ಸಾರ್ವಜನಿಕ ಸಮಾರಂಭಗಳಲ್ಲಿ ಜನಸಂದಣಿ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆ ಹೊಸ ‘ಪ್ರಮಾಣೀಕೃತ ಕಾರ್ಯಾಚರಣೆ ವಿಧಾನ’ವನ್ನು (ಎಸ್ಒಪಿ) ರೂಪಿಸಿರುವುದು ತೀರಾ ಅಗತ್ಯವಾಗಿದ್ದ ಕ್ರಮ. ‘ಐಪಿಎಲ್’ ಟಿ–20 ಕ್ರಿಕೆಟ್ ಟೂರ್ನಿಯ ಹದಿನೆಂಟನೇ ಆವೃತ್ತಿಯಲ್ಲಿ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ತಂಡ ಚಾಂಪಿಯನ್ ಆದುದನ್ನು ಸಂಭ್ರಮಿಸುವ ವಿಜಯೋತ್ಸವ ಆಚರಣೆಯ ಸಂದರ್ಭದಲ್ಲಿ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಹನ್ನೊಂದು ಮಂದಿ ಸಾವಿಗೀಡಾಗಿದ್ದರು. ಆ ದುರಂತದ ಹಿನ್ನೆಲೆಯಲ್ಲಿ ಜಾಗೃತಗೊಂಡಿರುವ ಪೊಲೀಸ್ ಇಲಾಖೆ ಹೊಸ ‘ಎಸ್ಒಪಿ’ ರಚಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಬೃಹತ್ ಕಾರ್ಯಕ್ರಮಗಳು, ಸಭೆ ಹಾಗೂ ವಿಜಯೋತ್ಸವದಂಥ ಕಾರ್ಯಕ್ರಮಗಳಲ್ಲಿ ಸಂಭವಿಸಬಹುದಾದ ಅಹಿತಕರ ಘಟನೆಗಳನ್ನು ತಡೆಗಟ್ಟುವ ಉದ್ದೇಶದಿಂದ ಹೊಸ ‘ಎಸ್ಒಪಿ’ ರಚಿಸುವುದಾಗಿ ಗೃಹ ಸಚಿವರು ತಿಳಿಸಿದ್ದರು. ಹಬ್ಬಗಳು, ರ್ಯಾಲಿಗಳು, ಕ್ರೀಡೆಗಳು ಮುಂತಾದ ಬೃಹತ್ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನಸಂದಣಿಯನ್ನು ನಿರ್ವಹಿಸುವುದು ಸುಲಭವಲ್ಲ. ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಕೊಂಚ ಏರುಪೇರಾದರೂ ಅಪಾಯ ಸಂಭವಿಸುವ ಸಾಧ್ಯತೆಯಿರುತ್ತದೆ. ಜನಸಂದಣಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದರೊಂದಿಗೆ ಸಂಭಾವ್ಯ ಅಪಾಯಗಳನ್ನು ತಪ್ಪಿಸುವುದು ಹೊಸ ‘ಎಸ್ಒಪಿ’ಯ ಉದ್ದೇಶವಾಗಿದೆ. ಸುರಕ್ಷತಾ ಕ್ರಮಗಳ ಪರಿಶೀಲನೆಯಲ್ಲಿ ಸೂಕ್ತವೆಂದು ಕಂಡುಬಾರದ ಸ್ಥಳಗಳಲ್ಲಿ ಬೃಹತ್ ಕಾರ್ಯಕ್ರಮಗಳ ಆಯೋಜನೆಗೆ ನಿರಾಕರಣೆ, ಬೆಂಕಿ ಮತ್ತು ಕಾಲ್ತುಳಿತದಂತಹ ಅವಘಡಗಳ ನಿಯಂತ್ರಣಕ್ಕೆ ತುರ್ತು ಸಿದ್ಧತೆ ಮಾಡಿಕೊಳ್ಳುವುದು, ಜನಸಮೂಹದ ವರ್ತನೆಯ ಪರಿಶೀಲನೆ, ಜನಸಂದಣಿ ನಿರ್ವಹಣೆಗೆ ಪೂರ್ವ ತಯಾರಿ, ಆಯೋಜಕರೊಂದಿಗೆ ಸಮನ್ವಯ ಸೇರಿದಂತೆ, ಜನಸಂದಣಿ ನಿರ್ವಹಣೆಗೆ ಅಗತ್ಯವಾದ ಅನೇಕ ಅಂಶಗಳನ್ನು ಮಾರ್ಗಸೂಚಿ ಒಳಗೊಂಡಿದೆ. ತುರ್ತು ಸಂದರ್ಭದಲ್ಲಿ ವ್ಯಕ್ತಿಯ ಜೀವ ಉಳಿಸಲು ‘ಕಾರ್ಡಿಯೊ ಪಲ್ಮನರಿ ರಿಸಸಿಟೇಶನ್' (ಸಿಪಿಆರ್) ಕುರಿತು ಪೊಲೀಸರಿಗೆ ತರಬೇತಿ ನೀಡಲು ಇಲಾಖೆ ಉದ್ದೇಶಿಸಿದೆ. ಇದರಿಂದಾಗಿ ತುರ್ತು ಸನ್ನಿವೇಶದಲ್ಲಿ ವ್ಯಕ್ತಿಯ ಜೀವ ಉಳಿಸಲು ಅಗತ್ಯವಾದ ಪ್ರಥಮ ಚಿಕಿತ್ಸೆಯನ್ನು ನೀಡಲು ಪೊಲೀಸರಿಗೆ ಸಾಧ್ಯವಾಗಲಿದೆ.

ಭಾರಿ ಜನಸಂದಣಿ ಸೇರುವ ಸಂದರ್ಭದಲ್ಲಿ ಅಹಿತಕರ ಘಟನೆಗಳು ಹಾಗೂ ಸಾವುನೋವಿಗೆ ಕಾರಣವಾಗಬಹುದಾದ ಕಾಲ್ತುಳಿತ ಸಂಭವಿಸುವುದು ಇತ್ತೀಚೆಗೆ ಹೆಚ್ಚಾಗಿದೆ. ವಿವಿಧ ಉದ್ದೇಶಗಳಿಂದ ನಡೆಯುವ ಸಮಾವೇಶಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವುದಿದೆ. ಲಕ್ಷಾಂತರ ಮಂದಿ ಸೇರುವ ಜಾತ್ರೆಗಳು ನಾಡಿನ ವಿವಿಧ ಭಾಗಗಳಲ್ಲಿ ನಡೆಯುತ್ತವೆ. ಇಂಥ ಸಂದರ್ಭಗಳಲ್ಲಿ ಜನಸಂದಣಿಯ ನಿರ್ವಹಣೆ ಪೊಲೀಸರಿಗೆ ದೊಡ್ಡ ಸವಾಲು. ಜನಸಂದಣಿಯನ್ನು ನಿರ್ವಹಿಸುವುದರ ಜೊತೆಗೆ ದುರ್ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಹೊಸ ‘ಎಸ್ಒಪಿ’ ಜಾರಿಗೆ ತಂದಿರುವುದು ಮಹತ್ವದ ಕ್ರಮ. ಆದರೆ, ಈ ಮಾರ್ಗಸೂಚಿ ಕಡತದಲ್ಲಷ್ಟೇ ಉಳಿಯದೆ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವ ಇಚ್ಛಾಶಕ್ತಿಯನ್ನು ಇಲಾಖೆ ಪ್ರದರ್ಶಿಸಬೇಕು. ರಾಜಕಾರಣಿಗಳು, ಅಧಿಕಾರಿಗಳು, ಪ್ರಭಾವಿ ವ್ಯಕ್ತಿಗಳ ಇಶಾರೆಗೆ ಓಗೊಡದೆ ಕರ್ತವ್ಯವನ್ನು ನಿರ್ವಹಿಸುವುದು ಪೊಲೀಸರಿಗೆ ಸಾಧ್ಯವಾದರೆ, ಅಪಾಯಗಳ ಪ್ರಮಾಣ ಹಾಗೂ ಪರಿಣಾಮ ಸಾಕಷ್ಟು ಕಡಿಮೆಯಾಗುತ್ತದೆ.

ಕಾಲ್ತುಳಿತ ದುರಂತದಂತಹ ಬಹುತೇಕ ಘಟನೆಗಳಲ್ಲಿ ಪೊಲೀಸ್ ವೈಫಲ್ಯದ ಜೊತೆಗೆ ಆಯೋಜಕರ ನಿರ್ಲಕ್ಷ್ಯವೂ ಮುಖ್ಯ ಪಾತ್ರ ವಹಿಸುತ್ತದೆ. ಕಾನೂನು ಮತ್ತು ಸುವ್ಯವಸ್ಥೆಯ ವಿವೇಚನೆಯಿಲ್ಲದೆ ಅತಿ ಉತ್ಸಾಹದಿಂದ ಜನ ಸೇರಿಸುವವರೂ ಇದ್ದಾರೆ. ಇಂಥ ಕಾರ್ಯಕ್ರಮಗಳ ಆಯೋಜನೆಯ ಹಿಂದೆ ಕೆಲವೊಮ್ಮೆ ಸರ್ಕಾರದ ನೇರ ಅಥವಾ ಪರೋಕ್ಷ ಪಾತ್ರವೂ ಇರುತ್ತದೆ. ಪೊಲೀಸ್ ಇಲಾಖೆ ಸಿದ್ಧಪಡಿಸಿರುವ ಹೊಸ ‘ಎಸ್ಒಪಿ’ ಜನರ ಸುರಕ್ಷತೆಗೆ ಒತ್ತು ನೀಡುವಂತಿದೆ. ಭಾರಿ ಸಂಖ್ಯೆಯಲ್ಲಿ ಜನರನ್ನು ಸೇರಿಸುವುದು ಬಹು ದೊಡ್ಡ ಹೊಣೆಗಾರಿಕೆ ಎನ್ನುವುದನ್ನು ಸಂಘಟಕರು ಅರ್ಥ ಮಾಡಿಕೊಂಡು ಕಾರ್ಯಕ್ರಮಗಳನ್ನು ಆಯೋಜಿಸಿದರೆ, ಅಹಿತಕರ ಘಟನೆಗಳ ಸಾಧ್ಯತೆ ಸಾಕಷ್ಟು ಕಡಿಮೆಯಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಒಂದೆಡೆ ಸೇರಿದಾಗ ವಿವೇಚನೆಯಿಂದ ವರ್ತಿಸುವ ಹೊಣೆಗಾರಿಕೆ ನಾಗರಿಕರದ್ದೂ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.