ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ‘ಝೀರೊ ಟ್ರಾಫಿಕ್‌’ ಶಿಷ್ಟಾಚಾರ ಕೈಬಿಡಲು ಸಿಎಂ ಸೂಚನೆ ಸ್ವಾಗತಾರ್ಹ ನಡೆ

Published 25 ಮೇ 2023, 23:36 IST
Last Updated 25 ಮೇ 2023, 23:36 IST
ಅಕ್ಷರ ಗಾತ್ರ

ತಮಗೆ ನೀಡಲಾಗಿರುವ ‘ಝೀರೊ ಟ್ರಾಫಿಕ್‌’ ಶಿಷ್ಟಾಚಾರವನ್ನು ಕೈಬಿಡಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸರಿಗೆ ನೀಡಿರುವ ಸೂಚನೆ ಸ್ವಾಗತಾರ್ಹ. ವಿಶೇಷವಾಗಿ ಬೆಂಗಳೂರಿನಲ್ಲಿ ವಾಹನದಲ್ಲಿ ಓಡಾಡುವವರಿಗೆ ಇದರಿಂದ ಬಹುದೊಡ್ಡ ಅನುಕೂಲ ಆಗುತ್ತದೆ. ‘ಝೀರೊ ಟ್ರಾಫಿಕ್‌’ ಶಿಷ್ಟಾಚಾರ ಪ್ರಕಾರ, ಮುಖ್ಯಮಂತ್ರಿ ಮತ್ತು ಅವರ ಬೆಂಗಾವಲು ಪಡೆ ಸಾಗುವ ರಸ್ತೆಗೆ ಅವರು ಸಂಚರಿಸುತ್ತಿರುವ ಹೊತ್ತಿನಲ್ಲಿ ಬೇರೆ ವಾಹನಗಳಿಗೆ ಪ್ರವೇಶ ಇರುವುದಿಲ್ಲ. ನಗರದ ವಾಹನ ದಟ್ಟಣೆಯ ರಸ್ತೆಗಳಿಗೂ ಇದು ಅನ್ವಯ ಆಗುತ್ತದೆ.

ಈ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಭಾರಿ ಅನನುಕೂಲ ಆಗುತ್ತದೆ. ಇದು ಅನಗತ್ಯವಾದ ತೊಂದರೆ. ಮುಖ್ಯಮಂತ್ರಿ ಅವರಲ್ಲದೆ, ರಾಜ್ಯಪಾಲರೂ ಈ ಸೌಲಭ್ಯ ಬಳಸುತ್ತಾರೆ. ಹಿಂದೆ ಉಪ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಕೂಡ ‘ಝೀರೊ ಟ್ರಾಫಿಕ್‌’ ಸೌಲಭ್ಯವನ್ನು ಬಳಸಿದ್ದುಂಟು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಝೀರೊ ಟ್ರಾಫಿಕ್‌ ಸೌಲಭ್ಯ ಬೇಡ ಎಂದು ನಿರ್ದೇಶನ ನೀಡಿದ್ದರು. ಆದರೆ, ಅದು ಉಲ್ಲಂಘನೆ ಆಗಿದ್ದೇ ಹೆಚ್ಚು.

ಏಕೆಂದರೆ, ಬೊಮ್ಮಾಯಿ ಅವರು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೆರಳುತ್ತಿದ್ದಾಗಲೂ ರಸ್ತೆಯನ್ನು ಪೊಲೀಸರು ಸಾರ್ವಜನಿಕರಿಗೆ ಬಂದ್‌ ಮಾಡುತ್ತಿದ್ದರು. ಜನರು ಅಪಾರ ಕಷ್ಟ ಅನುಭವಿಸುತ್ತಿದ್ದರು. ಹಾಗಾಗಿ, ‘ಝೀರೊ ಟ್ರಾಫಿಕ್‌’ಗೆ ಸಂಬಂಧಿಸಿ ನೀಡಿದ ನಿರ್ದೇಶನ ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿದೆ ಎಂಬುದನ್ನು ಸಿದ್ದರಾಮಯ್ಯ ಅವರು ಖಚಿತಪಡಿಸಿಕೊಳ್ಳಬೇಕು. ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್ ಅವರೂ ಸಿದ್ದರಾಮಯ್ಯ ಅವರನ್ನು ಅನುಸರಿಸಿ, ‘ಝೀರೊ ಟ್ರಾಫಿಕ್‌’ ಶಿಷ್ಟಾಚಾರವನ್ನು ಕೈಬಿಡಬೇಕು. ಈ ಇಬ್ಬರು ಮತ್ತು ಇತರ ಗಣ್ಯರು ಸಂಚರಿಸುವಾಗ ಸಿಗ್ನಲ್‌ ಮುಕ್ತ ‘ಗ್ರೀನ್‌ ಕಾರಿಡಾರ್’ ಸೌಲಭ್ಯ ಹೇಗೂ ಇದ್ದೇ ಇರುತ್ತದೆ. ಆದುದರಿಂದ ಈ 21ನೇ ಶತಮಾನದಲ್ಲಿಯೂ ‘ದೊರೆ’ಯ ಸಂಚಾರಕ್ಕಾಗಿ ಇತರ ಎಲ್ಲ ವಾಹನಗಳನ್ನು ತಡೆಯುವ ಊಳಿಗಮಾನ್ಯ ಧೋರಣೆಯನ್ನು ಕೈಬಿಡಬೇಕು.

ಜಿಲ್ಲೆಗಳಲ್ಲಿ ಕೂಡ ಈ ನಿರ್ದೇಶನವನ್ನು ಅನುಸರಿಸಬೇಕು. ಜಿಲ್ಲೆಗೆ ಭೇಟಿ ನೀಡಿದ ಸಚಿವರನ್ನು ಸಂತೃಪ್ತಿಪಡಿಸಲು ಅಲ್ಲಿನ ಪೊಲೀಸರು ತುದಿಗಾಲಲ್ಲಿ ನಿಂತಿರುತ್ತಾರೆ. ಸಾರ್ವಜನಿಕರ ವಾಹನಗಳಿಗೆ ಅನಗತ್ಯ ನಿರ್ಬಂಧಗಳನ್ನು ಹೇರಿ ಅತಿರೇಕ ಉಂಟು ಮಾಡುತ್ತಾರೆ. ಜಿಲ್ಲೆಗಳಿಗೆ ಸಚಿವರು ಮತ್ತು ಇತರ ಗಣ್ಯರ ಭೇಟಿಯು ಜನ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತದೆ. ಜನರಿಗೆ ರೇಜಿಗೆ ಹುಟ್ಟಿಸುತ್ತದೆ. ನಿಗಮ ಅಥವಾ ಮಂಡಳಿಗೆ ಅಧ್ಯಕ್ಷರಾಗಿ ನೇಮಕವಾಗಿ ಸಂಪುಟ ದರ್ಜೆಯ ಸ್ಥಾನ ಪಡೆಯುವ ಶಾಸಕರು, ಬೆಂಗಾವಲು ವಾಹನಕ್ಕೆ ಬೇಡಿಕೆ ಇರಿಸುತ್ತಾರೆ.

ಹಾಗೆಯೇ ಮುಖ್ಯಮಂತ್ರಿ ಕಾರ್ಯಾಲಯ ಮತ್ತು ಸರ್ಕಾರದಲ್ಲಿ ಸಂಪುಟ ದರ್ಜೆ ಸ್ಥಾನಮಾನವಿರುವ ಹುದ್ದೆ ಪಡೆಯುವವರು ಕೂಡ ಈ ಸೌಲಭ್ಯ ಬೇಕು ಎನ್ನುತ್ತಾರೆ. ಈ ಎಲ್ಲವೂ ಕೊನೆಯಾಗಲೇಬೇಕು. ಪೊಲೀಸ್‌ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ ಇದೆ. ಇಂತಹ ಶಿಷ್ಟಾಚಾರಗಳಿಗಾಗಿ ಸಿಬ್ಬಂದಿಯನ್ನು ನಿಯೋಜಿಸಿದರೆ ಇಲಾಖೆಗೆ ಇನ್ನಷ್ಟು ಹೊರೆಯಾಗುತ್ತದೆ. ಸರ್ಕಾರದ ಬೊಕ್ಕಸಕ್ಕೂ ಇದು ಹೊರೆ. ಸಾರ್ವಜನಿಕರಿಗೆ ಅನಗತ್ಯ ತೊಂದರೆ. ಬೇರೆ ಯಾವ ರಾಜ್ಯದಲ್ಲಿಯೂ ಶಾಸಕರು ಬೆಂಗಾವಲು ವಾಹನದ ಜೊತೆಗೆ ಸೈರನ್‌ ಮೊಳಗಿಸಿಕೊಂಡು ಸಂಚರಿಸುವ ಪರಿಪಾಟ ಇಲ್ಲ. ವರ್ಗಾವಣೆ, ನಿಯೋಜನೆಯಂತಹ ವಿವಿಧ ಕೆಲಸಗಳಿಗಾಗಿ ಜನಪ್ರತಿನಿಧಿಗಳನ್ನು ಪೊಲೀಸರು ಅವಲಂಬಿಸಿದ್ದಾರೆ.

ಹೀಗಾಗಿಯೇ ಜನಪ್ರತಿನಿಧಿಗಳ ಗುಲಾಮರಂತೆ ಪೊಲೀಸರು ವರ್ತಿಸುತ್ತಾರೆ. ಈ ಕಾರಣದಿಂದಾಗಿಯೇ ಶಾಸಕರಿಗೂ ಬೆಂಗಾವಲು ವಾಹನಗಳನ್ನು ಒದಗಿಸುತ್ತಾರೆ. ವ್ಯವಸ್ಥೆಯನ್ನು ಈ ರೀತಿ ದುರ್ಬಳಕೆ ಮಾಡುವುದಕ್ಕೆ ಪೊಲೀಸ್‌ ಮಹಾ ನಿರ್ದೇಶಕ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ನಗರಗಳ ಪೊಲೀಸ್‌ ಆಯುಕ್ತರು ಅಂತ್ಯ ಹಾಡಬೇಕು. ಈ ನಿಯಮವನ್ನು ಉಲ್ಲಂಘಿಸುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಚುನಾಯಿತ ಪ್ರತಿನಿಧಿಗಳು ಎಂದರೆ, ಆ ಕ್ಷೇತ್ರದ ಅನಭಿಷಿಕ್ತ ದೊರೆಗಳೇನೂ ಅಲ್ಲ. ಅವರು ಆಯಾ ಕ್ಷೇತ್ರದ ಜನರ ಸೇವಕರು ಅಷ್ಟೇ. 

ಬೆಂಗಳೂರಿನ ಸಂಚಾರ ವ್ಯವಸ್ಥೆಯು ಕುಲಗೆಟ್ಟು ಹೋಗಲು ಎಲ್ಲ ಪಕ್ಷಗಳ ಈ ರಾಜಕಾರಣಿಗಳೇ ಕಾರಣ. ಹಾಗಾಗಿಯೇ ಸಾರ್ವಜನಿಕರು ಅನುಭವಿಸುತ್ತಿರುವ ಸಂಕಷ್ಟವನ್ನು ರಾಜಕಾರಣಿಗಳೂ ಅನುಭವಿಸಬೇಕು. ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಸರಿಪಡಿಸಲು ಯಾವ ಸರ್ಕಾರವೂ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಬೆಂಗಳೂರಿನ ರಸ್ತೆಗಳಲ್ಲಿ ನಿತ್ಯವೂ ಸಂಚರಿಸುವ ಜನರು ಅನುಭವಿಸುವ ಯಾತನೆ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಪ್ರತ್ಯಕ್ಷ ಅನುಭವ ಈ ಸಮಸ್ಯೆಯನ್ನು ಪರಿಹರಿಸಲು ಅಗತ್ಯವಾದ ಅಧಿಕಾರ ಉಳ್ಳವರಿಗೆ ಆಗಬೇಕು. ಆಗ ಸಮಸ್ಯೆ ಪರಿಹಾರದ ಇಚ್ಛಾಶಕ್ತಿ ಅವರಲ್ಲಿ ಮೂಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT