಂಡ ರಮೇಶ್‌ ಬಾಬು ಅವರು ಮುಖ್ಯಮಂತ್ರಿಯವರಿಗೆ ದೂರು ನೀಡಿದ್ದರು. ಆ ದೂರನ್ನು ಆಧರಿಸಿ ಸರ್ಕಾರಿ ಜಮೀನುಗಳ ಲೆಕ್ಕಪರಿಶೋಧನೆ ನಡೆಸುವಂತೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ. ಸರ್ಕಾರಿ ಜಮೀನುಗಳ ವಾಸ್ತವಿಕ ಸ್ಥಿತಿಗತಿಯನ್ನು ಖಚಿತಪಡಿಸಿಕೊಳ್ಳಲು ನೆರವಾಗುವ ಜಮೀನು ಲೆಕ್ಕಪರಿಶೋಧನೆಯನ್ನು ಬೆಂಗಳೂರಿಗೆ ಸೀಮಿತಗೊಳಿಸಬಾರದು. ಈ ಪ್ರಕ್ರಿಯೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸಬೇಕು. ಅನಧಿಕೃತ ರೆಸಾರ್ಟ್‌ಗಳು, ಹೋಮ್‌ಸ್ಟೇಗಳು ಕರ್ನಾಟಕದಲ್ಲಿ ದೊಡ್ಡ ತಲೆನೋವಾಗಿ ಪರಿಣಮಿಸಿವೆ.

ವಿಶೇಷವಾಗಿ ಪಶ್ಚಿಮಘಟ್ಟಗಳು, ಹುಲಿ ಸಂರಕ್ಷಿತ ಪ್ರದೇಶಗಳು ಮತ್ತು ಇತರ ಪರಿಸರಸೂಕ್ಷ್ಮ ಪ್ರದೇಶಗಳಲ್ಲಿ ಅನಧಿಕೃತ ರೆಸಾರ್ಟ್‌, ಹೋಮ್‌ಸ್ಟೇಗಳು ವ್ಯಾಪಕವಾಗಿ ತಲೆ ಎತ್ತುತ್ತಿವೆ. ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತಾರಣ್ಯದ ವ್ಯಾಪ್ತಿಯಲ್ಲೇ ಪರಿಸರ ಸಂರಕ್ಷಣಾ ಕಾಯ್ದೆ– 1986 ಅನ್ನು ಉಲ್ಲಂಘಿಸಿ ಒಂಬತ್ತು ಹೋಮ್‌ಸ್ಟೇ, ಹೋಟೆಲ್‌ ಮತ್ತು ರೆಸಾರ್ಟ್‌ಗಳು ಕಾರ್ಯನಿರ್ವಹಿಸುತ್ತಿರುವುದನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಅಧಿಕಾರಿಗಳು ಕಳೆದ ವರ್ಷ ಪತ್ತೆ ಮಾಡಿದ್ದರು. ಈ ಹೋಟೆಲ್‌, ಹೋಮ್‌ಸ್ಟೇ ಮತ್ತು ರೆಸಾರ್ಟ್‌ಗಳ ಮಾಲೀಕರು ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆದಿರಲಿಲ್ಲ ಎಂಬುದು ಪರಿಶೀಲನೆಯಲ್ಲಿ ಪತ್ತೆಯಾಗಿತ್ತು. ಈ ರೀತಿ ಕಾನೂನು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪ್ರಾಧಿಕಾರ ಶಿಫಾರಸು ಮಾಡಿತ್ತು.

ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದಲ್ಲಿ ರೆಸಾರ್ಟ್‌ ಒಂದು ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿದ್ದಕ್ಕಾಗಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ರಾಜ್ಯ ಸರ್ಕಾರವನ್ನು 2014ರಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಆ ಪ್ರಕರಣ ನಡೆದು ಒಂಬತ್ತು ವರ್ಷಗಳಾದರೂ ಈ ವಿಚಾರದಲ್ಲಿ ಹೆಚ್ಚೇನೂ ಬದಲಾವಣೆ ಆಗಿಲ್ಲ. ಬಂಡೀಪುರ ಅರಣ್ಯ ಪ್ರದೇಶದ ಗಡಿಭಾಗಕ್ಕೆ, ಅದರಲ್ಲೂ ವಿಶೇಷವಾಗಿ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಅಕ್ರಮ ರೆಸಾರ್ಟ್‌ಗಳು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿವೆ.

ಸಕಲೇಶಪುರ ತಾಲ್ಲೂಕಿನ ಗ್ರಾಮವೊಂದರಲ್ಲಿ 14 ಎಕರೆ ವಿಸ್ತೀರ್ಣದಲ್ಲಿ ಶೋಲಾ ಅರಣ್ಯವನ್ನು ನಾಶಪಡಿಸಿ ಐಷಾರಾಮಿ ರೆಸಾರ್ಟ್‌ ನಿರ್ಮಿಸಿದ್ದನ್ನು ಅರಣ್ಯ ಇಲಾಖೆ ಇತ್ತೀಚೆಗೆ ಪತ್ತೆ ಮಾಡಿದೆ. ಅಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿ ಬೃಹತ್‌ ಕಟ್ಟಡಗಳು, ರಸ್ತೆ, ಈಜುಕೊಳ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಕೊಡಗು ಜಿಲ್ಲೆಯ ಹೊರೂರು ಗ್ರಾಮದಲ್ಲಿ ರೆಸಾರ್ಟ್‌ ಒಂದರ ಮಾಲೀಕರು ತಮ್ಮ ಅನುಕೂಲಕ್ಕಾಗಿ ತೊರೆಯೊಂದಕ್ಕೆ ಅಕ್ರಮವಾಗಿ ಚೆಕ್ ಡ್ಯಾಂ ನಿರ್ಮಿಸಿರುವುದು ಪತ್ತೆಯಾಗಿದೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿರುವ ಆರೋಪವಿದೆ. ಇದೇ ರೀತಿಯಲ್ಲಿ ಕಾವೇರಿ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಅಗತ್ಯ ಅನುಮತಿಗಳನ್ನು ಪಡೆಯದೆ ರೆಸಾರ್ಟ್‌ ಒಂದನ್ನು ನಡೆಸುತ್ತಿರುವುದೂ ಕಂಡುಬಂದಿದೆ.

ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾವಿರಾರು ಅನಧಿಕೃತ ಹೋಮ್‌ಸ್ಟೇಗಳು ನಾಯಿಕೊಡೆಗಳಂತೆ ತಲೆಎತ್ತಿವೆ. ಜಿಲ್ಲಾಡಳಿತಗಳು ಹೋಮ್‌ಸ್ಟೇಗಳನ್ನು ಕಾನೂನಿನ ವ್ಯಾಪ್ತಿಗೆ ತರುವಲ್ಲಿ ವಿಫಲವಾಗಿರುವುದೇ ಇದಕ್ಕೆ ಕಾರಣ. ಸರ್ಕಾರಿ ಜಮೀನುಗಳನ್ನು ಕಬಳಿಸಿ ರೆಸಾರ್ಟ್‌, ಹೋಮ್‌ಸ್ಟೇ, ಹೋಟೆಲ್‌ ನಿರ್ಮಿಸುವವರಿಗೆ ಪ್ರಭಾವಿ ರಾಜಕಾರಣಿಗಳ ಅಭಯವೂ ಇರುತ್ತದೆ. ಹೀಗಾಗಿ ಮುಖ್ಯಮಂತ್ರಿಯವರು ಸರ್ಕಾರಿ ಜಮೀನುಗಳ ಲೆಕ್ಕಪರಿಶೋಧನೆಗೆ ನಿರ್ದೇಶನ ನೀಡಿರುವುದು ಕಣ್ಣೊರೆಸುವ ತಂತ್ರದಂತೆ ಆಗಬಾರದು.

ಅಕ್ರಮವಾಗಿ ನಿರ್ಮಾಣವಾದ ರೆಸಾರ್ಟ್‌, ಹೋಮ್‌ಸ್ಟೇ, ಹೋಟೆಲ್‌ಗಳ ಕಟ್ಟಡಗಳನ್ನು ಕೆಲವೊಮ್ಮೆ ಅಧಿಕಾರಿಗಳು ನೆಲಸಮ ಮಾಡುತ್ತಾರೆ. ಆದರೆ, ಆ ರೀತಿ ಸರ್ಕಾರಿ ಜಮೀನುಗಳಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ನೀಡುವ ಹೊಣೆಯೂ ಅದೇ ಅಧಿಕಾರಿಗಳದ್ದು. ಸರ್ಕಾರಿ ಅಧಿಕಾರಿಗಳು ಶಾಮೀಲಾಗದೇ ಅರಣ್ಯ ಪ್ರದೇಶ ಅಥವಾ ಸರ್ಕಾರಿ ಜಮೀನುಗಳಲ್ಲಿ ಬೃಹತ್‌ ನಿರ್ಮಾಣ ಕಾಮಗಾರಿಗಳನ್ನು ನಡೆಸಲಾಗುವುದಿಲ್ಲ ಎಂಬದು ನಿಸ್ಸಂಶಯ. ಈಗ ಆರಂಭವಾಗಿರುವ ಸರ್ಕಾರಿ ಜಮೀನುಗಳ ಲೆಕ್ಕಪರಿಶೋಧನೆಯು ಒತ್ತುವರಿಗೊಳಗಾಗಿರುವ ಸ್ವತ್ತುಗಳ ವಿಸ್ತೀರ್ಣವನ್ನು ಲೆಕ್ಕ ಹಾಕುವುದಕ್ಕೆ ಸೀಮಿತವಾಗಬಾರದು. ಒತ್ತುವರಿಗೆ ಕಾರಣರಾದ ಸರ್ಕಾರಿ ಅಧಿಕಾರಿಗಳನ್ನೂ ಪತ್ತೆಮಾಡಿ ಹೊಣೆ ನಿಗದಿ ಮಾಡಬೇಕು. ಇಂತಹ ಪ್ರಕರಣಗಳಲ್ಲಿ ಶಾಮೀಲಾದ ಕೆಲವು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ, ಅವರನ್ನು ಸೇವೆಯಿಂದ ವಜಾ ಮಾಡುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳದೇ ಇದ್ದರೆ ನಮ್ಮ ಸರ್ಕಾರಿ ಜಮೀನು ಹಾಗೂ ಅರಣ್ಯ ಪ್ರದೇಶಗಳನ್ನು ಭೂಗಳ್ಳರ ಹಾವಳಿಯಿಂದ ರಕ್ಷಿಸಲು ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT