ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಒಲಿಂಪಿಕ್ ಜ್ಯೋತಿ ಪ್ರಜ್ವಲಿಸಲಿ: ಜಗತ್ತಿಗೆ ಹೊಸ ಸ್ಫೂರ್ತಿ ಸಿಗಲಿ

Last Updated 22 ಜುಲೈ 2021, 19:30 IST
ಅಕ್ಷರ ಗಾತ್ರ

ಗ್ರೀಕರು ಮನುಕುಲಕ್ಕೆ ನೀಡಿದ ಬಹುದೊಡ್ಡ ಸಾಂಸ್ಕೃತಿಕ ಕಾಣಿಕೆಯೇ ಒಲಿಂಪಿಕ್‌ ಕ್ರೀಡೆ. ಭ್ರಾತೃತ್ವ ಹಾಗೂ ಸೌಹಾರ್ದದ ಸಂದೇಶ ಸಾರುವಕ್ರೀಡೆಗಳು ಮನುಕುಲದ ವಿಕಾಸದಲ್ಲಿ ಅತಿ ಮಹತ್ವದ ಪಾತ್ರ ವಹಿಸಿವೆ. ಕೊರೊನಾ ಪಿಡುಗಿನ ನಡುವೆ ಭರವಸೆಯ ಹೊಸ ಬೆಳಕು ತುಂಬಲು ಟೋಕಿಯೊದಲ್ಲಿ ಈಗ ಒಲಿಂಪಿಕ್ ಜ್ಯೋತಿಯು ಪ್ರಜ್ವಲಿಸಲಿದೆ. ಜೀವಹಾನಿ ಹಾಗೂ ಆರ್ಥಿಕ ಹಿಂಜರಿತದಿಂದ ನೊಂದಿರುವ ಜನಮನಕ್ಕೆ ನವೋಲ್ಲಾಸ ತುಂಬುವ ವೇದಿಕೆಯಾಗುವ ನಿರೀಕ್ಷೆ ಮೂಡಿಸಿರುವ ಕೂಟ ಇದು. ಆಧುನಿಕ ಒಲಿಂಪಿಕ್ಸ್‌ನ 125 ವರ್ಷಗಳ ಇತಿಹಾಸದಲ್ಲಿ ಇಲ್ಲಿಯವರೆಗೂ ನಡೆದ ಉಳಿದೆಲ್ಲ ಕೂಟಗಳಿಗಿಂತಲೂ ಇದು ವಿಭಿನ್ನ. ಏಕೆಂದರೆ ಕೋವಿಡ್ ಭೀತಿಯ ನೆರಳಲ್ಲಿ ನಡೆಯುತ್ತಿರುವ ಕೂಟದಲ್ಲಿ ಪದಕ ಗೆಲ್ಲುವುದೊಂದೇ ಸಾಧನೆಯಲ್ಲ. ಜೀವ ಸುರಕ್ಷಾ ವಲಯದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಸ್ಪರ್ಧಿಸುವುದು ಕೂಡ ಮಹತ್ವದ್ದು. ಆದ್ದರಿಂದ ಕೂಟದಲ್ಲಿ ಭಾಗವಹಿಸಿ ಸುರಕ್ಷಿತವಾಗಿ ಮನೆಗೆ ಮರಳುವವರೇ ಚಾಂಪಿಯನ್ ಎಂಬ ವಾತಾವರಣ ಈಗ ಇದೆ. ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.ಖಾಲಿ ಕ್ರೀಡಾಂಗಣದಲ್ಲಿ ಚಪ್ಪಾಳೆಗಳ ಸದ್ದಿಲ್ಲದ ನೀರವ ವಾತಾವರಣ ದಲ್ಲಿ ತಮ್ಮ ಸಾಮರ್ಥ್ಯ ಮೆರೆಯುವ ಸವಾಲು ಕ್ರೀಡಾಪಟುಗಳ ಮುಂದಿದೆ.

ಆತಿಥೇಯ ಜಪಾನ್‌ನಲ್ಲಿ ಕೊರೊನಾ ಸೋಂಕಿನ ಪ್ರಕರಣಗಳುದಿನದಿಂದ ದಿನಕ್ಕೆ ಹೆಚ್ಚುತ್ತಿವೆ. 206 ದೇಶಗಳ ಹನ್ನೊಂದು ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಸೇರುವ ತಾಣದಲ್ಲೂ ಸೋಂಕು ಹರಡುವ ಅಪಾಯ ಇದ್ದೇ ಇದೆ. ಕ್ರೀಡಾಗ್ರಾಮದಲ್ಲಿ ಕೋವಿಡ್‌ ಪ್ರಕರಣಗಳುಈಗಾಗಲೇ ವರದಿಯಾಗಿವೆ. ಕೂಟವನ್ನು ಮುಂದೂಡಲು ಒತ್ತಾಯ ಬಂದರೂ ಸುರಕ್ಷಿತವಾಗಿ ಆಯೋಜಿಸುವುದಾಗಿ ಅಂತರ
ರಾಷ್ಟ್ರೀಯ ಒಲಿಂಪಿಕ್ ಕೌನ್ಸಿಲ್ (ಐಒಸಿ) ಮತ್ತು ಜಪಾನ್ ಸರ್ಕಾರ ಗಟ್ಟಿಯಾಗಿ ನಿಂತಿವೆ. ಕೂಟದ ಆಯೋಜನೆ ಹಿಂದಿರುವ ರಾಜಕೀಯ ಮತ್ತು ಆರ್ಥಿಕ ಕಾರಣಗಳೂ ಗಮನಾರ್ಹವಾದುವು. 2020ರಲ್ಲಿಯೇ ಕೂಟವನ್ನು ಆಯೋಜನೆ ಮಾಡಲು ₹89 ಸಾವಿರ ಕೋಟಿ ವೆಚ್ಚದಲ್ಲಿ ಜಪಾನ್ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆದರೆ ಆರೋಗ್ಯ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೂಟವನ್ನು ಒಂದು ವರ್ಷ ಮುಂದೂಡುವ ನಿರ್ಣಯವನ್ನು ಐಒಸಿ ಕೈಗೊಂಡಿತ್ತು. ಇದರಿಂದ ಸುಮಾರು ಹತ್ತು ಸಾವಿರ ಕೋಟಿ ರೂಪಾಯಿಯಷ್ಟು ನಷ್ಟವೂ ಆಗಿರುವ ಅಂದಾಜಿದೆ. ಆದರೆ, 1948ರಿಂದ 2016ರವರೆಗೆ ಎಲ್ಲ ಕೂಟಗಳೂ ಯಶಸ್ವಿಯಾಗಿ ನಡೆದಿವೆ. ಟೋಕಿಯೊ ಒಲಿಂಪಿಕ್‌ ಕೂಟವನ್ನು ಆ ಸಾಲಿಗೆ ಸೇರಿಸುವ ಛಲ ಆಯೋಜಕರದ್ದು. ಕೋವಿಡ್‌ ಭೀತಿಯನ್ನು ಶಮನ ಮಾಡಿ ಮನುಕುಲದ ಆತ್ಮವಿಶ್ವಾಸವನ್ನು ವೃದ್ಧಿಸಲು ಈ ಒಲಿಂಪಿಕ್ಸ್ ಸಹಕಾರಿಯಾಗಲಿದೆ ಎಂದು ಪ್ರತಿಪಾದಿಸುವ ವರ್ಗವೂ ಇದೆ. ಈಚೆಗಷ್ಟೇನಡೆದ ಯುರೊ ಕಪ್ ಫುಟ್‌ಬಾಲ್, ಕೊಪಾ ಅಮೆರಿಕ ಫುಟ್‌ಬಾಲ್ ಟೂರ್ನಿಗಳ ಯಶಸ್ಸು ಕೂಡ ಒಲಿಂಪಿಕ್ ಆಯೋಜನೆಗೆ ಹುರುಪು ತುಂಬಿರುವುದು ಸುಳ್ಳಲ್ಲ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲೆಂದೇ ಹಲವು ವರ್ಷಗಳಿಂದ ಶ್ರಮಿಸುತ್ತಿರುವ ಕ್ರೀಡಾಪಟುಗಳಿಗೆ ಇದುಕನಸು ನನಸಾಗುವ ಕಾಲ.

ಕ್ರೀಡೆಯಲ್ಲಿ ಇನ್ನೂ ಬಹಳಷ್ಟು ಸಾಧನೆ ಮಾಡಬೇಕಿರುವ ಭಾರತಕ್ಕೂ ಇದು ಪ್ರತಿಷ್ಠೆಯ ಕಣ. 120 ಕ್ರೀಡಾಪಟುಗಳು ರಾಷ್ಟ್ರದ ಕೋಟ್ಯಂತರ ಕ್ರೀಡಾಪ್ರೇಮಿಗಳ ನಿರೀಕ್ಷೆ ಹೊತ್ತು ಟೋಕಿಯೊಗೆ ತೆರಳಿದ್ದಾರೆ. ಮೂವರು ಮಕ್ಕಳ ತಾಯಿ, ಬಾಕ್ಸರ್ ಮೇರಿ ಕೋಮ್ ಮತ್ತು ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಇಂದು ರಾತ್ರಿ (ಜುಲೈ 23) ನಡೆಯಲಿರುವ ಉದ್ಘಾಟನೆ ಸಮಾರಂಭದ ಪಥಸಂಚಲನದಲ್ಲಿ ತ್ರಿವರ್ಣ ಧ್ವಜ ಹಿಡಿದು ತಂಡವನ್ನು ಮುನ್ನಡೆಸಲಿದ್ದಾರೆ. ವಿವಿಧ ಕ್ರೀಡೆಗಳಲ್ಲಿ ಪದಕಗಳನ್ನು ಜಯಿಸುವ ಭರವಸೆಯನ್ನು ಕ್ರೀಡಾಪಟುಗಳು ಮೂಡಿಸಿದ್ದಾರೆ. ರಿಯೊ ಡಿ ಜನೈರೊ ಕೂಟದಲ್ಲಿ ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಪಿ.ವಿ. ಸಿಂಧು ಈ ಬಾರಿ ಚಿನ್ನದ ಹೊಳಪು ಮೂಡಿಸುವ ಛಲದಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಭಾರತದ ಇಬ್ಬರು ಈಜುಪಟುಗಳು ‘ಎ’ ಅರ್ಹತೆ ಗಳಿಸಿ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದಾರೆ. ಅವರಲ್ಲಿ ಒಬ್ಬರು ಕರ್ನಾಟಕದ ಶ್ರೀಹರಿ ನಟರಾಜ್ ಎಂಬುದು ನಮಗೆ ಹೆಮ್ಮೆಯ ಸಂಗತಿ. 40 ವರ್ಷಗಳಿಂದ ಹಾಕಿ ತಂಡವು ಎದುರಿಸುತ್ತಿರುವ ಪದಕದ ಬರ ಈ ಬಾರಿ ಕೊನೆಗೊಳ್ಳುವುದೆಂಬ ಆಶಾಭಾವ ಇದೆ. ಟ್ರ್ಯಾಕ್‌ ಮತ್ತು ಫೀಲ್ಡ್‌ ವಿಭಾಗದಲ್ಲಿ ಚೊಚ್ಚಲ ಪದಕ ಈ ಬಾರಿಯಾದರೂ ಒಲಿಯುವುದೇ? ಭಾರತದಲ್ಲಿ ಕ್ರೀಡಾಭಿವೃದ್ಧಿಗೆ ಸರ್ಕಾರವು ಜಾರಿಗೆ ತಂದಿರುವ ಯೋಜನೆಗಳ ಮೌಲ್ಯಮಾಪನಕ್ಕೂ ಈ ಕೂಟ ವೇದಿಕೆಯಾಗಲಿದೆ. ಇದೆಲ್ಲದರ ಆಚೆಗೆ ಜಮೈಕಾದ ದಾಖಲೆವೀರ, ಓಟಗಾರ ಉಸೇನ್‌ ಬೋಲ್ಟ್‌, ಈಜಕೊಳದ ‘ಚಿನ್ನದ ಮೀನು’ ಮೈಕೆಲ್ ಪೆಲ್ಪ್ಸ್‌ ಅವರ ದಾಖಲೆಗಳನ್ನು ಸರಿಗಟ್ಟುವ ವೀರರು ಹುಟ್ಟಿಬರುವರೇ ಎಂಬ ಕುತೂಹಲವೂ ಈಗ ಗರಿಗೆದರಿದೆ. ‘ವೇಗವಾಗಿ ಉನ್ನತಿಗೇರೋಣ, ಜೊತೆಗೂಡಿ ಸದೃಢರಾಗೋಣ’ ಎಂಬ ಒಲಿಂಪಿಕ್ ಆಶಯ ಸಾಕಾರಗೊಳ್ಳುವ ಸಮಯ ಬಂದಿದೆ. ಆಗಸ್ಟ್ 8ರವರೆಗೆ ಕ್ರೀಡಾಲೋಕದ ಹತ್ತಾರು ರೋಚಕ ಕಥೆಗಳು ಟೋಕಿಯೊದ ಅಂಗಳದಿಂದ ಮೂಡಿಬರಲಿವೆ. ಕ್ರೀಡಾಜ್ಯೋತಿಯ ಪ್ರಭೆಯಲ್ಲಿ ಮನುಕುಲಕ್ಕೆ ಹೊಸದೊಂದು ದಿಸೆ ದೊರೆತು, ಸ್ಫೂರ್ತಿದಾಯಕ ಕಥೆಗಳು ಹುಟ್ಟಿ ಜನಪದವಾಗಲಿ ಎಂಬ ಹಾರೈಕೆ ಕ್ರೀಡಾಪ್ರಿಯರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT