ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಗಣರಾಜ್ಯೋತ್ಸವ ಸ್ತಬ್ಧಚಿತ್ರ ವಿವಾದ– ಆಯ್ಕೆಯಲ್ಲಿ ಇರಲಿ ಪಾರದರ್ಶಕತೆ

Last Updated 18 ಜನವರಿ 2022, 19:30 IST
ಅಕ್ಷರ ಗಾತ್ರ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದ ಆಚರಣೆಯ ಸಂದರ್ಭದಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸಲು ಪಶ್ಚಿಮ ಬಂಗಾಳ, ಕೇರಳ ಹಾಗೂ ತಮಿಳುನಾಡು ರಾಜ್ಯ ಸರ್ಕಾರಗಳು ಸಲ್ಲಿಸಿದ್ದ ಸ್ತಬ್ಧಚಿತ್ರ ಪ್ರಸ್ತಾವಗಳು ತಿರಸ್ಕೃತಗೊಂಡಿರುವುದು ವಿವಾದಕ್ಕೆ ಎಡೆಮಾಡಿದೆ.ಗಣರಾಜ್ಯೋತ್ಸವ ಪರೇಡ್‌ಗೆ ತಮ್ಮ ರಾಜ್ಯದ ಸ್ತಬ್ಧಚಿತ್ರಗಳು ಆಯ್ಕೆಗೊಳ್ಳದಿರುವ ಬಗ್ಗೆ ಈ ರಾಜ್ಯಗಳು ತೀವ್ರ ನಿರಾಸೆ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ತೋಡಿಕೊಂಡಿವೆ. ಸ್ತಬ್ಧಚಿತ್ರಗಳ ಆಯ್ಕೆ ಪ್ರಕ್ರಿಯೆಯಲ್ಲಿ ರಾಜಕೀಯ ಹಿತಾಸಕ್ತಿ ಕೆಲಸ ಮಾಡಿದೆ ಎಂದು ವಿರೋಧ ಪಕ್ಷಗಳು ದೂರಿವೆ. ದೇಶ ಕಂಡ ಬಹುದೊಡ್ಡ ದಾರ್ಶನಿಕ ಹಾಗೂ ಸಮಾಜ ಸುಧಾರಕರಲ್ಲೊಬ್ಬರಾದ ನಾರಾಯಣ ಗುರುಗಳ ಸ್ತಬ್ಧಚಿತ್ರದ ಪ್ರಸ್ತಾವ ತಿರಸ್ಕೃತಗೊಂಡಿರುವುದು ಕೇರಳ ಸರ್ಕಾರದ ಬೇಸರಕ್ಕೆ ಕಾರಣವಾಗಿದೆ. ಸ್ತಬ್ಧಚಿತ್ರದಲ್ಲಿ ನಾರಾಯಣ ಗುರು ಮತ್ತು ಶಂಕರಾಚಾರ್ಯ ಇಬ್ಬರಿಗೂ ಅವಕಾಶ ಕಲ್ಪಿಸಬೇಕು ಎಂದು ಆಯ್ಕೆ ಸಮಿತಿ ಸೂಚಿಸಿದೆ ಎನ್ನುವ ವರದಿಗಳು ಇವೆ. ಈ ವಿವಾದದ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ‘ನಾರಾಯಣ ಗುರುಗಳ ಸ್ತಬ್ಧಚಿತ್ರ ತಿರಸ್ಕರಿಸಿ, ಶಂಕರಾಚಾರ್ಯರ ಸ್ತಬ್ಧಚಿತ್ರ ಕಳುಹಿಸುವಂತೆ ಕೇಂದ್ರ ಸೂಚಿಸಿದೆ ಎಂಬುದು ಸುಳ್ಳು’ ಎಂದಿದ್ದಾರೆ. ಸುಭಾಷ್‌ಚಂದ್ರ ಬೋಸ್‌ ಅವರ 125ನೇ ಜಯಂತಿ ಆಚರಣೆ ಸಂದರ್ಭದಲ್ಲಿ, ನೇತಾಜಿ ಸ್ಮರಣಾರ್ಥ ಸ್ತಬ್ಧಚಿತ್ರ ರೂಪಿಸುವ ಪಶ್ಚಿಮ ಬಂಗಾಳ ಸರ್ಕಾರದ ಪ್ರಸ್ತಾವಕ್ಕೂ ಅನುಮೋದನೆ ದೊರೆತಿಲ್ಲ. ಗಣರಾಜ್ಯೋತ್ಸವಕ್ಕೆ ಮೂರು ದಿನಗಳ ಮೊದಲಷ್ಟೇ ಸುಭಾಷ್‌ರ ಜನ್ಮದಿನವನ್ನು ದೇಶ ಆಚರಿಸುತ್ತಿದೆ. ಉದ್ದೇಶಿತ ಸ್ತಬ್ಧಚಿತ್ರದಲ್ಲಿ ಸುಭಾಷ್‌ರೊಂದಿಗೆ ಈಶ್ವರಚಂದ್ರ ವಿದ್ಯಾಸಾಗರ್‌, ರವೀಂದ್ರನಾಥ ಟ್ಯಾಗೋರ್‌, ಸ್ವಾಮಿ ವಿವೇಕಾನಂದ ಸೇರಿದಂತೆ ಹಲವು ದಾರ್ಶನಿಕರು, ತತ್ವಜ್ಞಾನಿಗಳ ಚಿತ್ರಗಳು ಇರುವುದಾಗಿ ಹೇಳಲಾಗಿತ್ತು. ತಮಿಳುನಾಡು ಸಲ್ಲಿಸಿದ್ದ ಪ್ರಸ್ತಾವದಲ್ಲಿ ಕವಿ ಸುಬ್ರಹ್ಮಣ್ಯ ಭಾರತಿ, ರಾಣಿ ವೇಲು ನಾಚಿಯಾರ್‌ ಹಾಗೂ ಮಹಿಳಾ ಸೈನಿಕರ ಚಿತ್ರಗಳ ಉಲ್ಲೇಖವಿತ್ತು. ‘ಸ್ವಾತಂತ್ರ್ಯೋತ್ಸವ–75’ರ ಸಂದರ್ಭದಲ್ಲಿ ಸಾಂದರ್ಭಿಕವೂ ಅರ್ಥಪೂರ್ಣವೂ ಆಗಿದ್ದ, ಸ್ವಾತಂತ್ರ್ಯ ಚಳವಳಿ ಮತ್ತು ರಾಷ್ಟ್ರೀಯತೆಗೆ ಅಪಾರ ಕೊಡುಗೆ ನೀಡಿದ್ದ ಚೇತನಗಳ ಸ್ಮರಣೆಯ ಈ ಪ್ರಸ್ತಾವಗಳು ತಿರಸ್ಕೃತಗೊಂಡಿರುವುದು ಸಹಜವಾಗಿಯೇ ಆಯಾ ರಾಜ್ಯ ಸರ್ಕಾರದ ನೋವು ಮತ್ತು ಸಿಟ್ಟಿಗೆ ಕಾರಣವಾಗಿದೆ.ನೇತಾಜಿ, ನಾರಾಯಣ ಗುರು, ಸುಬ್ರಹ್ಮಣ್ಯ ಭಾರತಿ ಅವರಂತಹ ಪ್ರಾತಃಸ್ಮರಣೀಯರು ನಿರ್ದಿಷ್ಟ ಭಾಷೆ ಅಥವಾ ರಾಜ್ಯಕ್ಕೆ ಸೀಮಿತರಾದವರಲ್ಲ. ಇಡೀ ದೇಶವೇ ಸ್ಮರಿಸಬೇಕಾದ, ಸಂಭ್ರಮಿಸಬೇಕಾದ ಇವರ ಸ್ಮರಣೆಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅವಕಾಶ ದೊರೆಯದಿರುವುದಕ್ಕೆ ಇರುವ ಮೌಲಿಕ ಕಾರಣಗಳೇನು ಎನ್ನುವುದನ್ನು ಕೇಂದ್ರ ಸರ್ಕಾರವೇ ಸ್ಪಷ್ಟಪಡಿಸಬೇಕು.

ಸ್ತಬ್ಧಚಿತ್ರಗಳ ಆಯ್ಕೆಯ ಹೊಣೆಗಾರಿಕೆಯನ್ನು ತಜ್ಞರ ಸಮಿತಿಯ ಮೇಲೆ ಹೊರಿಸಿ ಕೇಂದ್ರ ಸರ್ಕಾರ ಕೈತೊಳೆದುಕೊಳ್ಳುವಂತಿಲ್ಲ. ತಾನೇ ರಚಿಸಿದ ಸಮಿತಿಯ ತಪ್ಪುಒಪ್ಪುಗಳ ಉತ್ತರದಾಯಿತ್ವವೂ ಸರ್ಕಾರದ್ದೇ ಆಗಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯ ಕರ್ನಾಟಕದ ಪ್ರಸ್ತಾವ ಪುರಸ್ಕೃತಗೊಂಡಿದೆ. ಆಯ್ಕೆ ಪ್ರಕ್ರಿಯೆ ಕುರಿತಂತೆ ಬಿಜೆಪಿ ಮುಖಂಡರು ನೀಡುತ್ತಿರುವ ಹೇಳಿಕೆಗಳು ವೈರುಧ್ಯಗಳಿಂದ ಕೂಡಿವೆ.ಸ್ತಬ್ಧಚಿತ್ರಗಳ ಭಾಗವಹಿಸುವಿಕೆಯಲ್ಲಿ ಪ್ರತೀ ರಾಜ್ಯಕ್ಕೆ ಮೂರು ವರ್ಷಕ್ಕೊಮ್ಮೆ ಅವಕಾಶವಿರುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದ್ದರೆ, ಈ ಬಾರಿ ಗಣರಾಜ್ಯೋತ್ಸವ ಪರೇಡ್‌ಗೆ ಕರ್ನಾಟಕದ ಸ್ತಬ್ಧಚಿತ್ರ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ಸತತವಾಗಿ ಹದಿಮೂರನೇ ಬಾರಿ ರಾಜ್ಯದ ಸ್ತಬ್ಧಚಿತ್ರ ಆಯ್ಕೆಯಾಗಿದೆ’ ಎಂದು ಹೇಳಿದ್ದಾರೆ. ‘ಪರಿಣತರ ಸಮಿತಿಯ ಮುಂದಿದ್ದ 56 ಪ್ರಸ್ತಾವಗಳಲ್ಲಿ 21 ಪ್ರಸ್ತಾವಗಳನ್ನು ಅಂತಿಮ
ಗೊಳಿಸಲಾಗಿದೆ. ಆಯ್ಕೆ ಪ್ರಕ್ರಿಯೆಯನ್ನು ಪರಿಣತರ ಸಮಿತಿ ನಡೆಸುತ್ತದೆಯೇ ಹೊರತು, ಅದರಲ್ಲಿ ಕೇಂದ್ರ ಸರ್ಕಾರದ ಪಾತ್ರವೇನೂ ಇಲ್ಲ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.ರಾಷ್ಟ್ರೀಯ ದಿನಾಚರಣೆಗೆ ಸಂಬಂಧಿಸಿದಂತೆ ಕ್ಷುಲ್ಲಕ ರಾಜಕೀಯ ಮಾಡಬಾರದೆಂದು ಸಚಿವೆ ಅಭಿಪ್ರಾಯಪಟ್ಟಿದ್ದಾರೆ. ಈ ಎಲ್ಲ ಹೇಳಿಕೆಗಳು ಗೊಂದಲಗಳನ್ನು ಇನ್ನಷ್ಟು ಹೆಚ್ಚಿಸುವಂತಿವೆ ಹಾಗೂ ಸ್ತಬ್ಧಚಿತ್ರಗಳ ಆಯ್ಕೆ ಪ್ರಕ್ರಿಯೆ ಪ್ರಶ್ನಿಸುತ್ತಿರುವವರನ್ನು ತರಾಟೆಗೆ ತೆಗೆದುಕೊಳ್ಳುವಂತಿವೆಯೇಹೊರತು, ವಿವಾದವನ್ನು ತಿಳಿಗೊಳಿಸುವಂತಿಲ್ಲ. ಮೂರು ರಾಜ್ಯಗಳ ಸ್ತಬ್ಧಚಿತ್ರ ಪ್ರಸ್ತಾವಗಳ ನಿರಾಕರಣೆಗೆ ಸಂಬಂಧಿಸಿದಂತೆ ತಜ್ಞರ ಸಮಿತಿಯ ನಡವಳಿಕೆಗಳು ಅನುಮಾನ ಹುಟ್ಟಿಸುವಂತಿವೆ. ನಾರಾಯಣಗುರು ಅವರ ಸ್ತಬ್ಧಚಿತ್ರದ ಪ್ರಸ್ತಾವವನ್ನು ಮೊದಲ ಹಂತಗಳಲ್ಲಿ ಒಪ್ಪಿಕೊಳ್ಳಲಾಗಿದ್ದು, ನಂತರ ನಿರಾಕರಿಸಲಾಯಿತು ಎಂಬ ವರದಿಗಳಿವೆ. ಯಾವ ಕಾರಣವನ್ನೂ ನೀಡದೆ ಪ್ರಸ್ತಾವ ತಿರಸ್ಕರಿಸಲಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇಂಥ ಪ್ರಶ್ನೆ–ಅನುಮಾನಗಳಿಗೆ ಉತ್ತರಿಸುವ, ಗೊಂದಲಗಳನ್ನು ಪರಿಹರಿಸುವ ಹೊಣೆಗಾರಿಕೆ ಕೇಂದ್ರ ಸರ್ಕಾರ ಹಾಗೂ ಆಯ್ಕೆ ಸಮಿತಿಯದ್ದಾಗಿದೆ. ಉತ್ತರಿಸಬೇಕಾದವರು ಮೌನವಾಗಿರುವುದು ಹಾಗೂ ನೇರವಾಗಿ ಸಂಬಂಧಪಡದವರು ಪ್ರತಿಕ್ರಿಯಿಸುವುದು ತಕ್ಕುದಲ್ಲ. ಗಣತಂತ್ರ ವ್ಯವಸ್ಥೆಯ ಬಹುದೊಡ್ಡ ಸಂಭ್ರಮದ ಆಚರಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವುದು ಒಕ್ಕೂಟ ಸರ್ಕಾರದ ಹೊಣೆಗಾರಿಕೆಯೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT