ಮಂಗಳವಾರ, ಮೇ 26, 2020
27 °C

ಸಂಪಾದಕೀಯ | ಮೈಸೂರಿನ ಸಾಧನೆ ಅಭಿನಂದನೀಯ: ಇತರ ನಗರಗಳಿಗೂ ಪ್ರೇರಣೆಯಾಗಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕಸ ನಿರ್ವಹಣೆಯ ಹೊಣೆಯನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸಿ, ದೇಶದ ಐದು ನಗರಗಳೊಂದಿಗೆ ಫೈವ್‌ ಸ್ಟಾರ್‌ (ಪಂಚತಾರಾ) ಶ್ರೇಯಾಂಕ ಪಡೆದಿರುವ ಮೈಸೂರಿನ ಸಾಧನೆ ಅಭಿನಂದನೀಯ. ಕೇಂದ್ರ ಸರ್ಕಾರದ ನಗರ ವ್ಯವಹಾರಗಳ ಸಚಿವಾಲಯವು ದೇಶದಾದ್ಯಂತ ನಡೆಸಿದ ಸಮೀಕ್ಷೆಯ ಆಧಾರದಲ್ಲಿ ಈ ಶ್ರೇಯಾಂಕ ನೀಡಲಾಗಿದೆ. ಕೊರೊನಾ ಸೋಂಕಿನ ಅಬ್ಬರ ಹೆಚ್ಚಿರುವ ಸದ್ಯದ ಸನ್ನಿವೇಶದಲ್ಲಿ, ಸಮುದಾಯ ಆರೋಗ್ಯದ ವಿಷಯವಾಗಿ ಆತಂಕ ಕಾಡುತ್ತಿದೆ. ಆರೋಗ್ಯ ಕಾಪಾಡಿಕೊಳ್ಳಲು ಪೂರಕವಾದ ನೈರ್ಮಲ್ಯದ ಕುರಿತೂ ಈಗ ಜೋರಾಗಿ ಚರ್ಚೆ ನಡೆಯುತ್ತಿದೆ. ಕಸ ನಿರ್ವಹಣೆಯಲ್ಲಿ ಸ್ಥಳೀಯ ಆಡಳಿತಗಳು ಲಾಗಾಯ್ತಿನಿಂದಲೂ ವಿಫಲವಾಗಿರುವ ಕಾರಣ, ದೇಶದ ಬಹುಪಾಲು ನಗರಗಳು ನೈರ್ಮಲ್ಯದ ಕೊರತೆಯನ್ನು ಎದುರಿಸುತ್ತಿವೆ. ಆದಕಾರಣ, ಶ್ರೇಯಾಂಕ ಪಡೆದಿರುವ ನಗರಗಳ ಸಾಧನೆಯು ಇತರ ನಗರಗಳ ಪಾಲಿಗೆ ಅಧ್ಯಯನ ಹಾಗೂ ಅನುಸರಣೆಗೆ ಯೋಗ್ಯ. ಮೈಸೂರಿನ ಉದಾಹರಣೆಯನ್ನೇ ನೋಡುವುದಾದರೆ ಮನೆ, ಮನೆಯಿಂದ ಕಸ ಸಂಗ್ರಹ, ಮೂಲದಲ್ಲೇ ಹಸಿ ಮತ್ತು ಒಣ ಕಸ ವಿಂಗಡಣೆ ಹಾಗೂ ವೈಜ್ಞಾನಿಕ ಸಂಸ್ಕರಣೆ ವಿಷಯದಲ್ಲಿ ಈ ನಗರ ಗಣನೀಯ ಸಾಧನೆಯನ್ನೇ ಮಾಡಿದೆ. ಮಧ್ಯಪ್ರದೇಶದ ಇಂದೋರ್‌ನ ಕಸ ನಿರ್ವಹಣೆ ಕೂಡ ಇತರ ನಗರಗಳಿಗೆ ಮಾದರಿ.
ಆ ನಗರದಲ್ಲಿ ರಾತ್ರಿ ವೇಳೆಯಲ್ಲಿಯೇ ಕಸ ಸಂಗ್ರಹಿಸಿ, ವಿಲೇವಾರಿ ಮಾಡಲಾಗುತ್ತಿದೆ. ರಸ್ತೆಗಳನ್ನೂ ರಾತ್ರಿ ವೇಳೆಯೇ ಸ್ವಚ್ಛಗೊಳಿಸ
ಲಾಗುತ್ತಿದೆ. ಪ್ಲಾಸ್ಟಿಕ್‌ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದ್ದು, ಕಸದಿಂದ ಗೊಬ್ಬರವನ್ನೂ ತಯಾರಿಸಲಾಗುತ್ತಿದೆ.

ನಮ್ಮ ರಾಜ್ಯದ ಇತರ ನಗರಗಳು ಫೈವ್‌ ಸ್ಟಾರ್‌ ಇರಲಿ, ಥ್ರೀ ಸ್ಟಾರ್‌ ಅಥವಾ ಸಿಂಗಲ್‌ ಸ್ಟಾರ್‌ ನಗರಗಳ ಪಟ್ಟಿಯಲ್ಲೂ ಸ್ಥಾನ ಪಡೆದಿಲ್ಲ. ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಪ್ರಮುಖ ನಗರಗಳ ನೈರ್ಮಲ್ಯದ ಸ್ಥಿತಿ ಹೇಗಿದೆ ಎಂಬುದಕ್ಕೆ ಇದು ನಿದರ್ಶನ. ಬೆಂಗಳೂರಿನ ಕಸ ನಿರ್ವಹಣೆ ವೈಫಲ್ಯವು ಈ ಹಿಂದೆ ಜಾಗತಿಕ ಮಟ್ಟದ ಸುದ್ದಿಯಾಗಿದ್ದುಂಟು. ಮಂಡೂರು, ಮಾವಳ್ಳಿಪುರ ಸೇರಿದಂತೆ ಆರು ಕಡೆಗಳಲ್ಲಿ ಇನ್ನೂ ಕರಗದೆ ಉಳಿದಿರುವ ಕಸದ ಬೆಟ್ಟಗಳು ಅಂತಹ ವೈಫಲ್ಯದ ಕಥೆಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತವೆ. ವೈಜ್ಞಾನಿಕ ವಿಲೇವಾರಿ ಹೆಸರಿನಲ್ಲಿ ಏನೆಲ್ಲ ಪ್ರಯೋಗಗಳು ಇಲ್ಲಿ ನಡೆದಿವೆ. ಆದರೆ, ಕಸದ ಸಮಸ್ಯೆಗೆ ಶಾಶ್ವತವಾದ ಪರಿಹಾರ ಇನ್ನೂ ಸಿಕ್ಕಿಲ್ಲ. ಕಸವನ್ನು ವಿಂಗಡಿಸದೆ ಅವೈಜ್ಞಾನಿಕ
ವಾಗಿ ಗುಂಡಿಗಳಿಗೆ ಸುರಿದಿದ್ದು, ಸಮಸ್ಯೆ ಬಿಗಡಾಯಿಸಲು ಪ್ರಮುಖ ಕಾರಣ ಎನ್ನುವುದು ತಜ್ಞರ ವರದಿಗಳಲ್ಲಿ ಪ್ರಮುಖವಾಗಿ ಬಿಂಬಿತವಾಗಿದೆ. ಸಾವಯವ ಕಸ ಸಂಗ್ರಹದ ಗುಂಡಿಗಳಲ್ಲಿ ಪ್ಲಾಸ್ಟಿಕ್‌ ಸೇರಿದಂತೆ ಎಲ್ಲ ವಿಧದ ಕಸವೂ ಮಿಶ್ರಣಗೊಂಡು ಬಿದ್ದಿದ್ದರಿಂದ ಅದು ಕರಗುತ್ತಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಯುರೋಪ್‌ ಮಾದರಿಯಂತೆ ಕಸವನ್ನು ದಹಿಸಿ ವಿದ್ಯುತ್‌ ಉತ್ಪಾದಿಸುವ ಯೋಜನೆಗೂ ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದೆ. ಆದರೆ, ಸಾವಯವ ಕಸದ ಪ್ರಮಾಣವೇ ಹೆಚ್ಚಾಗಿರುವ ಕಾರಣ, ನೈಸರ್ಗಿಕವಾಗಿ ಕರಗಲು ಬಿಡಬೇಕೇ ಹೊರತು ಅದನ್ನು ದಹಿಸಿ, ವಿದ್ಯುತ್‌ ಉತ್ಪಾದಿಸುವ ಗುರಿ ಅಷ್ಟೊಂದು ಕಾರ್ಯಸಾಧುವಲ್ಲ ಎನ್ನುವುದು ತಜ್ಞರ ಅನಿಸಿಕೆ. ಸ್ಥಳೀಯ ವಾತಾವರಣಕ್ಕೆ ತಕ್ಕಂತೆ ಆರ್ಥಿಕ, ಸಾಮಾಜಿಕ, ತಾಂತ್ರಿಕ ಮತ್ತು ಪರಿಸರಕ್ಕೆ ಪೂರಕವಾದ ಸಂಸ್ಕರಣಾ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎನ್ನುವುದೂ ಅವರ ಸಲಹೆ. ಸಮಸ್ಯೆಗೆ
ಶಾಶ್ವತ ಪರಿಹಾರ ರೂಪಿಸಬೇಕು ಎನ್ನುವ ಇಚ್ಛಾಶಕ್ತಿ ಇದ್ದರೆ ಪರಿಹಾರದ ಮಾರ್ಗೋಪಾಯಗಳು ಬೇಕಾದಷ್ಟಿವೆ. ಮೂಲದಲ್ಲಿ ಕಸ ಪ್ರತ್ಯೇಕಗೊಳಿಸುವುದು, ಅದನ್ನು ಸಂಗ್ರಹಿಸಿ ಸಮರ್ಪಕವಾಗಿ ಸಾಗಿಸುವುದು, ಕಸವನ್ನು ಸಂಸ್ಕರಿಸಿ  ಮರುಬಳಕೆ ಮಾಡುವುದು, ಜನರಲ್ಲಿ ಕಸ ನಿರ್ವಹಣೆಯ ಮಹತ್ವದ ಕುರಿತು ಅರಿವು ಮೂಡಿಸುವುದು ಮುಖ್ಯವಾಗಿ ಆಗಬೇಕಿರುವ ಕೆಲಸಗಳು. ಮೈಸೂರಿನ ಯಶಸ್ಸು ರಾಜ್ಯದ ಉಳಿದ ನಗರಗಳ ನೈರ್ಮಲ್ಯದ ಅಭಿಯಾನಕ್ಕೆ ಪ್ರೇರಣೆಯಾಗಬೇಕು. ಆ ದಿಸೆಯಲ್ಲಿ ಸ್ಥಳೀಯ ಆಡಳಿತಗಳನ್ನು ಹುರಿದುಂಬಿಸುವ ಕೆಲಸವನ್ನು ರಾಜ್ಯ ಸರ್ಕಾರವೂ ಮಾಡಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು