ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ದೆಹಲಿ ಮತ್ತು ಇತರೆಡೆ ಹಿಂಸಾಚಾರ- ಸಲ್ಲದ ನಡವಳಿಕೆ, ಮೂಡುವ ಪ್ರಶ್ನೆ

Last Updated 21 ಏಪ್ರಿಲ್ 2022, 21:16 IST
ಅಕ್ಷರ ಗಾತ್ರ

ರಾಜಧಾನಿ ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಶನಿವಾರ ನಡೆದ ಕೋಮು ಹಿಂಸಾಚಾರ ಹಾಗೂ ನಂತರದ ಕೆಲವು ವಿದ್ಯಮಾನಗಳನ್ನು ದೇಶದ ಇತರ ಕಡೆಗಳಲ್ಲಿ ಇತ್ತೀಚಿನ ಕೆಲವು ವಾರಗಳಲ್ಲಿ ನಡೆದಿರುವ ಕೋಮು ಸಂಘರ್ಷಗಳಿಂದ ಪ್ರತ್ಯೇಕವಾಗಿಸಿ ನೋಡಲು ಆಗುವುದಿಲ್ಲ. ಈ ಎಲ್ಲ ಘಟನೆಗಳ ನಡುವೆ ಸಾಮ್ಯತೆ ಇದೆ.

ಇಂತಹ ಘಟನೆಗಳ ನಂತರದಲ್ಲಿನ ಪ್ರತಿಕ್ರಿಯೆಗಳಲ್ಲಿಯೂ ಸಾಮ್ಯತೆ ಕಾಣಿಸುತ್ತಿದೆ. ಹಿಂದೂಗಳಿಗೆ ಧಾರ್ಮಿಕವಾಗಿ ಮುಖ್ಯವಾಗಿರುವ ರಾಮನವಮಿ, ಹನುಮಾನ್ ಜಯಂತಿಯಂತಹ ದಿನಗಳಂದು ಸಮಸ್ಯೆ ಸೃಷ್ಟಿಯಾಗುತ್ತದೆ. ಇಂತಹ ದಿನಗಳಂದು ಆಯೋಜಿಸುವ ಮೆರವಣಿಗೆಯು ಮಸೀದಿಗಳು ಇರುವ ರಸ್ತೆಯ ಮೂಲಕ ಅಥವಾ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪ್ರದೇಶಗಳ ಮೂಲಕ ಸಾಗುತ್ತದೆ. ಜಹಾಂಗೀರ್‌ಪುರಿ ಹಿಂಸಾಚಾರದಲ್ಲಿಯೂ ಇದೇ ಆಗಿದೆ.

ಪೊಲೀಸರಿಂದ ಅನುಮತಿಯನ್ನೇ ಪಡೆಯದೆ ಮೆರವಣಿಗೆಯು ಮಸೀದಿಯ ಪಕ್ಕದ ರಸ್ತೆಯ ಮೂಲಕ ಸಾಗಿತು. ಮೆರವಣಿಗೆಯಲ್ಲಿ ಇದ್ದವರು ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದರು ಎಂಬ ವರದಿಗಳಿವೆ. ಈ ರೀತಿ ಘೋಷಣೆಗಳನ್ನು ಕೂಗುವುದು ಖಂಡಿತ ಸರಿಯಲ್ಲ. ಹಾಗೆಯೇ, ಮಸೀದಿಯಿಂದ ಕಲ್ಲು ಎಸೆಯುವುದು ಕೂಡ ಯಾವ ಕಾರಣಕ್ಕೂ ಒಪ್ಪುವಂಥದ್ದಲ್ಲ. ಕಲ್ಲು ತೂರಾಟದಲ್ಲಿ ಪೊಲೀಸರೂ ಸೇರಿದಂತೆ ಕೆಲವರು ಗಾಯಗೊಂಡರು.

ಈ ಘಟನೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳಿವೆ. ಅನುಮತಿ ಇಲ್ಲದಿದ್ದಾಗ ಮೆರವಣಿಗೆ ನಡೆಸಲು ಅವಕಾಶ ಕೊಟ್ಟಿದ್ದು ಏಕೆ? ಸಮಸ್ಯೆ ಸೃಷ್ಟಿಯಾಗಬಹುದಾದ ಪ್ರದೇಶಗಳ ಮೂಲಕ ಸಾಗಲು ಮೆರವಣಿಗೆಗೆ ಅವಕಾಶ ಕೊಟ್ಟಿದ್ದು ಹೇಗೆ? ಮೆರವಣಿಗೆಯಲ್ಲಿ ಸಾಗಿದವರು ಕೈಯಲ್ಲಿ ಆಯುಧ ಹಿಡಿದುಕೊಳ್ಳಲು ಹೇಗೆ ಸಾಧ್ಯವಾಯಿತು? ಮಸೀದಿಯ ಬಳಿಯಲ್ಲಿ ಪ್ರಚೋದನಕಾರಿಯಾಗಿ ಘೋಷಣೆ ಕೂಗಿದ
ವರನ್ನು ಏಕೆ ನಿಯಂತ್ರಿಸಲಿಲ್ಲ? ಆರಂಭದಲ್ಲಿ ಹೇಳಿಕೆಯೊಂದರಲ್ಲಿ, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಹೆಸರನ್ನು ಉಲ್ಲೇಖಿಸಿದ್ದ ಪೊಲೀಸರು ನಂತರದಲ್ಲಿ ಆ ಹೆಸರುಗಳನ್ನು ತೆಗೆದಿದ್ದು ಏಕೆ? ಈ ಹಿಂದೆ ಹಿಂಸಾಚಾರಗಳು ನಡೆದ ಸಂದರ್ಭದಲ್ಲಿ ದೆಹಲಿ ಪೊಲೀಸರು ತೋರಿದ ನಡವಳಿಕೆಯು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಹೀಗಾಗಿ ಇಂತಹ ಪ್ರಶ್ನೆಗಳು ಮುಖ್ಯವಾಗುತ್ತವೆ. ಮೆರವಣಿಗೆಯಲ್ಲಿ ಇದ್ದವರುಪ್ರಚೋದನಕಾರಿಯಾಗಿ ಘೋಷಣೆ ಕೂಗಿದರುಎಂಬ ಅಂಶವು ಎಫ್‌ಐಆರ್‌ನಲ್ಲಿ ಇಲ್ಲ.

ಬದಲಿಗೆ, ಮೆರವಣಿಗೆಯಲ್ಲಿ ಇದ್ದವರು ಅನ್ಸಾರ್ ಮತ್ತು ಇತರ ಕೆಲವರ ಜೊತೆ ವಾದಕ್ಕೆ ಇಳಿದ ನಂತರದಲ್ಲಿ ಹಿಂಸಾಚಾರ ಶುರುವಾ
ಯಿತು ಎಂದು ಅದರಲ್ಲಿ ಹೇಳಲಾಗಿದೆ. ಅನ್ಸಾರ್ ಯಾವ ಪಕ್ಷಕ್ಕೆ ಸೇರಿದ ವ್ಯಕ್ತಿ ಎಂಬ ವಿಚಾರವಾಗಿ ಬಿಜೆಪಿ ಹಾಗೂ ಎಎಪಿ ನಡುವೆ ಜಗಳ ಇದೆ. ಆತ ಬಿಜೆಪಿಗೆ ಸೇರಿದವ ಎಂದು ಎಎಪಿಯವರು, ಎಎಪಿ ಬೆಂಬಲಿಗ ಎಂದು ಬಿಜೆಪಿಯವರು ಸಾಬೀತು ಮಾಡಲು ಯತ್ನಿಸಿದ್ದಾರೆ.

ಜಹಾಂಗೀರ್‌ಪುರಿ ಮತ್ತು ದೇಶದ ಇತರ ಕೆಲವೆಡೆಗಳಲ್ಲಿ ಈಚೆಗೆ ನಡೆದ ಕೋಮು ಘರ್ಷಣೆಗಳು ಪೂರ್ವಯೋಜಿತ ಎಂಬಂತೆ ಕಾಣುತ್ತಿವೆ. ಅವು ಆ ಕ್ಷಣಕ್ಕೆ ಶುರುವಾದ ಗಲಾಟೆಗಳಂತೆ ಕಾಣುತ್ತಿಲ್ಲ. ಇವುಗಳ ಹಿಂದೆ ರಾಜಕೀಯ ಉದ್ದೇಶವಿದೆ. ಇಂತಹ ಘಟನೆಗಳಿಗೆ ಅಲ್ಪಸಂಖ್ಯಾತ ಸಮುದಾಯದವರು ಪ್ರತಿಕ್ರಿಯಿಸಬೇಕಾದ ಸಂದರ್ಭವನ್ನು ಸೃಷ್ಟಿಸಲಾಗುತ್ತದೆ. ಅವರು ಕಲ್ಲು ಎಸೆದು, ಗಲಭೆಕೋರರಾ
ಗುವಂತೆ ಮಾಡಲಾಗುತ್ತದೆ. ಬಹುತೇಕ ಪ್ರಕರಣಗಳಲ್ಲಿ ಪೊಲೀಸರಿಂದ ಅಥವಾ ಇತರ ಪ್ರಾಧಿಕಾರಗಳಿಂದ ‌ನ್ಯಾಯ ಸಿಗುವುದಿಲ್ಲ. ಹಿಂಸಾಚಾರ ನಡೆದ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅಲ್ಲಿ ಬುಧವಾರ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದ ನಂತರವೂ 90 ನಿಮಿಷಗಳವರೆಗೆ ತೆರವು ಕಾರ್ಯ ನಿಂತಿರಲಿಲ್ಲ ಎಂದು ವರದಿಗಳು ಹೇಳುತ್ತಿವೆ.

ಅಕ್ರಮ ಕಟ್ಟಡಗಳನ್ನು ಇಷ್ಟು ದಿನಗಳ ಕಾಲ ಏಕೆ ತೆರವು ಮಾಡಿರಲಿಲ್ಲ? ಜಹಾಂಗೀರ್‌ಪುರಿ ಗಲಭೆಯಲ್ಲಿ ಪಾಲ್ಗೊಂಡಿದ್ದ ಸಮಾಜಘಾತುಕರು ನಡೆಸಿದ ಒತ್ತುವರಿಗಳನ್ನು ಪತ್ತೆ ಮಾಡಿ, ಅವುಗಳನ್ನು ಧ್ವಂಸಗೊಳಿಸಿ ಎಂದು ಬಿಜೆಪಿ ನಾಯಕರಿಂದ ಪತ್ರ ಬರುವುದಕ್ಕೂ ಒತ್ತುವರಿ ತೆರವು ಕಾರ್ಯಾಚರಣೆಗೂ ಸಂಬಂಧ ಇದೆಯೇ? ಅಥವಾ ಎಲ್ಲ ಒತ್ತುವರಿ
ಗಳನ್ನೂ ದೆಹಲಿಯ ಸ್ಥಳೀಯ ಆಡಳಿತವು ಮುತುವರ್ಜಿಯಿಂದ ತೆರವು ಮಾಡಲಿದೆಯೇ? ಗಲಭೆಗಳಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಜರುಗಿಸಲು ನಿರ್ದಿಷ್ಟ ಕಾನೂನು ಇದೆ. ಅವರ ಮನೆ, ಸ್ವತ್ತು ಉರುಳಿಸುವ ಅವಕಾಶ ಕಾನೂನಿನಲ್ಲಿ ಇಲ್ಲ. ಹೀಗಿರುವಾಗ, ಕಾನೂನಿಗೆ ಅನುಗುಣವಾಗಿ ನಡೆದುಕೊಂಡುಸಾರ್ವಜನಿಕರಿಗೆ ಮೇಲ್ಪಂಕ್ತಿ ಹಾಕಿಕೊಡಬೇಕಿದ್ದ ರಾಜಕೀಯ ಮುಖಂಡರು ಈ ಬಗೆಯ ಪತ್ರ ಬರೆಯುವುದು ಹೇಗೆ ಸರಿ? ಇಷ್ಟೆಲ್ಲ ಆಗುತ್ತಿದ್ದರೂ ಪ್ರಧಾನಿಯವರು ಏಕೆ ಮೌನವಾಗಿ ಇದ್ದಾರೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT