ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಸ್ವಾವಲಂಬಿ ಆ್ಯಪ್‌ ಜನಹಿತ ಕಾಯಲಿ, ಲಂಚಗುಳಿತನ ತಡೆಗೆ ದಾರಿಯಾಗಲಿ

Last Updated 22 ಏಪ್ರಿಲ್ 2022, 21:06 IST
ಅಕ್ಷರ ಗಾತ್ರ

ತಲೆಮಾರುಗಳಿಂದ ತಮ್ಮ ಸುಪರ್ದಿಯಲ್ಲಿರುವ ಜಮೀನು ದಾಖಲೆಗಳನ್ನು ಸರಿ‍‍ಪಡಿಸಿಕೊಳ್ಳಲು,ವಂಶ‍ಪಾರಂಪರ್ಯವಾಗಿ ಬಂದ ಆಸ್ತಿಗಳನ್ನು ಹಿಸ್ಸೆ ಮಾಡಿಕೊಂಡ ಬಳಿಕ ಏಕಪಹಣಿಯಾಗಿಬದಲಾಯಿಸಿಕೊಳ್ಳಲು ನಾಗರಿಕರು ನರಕಯಾತನೆ ಪಡುವ ಪರಿಸ್ಥಿತಿ ಇದೆ. ಅಧಿಕಾರಿ, ಸಿಬ್ಬಂದಿಯ ಲಂಚಗುಳಿತನ, ದಾಖಲೆಗಳಲ್ಲಿ ಇರುವ ದೋಷ, ಯಾವುದೇ ದಾಖಲೆ ತಿದ್ದಬೇಕಾದರೆ ತಳಹಂತದಿಂದ ಮೇಲಧಿಕಾರಿಗಳವರೆಗೆ ಟಿಪ್ಪಣಿ ಹೆಸರಿನಲ್ಲಿರುವ ಜೇಡರ ಬಲೆಯ ಹಿಡಿತಗಳು ಜನರನ್ನು ಹೈರಾಣಾಗಿಸಿವೆ.

ಭೂಮಿ, ಕಾವೇರಿಯಂತಹ ಅನೇಕ ತಂತ್ರಾಂಶಗಳನ್ನು ಸರ್ಕಾರ ಅಭಿವೃದ್ಧಿಪಡಿಸಿ, ಕರ್ನಾಟಕದ ಈ ಸುಧಾರಣೆ ದೇಶದಲ್ಲೇ ಮಾದರಿ ಎಂದು ಹೇಳಿಕೊಳ್ಳುವುದುಂಟು. ಇಂತಹ ಪ್ರಚಾರದ ಯೋಜನೆಗಳು ತಂತ್ರಾಂಶ ಅಭಿವೃದ್ಧಿಪಡಿಸಿದ ಸಂಸ್ಥೆ ಹಾಗೂ ಅದಕ್ಕೆ ಅವಕಾಶ ಕೊಟ್ಟ ಅಧಿಕಾರಿಗಳ ಜೇಬು ತುಂಬಿಸಿದ್ದೇ ಹೆಚ್ಚು. ಅದರಿಂದ ನಾಗರಿಕರಿಗೆ ಆದ ಅನುಕೂಲ ಅಷ್ಟಕ್ಕಷ್ಟೇ. ಹಾಗಲ್ಲದೇ ಹೋಗಿದ್ದರೆ, ಪೋಡಿ, ಭೂಪರಿವರ್ತನೆ, ಹಿಸ್ಸೆ, ಪಹಣಿ ದುರಸ್ತಿ, ಹದ್ದುಬಸ್ತು, ಇಂಡೀಕರಣದಂತಹ ಪ್ರಕ್ರಿಯೆಗಳು ಸಲೀಸಾಗಿ, ಜನರ ಪರಿತಾಪ ತಪ್ಪಬೇಕಿತ್ತು. ಭ್ರಷ್ಟಾಚಾರವೂ ಕಣ್ಮರೆಯಾಗಬೇಕಿತ್ತು. ಆದರೆ, ಅದ್ಯಾವುದೂ ಆಗಿಲ್ಲ. 11–ಇ ನಕ್ಷೆ, ಪೋಡಿ, ಭೂ ಪರಿವರ್ತನೆ ನಕ್ಷೆಗಳನ್ನು ಭೂ ಒಡೆಯರೇ ಮಾಡಿಕೊಳ್ಳಬಹುದಾದವ್ಯವಸ್ಥೆಯೊಂದನ್ನು ಜಾರಿಗೆ ತರುವುದಾಗಿ ಕಂದಾಯ ಸಚಿವ ಆರ್. ಅಶೋಕ ಹೇಳಿದ್ದಾರೆ.

ಈ ಸಂಬಂಧ ಆದೇಶವೂ ಹೊರಬಿದ್ದಿದೆ. ಇಲಾಖೆ ಸಿದ್ಧಪಡಿಸಿರುವ ‘ಸ್ವಾವಲಂಬಿ’ ಆ್ಯಪ್‌ ಇದಕ್ಕೆ ಪೂರಕ ಎಂದೂ ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಚಿವರು ಹೊಂದಿರುವ ವಿಶ್ವಾಸ ಜನರಲ್ಲಿಯೂ ಮೂಡತೊಡಗುವ ಮಟ್ಟಿಗೆ ಅನುಷ್ಠಾನ ಫಲಕೊಟ್ಟರೆ ಯೋಜನೆ ಸಾರ್ಥಕವಾದೀತು. ಅಧಿಕಾರಿಗಳ ಕೈಬಿಸಿ ಮಾಡದೇ ಅಥವಾ ಕಂದಾಯ– ಉಪ ನೋಂದಣಿ ಕಚೇರಿಗಳ ಆಸುಪಾಸು ಮೇಜು–ಕುರ್ಚಿ ಹಾಕಿಕೊಂಡು ಕುಳಿತಿರುವ ದಸ್ತಾವೇಜು ಬರಹಗಾರರು ಹಾಗೂ ದಲ್ಲಾಳಿಗಳ ಮುಖೇನ ಹೋಗದೇ ಇದ್ದರೆ ದಾಖಲೆ ತಿದ್ದುಪಡಿ ಹೋಗಲಿ; ದಾಖಲೆಯನ್ನೇ ಪಡೆಯಲಾಗದ ದುಃಸ್ಥಿತಿ ರಾಜ್ಯದಲ್ಲಿದೆ. ಭ್ರಷ್ಟಾಚಾರ ಎಂಬುದು ಪ್ರತಿಹಂತದಲ್ಲೂ ರಾಕ್ಷಸರೂಪದಲ್ಲಿ ಜನಸಾಮಾನ್ಯರ ಮೇಲೆ ದಾಳಿ ಮಾಡುತ್ತಲೇ ಇರುತ್ತದೆ. ಅಂತಹ ಹೊತ್ತಿನೊಳಗೆ ‘ಸ್ವಾವಲಂಬಿ’ ಆ್ಯಪ್ ರೂಪಿಸಿರುವ ಸರ್ಕಾರದ ನಡೆ ಸ್ವಾಗತಾರ್ಹ.

ಒಂದು ಕುಟುಂಬದವರು ಆಸ್ತಿ ಹಿಸ್ಸೆ ಮಾಡಿಕೊಂಡು ಸರ್ವೆ ನಡೆಸಿ, ಹದ್ದುಬಸ್ತು (ಗಡಿ) ಗುರುತಿಸಿ ಪ್ರತ್ಯೇಕ ಖಾತೆಯ ಮೂಲಕ ಏಕಪಹಣಿ ಹೊಂದುವುದು ಇವತ್ತಿನ ದಿನಗಳಲ್ಲಿ ಕಷ್ಟಸಾಧ್ಯ. ಒಂದೇ ಸರ್ವೆ ನಂಬರ್‌ನಲ್ಲಿ ಹಲವು ಹೆಸರುಗಳಿದ್ದು, ಅವುಗಳನ್ನು ಪ್ರತ್ಯೇಕಗೊಳಿಸಿ ಒಬ್ಬೊಬ್ಬರ ಹೆಸರಿಗೆ ಏಕಪಹಣಿ ಹೊಂದುವುದಕ್ಕಾಗಿ ನಡೆಸುವ ಪಕ್ಕಾ ಪೋಡಿ ಪ್ರಕ್ರಿಯೆಯಂತೂ ತಲೆನೋವಿನ ಕೆಲಸ. ದಶಕಗಳ ಹಿಂದೆ ಬೇರೆ ಬೇರೆ ಉದ್ದೇಶದಡಿ ಭೂ ಮಂಜೂರಾತಿ ಪಡೆದವರೂ ಪೋಡಿಗಾಗಿ ಅಲೆದಾಟ ನಡೆಸಲೇಬೇಕಾಗಿದೆ. ಪೋಡಿಗಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚುವ ಪ್ರಮಾಣಕ್ಕೆ ತಕ್ಕಂತೆ ಸರ್ವೇಯರ್‌ಗಳು ಅಷ್ಟೇ ಸಂಖ್ಯೆಯಲ್ಲಿ ಇಲ್ಲದಿರುವುದು ಸಮಸ್ಯೆ. ಅರ್ಜಿ ಸಲ್ಲಿಕೆಯ ಹಿರಿತನದ ಆಧಾರದ ಮೇಲೆ ಪೋಡಿ ಮಾಡಿಕೊಡಬೇಕು ಎಂದು ಸರ್ಕಾರವೇನೋ ಆದೇಶ ಹೊರಡಿಸಿದೆ. ಆದರೆ, ದುಡ್ಡು ಜಾಸ್ತಿ ಕೊಡುವವರಿಗೆ ಬೇಗ ಪೋಡಿ ಮಾಡಿಕೊಡುವುದು ರೂಢಿಯಾಗಿದೆ. ದುಡ್ಡು ಹಾಗೂ ಪ್ರಭಾವ ಇಲ್ಲದವರು ವರ್ಷಗಟ್ಟಲೆ ಕಾದರೂ ಪೋಡಿಯಾಗುವುದೇ ಇಲ್ಲ. ನಿವೇಶನ ಮಾರಲು 11– ಇ ನಕ್ಷೆ ಕೂಡ ಅತ್ಯಗತ್ಯ. ಪೋಡಿಯಾಗದೇ ಇದ್ದರೆ ಕೃಷಿಗೆ ಪೂರಕವಾಗಿ ಸರ್ಕಾರ ನೀಡುವ ಯಾವುದೇ ಸೌಲಭ್ಯವನ್ನೂ ಪಡೆಯಲು ಸಾಧ್ಯವಾಗದು.

ಸ್ವಾಧೀನದಲ್ಲಿರುವ ಜಮೀನನ್ನು ಅಡಮಾನ ಇರಿಸಿ ಯಾವುದೇ ಉದ್ದೇಶಕ್ಕಾಗಿ ಸಾಲ ಪಡೆಯಬೇಕಾದರೂ ಪೋಡಿ ಹಾಗೂ 11– ಇ ನಕ್ಷೆ ಅನಿವಾರ್ಯ. ಅದಾಗದೇ ಇದಾಗದು ಎಂಬ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳುವ ಅಧಿಕಾರಿಗಳು– ದಲ್ಲಾಳಿಗಳು ಇದನ್ನು ಬಳಸಿಕೊಂಡು ಜನರನ್ನು ಸುಲಿಯುತ್ತಿರುವುದು ರಹಸ್ಯವಲ್ಲ. ಈ ಎಲ್ಲ ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ‘ಸ್ವಾವಲಂಬಿ’ ಆ್ಯಪ್ ಸರ್ವಜನೋಪಕಾರಿಯಾಗುವ ಎಲ್ಲ ಸಾಧ್ಯತೆಗಳನ್ನೂ ಒಳಗೊಂಡಿದೆ. ಭೂ ಒಡೆಯರು ನಕ್ಷೆಗಳನ್ನು ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿದರೂ ಅದನ್ನು ಅನುಮೋದಿಸಬೇಕಾದುದು ಕಂದಾಯ ಇಲಾಖೆಯ ಸಿಬ್ಬಂದಿಯೇ. ಮನುಷ್ಯರ ಸ್ಪರ್ಶ ಇಲ್ಲದೇ ಆ್ಯಪ್ ಕೆಲಸ ಮಾಡಲಾಗದು. ಅನುಮೋದನೆಯ ಹೆಸರಿನಲ್ಲಿ ಮತ್ತೆ ಲಂಚಕ್ಕೆ ದಾರಿ ಮಾಡಿಕೊಡದಂತೆ ಸರ್ಕಾರ ನಿಗಾ ವಹಿಸಬೇಕಾಗಿದೆ. ಜಮೀನಿನ ಗಡಿ ತುಸು ವ್ಯತ್ಯಾಸವಾದರೂ ಕುಟುಂಬದವರ ಮಧ್ಯೆ ಅಥವಾ ಒಂದೇ ಸರ್ವೆ ನಂಬರ್‌ನಲ್ಲಿ ಜಮೀನು ಹೊಂದಿದವರ ಮಧ್ಯೆ ಸಂಘರ್ಷ, ಕಾನೂನು ಸಮರಕ್ಕೆ ದಾರಿ ಮಾಡುವುದು ಮಾಮೂಲು.

ಅದನ್ನು ತಪ್ಪಿಸಿ, ಸರ್ವಸಮ್ಮತವಾಗಿ ಪೋಡಿ ಮಾಡಿಕೊಳ್ಳಬಹುದಾದ ರೂಪದಲ್ಲಿ ಆ್ಯಪ್‌ ಹಾಗೂ ಸಿಬ್ಬಂದಿಯನ್ನು ಸಜ್ಜುಗೊಳಿಸಬೇಕಿದೆ. ಇಂತಹ ಹೊಸ ಆವಿಷ್ಕಾರಗಳು ನಡೆದಾಗ ಅದರ ಮಾಹಿತಿ ಜನರಿಗೆ ಇರುವುದಿಲ್ಲ. ಸರ್ಕಾರವೇ ಪ್ರಚಾರ ಮಾಡಿ, ಇದರಅನುಕೂಲವನ್ನು ಮನದಟ್ಟು ಮಾಡಬೇಕು. ತಂತ್ರಜ್ಞಾನ ಬಳಕೆ ಗೊತ್ತಿಲ್ಲದೇ ಇರುವವರಿಗೆ ನೆರವಾಗಲು ವೃತ್ತಿಪರರು ಸಹಾಯ ಮಾಡಬಹುದಾದ ದಾರಿಯನ್ನೇನೊ ಸರ್ಕಾರ ತೋರಿಸಿದೆ. ಒಂದು ಕೆಲಸಕ್ಕೆ ನಿಗದಿತ ಮೊತ್ತದ ಸೇವಾಶುಲ್ಕವನ್ನಷ್ಟೇ ಪಡೆಯಬೇಕು ಎಂಬ ಮಿತಿಯನ್ನೂ ಹಾಕಿ, ಅದು ಕಾರ್ಯರೂಪಕ್ಕೆ ಬರುವಂತೆ ನೋಡಿಕೊಳ್ಳುವ ಕೆಲಸವೂ ಆಗಬೇಕಿದೆ. ಆಗಮಾತ್ರ, ಸರ್ಕಾರದ ಆಶಯ ಜನಹಿತಕಾರಿಯಾಗಿ, ಜನಕಲ್ಯಾಣವೂ ಸಾಕಾರವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT