ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಜಿಎಸ್‌ಟಿ ಸಂಗ್ರಹ ಏರಿಕೆ; ಮಾರುಕಟ್ಟೆ ಮೇಲಿನ ವಿಶ್ವಾಸಕ್ಕೆ ಬಲ

Published 5 ಜನವರಿ 2024, 0:30 IST
Last Updated 5 ಜನವರಿ 2024, 0:30 IST
ಅಕ್ಷರ ಗಾತ್ರ

ಜಿಎಸ್‌ಟಿ ವರಮಾನ ಸಂಗ್ರಹ ಸ್ಥಿರವಾಗಿರುವುದು ನೀತಿ ನಿರೂಪಕರಿಗೆ ವರಮಾನ ನಿರೀಕ್ಷೆ ಹಾಗೂ ಬಂಡವಾಳ ವೆಚ್ಚದ ಅಂದಾಜನ್ನು ಹೆಚ್ಚಿಸಲು ಅನುವು ಮಾಡಿಕೊಡಲಿದೆ.

ಡಿಸೆಂಬರ್ ತಿಂಗಳಲ್ಲಿ ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ಆಗಿರುವ ವರಮಾನ ಸಂಗ್ರಹವು ₹1.65 ಲಕ್ಷ ಕೋಟಿ. ಅಂದರೆ 2023–24ನೇ ಹಣಕಾಸು ವರ್ಷದಲ್ಲಿ ಸತತ ಏಳನೆಯ ತಿಂಗಳಿನಲ್ಲಿಯೂ ಜಿಎಸ್‌ಟಿ ವರಮಾನ ಸಂಗ್ರಹವು ₹1.60 ಲಕ್ಷ ಕೋಟಿಗಿಂತ ಹೆಚ್ಚಿನ ಮಟ್ಟದಲ್ಲಿ ಉಳಿದುಕೊಂಡಂತೆ ಆಗಿದೆ.

2023ರ ಡಿಸೆಂಬರ್‌ನಲ್ಲಿ ಆಗಿರುವ ಜಿಎಸ್‌ಟಿ ವರಮಾನ ಸಂಗ್ರಹವು 2022ರ ಡಿಸೆಂಬರ್‌ನಲ್ಲಿ ಆಗಿದ್ದ ವರಮಾನ ಸಂಗ್ರಹದ ಮೊತ್ತಕ್ಕೆ ಹೋಲಿಸಿದರೆ ಶೇಕಡ 10.3ರಷ್ಟು ಹೆಚ್ಚು. ಅಲ್ಲದೆ, ಇಲ್ಲಿ ಗಮನಿಸಬೇಕಾದ ಇನ್ನೂ ಒಂದು ಅಂಶ ಇದೆ. ಸೇವೆಗಳ ಆಮದು ಸೇರಿದಂತೆ ದೇಶಿ ವಹಿವಾಟಿನಿಂದ 2023ರ ಡಿಸೆಂಬರ್‌ನಲ್ಲಿ ಬಂದಿರುವ ವರಮಾನದ ಮೊತ್ತವು 2022ರ ಡಿಸೆಂಬರ್‌ನಲ್ಲಿ ಇದೇ ವಹಿವಾಟುಗಳಿಂದ ಬಂದ ವರಮಾನದ ಮೊತ್ತಕ್ಕಿಂತ ಶೇಕಡ 13ರಷ್ಟು ಹೆಚ್ಚಾಗಿದೆ.

ದೇಶದ ಅತ್ಯಂತ ಮಹತ್ವದ ತೆರಿಗೆ ವ್ಯವಸ್ಥೆಯಾಗಿರುವ ಜಿಎಸ್‌ಟಿ ಮೂಲಕ ಸರ್ಕಾರಗಳ ಬೊಕ್ಕಸಕ್ಕೆ ಬರುತ್ತಿರುವ ವರಮಾನವು ಜಾಗತಿಕ ಅರ್ಥವ್ಯವಸ್ಥೆಯಲ್ಲಿನ ಸವಾಲುಗಳು ಹಾಗೂ ಮಧ್ಯಪ್ರಾಚ್ಯ ಸೇರಿದಂತೆ ಜಗತ್ತಿನ ಕೆಲವು ಮಾರುಕಟ್ಟೆಗಳಲ್ಲಿನ ಬಿಕ್ಕಟ್ಟಿನ ಪರಿಸ್ಥಿತಿಯ ನಡುವೆಯೂ ನಿರಂತರವಾಗಿ ಹೆಚ್ಚಾಗುತ್ತ ಸಾಗಿರುವುದು ದೇಶಿ ಮಾರುಕಟ್ಟೆಯ ಶಕ್ತಿಯ ಬಗ್ಗೆ ವಿಶ್ವಾಸ ಹೆಚ್ಚು ಮಾಡು ವಂಥದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಡಿಸೆಂಬರ್‌ನಲ್ಲಿ ಸಂಗ್ರಹ ಆಗಿರುವ ವರಮಾನವು ಅಕ್ಟೋಬರ್‌ ಹಾಗೂ ನವೆಂಬರ್ ತಿಂಗಳ ವರಮಾನ ಸಂಗ್ರಹಕ್ಕೆ ಹೋಲಿಸಿದರೆ ಕಡಿಮೆ. ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ಅಕ್ಟೋಬರ್ ತಿಂಗಳಲ್ಲಿ ₹1.72 ಲಕ್ಷ ಕೋಟಿ ಹಾಗೂ ನವೆಂಬರ್ ತಿಂಗಳಲ್ಲಿ ₹1.67 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿತ್ತು.

ದೇಶದಲ್ಲಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿಗೆ ಮಾರುಕಟ್ಟೆ ಚಟುವಟಿಕೆಗಳ ದೃಷ್ಟಿಯಿಂದ ಬಹಳ ಮಹತ್ವ ಇದೆ. ಏಕೆಂದರೆ ಈ ಎರಡು ತಿಂಗಳು ಗಳಲ್ಲಿ ಹಬ್ಬಗಳ ಸಾಲು ಇರುತ್ತದೆ. ವಾಹನ, ಬಟ್ಟೆ, ಚಿನ್ನ, ಮನೆ ಖರೀದಿ ಚಟುವಟಿಕೆಗಳು ಈ ತಿಂಗಳುಗಳಲ್ಲಿ ಸಹಜವಾಗಿಯೇ ಹೆಚ್ಚಿರುತ್ತವೆ. ಈ ಕಾರಣದಿಂದಾಗಿಯೂ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಜಿಎಸ್‌ಟಿ ವರಮಾನ ಸಂಗ್ರಹವು ಹೆಚ್ಚಾಗಿದ್ದಿರಬಹುದು.

ನವೆಂಬರ್ ಕೊನೆಯ ವಾರದಲ್ಲಿ ಹಾಗೂ ಕ್ರಿಸ್ಮಸ್‌ವರೆಗೆ ಡಿಸೆಂಬರ್ ತಿಂಗಳಲ್ಲಿ ಪ್ರಮುಖ ಹಬ್ಬಗಳು ಯಾವುವೂ ಇಲ್ಲವಾಗಿದ್ದ ಕಾರಣದಿಂದಾಗಿ, ಡಿಸೆಂಬರ್ ತಿಂಗಳ ಜಿಎಸ್‌ಟಿ ವರಮಾನ ಸಂಗ್ರಹದಲ್ಲಿ ತುಸುಮಟ್ಟಿಗೆ ಇಳಿಕೆ ದಾಖಲಾಗಿರಬಹುದು. 2023ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ಒಟ್ಟು ಜಿಎಸ್‌ಟಿ ವರಮಾನ ಸಂಗ್ರಹವು ಶೇಕಡ 12ರಷ್ಟು ಹೆಚ್ಚಳ ಕಂಡಿದೆ. ಈ ಅವಧಿಯಲ್ಲಿ ಜಿಎಸ್‌ಟಿ ಮೂಲಕ ಒಟ್ಟು ₹14.97 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ.

ಹಿಂದಿನ ಆರ್ಥಿಕ ವರ್ಷದ ಮೊದಲ ಒಂಬತ್ತು ತಿಂಗಳ ಅವಧಿಯಲ್ಲಿ (2022ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ) ಆಗಿದ್ದ ವರಮಾನ ಸಂಗ್ರಹದ ಮೊತ್ತ ₹13.40 ಲಕ್ಷ ಕೋಟಿ. ಈ ಹೆಚ್ಚಳವು ಜಿಎಸ್‌ಟಿ ವ್ಯವಸ್ಥೆಯು ಒಟ್ಟಾರೆಯಾಗಿ ವರ್ಷದಿಂದ ವರ್ಷಕ್ಕೆ ಹೆಚ್ಚು ಪಕ್ವವಾಗುತ್ತಿರುವುದನ್ನು ಸೂಚಿಸುತ್ತಿದೆ ಎನ್ನುವ ವಾದ ಇದೆ. ಆದರೆ, ಜಿಡಿಪಿ ಬೆಳವಣಿಗೆ ದರವು ಶೇಕಡ 6.5ರಷ್ಟು ಇರುವಾಗ, ಚಿಲ್ಲರೆ ಹಣದುಬ್ಬರ ಪ್ರಮಾಣವು ಸರಾಸರಿ ಶೇ 5ರಷ್ಟು ಇರುವಾಗ ವರಮಾನ ಸಂಗ್ರಹದಲ್ಲಿ ಶೇ 12ರಷ್ಟು ಏರಿಕೆಯು ಭಾರಿ ಪ್ರಮಾಣದ್ದು ಎನ್ನಲಾಗದು ಎಂಬ ಇನ್ನೊಂದು ವಾದವೂ ಇದೆ.

ಅದೇನೇ ಇರಲಿ, ಕೇಂದ್ರ ಸರ್ಕಾರವು ತಿಂಗಳಿಗೆ ₹1.59 ಲಕ್ಷ ಕೋಟಿ ವರಮಾನವು ಜಿಎಸ್‌ಟಿ ಮೂಲಕ ಸಿಗಬಹುದು ಎಂಬ ಅಂದಾಜನ್ನು ಬಜೆಟ್‌ನಲ್ಲಿ ಮಾಡಿತ್ತು. ಈಗಿನ ವರಮಾನ ಸಂಗ್ರಹವು ಆ ಅಂದಾಜನ್ನು ಮೀರಿ ನಿಂತಿದೆ ಎಂಬುದಂತೂ ನಿಜ. ಲೋಕಸಭಾ ಚುನಾವಣೆಯು ಹತ್ತಿರವಾಗುತ್ತಿರುವ ಈ ಹೊತ್ತಿನಲ್ಲಿ, ಜಿಎಸ್‌ಟಿ ವರಮಾನ ಸಂಗ್ರಹದಲ್ಲಿನ ಆಶಾದಾಯಕ ಹೆಚ್ಚಳವು ಕೇಂದ್ರ ಸರ್ಕಾರಕ್ಕೆ ಬಜೆಟ್‌ ಮಂಡನೆ ಸಂದರ್ಭದಲ್ಲಿ ತುಸು ಹೆಚ್ಚಿನ ಪ್ರಮಾಣದಲ್ಲಿ ವೆಚ್ಚ ಮಾಡಲು ಹಣಕಾಸಿನ ಆಯ್ಕೆಗಳನ್ನು ಮುಕ್ತವಾಗಿಸಲಿದೆ ಎಂಬ ನಿರೀಕ್ಷೆ ಹೊಂದಲು ಅಡ್ಡಿಯಿಲ್ಲ.

ಜಿಎಸ್‌ಟಿ ವರಮಾನ ಸಂಗ್ರಹವು ತಿಂಗಳಿಗೆ ಸರಾಸರಿ ₹1.60 ಲಕ್ಷ ಕೋಟಿಗಿಂತ ಹೆಚ್ಚಿನ ಮಟ್ಟದಲ್ಲಿ ಸ್ಥಿರವಾಗಿರುವುದು ನೀತಿ ನಿರೂಪಕರಿಗೆ ವರಮಾನ ನಿರೀಕ್ಷೆ ಹಾಗೂ ಬಂಡವಾಳ ವೆಚ್ಚದ ಅಂದಾಜನ್ನು ಹೆಚ್ಚಿಸಲು ಅನುವು ಮಾಡಿಕೊಡುವುದು ಖಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT