ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Editorial | ಕಂಪ್ಯೂಟರ್ ಆಮದಿಗೆ ನಿರ್ಬಂಧ: ಸದುದ್ದೇಶವಿದ್ದರೂ ಸ್ಪಷ್ಟತೆ ಬೇಕು

Published 5 ಆಗಸ್ಟ್ 2023, 0:29 IST
Last Updated 5 ಆಗಸ್ಟ್ 2023, 0:29 IST
ಅಕ್ಷರ ಗಾತ್ರ

ದೇಶದ ಸೇವಾ ಮತ್ತು ತಯಾರಿಕಾ ವಲಯಗಳಿಗೆ ಅತ್ಯಗತ್ಯವಾದ ಇಂಟರ್ನೆಟ್ ಹಾಗೂ ಕಂಪ್ಯೂಟರ್‌ಗಳ ಕೊರತೆಯಾಗದಂತೆ ಸರ್ಕಾರ ಅತೀವ ಕಾಳಜಿ ವಹಿಸಬೇಕಿದೆ.

ಲ್ಯಾ‍ಪ್‌ಟಾಪ್‌, ಪರ್ಸನಲ್ ಕಂಪ್ಯೂಟರ್‌, ಟ್ಯಾಬ್‌ ಸೇರಿದಂತೆ ಪ್ರತಿನಿತ್ಯ ಬಳಸುವ ಕೆಲವು ಎಲೆಕ್ಟ್ರಾನಿಕ್ ಉಪಕರಣಗಳ ಆಮದನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ಇದು ಈಗಾಗಲೇ ಜಾರಿಗೆ ಬಂದಿದೆ. ಈ ಉಪಕರಣಗಳು ಉದ್ಯೋಗದ ಸ್ಥಳಗಳಲ್ಲಿ, ಶೈಕ್ಷಣಿಕ ಚಟುವಟಿಕೆಗಳಿಗೆ ಹಾಗೂ ವೈಯಕ್ತಿಕ ಬಳಕೆಗೆ ತೀರಾ ಅಗತ್ಯವಾದವು. ಹೀಗಾಗಿ ಇವುಗಳ ಆಮದನ್ನು ಹಠಾತ್ತನೆ ನಿರ್ಬಂಧಿಸಿರುವುದು ಆಶ್ಚರ್ಯ ಮೂಡಿಸುವಂಥದ್ದು. ಆಮದು ನಿರ್ಬಂಧ ಅಧಿಸೂಚನೆಯನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ವಿದೇಶ ವ್ಯಾಪಾರಗಳ ಮಹಾ ನಿರ್ದೇಶನಾಲಯ ಹೊರಡಿಸಿದೆ.

ಆಮದು ನಿರ್ಬಂಧಕ್ಕೆ ಕೇಂದ್ರ ಸರ್ಕಾರ ನೀಡಿರುವ ಕಾರಣಗಳು ಗಮನಾರ್ಹ. ದೇಶದಲ್ಲಿ ಲ್ಯಾಪ್‌ಟಾಪ್, ಪರ್ಸನಲ್ ಕಂಪ್ಯೂಟರ್‌, ಟ್ಯಾಬ್‌ಗಳ ಉತ್ಪಾದನೆಗೆ ಉತ್ತೇಜನ ನೀಡುವುದು ಈ ನಿರ್ಬಂಧದ ಹಿಂದಿರುವ ಒಂದು ಉದ್ದೇಶ. ತಯಾರಿಕಾ ವಲಯದಲ್ಲಿ ಆತ್ಮನಿರ್ಭರವಾಗುವುದಕ್ಕೆ ಉತ್ತೇಜನ ನೀಡುವುದು ಕೇಂದ್ರ ಸರ್ಕಾರದ ಘೋಷಿತ ನಿಲುವು ಆಗಿರುವಾಗ, ಲ್ಯಾಪ್‌ಟಾಪ್‌, ಪರ್ಸನಲ್‌ ಕಂಪ್ಯೂಟರ್‌ನಂತಹ ಅಗತ್ಯ ಉಪಕರಣಗಳ ದೇಶಿ ಉತ್ಪಾದನೆಗೆ ಒತ್ತು ನೀಡುವುದು ಸಹಜ ಹಾಗೂ ನಿರೀಕ್ಷಿತ ಕ್ರಮ. ಆದರೆ, ದೇಶಿ ಉತ್ಪಾದನೆಗೆ ಒತ್ತು ನೀಡಬೇಕು ಎಂದಾದರೆ ಆಮದು ವಹಿವಾಟಿಗೆ ನಿರ್ಬಂಧ ವಿಧಿಸಬೇಕಾದ ಅನಿವಾರ್ಯವೇನೂ ಇರಲಿಲ್ಲ.

ದೇಶಿ ಉತ್ಪಾದನೆ ಹೆಚ್ಚಿಸುವುದಕ್ಕೆ ಧನಸಹಾಯ ನೀಡುವುದು ಅಥವಾ ತೆರಿಗೆ ವಿನಾಯಿತಿಯಂತಹ ಕೊಡುಗೆಗಳನ್ನು ನೀಡುವುದು ಸೂಕ್ತ ಕ್ರಮವಾಗುತ್ತಿತ್ತು. ಆಮದಿನ ಮೇಲೆ ದಿಢೀರನೆ ನಿರ್ಬಂಧ ವಿಧಿಸುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ–ಪೂರೈಕೆ ಸಮತೋಲನಕ್ಕೆ ತಕ್ಷಣಕ್ಕೆ ಧಕ್ಕೆ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಪರಿಸ್ಥಿತಿಯ ಲಾಭ ಪಡೆದುಕೊಳ್ಳುವ ಗುಂಪುಗಳು, ಈ ಅಗತ್ಯ ಉಪಕರಣಗಳ ಲಭ್ಯತೆಯನ್ನು ಕೃತಕವಾಗಿ ತಗ್ಗಿಸಿ, ಬೆಲೆಯನ್ನು ಕೃತಕವಾಗಿ ಹೆಚ್ಚು ಮಾಡುವ ಸಾಧ್ಯತೆ ಇರುತ್ತದೆ.

ಭಾರತಕ್ಕೆ ಆಮದಾಗುವ ಲ್ಯಾಪ್‌ಟಾಪ್, ಪರ್ಸನಲ್ ಕಂಪ್ಯೂಟರ್, ಟ್ಯಾಬ್‌ಗಳಲ್ಲಿ ಚೀನಾ ಮೂಲದವು ಹೆಚ್ಚು ಎಂದು ವರದಿಗಳು ಹೇಳುತ್ತವೆ. ಆದರೆ, ಕೇಂದ್ರ ಸರ್ಕಾರವು ಆಮದು ನಿರ್ಬಂಧ ಜಾರಿಗೆ ತಂದಿರುವುದು ಯಾವುದೇ ದೇಶವನ್ನು ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡಿಲ್ಲ. ಈ ನಿರ್ಬಂಧವು ಎಲ್ಲ ದೇಶಗಳಿಗೂ ಸಮಾನವಾಗಿ ಅನ್ವಯವಾಗುತ್ತದೆ. ವಾಸ್ತವದಲ್ಲಿ, ನಿರ್ಬಂಧಗಳ ಜಾರಿಯ ಹಿಂದೆ ಇನ್ನೂ ಒಂದು ಮಹತ್ವದ ಕಾರಣ ಇದೆ. ‘ನಮ್ಮ ಪ್ರಜೆಗಳ ಭದ್ರತೆಯನ್ನು ಖಾತರಿಪಡಿಸುವುದು ಪ್ರಮುಖ ಕಾರಣ’ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

‘ಕೆಲವು ಹಾರ್ಡ್‌ವೇರ್‌ಗಳಲ್ಲಿ ಭದ್ರತೆಗೆ ಸಂಬಂಧಿಸಿದ ಲೋಪಗಳು ಇರಬಹುದು. ಅವು ಸೂಕ್ಷ್ಮ ಮಾಹಿತಿಯನ್ನು, ವೈಯಕ್ತಿಕ ಮಾಹಿತಿಯನ್ನು ಸೋರಿಕೆ ಮಾಡಬಹುದು. ಸುರಕ್ಷತೆಯು ನಮ್ಮ ಅತಿಮುಖ್ಯ ಆದ್ಯತೆ’ ಎಂದು ಕೂಡ ಈ ಅಧಿಕಾರಿ ಹೇಳಿದ್ದಾರೆ. ಆದರೆ, ಮಹಾನಿರ್ದೇಶನಾಲಯದ ಅಧಿಸೂಚನೆಯಲ್ಲಿ ಈ ಅಂಶದ ಪ್ರಸ್ತಾಪ ಇಲ್ಲ. ದೇಶದ ಜನರ ವೈಯಕ್ತಿಕ ಮಾಹಿತಿಯ ಭದ್ರತೆಯ ದೃಷ್ಟಿಯಿಂದ ಆಮದು ನಿರ್ಬಂಧ ಜಾರಿಗೆ ತಂದಿರುವುದು ನಿಜವೇ ಆಗಿದ್ದರೆ ಅದು ಸೂಕ್ತ ಕ್ರಮ ಆಗಬಹುದು. ಆದರೆ ಈ ಕುರಿತು ಸ್ಪಷ್ಟತೆ ಬೇಕು. 

ಭದ್ರತೆಯ ಕಾರಣಗಳನ್ನು ನೀಡಿರುವುದು ಜನರಲ್ಲಿ ಆತಂಕ ಮೂಡಿಸಬಲ್ಲದು ಕೂಡ. ಹತ್ತು ಹಲವು ಕಂಪನಿಗಳ, ಹತ್ತು ಹಲವು ಮಾದರಿಗಳ ಲ್ಯಾಪ್‌ಟಾಪ್‌, ಕಂಪ್ಯೂಟರ್‌, ಟ್ಯಾಬ್‌ಗಳನ್ನು ವೈಯಕ್ತಿಕ ಬಳಕೆಗೆ, ನೌಕರಿಯ ಅಗತ್ಯಗಳಿಗೆ ಜನ ಬಳಕೆ ಮಾಡುತ್ತಿದ್ದಾರೆ. ಅದರಲ್ಲಿ ಅವರು ತೀರಾ ಖಾಸಗಿಯಾದ ವಿವರಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರಬಹುದು. ಯಾವ ಹಾರ್ಡ್‌ವೇರ್‌ನಲ್ಲಿ ಭದ್ರತೆಗೆ ಸಂಬಂಧಿಸಿದ ಲೋಪಗಳು ಕಾಣಿಸಿಕೊಂಡಿವೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದರೆ, ತಾವು ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳು ಯಾವುವು ಎಂಬುದನ್ನು ಜನರು ನಿರ್ಧರಿಸಬಹುದು.

ಸೈಬರ್ ಭದ್ರತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ್ದೇ ಆದ ಪ್ರತ್ಯೇಕ ವಿಭಾಗ ಇದೆ. ಆ ವಿಭಾಗದ ನೆರವು ಪಡೆದು ಅಥವಾ ಇನ್ಯಾವುದೇ ಪರಿಣತ ಸಂಸ್ಥೆಯ ನೆರವು ಪಡೆದು, ಭದ್ರತೆಗೆ ಸಂಬಂಧಿಸಿದ ಲೋಪಗಳ ಬಗ್ಗೆ ಹಾಗೂ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕಾದುದು ಅಗತ್ಯ. ಇಂತಹ ಅಗತ್ಯ ಮಾಹಿತಿಗಳನ್ನು ನೀಡದೆ ಇದ್ದಲ್ಲಿ, ‘ಮಾಹಿತಿಯ ಭದ್ರತೆ, ಗೋಪ್ಯತೆ’ ಎಂಬ ಪದಗಳು ಜನರಲ್ಲಿ ಆತಂಕವನ್ನಷ್ಟೇ ಮೂಡಿಸಬಲ್ಲವು. ಆಮದು ನಿರ್ಬಂಧದ ಪರಿಣಾಮವು ಮಾರುಕಟ್ಟೆಯಲ್ಲಿ ಇನ್ನಷ್ಟೇ ಕಾಣಿಸಿಕೊಳ್ಳಬೇಕಿದೆ. ಇಂಟರ್ನೆಟ್ ಹಾಗೂ ಕಂಪ್ಯೂಟರ್‌ಗಳು ದೇಶದ ಸೇವಾ ಮತ್ತು ತಯಾರಿಕಾ ವಲಯದ ಪಾಲಿಗೆ ಬೆನ್ನೆಲುಬು ಇದ್ದಂತೆ. ಈ ಉಪಕರಣಗಳ ಕೊರತೆ ಎದುರಾದರೆ ಈ ವಲಯಗಳು ಸೊರಗುತ್ತವೆ. ಹಾಗಾಗದಂತೆಯೂ ಅತೀವ ಕಾಳಜಿ ವಹಿಸಬೇಕು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT