ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಇವಿಎಂ ಕುರಿತ ‘ಸುಪ್ರೀಂ’ ತೀರ್ಪು ಕೊನೆಯಾಗದ ಅನುಮಾನ

ಇವಿಎಂ ಮತ ಚಲಾವಣೆ ಪ್ರಕ್ರಿಯೆಯು ಸಂಪೂರ್ಣ ವಿಶ್ವಾಸಾರ್ಹ ಮತ್ತು ಲೋಪರಹಿತವಾಗಿ ಇರುವುದು ಅತ್ಯಗತ್ಯ
Published 29 ಏಪ್ರಿಲ್ 2024, 22:31 IST
Last Updated 29 ಏಪ್ರಿಲ್ 2024, 22:31 IST
ಅಕ್ಷರ ಗಾತ್ರ

ವಿದ್ಯುನ್ಮಾನ ಮತಯಂತ್ರಗಳಿಗೆ (ಇವಿಎಂ) ಸಂಬಂಧಿಸಿದ ಪ್ರಕರಣದಲ್ಲಿನ ಕೆಲವು ಬೇಡಿಕೆಗಳ ಪೈಕಿ,
ಇವಿಎಂಗಳಲ್ಲಿನ ಮತಗಳು ಮತ್ತು ಶೇಕಡ 100ರಷ್ಟು ವಿವಿ–ಪ್ಯಾಟ್‌ ಯಂತ್ರಗಳಲ್ಲಿನ ಮತಚೀಟಿಗಳನ್ನು ಪರಸ್ಪರ ಹೋಲಿಸಿ ನೋಡಬೇಕು ಎಂದು ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಅನಿರೀಕ್ಷಿತವೇನೂ ಅಲ್ಲ. ಇವಿಎಂಗಳ ಮೂಲಕ ಮತದಾನದ ವ್ಯವಸ್ಥೆಗೆ ನ್ಯಾಯಾಲಯವು ಈ ಹಿಂದೆಯೇ ಒಪ್ಪಿಗೆ ನೀಡಿದೆ. ಅಷ್ಟೇ ಅಲ್ಲದೆ, ಶೇಕಡ 100ರಷ್ಟು ಒತ್ತಟ್ಟಿಗಿರಲಿ, ವಿವಿ–ಪ್ಯಾಟ್‌ ಯಂತ್ರ
ಗಳಲ್ಲಿನ ಶೇಕಡ 50ರಷ್ಟು ಮತಚೀಟಿಗಳನ್ನಾದರೂ ತಾಳೆ ನೋಡಲು ಅನುಮತಿಸಬೇಕೆಂಬ ಬೇಡಿಕೆಗಳನ್ನು ತಿರಸ್ಕರಿಸಿದೆ. ಮತ್ತೊಂದೆಡೆ, ಪ್ರತಿ ಕ್ಷೇತ್ರದ ಒಂದು ಮತಗಟ್ಟೆಯಲ್ಲಿ ಮಾತ್ರ ವಿವಿ–ಪ್ಯಾಟ್ ತಾಳೆ ಮಾಡಿ ನೋಡಲು ಇದ್ದ ಮಿತಿಯನ್ನು ಐದು ಮತಗಟ್ಟೆಗಳಿಗೆ ಹೆಚ್ಚಿಸುವುದಕ್ಕೆ ನ್ಯಾಯಾಲಯ ಈ ಹಿಂದೆಯೇ ಬೆಂಬಲ ನೀಡಿದೆ. ಇಂತಹ ಮತಗಟ್ಟೆಗಳನ್ನು ಯಾದೃಚ್ಛಿಕವಾಗಿ ಆಯ್ಕೆ ಮಾಡಲು ಅವಕಾಶವಿದೆ. ಅಂದಹಾಗೆ, ಇವಿಎಂಗಳ ಕಾರ್ಯಾಚರಣೆ ಬಗ್ಗೆ ಇದ್ದ ಅನುಮಾನಗಳನ್ನು ಹೋಗಲಾಡಿಸುವ ಉದ್ದೇಶದಿಂದ ವಿವಿ–ಪ್ಯಾಟ್ ಮತಚೀಟಿ ಸೌಲಭ್ಯವು 2013ರಲ್ಲಿ ಜಾರಿಗೆ ಬಂದಿತು. ನ್ಯಾಯಾಲಯವು ಈಗ ತನ್ನ ಈ ಹಿಂದಿನ ತೀರ್ಪುಗಳನ್ನು ಪುನರ್ ದೃಢೀಕರಿಸುವ ಮೂಲಕ ಇವಿಎಂ ಮತದಾನ ವ್ಯವಸ್ಥೆಗೆ ಮತ್ತೆ ತನ್ನ ಒಪ್ಪಿಗೆಯ ಮುದ್ರೆ ಒತ್ತಿದೆ.

ನ್ಯಾಯಾಲಯವು ಈಗ ಎರಡು ಪರಿಹಾರ ಕ್ರಮ ಗಳನ್ನು ಒಳಗೊಂಡ ನಿರ್ದೇಶನಗಳನ್ನು ನೀಡಿದೆ. ಇವು ಇವಿಎಂ ವ್ಯವಸ್ಥೆಯ ಸುರಕ್ಷತೆಯನ್ನು ಹೆಚ್ಚಿಸುತ್ತವೆ ಎಂದು ಪರಿಭಾವಿಸಿದೆ. ಚಿಹ್ನೆಗಳನ್ನು ಅಪ್‌ಲೋಡ್ ಮಾಡುವ ಘಟಕಗಳನ್ನು ಫಲಿತಾಂಶ ಬಂದ ನಂತರದ 45 ದಿನಗಳವರೆಗೆ ಭದ್ರತಾ ಕೊಠಡಿಯಲ್ಲಿ ಇರಿಸುವುದನ್ನು ಖಾತರಿಗೊಳಿಸಬೇಕು ಎಂಬುದು ಮೊದಲನೆಯ ಕ್ರಮವಾಗಿದೆ. ಮತಗಳ ತಪ್ಪು ಎಣಿಕೆಗೆ ಆಸ್ಪದ ನೀಡದಿರುವುದನ್ನು ಖಚಿತಗೊಳಿಸುವುದು ಇದರ ಉದ್ದೇಶ. ಸೋಲು ಕಂಡವರ ಪೈಕಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿ ಇರುವ ಅಭ್ಯರ್ಥಿಗಳಿಗೆ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಏಳು ದಿನಗಳ ಒಳಗೆ ಕ್ಷೇತ್ರ ವ್ಯಾಪ್ತಿಯಲ್ಲಿನ ಒಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಆಯಾ ಕ್ಷೇತ್ರದ ಶೇ 5ರಷ್ಟು ಇವಿಎಂಗಳಲ್ಲಿನ ಮೈಕ್ರೊ ಕಂಟ್ರೋಲರ್‌ಗಳನ್ನು ಎಂಜಿನಿಯರುಗಳ ಪರಿಶೀಲನೆಗೆ ಕೋರಲು ಅವಕಾಶ ಕಲ್ಪಿಸಬೇಕು ಎಂಬುದು ಎರಡನೇ ಕ್ರಮವಾಗಿದೆ. ಪ್ರಸ್ತುತ ಜಾರಿಯಲ್ಲಿರುವ ನಿಬಂಧನೆಗಳ ಜೊತೆಗೆ ಈ ಕ್ರಮಗಳ ಅಳವಡಿಕೆಯು ದೋಷರಹಿತ ಮತ್ತು ಸಮಸ್ಯೆಮುಕ್ತ ಮತ ಚಲಾವಣೆ ವ್ಯವಸ್ಥೆಯನ್ನು ಖಾತರಿಗೊಳಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಆದರೆ, ನ್ಯಾಯಾಲಯದ ತೀರ್ಪು ಇವಿಎಂಗಳ ಕಾರ್ಯಾಚರಣೆ ಬಗೆಗಿನ ಅನುಮಾನಗಳನ್ನು ಕೊನೆಗಾಣಿಸಿ ಆ ಕುರಿತ ಚರ್ಚೆಗಳಿಗೆ ಇತಿಶ್ರೀ ಹಾಡುವ ಸಾಧ್ಯತೆಗಳು ಕಂಡುಬರುತ್ತಿಲ್ಲ. ಎಲೆಕ್ಟ್ರಾನಿಕ್ ಮತಯಂತ್ರಗಳ ಬಗ್ಗೆ ತಮ್ಮದೇ ಸಂಶಯಗಳನ್ನು ಹೊಂದಿ ವಿರೋಧಿಸುತ್ತಿರುವವರು ನ್ಯಾಯಾಲಯದ ತೀರ್ಪನ್ನು ನಿರಾಶಾದಾಯಕ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು ವಿವಿ–ಪ್ಯಾಟ್‌ನ ಹೆಚ್ಚಿನ ಬಳಕೆಗಾಗಿ ಅಭಿಯಾನ ಮುಂದುವರಿಸುವುದಾಗಿ ಹೇಳಿವೆ. ಎಲ್ಲಾ ವಿವಿ–ಪ್ಯಾಟ್ ಮತಚೀಟಿಗಳನ್ನು ಇವಿಎಂ ಮತಗಳೊಂದಿಗೆ ತಾಳೆ ನೋಡುವುದು ಜಟಿಲ ಪ್ರಕ್ರಿಯೆಯಾಗಿದ್ದು, ಚುನಾವಣಾ ಫಲಿತಾಂಶ ವಿಳಂಬಗೊಳ್ಳಲು ಕಾರಣವಾಗಬಹುದು ಎಂದು ನ್ಯಾಯಾಲಯ ಪ್ರತಿಪಾದಿಸಿದೆ. ನ್ಯಾಯಾಲಯದ ಈ ಪ್ರತಿಪಾದನೆಯನ್ನು ಅತ್ಯುತ್ತಮ ತರ್ಕವೆಂದು ಹೇಳಲಾಗದು. ಅಸೋಸಿಯೇಷನ್ ಫಾರ್‌ ಡೆಮಾಕ್ರಟಿಕ್ ರಿಫಾರ್ಮ್ಸ್‌ನಂತಹ (ಎಡಿಆರ್) ಅತ್ಯುತ್ತಮ ವಿಶ್ವಾಸಾರ್ಹ ಸಂಸ್ಥೆಗಳು ಈ ಪ್ರಕರಣ
ದಲ್ಲಿ ಅರ್ಜಿದಾರ ಆಗಿದ್ದವು ಎಂಬುದು ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವಾಗಿದೆ. ಅರ್ಜಿದಾರರ ಆಶಯಗಳು ದೋಷಪೂರಿತವಾಗಿರಬಹುದು, ಅರ್ಜಿದಾರರು ದುರುದ್ದೇಶ ಹೊಂದಿರಬಹುದು ಅಥವಾ ದೇಶದ ಸಾಧನೆಗಳನ್ನು ದುರ್ಬಲಗೊಳಿಸುವ ಉದ್ದೇಶ ಹೊಂದಿರಬಹುದು ಎಂದೂ ಕೋರ್ಟ್ ಉದ್ಗರಿಸಿದೆ. ನ್ಯಾಯಾಲಯದ ಈ ರೀತಿಯ ವ್ಯಾಖ್ಯಾನವು ದುರದೃಷ್ಟಕರ. ವ್ಯವಸ್ಥೆಯ ಬಗೆಗೆ ಅನುಮಾನಗಳು ಇರುವತನಕ ಇದನ್ನು ಇತ್ಯರ್ಥಗೊಂಡ ಪ್ರಕರಣ ಎಂದು ಭಾವಿಸಲಾಗದು. ದೇಶದಲ್ಲಿ ಇವಿಎಂ ಇತಿಹಾಸವು ಕ್ರೋಡೀಕೃತ ಸುರಕ್ಷಾ ಕ್ರಮಗಳನ್ನು ಮತ್ತು ವಿಶ್ವಾಸಾರ್ಹತೆ ಕಾಪಾಡಿಕೊಳ್ಳಲು ಹೆಚ್ಚೆಚ್ಚು ಕ್ರಮಗಳ ಅಳವಡಿಕೆಯನ್ನು ಒಳಗೊಂಡಿದ್ದಾಗಿದೆ. ಭವಿಷ್ಯದಲ್ಲಿ, ಇಂತಹ ಇನ್ನಷ್ಟು ಕ್ರಮಗಳ ಜಾರಿಯನ್ನು ಕೂಡ ಅಲ್ಲಗಳೆಯಲಾಗದು. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಇವಿಎಂ ಮತ ಚಲಾವಣೆ ಪ್ರಕ್ರಿಯೆಯು ಸಂಪೂರ್ಣ ವಿಶ್ವಾಸಾರ್ಹವಾಗಿ ಮತ್ತು ಲೋಪರಹಿತವಾಗಿ ಇರುವುದು ಅತ್ಯಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT