ಭಾನುವಾರ, ಸೆಪ್ಟೆಂಬರ್ 26, 2021
28 °C

ಸಂಪಾದಕೀಯ| ಅನಧಿಕೃತ ಪ್ರಾರ್ಥನಾ ಸ್ಥಳಗಳ ತೆರವು: ಭಾವನೆ ಕೆರಳಿಸುವ ಮೇಲಾಟ ಸಲ್ಲದು

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಪ್ರಾರ್ಥನಾ ಮಂದಿರಗಳನ್ನು ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ತೆರವುಗೊಳಿಸುವುದಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ವಿವಾದವು ಸರ್ಕಾರ ಮತ್ತು ಜನಪ್ರತಿನಿಧಿಗಳ ನಡುವೆ ತಾಳಮೇಳ ಇಲ್ಲದಿರುವುದರ ಸ್ಪಷ್ಟ ನಿದರ್ಶನ. ಆತುರದಲ್ಲಿ ಯಾವುದೇ ದೇವಸ್ಥಾನ ಕೆಡವದಿರಿ ಎಂದು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಧಾರ್ಮಿಕ ಕಟ್ಟಡಗಳನ್ನು ದಿಢೀರ್‌ ಎಂದು ನೆಲಸಮಗೊಳಿಸುವುದು ಸರಿಯಲ್ಲ ಎಂದು ಕಂದಾಯ ಸಚಿವ ಆರ್‌. ಅಶೋಕ ಹೇಳಿದ್ದಾರೆ. ಮುಖ್ಯಮಂತ್ರಿ ಮತ್ತು ಸಚಿವರ ಮಾತುಗಳು, ಅನಧಿಕೃತ ಪೂಜಾಸ್ಥಳಗಳನ್ನು ತೆರವುಗೊಳಿಸುವ ಕುರಿತಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ವನ್ನು ಜಾರಿಗೊಳಿಸುವಲ್ಲಿ ಸರ್ಕಾರಕ್ಕಿರುವ ಇಚ್ಛಾಶಕ್ತಿಯ ಕೊರತೆಯನ್ನು ಸೂಚಿಸುವಂತಿವೆ. 2009ರ ಮೊದಲು ನಿರ್ಮಾಣಗೊಂಡಿರುವ ಎಲ್ಲ ಅನಧಿಕೃತ ಪ್ರಾರ್ಥನಾ ಸ್ಥಳಗಳನ್ನು ಗುರುತಿಸಿ, ಅವುಗಳನ್ನು ತೆರವುಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಮಂದಿರ, ಮಸೀದಿ, ಚರ್ಚ್‌, ಗುರುದ್ವಾರ ಸೇರಿದಂತೆ ಅನಧಿಕೃತವಾಗಿ ನಿರ್ಮಾಣಗೊಂಡ ಎಲ್ಲ ಪೂಜಾಸ್ಥಳ ಗಳನ್ನು ಗುರುತಿಸಿ ಅವುಗಳನ್ನು ತೆರವುಗೊಳಿಸುವುದು, ಸ್ಥಳಾಂತರಿಸುವುದು ಅಥವಾ ಸಕ್ರಮಗೊಳಿ ಸುವುದು ರಾಜ್ಯ ಸರ್ಕಾರಗಳ ಜವಾಬ್ದಾರಿ; 2009ರ ನಂತರ ಅಕ್ರಮವಾಗಿ ನಿರ್ಮಾಣಗೊಂಡ ಪೂಜಾಸ್ಥಳಗಳನ್ನು ಕಡ್ಡಾಯವಾಗಿ ತೆರವುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಈ ಆದೇಶ ಪ್ರಕಟಗೊಂಡ ಹನ್ನೊಂದು ವರ್ಷಗಳ ನಂತರವೂ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವುದಕ್ಕೆ ಆತುರ ಬೇಡ ಎಂದು ಸರ್ಕಾರ ಹೇಳುತ್ತಿದೆ. ಹಾಗಾದರೆ, ಅನಧಿಕೃತ ಪ್ರಾರ್ಥನಾ ಸ್ಥಳಗಳ ಕುರಿತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಇನ್ನೆಷ್ಟು ಸಮಯ ಬೇಕು? ಅನಧಿಕೃತ ಪೂಜಾಸ್ಥಳಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಆಮೆವೇಗದಲ್ಲಿ ನಡೆಯುತ್ತಿರುವುದರ ಬಗ್ಗೆ ಹೈಕೋರ್ಟ್‌ ಕಳವಳ ವ್ಯಕ್ತಪಡಿಸಿತ್ತು. ಆ ಹಿನ್ನೆಲೆಯಲ್ಲಿ, ಪ್ರತೀ ವಾರ ತಮ್ಮ ವ್ಯಾಪ್ತಿಯಲ್ಲಿನ ಒಂದಾದರೂ ಅನಧಿಕೃತ ಪೂಜಾಸ್ಥಳವನ್ನು ತೆರವುಗೊಳಿಸಲು ಸಾಧ್ಯವಾಗುವಂತೆ ಕ್ರಿಯಾ ಯೋಜನೆಯನ್ನು ರೂಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದರು. ಈಗ ವರಸೆ ಬದಲಿಸಿರುವ ಸರ್ಕಾರ, ದೇಗುಲಗಳನ್ನು ತೆರವುಗೊಳಿಸಲು ಆತುರದ ತೀರ್ಮಾನ ಸಲ್ಲದೆಂದು ಹೇಳುತ್ತಿದೆ.

ಸಾರ್ವಜನಿಕ ಸ್ಥಳಗಳಲ್ಲಿರುವ 93 ಧಾರ್ಮಿಕ ರಚನೆಗಳನ್ನು ಗುರುತಿಸಿರುವ ಮೈಸೂರು ಜಿಲ್ಲಾಡಳಿತವು ಅವುಗಳ ತೆರವಿಗೆ ಮುಂದಾಗಿರುವುದು ಮೈಸೂರು–ಕೊಡಗು ಸಂಸದ ಪ್ರತಾಪ ಸಿಂಹ ಅವರಿಗೆ ನಸುಕಿನಲ್ಲಿ ಕಳ್ಳರು ನಡೆಸುವ ಕಾರ್ಯಾಚರಣೆಯಂತೆ ಕಾಣಿಸಿದೆ. ಬರೀ ಮಂದಿರಗಳನ್ನಷ್ಟೇ ನೆಲಸಮಗೊಳಿಸಲಾಗುತ್ತಿದೆ ಎನ್ನುವ ಅವರ ಆರೋಪ ಹಾಗೂ ‘ದೇವಸ್ಥಾನಗಳನ್ನು ಉಳಿಸಿ’ ಆಂದೋಲನ ಕೈಗೊಳ್ಳುವ ಹೇಳಿಕೆ, ಕೋಮು ಸಾಮರಸ್ಯದ ಜೇನುಗೂಡಿಗೆ ಕಲ್ಲು ಹೊಡೆಯುವಪ್ರಯತ್ನವಾಗಿದೆ. ಕೇಂದ್ರ, ರಾಜ್ಯ ಹಾಗೂ ಮೈಸೂರು ಮಹಾನಗರ ಪಾಲಿಕೆ– ಎಲ್ಲೆಡೆಯೂ ಅವರು ಪ್ರತಿನಿಧಿಸುವ ಬಿಜೆಪಿಯೇ ಅಧಿಕಾರದಲ್ಲಿರುವಾಗ ‘ದೇವಸ್ಥಾನ ಉಳಿಸಿ’ ಆಂದೋಲನವನ್ನು ಯಾರ ವಿರುದ್ಧ ಕೈಗೊಳ್ಳಲಾಗುತ್ತಿದೆ ಎನ್ನುವುದನ್ನು ಸಂಸದರು ಸ್ಪಷ್ಟಪಡಿಸಬೇಕು. ಅದೂ ಅಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಎಲ್ಲ ಧಾರ್ಮಿಕ ರಚನೆಗಳನ್ನೂ ತೆರವು ಮಾಡಲು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಸೂಚಿಸಿದೆ. ಅದರಲ್ಲಿ ಮಂದಿರ, ಮಸೀದಿ, ಚರ್ಚ್‌ ಹೀಗೆ ಎಲ್ಲವೂ ಸೇರುತ್ತವೆ. ಹೀಗಿರುವಾಗ ದೇವಸ್ಥಾನಗಳನ್ನಷ್ಟೇ ಕೆಡವಲಾಗುತ್ತಿದೆ ಎಂದು ಬಿಂಬಿಸಿ, ಜನರ ಭಾವನೆ ಕೆರಳಿಸುವ ಪ್ರಯತ್ನವು ಸರಿಯಲ್ಲ. ಧಾರ್ಮಿಕ ಸಂಗತಿಗಳಿಗೆ ಸಂಬಂಧಿಸಿದಂತೆ ಯಾವುದೇ ಕೋಮನ್ನು ಬೆಂಬಲಿಸುವ ಪ್ರಯತ್ನಗಳಿಂದ ಜನಪ್ರತಿನಿಧಿಗಳು ದೂರವಿರುವುದು ಅವಶ್ಯಕ. ಜನರನ್ನು ಭಾವಾವೇಶಕ್ಕೆ ಸುಲಭವಾಗಿ ಗುರಿಮಾಡುವ ಧರ್ಮದ ವಿಷಯದಲ್ಲಂತೂ ರಾಜಕಾರಣಿಗಳು ಅತೀವ ಸಂಯಮ ಮತ್ತು ವಿವೇಕವನ್ನು ಪ್ರದರ್ಶಿಸಬೇಕು. ಆದರೆ, ಪ್ರಾರ್ಥನಾ ಸ್ಥಳಗಳನ್ನು ತೆರವುಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ರಾಜಕಾರಣಿಗಳ ವರ್ತನೆಗಳು ವಿವೇಚನಾರಹಿತವಾಗಿವೆ ಹಾಗೂ ಬೆಂಕಿಗೆ ತುಪ್ಪ ಸುರಿಯುವ ಪ್ರಯತ್ನಗಳಾಗಿವೆ. ಜನರಿಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಒದಗಿಸುವುದರ ಬಗ್ಗೆ ತಲೆಕೆಡಿಸಿಕೊಳ್ಳದ ರಾಜಕಾರಣಿಗಳಿಗೆ, ಮಂದಿರಗಳ ಅಸ್ತಿತ್ವ ಆದ್ಯತೆಯ ವಿಷಯವಾಗಿರುವುದು ದುರದೃಷ್ಟಕರ. ವಿರೋಧ ಪಕ್ಷಗಳು ಕೂಡ ಈ ಪ್ರಕರಣದಲ್ಲಿ ತಮಗೆ ಆಗಬಹುದಾದ ಲಾಭವನ್ನು ದಕ್ಕಿಸಿ ಕೊಳ್ಳಲು ತುದಿಗಾಲಲ್ಲಿವೆ. ಅನಧಿಕೃತವಾಗಿ ರೂಪುಗೊಂಡ ಪೂಜಾಸ್ಥಳಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಸಹಜವಾಗಿಯೇ ಸಾರ್ವಜನಿಕರ ಪ್ರತಿರೋಧ ಎದುರಾಗುವುದರಿಂದ, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅಗತ್ಯ. ಈ ಕೆಲಸದಲ್ಲಿ ಜಿಲ್ಲಾಡಳಿತದೊಂದಿಗೆ ಜನಪ್ರತಿನಿಧಿಗಳು ಕೂಡ ಪಕ್ಷಾತೀತವಾಗಿ ವರ್ತಿಸಿ, ಸಾರ್ವಜನಿಕರ ಮನವೊಲಿಸಬೇಕಾಗುತ್ತದೆ. ಆದರೆ, ಮೈಸೂರಿನ ಸಂದರ್ಭದಲ್ಲಿ ಜನಪ್ರತಿನಿಧಿಗಳದು ಜನರನ್ನು ಕೆರಳಿಸುವ ವರ್ತನೆಯಾಗಿದೆ.

ಈ ವರ್ಷದ ಜುಲೈ 1ರ ಲೆಕ್ಕಾಚಾರದಂತೆ ರಾಜ್ಯದಲ್ಲಿರುವ ಅನಧಿಕೃತ ಪೂಜಾಸ್ಥಳಗಳ ಸಂಖ್ಯೆ 6,395. ಕಳೆದ ಹನ್ನೆರಡು ವರ್ಷಗಳಲ್ಲಿ ಕರ್ನಾಟಕ ಸರ್ಕಾರ ತೆರವುಗೊಳಿಸಿದ, ಸ್ಥಳಾಂತರಗೊಳಿಸಿದ ಇಲ್ಲವೇ ಸಕ್ರಮಗೊಳಿಸಿದ ಅನಧಿಕೃತ ಪೂಜಾಸ್ಥಳಗಳು 2,887. ಈ ವೇಗದಲ್ಲಿ ಮುಂದುವರಿದರೆ, ಉಳಿದ ಅನಧಿಕೃತ ರಚನೆಗಳ ಬಗ್ಗೆ ಕ್ರಮ ಕೈಗೊಳ್ಳಲು ಕನಿಷ್ಠ ಮತ್ತೊಂದು ದಶಕ ಬೇಕು. ಒಂದೆಡೆ, ಅನಧಿಕೃತ ಆರಾಧನಾಸ್ಥಳಗಳ ಬಗ್ಗೆ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೆಮುಂದೆ ನೋಡುತ್ತಿದ್ದರೆ, ಇನ್ನೊಂದೆಡೆ, ಹೊಸ ಪೂಜಾಸ್ಥಳಗಳು ರಸ್ತೆ, ಉದ್ಯಾನ, ಮೈದಾನಗಳಲ್ಲಿ ತಲೆಯೆತ್ತುತ್ತಲೇ ಇವೆ. ಪೂಜಾಕೇಂದ್ರಗಳನ್ನು ನಿರ್ಮಿಸುವ ಮೂಲಕ ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸುವ ಕೆಲಸ ನಡೆಯುತ್ತಲೇ ಇದೆ. ಸುಪ್ರೀಂ ಕೋರ್ಟ್‌ ತೀರ್ಪಿನ ನಂತರವೂ ಸಾವಿರಾರು ಪೂಜಾಸ್ಥಳಗಳ ಅನಧಿಕೃತ ನಿರ್ಮಾಣ ರಾಜ್ಯದಲ್ಲಿ ನಡೆದಿದೆ. ಅವುಗಳನ್ನು ತೆರವುಗೊಳಿಸುವ ದಿಸೆಯಲ್ಲಿ ರಾಜಕೀಯವನ್ನು ಬದಿಗಿಟ್ಟು, ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಲು ಯಾರಿಗೂ ಅವಕಾಶ ಮಾಡಿಕೊಡದಿರುವ ಇಚ್ಛಾಶಕ್ತಿಯನ್ನು ಸರ್ಕಾರ ಪ್ರದರ್ಶಿಸಬೇಕು. ನಿರ್ದಿಷ್ಟ ಕಾಲಮಿತಿಯಲ್ಲಿ ಕ್ರಿಯಾಯೋಜನೆ ರೂಪಿಸಿಕೊಂಡು, ಅನುಷ್ಠಾನಕ್ಕೆ ತಂದಾಗ ಮಾತ್ರ ಸಾರ್ವಜನಿಕ ಸ್ಥಳಗಳ ದುರ್ಬಳಕೆಯನ್ನು ತಪ್ಪಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು