ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಪಿಎಂಎಲ್‌ಎ ಕುರಿತ ತೀರ್ಪುಕಳವಳಕಾರಿ, ಮರುಪರಿಶೀಲನೆಗೆ ಅರ್ಹ

Last Updated 31 ಜುಲೈ 2022, 19:45 IST
ಅಕ್ಷರ ಗಾತ್ರ

ಹಣಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)– 2002ರ ಅಡಿಯಲ್ಲಿನ ಹಲವು ಕಠಿಣ ಅಂಶ ಗಳನ್ನು ಸುಪ್ರೀಂ ಕೋರ್ಟ್‌ ಈಚೆಗೆ ನೀಡಿದ ತೀರ್ಪಿನಲ್ಲಿ ಎತ್ತಿಹಿಡಿದಿರುವುದು, ನಾಗರಿಕರ ಹಲವು
ಹಕ್ಕುಗಳನ್ನು ದುರ್ಬಲಗೊಳಿಸುವಂತಿದೆ. ಅಲ್ಲದೆ, ಕಾರ್ಯಾಂಗದ ಅತಿರೇಕಗಳಿಗೆ ವಿರುದ್ಧವಾಗಿ ಕಾನೂನು ನೀಡಿದ್ದ ರಕ್ಷಣೆಯು ಬಲ ಕಳೆದುಕೊಳ್ಳುವ ಸಾಧ್ಯತೆ ಕೂಡ ಇದೆ.

ಪಿಎಂಎಲ್‌ಎ ಅಡಿಯಲ್ಲಿಜಾರಿ ನಿರ್ದೇಶನಾಲಯಕ್ಕೆ (ಇ.ಡಿ.) ನೀಡಿರುವ ಅಧಿಕಾರವನ್ನು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ನೇತೃತ್ವದ ಪೀಠವು ಮಾನ್ಯ ಮಾಡಿದೆ. ಕಾಯ್ದೆಯ ಅಡಿಯಲ್ಲಿನ ಬಂಧನ ಹಾಗೂ ಆಸ್ತಿ ಜಪ್ತಿಮಾಡುವುದಕ್ಕೆ ಸಂಬಂಧಿಸಿದ ಕಠಿಣ ನಿಯಮಗಳು ಸಂವಿಧಾನಬದ್ಧವಾಗಿಯೇ ಇವೆ, ಅವು ನಿರಂಕುಶ ಅಧಿಕಾರವನ್ನು ನೀಡುವುದಿಲ್ಲ ಎಂದು ಕೋರ್ಟ್‌ ಹೇಳಿದೆ. ಪಿಎಂಎಲ್‌ಎ ಅಡಿಯಲ್ಲಿನ ಹಲವು
ಅಂಶಗಳು ಕಾನೂನಿನ ಸ್ವೀಕೃತ ತತ್ವಗಳಿಗೆ ವಿರುದ್ಧವಾಗಿ ಇವೆ, ಅವು ನ್ಯಾಯಾಲಯಗಳು ನೀಡಿರುವ ಹಲವು ನಿರ್ದೇಶನಗಳಿಗೆ ಅನುಗುಣವಾಗಿ ಇಲ್ಲ ಎಂಬ ತೀವ್ರ ಟೀಕೆಗೆ ಗುರಿಯಾಗಿವೆ.

ಇ.ಡಿ. ಕೂಡ ಪೊಲೀಸರಂತೆ ಕೆಲಸ ಮಾಡುತ್ತಿರುವ ಕಾರಣ, ಪೊಲೀಸ್ ವ್ಯವಸ್ಥೆಗೆ ಅನ್ವಯವಾಗುವ ಮಾನದಂಡವೇ ಇ.ಡಿ.ಗೆ ಕೂಡ ಅನ್ವಯವಾಗಬೇಕು ಎಂದು ಅರ್ಜಿದಾರರು ಕೋರಿದ್ದರು. ಆದರೆ, ಈ ವಾದವನ್ನು ನ್ಯಾಯಾಲಯವು ಒಪ್ಪಿಕೊಂಡಿಲ್ಲ ಎನ್ನುವುದನ್ನು ತೀರ್ಪು ತೋರಿಸುತ್ತಿದೆ.

ಕಾನೂನಿನ ಅಡಿಯಲ್ಲಿ ಒಪ್ಪಿತವಾಗಿರುವ ಹಲವು ನಿಯಮಗಳಿಗೆ ಹೊರತಾದ ಅಂಶಗಳು ತೀರ್ಪಿನಲ್ಲಿ ಇವೆ. ಆರೋಪವನ್ನು ಸಾಬೀತು ಮಾಡುವ ಹೊಣೆಯು ತನಿಖಾ ಸಂಸ್ಥೆಯ ಮೇಲೆ ಇರುವುದು ಸಹಜ. ಆದರೆ, ಕಾಯ್ದೆಯ ಸೆಕ್ಷನ್‌ 24ರ ಪ್ರಕಾರ, ಆರೋಪವನ್ನು ಸುಳ್ಳು ಎಂದು ಸಾಬೀತು ಮಾಡುವ ಹೊಣೆಯು ಆರೋಪಿಯ ಮೇಲೆ ಇರುತ್ತದೆ. ಆರೋಪ ಸಾಬೀತಾಗುವವರೆಗೂ ವ್ಯಕ್ತಿ ನಿರಪರಾಧಿಯೆಂದೇ ಪರಿಗಣಿತವಾಗು
ತ್ತಾನೆ ಎನ್ನುವ, ಕ್ರಿಮಿನಲ್ ಅಪರಾಧಕ್ಕೆ ಸಂಬಂಧಿಸಿದ ಕಾನೂನುಗಳ ಹಿಂದೆ ಇರುವ ತತ್ವಕ್ಕೆ ಇದು ವಿರುದ್ಧ.

ಬಂಧನದ ಸಂದರ್ಭದಲ್ಲಿ ಇ.ಡಿ. ಎದುರು ನೀಡಿದ ಹೇಳಿಕೆಯನ್ನು ಕೋರ್ಟ್‌ನಲ್ಲಿ ಸಾಕ್ಷ್ಯವಾಗಿ ಪರಿಗಣಿಸ ಬಹುದು ಎನ್ನುವ ಅಂಶವನ್ನೂ ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ. ಇದು ಕೂಡ ಒಪ್ಪಿತ ತತ್ವಕ್ಕೆ ವಿರುದ್ಧ. ಆರೋಪಿಯು ತನ್ನ ಮೇಲಿನ ಆರೋಪಗಳಿಗೆ ತಾನೇ ಸಾಕ್ಷಿಯಾಗಲು ಸಾಧ್ಯವಿಲ್ಲ ಎಂಬುದು ಕಾನೂನಿನ ಅಡಿಯಲ್ಲಿ ಸ್ವೀಕೃತವಾಗಿರುವ ತತ್ವ. ಪಿಎಂಎಲ್‌ಎ ಅಡಿ ಬಂಧಿತನಾಗುವ ವ್ಯಕ್ತಿಗೆ ಜಾಮೀನು ನೀಡಲು ಇರುವ ನಿಯಮಗಳು ಬಹಳ ಕಠಿಣವಾಗಿವೆ. ಆದರೂ ಕೋರ್ಟ್ ಅವನ್ನು ಎತ್ತಿಹಿಡಿದಿದೆ. ಜಾಮೀನಿನ ಹಕ್ಕಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಈ ಹಿಂದೆ ನೀಡಿದ್ದ ತೀರ್ಪುಗಳಿಗೆ ಇದು ಹೊಂದಿಕೆಯಾಗುತ್ತಿಲ್ಲ.

ಜಾಮೀನಿನ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಉದಾರ ನಿಲುವು ತಳೆದ ನಿದರ್ಶನಗಳು ಹಲವು
ಇವೆ. ಜಾರಿ ನಿರ್ದೇಶನಾಲಯವು ದಾಖಲಿಸುವ ಪ್ರಕರಣದ ವರದಿಯ ಪ್ರತಿಯನ್ನು (ಪೊಲೀಸರು ದಾಖಲಿಸುವ ಪ್ರಥಮ ಮಾಹಿತಿ ವರದಿಯ ರೀತಿಯದ್ದು) ಆರೋಪಿಗೆ ನೀಡುವುದು ಕಡ್ಡಾಯ ಅಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಆದರೆ, ಈ ವರದಿಯ ಪ್ರತಿಯನ್ನು ಪಡೆಯುವುದು ಆರೋಪಿಯ ಸಹಜ ಹಕ್ಕು ಎಂದು ಪರಿಗಣಿತವಾಗಿದೆ.

ಸರ್ಕಾರವು ತನ್ನ ರಾಜಕೀಯ ವಿರೋಧಿಗಳು ಹಾಗೂ ಟೀಕಾಕಾರರ ವಿರುದ್ಧ ಇ.ಡಿ.ಯನ್ನು ಒಂದು ಅಸ್ತ್ರವಾಗಿ ಮತ್ತೆ ಮತ್ತೆ ಬಳಸಿಕೊಂಡಿದೆ. ಈ ಅಸ್ತ್ರವನ್ನು ಬಳಸಿಕೊಂಡು ಕಾರ್ಯಾಂಗವು ಅತಿರೇಕದ ವರ್ತನೆ ತೋರುತ್ತಿರುವುದು ಕಾಣುವಂತಿದ್ದರೂ ಈ ತೀರ್ಪು ಪ್ರಜೆಗಳ ಹಕ್ಕುಗಳನ್ನು ರಕ್ಷಿಸಲು ವಿಫಲವಾಗಿದೆ. ಪಿಎಂಎಲ್‌ಎಯ ಕೆಲವು ಅಂಶಗಳು ಪ್ರಜೆಗಳ ಹಲವು ಮೂಲಭೂತ ಹಕ್ಕುಗಳಿಗೆ ಸವಾಲು ಹಾಕುವಂತೆ ಇವೆ. ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳಲು ಅವಕಾಶ ಇರುವ ಇಂತಹ ಅಂಶಗಳನ್ನು ಕಾನೂನಿನ ಭಾಗವಾಗಿ ಮುಂದುವರಿಯಲು ಬಿಡುವುದು ತಪ್ಪು.

ಆರೋಪ ಸಾಬೀತು ಆಗುವವರೆಗೂ ವ್ಯಕ್ತಿಯನ್ನು ಅಪರಾಧಿ ಎಂದು ಪರಿಗಣಿಸಲಾಗದು ಎಂಬ ತತ್ವವು ಸಂವಿಧಾನದ ಮೂಲಕ ಖಾತರಿಪಡಿಸಿರುವುದಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಮುಂದೆ ಹೇಳಿದೆ ಎಂಬುದು ಗಮನಾರ್ಹ. ಇದನ್ನು ಕೋರ್ಟ್ ಒಪ್ಪಿದೆ. ಆರೋಪ ಸಾಬೀತಾಗುವವರೆಗೂ ಅಪರಾಧಿ ಅಲ್ಲ ಎಂಬ ಪೂರ್ವನಂಬಿಕೆಯ ತತ್ವವನ್ನು ಸಂಸತ್ತು, ಶಾಸನಸಭೆಯು ಕಾನೂನಿನ ಮೂಲಕ ಇಲ್ಲವಾಗಿಸ
ಬಹುದು ಎಂದು ಕೋರ್ಟ್‌ ಹೇಳಿದೆ. ಈ ತೀರ್ಪು ಒಟ್ಟಾರೆಯಾಗಿ ಕಳವಳಗಳನ್ನು ಮೂಡಿಸುವಂಥದ್ದು. ಇದನ್ನು ಕೋರ್ಟ್‌ ಮರುಪರಿಶೀಲನೆಗೆ ಒಳಪಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT