ಬದಲಾವಣೆಯ ‘ಹರಿಕಾರ’ ಚುನಾವಣೆ ಪ್ರಚಾರಕ್ಕೆ ಮುನ್ನುಡಿ

7

ಬದಲಾವಣೆಯ ‘ಹರಿಕಾರ’ ಚುನಾವಣೆ ಪ್ರಚಾರಕ್ಕೆ ಮುನ್ನುಡಿ

Published:
Updated:
Deccan Herald

ಪ್ರಧಾನಿ ನರೇಂದ್ರ ಮೋದಿಯವರು ತಮ್ಮನ್ನು ತಾವು ಬದಲಾವಣೆಯ ಹರಿಕಾರ ಎಂಬುದಾಗಿ ಸದಾ ಬಿಂಬಿಸಿಕೊಳ್ಳಲು ಯತ್ನಿಸುತ್ತಾರೆ. ನವದೆಹಲಿಯ ಕೆಂಪುಕೋಟೆಯಿಂದ ಸ್ವಾತಂತ್ರ್ಯೋತ್ಸವ ದಿನದಂದು ಮಾಡಿದ ಭಾಷಣದಲ್ಲೂ ಆ ಯತ್ನ ಎದ್ದು ಕಾಣಿಸುತ್ತಿತ್ತು. ಇಷ್ಟು ವರ್ಷಗಳ ಕಾಲ ರಾಷ್ಟ್ರದಲ್ಲಿ ಪ್ರಗತಿಯ ಚಲನೆಯೇ ಇರಲಿಲ್ಲ ಎಂದು ಹೇಳುವಾಗ ಕಾಂಗ್ರೆಸ್ ಕುರಿತ ಟೀಕೆಗಳೂ ಇದ್ದವು. ಆದರೆ ಈಗ, ‘ಮಲಗಿದ್ದ ಆನೆ ಎದ್ದು ಓಡುತ್ತಿದೆ. ಅದನ್ನು ಪ್ರಪಂಚ ಗುರುತಿಸಿದೆ’ ಎಂಬುದನ್ನು ಮೋದಿಯವರು ಕಾವ್ಯಾತ್ಮಕ ಪರಿಭಾಷೆಯಲ್ಲಿ ಹೇಳಿದ್ದಾರೆ. 2014ರಿಂದಲೇ ಈ ಕುರಿತ ಚಲನೆ ಆರಂಭವಾಯಿತು ಎಂಬುದನ್ನು ಅವರು ಸೂಚ್ಯವಾಗಿ ಹೇಳಿದ್ದಾರೆ.

ಜಿಎಸ್‍ಟಿ, ಎಂಎಸ್‍ಪಿ ಹೆಚ್ಚಳ, ಗ್ರಾಮೀಣ ವಿದ್ಯುದೀಕರಣ, ಬೇನಾಮಿ ಆಸ್ತಿ ಕಾಯ್ದೆ ಹಾಗೂ ದಿವಾಳಿ ಕಾಯ್ದೆ ಕಡೆಗಣನೆಯಾಗಿತ್ತು ಎಂದಿದ್ದಾರೆ. ತಾವು ಅಧಿಕಾರ ವಹಿಸಿಕೊಂಡಾಗ ರಾಷ್ಟ್ರ ಒಳ್ಳೆಯ ಸ್ಥಿತಿಯಲ್ಲಿ ಇದ್ದಿದ್ದರೆ ಇನ್ನೂ ಹೆಚ್ಚಿನದನ್ನು ಸಾಧಿಸಿರಬಹುದಿತ್ತು ಎಂಬ ಧ್ವನ್ಯರ್ಥವೂ ಇಲ್ಲಿ ಅಡಗಿದೆ. ಕೆಂಪುಕೋಟೆಯಲ್ಲಿ ಪ್ರಧಾನಿಯಾಗಿ ಅವರಿಗೆ ಇದು ಐದನೇ ಹಾಗೂ ಪ್ರಸಕ್ತ ಅವಧಿಯಲ್ಲಿ ಕಡೆಯ ಭಾಷಣ. ಲೋಕಸಭಾ ಚುನಾವಣೆ ಸನಿಹದಲ್ಲಿರುವಾಗ ಚುನಾವಣೆಯತ್ತಲೂ ಗಮನ ಇದ್ದದ್ದು ಭಾಷಣದಲ್ಲಿದ್ದ ವಿಚಾರಗಳಿಂದಲೇ ಸ್ಪಷ್ಟ. ಸುಮಾರು ಒಂದೂವರೆ ತಾಸಿನಲ್ಲಿ ನಾಟಕೀಯವಾಗಿ ಆಕರ್ಷಕ ಶೈಲಿಯಲ್ಲಿ ಭರವಸೆಗಳನ್ನು ಬಿತ್ತಿದ ಭಾಷಣವಿದು. ಅಭಿವೃದ್ಧಿ ಸಾಧನೆಗೆ ತುದಿಗಾಲಲ್ಲಿ ನಿಂತಿರುವ ನಾಯಕನಾಗಿ ತಮ್ಮನ್ನು ಬಣ್ಣಿಸಿಕೊಳ್ಳಲು ಮೋದಿಯವರು ಸಾಕಷ್ಟು ಸಮಯ ಮೀಸಲಿಟ್ಟರು.

‘ಈಗಾಗಲೇ ನಮ್ಮನ್ನು ಹಿಂದೆ ಹಾಕಿ ಮುಂದೆಹೋಗಿರುವ ಬೇರೆ ದೇಶಗಳಿಗಿಂತ ರಾಷ್ಟ್ರವನ್ನು ಮುಂದಕ್ಕೆ ಒಯ್ಯುವ ತರಾತುರಿ’ ತಮಗಿರುವುದಾಗಿಯೂ ಅವರು ಹೇಳಿದರು. ಸರ್ಕಾರದ ಸಾಧನೆಯನ್ನು ಹೇಳಿಕೊಳ್ಳುವುದರ ಜೊತೆಗೇ ಮುಂದಿನ ದಿನಗಳಲ್ಲಿ ಕೈಗೊಳ್ಳಲಿರುವ ಯೋಜನೆಗಳ ನೀಲನಕ್ಷೆ ಬಿಡಿಸಿಟ್ಟಿದ್ದು ವಿಶೇಷವಾಗಿತ್ತು. ರೈತರು, ದಲಿತರು, ಇತರ ಹಿಂದುಳಿದ ವರ್ಗದವರು, ಬಡವರು, ಮಧ್ಯಮ ವರ್ಗದವರು, ವ್ಯಾಪಾರಿಗಳು, ಈಶಾನ್ಯ ರಾಜ್ಯದವರು, ಕಾಶ್ಮೀರಿಗಳು– ಈ ಎಲ್ಲ ಜನವರ್ಗಗಳ ಮನಸ್ಸುಗಳನ್ನು ಮುಟ್ಟುವ ಯತ್ನವನ್ನೂ ಮೋದಿ ಈ ಭಾಷಣದಲ್ಲಿ ಮಾಡಿದ್ದಾರೆ. ಮಹಿಳೆಯರ ಕುರಿತಾಗಿ ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ. ತ್ರಿವಳಿ ತಲಾಖ್‍ ಕಾನೂನು ಜಾರಿಗೊಳಿಸುವ ಭರವಸೆ ಮುಖ್ಯವಾದುದು.

ಮರಣದಂಡನೆ ನೀಡಲಾದ ಅತ್ಯಾಚಾರ ಪ್ರಕರಣಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು ಎಂಬಂಥ ಕರೆ ನೀಡಿದ್ದಾರೆ ಅವರು. ಇದು ರಾಕ್ಷಸರ ಮನಸ್ಸಿನಲ್ಲಿ ಭೀತಿ ಹುಟ್ಟಿಸುವಂತಾಗಬೇಕು ಎಂಬ ಆಶಯ ಅವರದು. ಜೊತೆಗೆ, ಸೇನೆಯಲ್ಲಿ ಮಹಿಳೆಯರಿಗೆ ಕಾಯಂ ನೇಮಕಾತಿ ನೀಡುವ ವಿಚಾರವನ್ನೂ ಮೋದಿ ಪ್ರಕಟಿಸಿದ್ದಾರೆ. ಅಲ್ಲದೆ, ಮುಂದಿನ ತಿಂಗಳು 25ರಿಂದ 10 ಕೋಟಿ ಬಡ ಕುಟುಂಬಗಳನ್ನು ಆರೋಗ್ಯ ಸೇವೆ ಅಡಿ ತರುವಂತಹ ಆಯುಷ್ಮಾನ್ ಭಾರತ ಯೋಜನೆ ಆರಂಭವಾಗುತ್ತಿದೆ ಎಂಬುದನ್ನೂ ಪ್ರಧಾನಿ ಪ್ರಕಟಿಸಿದ್ದಾರೆ. ಸಮಾಜದ ಕಟ್ಟಕಡೆಯ ಜನರನ್ನೂ ತಲುಪುವಂತಹ ಬೃಹತ್ ಯೋಜನೆ ಇದು. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಆಧುನಿಕ ಆರೋಗ್ಯ ಸೌಲಭ್ಯಗಳೇ ಇಲ್ಲ. ಹೀಗಾಗಿ ಇದು ಆ ದಿಸೆಯಲ್ಲಿರಿಸಿದ ಒಂದು ಆರಂಭಿಕ ಹೆಜ್ಜೆ. ಇದರ ಯಶಸ್ಸಿಗೆ ಹಲವು ಮೂಲಸೌಕರ್ಯಗಳನ್ನು ಸೃಷ್ಟಿಸಬೇಕಾಗಿದೆ. ಇದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

2022ರೊಳಗೆ ಮಾನವಸಹಿತ ಗಗನನೌಕೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ವಿಚಾರ, ಮೋದಿಯವರ ಭಾಷಣದಲ್ಲಿದ್ದ ಇನ್ನೊಂದು ಪ್ರಮುಖ ಪ್ರಕಟಣೆ. ಪ್ರಧಾನಿಯಾಗಿ ಎರಡನೇ ಅವಧಿಗೆ ಇರಿಸಿಕೊಂಡಿರುವ ಈ ಗುರಿಸಾಧನೆಯ ನಿರೀಕ್ಷೆಯನ್ನು ವ್ಯಕ್ತಪಡಿಸಿದ ರೀತಿ ಇದು. ಅದೇ ರೀತಿ 2022ರೊಳಗೆ ರೈತರ ವರಮಾನ ದ್ವಿಗುಣಗೊಳಿಸುವ ಭರವಸೆಯನ್ನು ಮತ್ತೆ ನೀಡಿದ್ದಾರೆ. ಅಧಿಕಾರ ಗದ್ದುಗೆಗೆ ಮರಳುವ ವಿಶ್ವಾಸ ಇಲ್ಲಿ ವ್ಯಕ್ತ. ರಚನಾತ್ಮಕ ಅಭಿವೃದ್ಧಿ ಸಾಧನೆಗೆ ಜನಜೀವನ ಶಾಂತಿಯಿಂದ ಇರಬೇಕಾದುದು ಮುಖ್ಯ. ಆದರೆ ಕೃಷಿ ಸಂಕಷ್ಟ, ಕೈಗಾರಿಕಾ ಕ್ಷೇತ್ರದಲ್ಲಿನ ಗೊಂದಲಗಳು ಕಾಡುತ್ತಿವೆ. ಜೊತೆಗೆ, ಯಾವುದೇ ಕಟ್ಟುಪಾಡುಗಳೇ ಇಲ್ಲವೇನೋ ಎಂಬಂತೆ ಹೊಸ ಬಗೆಯ ಸಾಮಾಜಿಕ ಹಾಗೂ ಲಿಂಗತ್ವ ಹಿಂಸಾಚಾರಗಳು ದಿನನಿತ್ಯದ ವಿದ್ಯಮಾನಗಳಾಗುತ್ತಿರುವುದು ಕಂಗೆಡಿಸುವಂತಹದ್ದು. ಹೀಗಿದ್ದೂ ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಗುಂಪು ಹಲ್ಲೆ ಪ್ರಕರಣಗಳನ್ನು ಪ್ರಧಾನಿ ಪ್ರಸ್ತಾಪಿಸಲಿಲ್ಲ. ಆದರೆ ತಮ್ಮ ಸರ್ಕಾರಕ್ಕೆ ‘ಕಾನೂನು ಆಡಳಿತ’ (ರೂಲ್ ಆಫ್ ಲಾ) ಮುಖ್ಯವಾದುದು ಎಂಬುದನ್ನಷ್ಟೇ ಒತ್ತಿಹೇಳಿದರು. ಬರಲಿರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಭಾಷಣದಲ್ಲಿ ಈ ಕಹಿ ವಾಸ್ತವಗಳಿಗೆ ದನಿ ನೀಡದಿದ್ದುದರ ಹಿಂದಿನ ಉದ್ದೇಶ ಅರ್ಥವಾಗುವಂತಹದ್ದೇ!

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !