ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ‘ನಮ್ಮ ಕ್ಲಿನಿಕ್‌’ಗಳ ಅನಾರೋಗ್ಯ: ಸರ್ಕಾರದ ನಿರ್ಲಕ್ಷ್ಯ ಸಲ್ಲದು

Published 26 ಸೆಪ್ಟೆಂಬರ್ 2023, 0:30 IST
Last Updated 26 ಸೆಪ್ಟೆಂಬರ್ 2023, 0:30 IST
ಅಕ್ಷರ ಗಾತ್ರ

ಜನಸಾಮಾನ್ಯರ ಆರೋಗ್ಯದ ವಿಷಯದಲ್ಲಿ ಸರ್ಕಾರ ಉದಾಸೀನದಿಂದ ನಡೆದುಕೊಳ್ಳಬಾರದು. ‘ನಮ್ಮ ಕ್ಲಿನಿಕ್‌’ಗಳನ್ನು ಬಲಪಡಿಸುವ ದಿಸೆಯಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು

ನಗರ ಪ್ರದೇಶಗಳಲ್ಲಿನ ಆರ್ಥಿಕವಾಗಿ ಹಿಂದುಳಿದ ಎಲ್ಲ ವರ್ಗಗಳ ಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ‘ನಮ್ಮ ಕ್ಲಿನಿಕ್‌’ ಯೋಜನೆ ಆರಂಭವಾದ ಹತ್ತು ತಿಂಗಳಲ್ಲೇ ಅನಾರೋಗ್ಯಕ್ಕೆ ತುತ್ತಾಗಿದೆ. ಬಿಜೆಪಿ ನೇತೃತ್ವದ ಈ ಹಿಂದಿನ ಸರ್ಕಾರವು 2022ರ ಡಿಸೆಂಬರ್‌ನಲ್ಲಿ ಆರಂಭಿಸಿದ ಈ ಯೋಜನೆಯನ್ನು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮದ ರೂಪದಲ್ಲಿ ಬಿಂಬಿಸಲಾಗಿತ್ತು. ‘ನಮ್ಮ ಆರೋಗ್ಯ, ನಮ್ಮ ಸಮೀಪ’ ಎನ್ನುವ ಘೋಷವಾಕ್ಯದಡಿ 114 ಕ್ಲಿನಿಕ್‌ಗಳು ಮೊದಲ ಹಂತದಲ್ಲೇ ಕಾರ್ಯಾರಂಭ ಮಾಡಿದ್ದವು. ಪ್ರಸ್ತುತ 415 ‘ನಮ್ಮ ಕ್ಲಿನಿಕ್‌’ಗಳು ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಸರ್ಕಾರದ ಹೇಳಿಕೆಯ ಪ್ರಕಾರ, ಜನಸಾಮಾನ್ಯರ ಪಾಲಿಗೆ ಆರೋಗ್ಯಭಾಗ್ಯವನ್ನು ಖಾತರಿಪಡಿಸುವ ಸಂಜೀವಿನಿಯ ರೂಪದಲ್ಲಿ ಈ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸಬೇಕಾಗಿತ್ತು. ಆದರೆ, ವೈದ್ಯಾಧಿಕಾರಿ ಹಾಗೂ ಶುಶ್ರೂಷಕರ ಹುದ್ದೆಗಳನ್ನು ತುಂಬದಿರುವುದರಿಂದ ಹೆಚ್ಚಿನ ಸಂಖ್ಯೆಯ ‘ನಮ್ಮ ಕ್ಲಿನಿಕ್‌’ಗಳು ಹೆಸರಿಗಷ್ಟೇ ಉಳಿದಿವೆ. ನಗರ ಪ್ರದೇಶಗಳಲ್ಲಿನ ಕೊಳೆಗೇರಿ ನಿವಾಸಿಗಳು, ದಿನಗೂಲಿ ಕಾರ್ಮಿಕರು ಹಾಗೂ ದುರ್ಬಲ ವರ್ಗದವರಿಗೆ ಸುಲಭವಾಗಿ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವ ‘ನಮ್ಮ ಕ್ಲಿನಿಕ್‌’ನ ಪರಿಕಲ್ಪನೆ ಚೆನ್ನಾಗಿಯೇ ಇದೆ. ವೈದ್ಯಾಧಿಕಾರಿ, ನರ್ಸ್‌, ಲ್ಯಾಬ್‌ ಟೆಕ್ನೀಷಿಯನ್‌ ಹಾಗೂ ಡಿ ದರ್ಜೆಯ ನೌಕರನನ್ನು ಹೊಂದುವ ಮೂಲಕ ಈ ಕ್ಲಿನಿಕ್‌ಗಳು ಕಾರ್ಯನಿರ್ವಹಿಸಬೇಕು. ರಕ್ತ ಪರೀಕ್ಷೆ ಸೇರಿದಂತೆ ವಿವಿಧ ಪರೀಕ್ಷೆಗಳು, ತುರ್ತು ವೈದ್ಯಕೀಯ ಸೇವೆಗಳನ್ನು ಒದಗಿಸಬೇಕಾದ ‘ನಮ್ಮ ಕ್ಲಿನಿಕ್‌’ಗಳನ್ನು ಜನವಸತಿ ಪ್ರದೇಶಗಳಿಗೆ ಸಮೀಪದಲ್ಲೇ ಸ್ಥಾಪಿಸುವ ಮೂಲಕ ಜನಸಾಮಾನ್ಯರಿಗೆ ಆರೋಗ್ಯ ಸೇವೆಗಳು ಸುಲಭವಾಗಿ ದೊರೆಯುವಂತೆ ಮಾಡುವ ಉದ್ದೇಶ ಸರ್ಕಾರದ್ದಾಗಿತ್ತು.

ಗರ್ಭಿಣಿಯರ ಆರೈಕೆ, ಶಿಶುವಿನ ಆರೈಕೆ, ಮಕ್ಕಳ ಸೇವೆ, ಮಧುಮೇಹ ಮತ್ತು ರಕ್ತದೊತ್ತಡದ ಪರೀಕ್ಷೆ, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ತುರ್ತು ವೈದ್ಯಕೀಯ ಚಿಕಿತ್ಸೆ ಸೇರಿದಂತೆ 12 ಪ್ರಮುಖ ಆರೋಗ್ಯ ಸೇವೆಗಳು ‘ನಮ್ಮ ಕ್ಲಿನಿಕ್‌’ನಲ್ಲಿ ಲಭ್ಯ ಎಂದು ಹೇಳಲಾಗಿತ್ತು. ಈ ಕ್ಲಿನಿಕ್‌ಗಳಿಂದಾಗಿ ಸರ್ಕಾರಿ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆಂದೂ ನಿರೀಕ್ಷಿಸಲಾಗಿತ್ತು. ದುರದೃಷ್ಟವಶಾತ್‌, ಸಿಬ್ಬಂದಿಯ ಕೊರತೆಯಿಂದಾಗಿ ‘ನಮ್ಮ ಕ್ಲಿನಿಕ್‌’ಗಳ ಸ್ಥಾಪನೆಯ ಪ್ರಾಥಮಿಕ ಉದ್ದೇಶವೇ ವಿಫಲವಾಗಿದೆ. ‘ನಮ್ಮ ಕ್ಲಿನಿಕ್‌’ಗಳಲ್ಲಿ ಕಾರ್ಯನಿರ್ವಹಿಸಲು ವೈದ್ಯರು, ಶುಶ್ರೂಷಕರು ಹಾಗೂ ಪ್ರಯೋಗಾಲಯ ತಂತ್ರಜ್ಞರು ನಿರಾಸಕ್ತಿ ಹೊಂದಿದ್ದು, ಅನೇಕ ಕ್ಲಿನಿಕ್‌ಗಳಲ್ಲಿ ಈವರೆಗೆ ನೇಮಕಾತಿಯೇ ನಡೆದಿಲ್ಲ. ಇದರಿಂದಾಗಿ ಕ್ಲಿನಿಕ್‌ಗಳಿಗೆ ಬರುವ ಜನರಿಗೆ ಸಮರ್ಪಕ ವೈದ್ಯಕೀಯ ಸೇವೆ ದೊರೆಯುತ್ತಿಲ್ಲ.

ಗಟ್ಟಿಯಾದ ತಳಹದಿಯಿಲ್ಲದೆ ಚುನಾವಣಾ ಸಮಯದ ಕಾರ್ಯಕ್ರಮದಂತೆ ಆರಂಭವಾದ ‘ನಮ್ಮ ಕ್ಲಿನಿಕ್‌’ ಯೋಜನೆಯನ್ನು ಬಲಪಡಿಸುವ ಗೋಜಿಗೆ ಈ ಹಿಂದಿನ ಸರ್ಕಾರ ಹೋಗಲಿಲ್ಲ. ಚುನಾವಣೆಯ ನಂತರ ಚುಕ್ಕಾಣಿ ಹಿಡಿದ ಕಾಂಗ್ರೆಸ್‌ ನೇತೃತ್ವದ ಸರ್ಕಾರವೂ ಈವರೆಗೆ ‘ನಮ್ಮ ಕ್ಲಿನಿಕ್‌’ಗಳನ್ನು ಉತ್ತಮಗೊಳಿಸುವ ಪ್ರಯತ್ನ ನಡೆಸಿದಂತಿಲ್ಲ. ಕಡಿಮೆ ವೇತನ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಲು ವೈದ್ಯರು ಹಿಂದೇಟು ಹಾಕುತ್ತಾರೆ ಎನ್ನುವ ನೆಪ ಈ ಬಾರಿಯೂ ಕೇಳಿಬಂದಿದೆ. ನಿಜವಾದ ಸಮಸ್ಯೆ ಇರುವುದು ಕಾರ್ಯಕ್ರಮವನ್ನು ಜಾರಿಗೊಳಿಸುವಲ್ಲಿ ಸರ್ಕಾರಕ್ಕಿರುವ ಇಚ್ಛಾಶಕ್ತಿಯ ಕೊರತೆಯಲ್ಲಿ. ಜನಸಾಮಾನ್ಯರ ಆರೋಗ್ಯದ ವಿಷಯದಲ್ಲಿ ಸರ್ಕಾರ ಉದಾಸೀನದಿಂದ ನಡೆದುಕೊಳ್ಳಬಾರದು. ವೈದ್ಯರ ಕೊರತೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು; ಕ್ಲಿನಿಕ್‌ಗಳಲ್ಲಿ ಸಂಜೆಯೂ ಸೇವೆ ಒದಗಿಸಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ತಮ್ಮ ಮಾತನ್ನು ಸಚಿವರು ವಿಳಂಬವಿಲ್ಲದೆ ಕಾರ್ಯರೂಪಕ್ಕೆ ತರಬೇಕಾಗಿದೆ. ವೈದ್ಯರ ಗೈರುಹಾಜರಿಯಲ್ಲಿ ಕೆಲವು ಕ್ಲಿನಿಕ್‌ಗಳಲ್ಲಿ ಶುಶ್ರೂಷಕರೇ ಪರೀಕ್ಷೆ ನಡೆಸಿ ಔಷಧಗಳನ್ನು ವಿತರಿಸುತ್ತಿದ್ದಾರೆ ಎನ್ನುವ ವರದಿಗಳು ಆತಂಕ ಹುಟ್ಟಿಸುವಂತಹವು. ಬಡವರ ಆರೋಗ್ಯದೊಂದಿಗೆ ಆಟವಾಡುವ ಕೆಲಸವನ್ನು ಯಾರೂ ಮಾಡಬಾರದು. ‘ನಮ್ಮ ಕ್ಲಿನಿಕ್‌’ಗಳಲ್ಲಿ ವೈದ್ಯರಿಂದಲೇ ಚಿಕಿತ್ಸೆ ದೊರೆಯುವ ಖಾತರಿಯನ್ನು ಸರ್ಕಾರ ನೀಡಬೇಕು. ಮೂಲಭೂತ ಸೌಕರ್ಯಗಳಿಲ್ಲದ ಹಳೆಯ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಲಿನಿಕ್‌ಗಳನ್ನು ಸುಸಜ್ಜಿತ ಕಟ್ಟಡಗಳಿಗೆ ಸ್ಥಳಾಂತರಿಸಬೇಕು. ಯಾವುದೇ ಕ್ಲಿನಿಕ್‌ನಲ್ಲಿ ಔಷಧಗಳ ಕೊರತೆ ಎದುರಾಗದಂತೆ ನಿಗಾ ವಹಿಸಬೇಕು. ಡೆಂಗಿ ಹಾಗೂ ಮಲೇರಿಯಾ ಪ್ರಕರಣಗಳು ರಾಜ್ಯದಲ್ಲಿ ವ್ಯಾಪಕವಾಗಿರುವ ಸಂದರ್ಭದಲ್ಲಿ ‘ನಮ್ಮ ಕ್ಲಿನಿಕ್‌’ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕೆಲಸವನ್ನು ಸರ್ಕಾರ ಮಾಡಬೇಕು. ಆರೋಗ್ಯಸೇವೆಗಳ ವಿಕೇಂದ್ರೀಕರಣದ ರೂಪದಲ್ಲಿ ಬಹು ಮುಖ್ಯವಾದ ಈ ಕ್ಲಿನಿಕ್‌ಗಳನ್ನು ಬಲಪಡಿಸುವ ದಿಸೆಯಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಬೇಕಾಗಿದೆ. ಆರೋಗ್ಯ ಸೇವೆಗಳಿಗಾಗಿ ಜನ ಪರದಾಡುವಂತಹ ಸ್ಥಿತಿಯನ್ನು ಸರ್ಕಾರ ಸೃಷ್ಟಿಸಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT