ಶನಿವಾರ, ಜನವರಿ 28, 2023
16 °C

ಸಂಪಾದಕೀಯ: ನಾಡಿನ ಜೀವನಾಡಿಯ ಪೊರೆಯಬೇಕಿದೆ– ನೆಲ-ಜಲದ ಕೊಳಕಿಗೆ ಕ್ಷಮೆಯಿಲ್ಲ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ನದಿಗಳೆಂದರೆ ನಾಡಿನ ಜೀವನಾಡಿ. ಅನಾದಿ ಕಾಲದಿಂದ ಜೀವಸಂಕುಲವನ್ನೂ ನಾಗರಿಕತೆಯನ್ನೂ ಪೋಷಿಸಿಕೊಂಡು ಬಂದ ಜಲಮೂಲಗಳು ನಮ್ಮ ರಕ್ತನಾಳಗಳಂತೆ ಶುದ್ಧವಾಗಿರಬೇಕು. ಈ ಮಾತನ್ನು ನಾವು ವೇದಕಾಲದಿಂದಲೂ ಕೇಳುತ್ತ ಬಂದಿದ್ದೇವೆ; ಜಲಶುದ್ಧಿಯ ಬಗ್ಗೆ ಕಾನೂನು ಕಟ್ಟಲೆಗಳನ್ನು ರೂಪಿಸಿಕೊಂಡಿದ್ದೇವೆ. ನದಿಕೆರೆಗಳ ತಪಾಸಣೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಸ್ಥಾಪಿಸಿ, ಜಿಲ್ಲೆ ಜಿಲ್ಲೆಗಳಲ್ಲೂ ಅಧಿಕಾರಿಗಳ ಪಡೆಯನ್ನೇ ಕಾವಲಿಟ್ಟಿದ್ದೇವೆ. ಎಷ್ಟಿದ್ದರೇನು, ಕರ್ನಾಟಕದ ಜಲಮೂಲಗಳ ಕೊಳಕು ಸ್ಥಿತಿಯ ಬಗ್ಗೆ ಕಳೆದ ಎಂಟು ವರ್ಷಗಳಿಂದ ಪದೇಪದೇ ಎಚ್ಚರಿಕೆಯ ಗಂಟೆಗಳು ಮೊಳಗುತ್ತಿವೆ. ಸುಪ್ರೀಂ ಕೋರ್ಟ್‌, ರಾಷ್ಟ್ರೀಯ ಹಸಿರು ನ್ಯಾಯಮಂಡಲಿ ಮತ್ತು ಕೇಂದ್ರ ಜಲಶಕ್ತಿ ಸಚಿವಾಲಯ ಎಲ್ಲವೂ ನಮ್ಮ ನಾಡಿನ ಜಲಮಾಲಿನ್ಯದ ಬಗ್ಗೆ ಕೆಂಪು ನಿಶಾನೆಯನ್ನು ತೋರಿಸುತ್ತಲೇ ಬಂದಿವೆ. ಕೊಳಕು ನೀರನ್ನು ಕುಡಿದು ಜನರು ಆಸ್ಪತ್ರೆ ಸೇರುತ್ತಿದ್ದಾರೆ; ಸಾಯುತ್ತಿದ್ದಾರೆ. ನೆಲ–ಜಲದ ಮಾಲಿನ್ಯಗಳ ಬಗ್ಗೆ ಮಾಧ್ಯಮಗಳು ಕಾಲಕಾಲಕ್ಕೆ ವರದಿಯನ್ನು ನೀಡುತ್ತಲೇ ಬಂದಿವೆ. ಈ ಯಾವುವೂ ಯಾರನ್ನೂ ಎಚ್ಚರಿಸಿದಂತೆ ಕಾಣುತ್ತಿಲ್ಲ. ಪುರಸಭೆ, ನಗರಸಭೆಗಳು, ಉದ್ಯಮ ಘಟಕಗಳು ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಎಲ್ಲವೂ ಕೈಕಟ್ಟಿ ಕೂತಂತಿವೆ. ಇವುಗಳ ನಿಷ್ಕ್ರಿಯತೆಯ ಪರಿಣಾಮ ಏನೆಂದರೆ ಇಡೀ ರಾಜ್ಯವೇ ನಾಚಿಕೆಯಿಂದ ತಲೆ ತಗ್ಗಿಸುವ ಮಟ್ಟಿಗೆ ₹ 2,900 ಕೋಟಿಯಷ್ಟು ಬೃಹತ್‌ ಮೊತ್ತವನ್ನು ದಂಡ ರೂಪದಲ್ಲಿ ಸಲ್ಲಿಸುವಂತೆ ಹಸಿರು ನ್ಯಾಯಮಂಡಲಿ ಆದೇಶ ನೀಡಿದೆ. ಅದು ಸಾಲದೆಂಬಂತೆ, ಕಳೆದ ವಾರ ನಡೆದ ರಾಷ್ಟ್ರೀಯ ಜಲಶಕ್ತಿ ಸಭೆಯಲ್ಲಿ ನಮ್ಮ ರಾಜ್ಯದ ನದಿಮಾಲಿನ್ಯ ಸ್ಥಿತಿ ತೀವ್ರ ಟೀಕೆಗೊಳಗಾಗಿದೆ.

ನಾಡಿನ ಪ್ರಮುಖ 17 ನದಿಗಳ ಪಾತ್ರದಲ್ಲಿ 38 ನಗರ–ಪಟ್ಟಣಗಳಿದ್ದು ಅವೆಲ್ಲ ನಿತ್ಯವೂ ಚರಂಡಿಗಳ ಮೂಲಕ ಬಹುಪಾಲು ಕೊಳಚೆ ನೀರನ್ನು ನದಿಗೆ ಹರಿಬಿಡುತ್ತವೆ. ರಾಜ್ಯದಲ್ಲಿ ದಿನವೂ ಹನ್ನೊಂದು ಸಾವಿರ ಟನ್‌ ಘನತ್ಯಾಜ್ಯ ಉತ್ಪಾದನೆಯಾಗುತ್ತಿದ್ದು ಅವುಗಳ ಮೇಲೆ ಮಳೆ ಸುರಿದಾಗಲೆಲ್ಲ ಇನ್ನಷ್ಟು ಕೊಳಕು ದ್ರವ್ಯಗಳು ಕೆರೆಕೊಳ್ಳಗಳಿಗೆ, ಅಂತರ್ಜಲಕ್ಕೆ ಸೋರಿ ಅಂತಿಮವಾಗಿ ನದಿಗಳಿಗೇ ಸೇರುತ್ತಿವೆ. ಜಲಮಾಲಿನ್ಯಕ್ಕೆ ಕಾರಣವಾಗುವ ಮೂರೂವರೆ ಸಾವಿರ ಕೈಗಾರಿಕೋದ್ಯಮಗಳು ತಮ್ಮ ತ್ಯಾಜ್ಯವನ್ನು ಸಂಸ್ಕರಿಸುವುದರಲ್ಲಿ ವಿಫಲವಾಗುತ್ತಿವೆ. ರಾಜ್ಯದಲ್ಲಿ ಪ್ರತಿದಿನವೂ 445 ಕೋಟಿ ಲೀಟರ್‌ ದ್ರವತ್ಯಾಜ್ಯ ಉತ್ಪಾದನೆಯಾಗುತ್ತಿದ್ದು ಅದರಲ್ಲಿ ಅರ್ಧದಷ್ಟು ತ್ಯಾಜ್ಯದ ಸಂಸ್ಕರಣೆಗೆ ಯಂತ್ರಾಗಾರಗಳೇ ಇಲ್ಲ. ಸ್ಥಾಪಿತವಾದ ಅದೆಷ್ಟೋ ತ್ಯಾಜ್ಯ ಸಂಸ್ಕರಣಾ ಘಟಕಗಳು ಕೆಟ್ಟು ನಿಂತಿವೆ. ಪ್ರಧಾನ ಮಂತ್ರಿಯವರು ನೀರಿನ ಮಹತ್ವದ ಬಗ್ಗೆ ಅದೆಷ್ಟೇ ಮಾತಿನ ಹೊಳೆ ಹರಿಸಿದರೂ ನೀರಿಗೆ ಕೊಳೆ ಸೇರುವುದು ನಿಂತಿಲ್ಲ.
ಮಂಗಳವಾರದಿಂದ (ನ. 1) ರಾಷ್ಟ್ರಮಟ್ಟದಲ್ಲಿ ಐದು ದಿನಗಳ ಕಾಲ ‘ಭಾರತ ಜಲಸಪ್ತಾಹ’ ನಡೆಯಲಿದೆ. ನೀರಿಗೆ ಸಂಬಂಧಿಸಿದ ಎಲ್ಲ ಉದ್ಯಮ ಪ್ರತಿನಿಧಿಗಳೂ ಎಲ್ಲ ರಾಜ್ಯಗಳೂ ನೊಯಿಡಾದಲ್ಲಿ ತಮ್ಮ ಹಿರಿಮೆಯ ಪ್ರದರ್ಶನ ಮಾಡಲಿವೆ. ಭರವಸೆಗೇನೂ ಬರವಿಲ್ಲ. ನಾವಂತೂ ನವೆಂಬರ್‌ ತಿಂಗಳಿಡೀ ನಾಡಹಬ್ಬ ವನ್ನು ಆಚರಿಸಲಿದ್ದೇವೆ. ‘ಕನ್ನಡವೆಂದರೆ ಬರಿನುಡಿಯಲ್ಲ... ಜಲವೆಂದರೆ ಕೇವಲ ನೀರಲ್ಲ...’ ಎಂದು ನಮ್ಮ ಸಂಗೀತ, ಸಾಹಿತ್ಯ, ಕಲಾಪರಂಪರೆಯ ಜೊತೆಗೆ ಇಡೀ ಪರಿಸರವನ್ನು ಕೊಂಡಾಡುತ್ತ ಬಾವುಟ ಹಾರಿಸಿ ಎಲ್ಲೆಡೆ ಎಳೆಯರ ಜೊತೆ ನಿಂತು ಹಾಡಿ ಹೊಗಳಲಿದ್ದೇವೆ. ಆ ಎಲ್ಲ ಹೆಗ್ಗಳಿಕೆಗಳಿಗೆ, ಆ ಮಕ್ಕಳ ಭವಿಷ್ಯಕ್ಕೆ ಮೂಲಸ್ರೋತವಾದ ನೀರನ್ನೇ ಶುದ್ಧವಾಗಿಟ್ಟುಕೊಳ್ಳಲಾಗದ ಸ್ಥಿತಿಗೆ ಬಂದಿದ್ದೇವಲ್ಲ, ಆ ಕುರಿತು ನಾವು ಯೋಚಿಸಬೇಕಿದೆ. ನೀರಿನ ಶುಚಿತ್ವವನ್ನು ನೋಡಲೆಂದೇ ಮಾಲಿನ್ಯ ತಪಾಸಣಾ ಅಧಿಕಾರಿಗಳು, ಉದ್ಯಮಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಪದೇಪದೇ ವಿದೇಶಿ ಪ್ರವಾಸ ಕೈಗೊಳ್ಳುತ್ತಾರೆ. ಚರಂಡಿ ನೀರನ್ನೇ ಕುಡಿಯುವ ನೀರನ್ನಾಗಿ ಪರಿವರ್ತಿಸುವ ಅದೆಷ್ಟು ಉದಾಹರಣೆಗಳನ್ನು ಅವರು ಅಲ್ಲಿ ನೋಡಿ ಬರುತ್ತಾರಾದರೂ ನಮ್ಮಲ್ಲಿ ಮಾತ್ರ ಆಕಾಶದಿಂದ ಬಂದ ಶುದ್ಧನೀರೂ ನೆಲಕ್ಕೆ ಬಂದಾಕ್ಷಣ ಕೊಳೆ
ಯಾಗುತ್ತಿರುತ್ತದೆ. ಅಧಿಕಾರಿವೃಂದದ ವೈಫಲ್ಯಕ್ಕೆ ನಾವೂ ಪರೋಕ್ಷವಾಗಿ ಬಾಧ್ಯಸ್ಥರೇ ಆಗಿದ್ದೇವೆ. ನಮ್ಮ ನಾಡಿನ ಒಂದೊಂದು ಅಂಗುಲವೂ ಒಂದಲ್ಲ ಒಂದು ನದಿಯ ಜಲಾನಯನ ಪ್ರದೇಶವೇ ಆಗಿರುವಂತೆ, ನಾಡಿನ ಒಬ್ಬೊಬ್ಬರೂ ನದಿ, ಕೆರೆ, ದಿಬ್ಬ, ಕೊಳ್ಳಗಳ ದುಃಸ್ಥಿತಿಗೆ ಕಾರಣರಾಗಿರುತ್ತೇವೆ. ಪರಿಸರ ಶುಚಿತ್ವದ ಅಳತೆಗೋಲಿನ ಪ್ರಕಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶದ ಗೌರವ ಪಾತಾಳಕ್ಕಿಳಿದಿದೆ. ಒಟ್ಟು 180 ದೇಶಗಳ 2022ರ ಸಮೀಕ್ಷೆಯ ಪ್ರಕಾರ (ಎನ್‌ವಿರಾನ್‌ಮೆಂಟಲ್‌ ಪರ್ಫಾರ್ಮೆನ್ಸ್‌ ಇಂಡೆಕ್ಸ್‌–ಇಪಿಐ) ಭಾರತ ಕೊನೆಯ ಸ್ಥಾನದಲ್ಲಿದೆ. ದೇಶದ ರಕ್ಷಣೆಗೆಂದು ಖಂಡಾಂತರ ಕ್ಷಿಪಣಿಗಳನ್ನು ರೂಪಿಸಿ, ಮಂಗಳಲೋಕಕ್ಕೆ ಯಂತ್ರಗಳನ್ನು ಹಾರಿಬಿಟ್ಟು, ಆಕಾಶದೆತ್ತರದ ಪ್ರತಿಮೆಗಳನ್ನು ನಿಲ್ಲಿಸುತ್ತಿರುವಾಗ ನೆಲ ಮಟ್ಟದಲ್ಲಿ ಕೊಳೆಹಳ್ಳಗಳ ನಡುವಣ ತಿಪ್ಪೆದಿಬ್ಬಗಳ ಮೇಲೆ ಆ ಕೀರ್ತಿ ಪತಾಕೆಯನ್ನು ಊರಬೇಕೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು