ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಕೊರೊನಾ ಜೊತೆ ಬಾಳ್ವೆ; ಸಾಮುದಾಯಿಕ ಅಭಿಯಾನ ಅಗತ್ಯ

Last Updated 18 ಮೇ 2020, 22:51 IST
ಅಕ್ಷರ ಗಾತ್ರ

ಕೊರೊನಾ ವೈರಾಣುವಿನ ಬಿಗಿಹಿಡಿತದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಜಾರಿಗೊಳಿಸಲಾದ ಲಾಕ್‌ಡೌನ್‌ ಈಗ ನಾಲ್ಕನೆಯ ಹಂತ ತಲುಪಿದೆ. ಮೊದಲ ಮೂರು ಹಂತಗಳಿಗೆ ಹೋಲಿಕೆ ಮಾಡಿದರೆ, ಈ ಹಂತದಲ್ಲಿ ಬಹಳಷ್ಟು ವಿನಾಯಿತಿಗಳು ಇವೆ. ವೈರಾಣುವಿನಿಂದ ಉಂಟಾಗುವ ಯಾವುದೇ ಕಾಯಿಲೆಯನ್ನು ಲಾಕ್‌ಡೌನ್‌ ಮೂಲಕವೇ ಸಂಪೂರ್ಣವಾಗಿ ನಿರ್ಮೂಲಗೊಳಿಸಲು ಸಾಧ್ಯವಾದ ಉದಾಹರಣೆ ಆಧುನಿಕ ಕಾಲಘಟ್ಟದಲ್ಲಿ ಇದ್ದಂತಿಲ್ಲ. ಆದರೂ, ಭಾರತದಲ್ಲಿ ಲಾಕ್‌ಡೌನ್‌ ಘೋಷಣೆಯಾದಾಗ, ಕೊರೊನಾ ವೈರಾಣು
ವಿನಿಂದಾಗಿ ಬರುವ ಕೋವಿಡ್–19 ಕಾಯಿಲೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಬಹುದು ಎಂಬ ನಿರೀಕ್ಷೆ ಸಮಾಜದ ಒಂದು ವರ್ಗದಲ್ಲಿ ಇದ್ದಿದ್ದು ನಿಜ. ಈಗಿನ ಸ್ಥಿತಿಯಲ್ಲಿ ನಿಂತು ನೋಡಿದಾಗ, ಆ ನಿರೀಕ್ಷೆ ನಿಜವಾಗಿಲ್ಲ ಎಂಬುದನ್ನು ಪ್ರತ್ಯೇಕವಾಗಿ ಹೇಳ
ಬೇಕಾಗಿಲ್ಲ. ಕೋವಿಡ್‌–19 ಹರಡುವುದನ್ನು ತಡೆಯುವ ಉದ್ದೇಶದಿಂದ ಲಾಕ್‌ಡೌನ್‌ ಘೋಷಿಸಿದ ವಿಶ್ವದ ಬಹುತೇಕ ದೇಶಗಳು ಈಗ ಕೆಲವು ಸಮಾನ ಅಂಶಗಳನ್ನು ಅರ್ಥಮಾಡಿಕೊಂಡಿವೆ. ಅವುಗಳನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು: ಲಾಕ್‌ಡೌನ್‌ವೊಂದರ‌ ಮೂಲಕವೇ ಈ ಕಾಯಿಲೆಯನ್ನು ಮಣಿಸಲು ಆಗಲಿಕ್ಕಿಲ್ಲ; ಪೂರ್ಣ ‍ಪ್ರಮಾಣದ ಲಾಕ್‌ಡೌನ್‌ ಮುಂದುವರಿಸಿದರೆ ಅದರ ಸಾಮಾಜಿಕ– ಆರ್ಥಿಕ ಪರಿಣಾಮಗಳು ಕೋವಿಡ್‌ನಿಂದ ಸೃಷ್ಟಿಯಾಗಬಹುದಾದ ಆರೋಗ್ಯ ಪರಿಣಾಮಗಳಿಗಿಂತ ಭೀಕರವಾಗಬಹುದು; ಕಾಯಿಲೆ ಒಮ್ಮೆ ವಾಸಿಯಾದರೂ ಅದು ಅದೇ ವ್ಯಕ್ತಿಯಲ್ಲಿ ಮತ್ತೆ ಕಾಣಿಸಿಕೊಳ್ಳದು ಎಂಬ ಭರವಸೆ ಇಲ್ಲ; ಈ ಕಾಯಿಲೆಗೆ ಲಸಿಕೆ ಅಥವಾ ಔಷಧ ಅಭಿವೃದ್ಧಿಪಡಿಸುವುದೇ ಈ ಹಂತದಲ್ಲಿ ಗೋಚರಿಸುತ್ತಿರುವ ಏಕಮಾತ್ರ ಪರಿಹಾರ. ಕಾಯಿಲೆ ಬಂದ ನಂತರ ವ್ಯಕ್ತಿಗೆ ಕೊಡುವ ಔಷಧಕ್ಕಿಂತಲೂ ಕಾಯಿಲೆ ಬಾರದಂತೆ ಮಾಡುವ ಲಸಿಕೆಯೇ ಹೆಚ್ಚು ಉತ್ತಮ. ಹೀಗಿದ್ದರೂ, ಕೋವಿಡ್–19 ವಿಚಾರದಲ್ಲಿ ಔಷಧ ಹಾಗೂ ಲಸಿಕೆಗಳೆರಡನ್ನೂ ಅಭಿವೃದ್ಧಿಪಡಿಸುವತ್ತ ವೈದ್ಯಕೀಯ ಜಗತ್ತು ಮುಂದಡಿ ಇರಿಸಿದೆ. ಲಸಿಕೆ ಅಥವಾ ಔಷಧ ಮನುಕುಲದ ಬಳಕೆಗೆ ಪೂರ್ಣಪ್ರಮಾಣದಲ್ಲಿ ಲಭ್ಯವಾಗಲು ಒಂದೂವರೆ ವರ್ಷವಾದರೂ ಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಅಂದರೆ, ಈ ಹಂತದಲ್ಲಿ ಕೊರೊನಾ ವೈರಾಣುವಿನ ಜೊತೆ ಬಾಳ್ವೆ ನಡೆಸುವುದು ಮನುಷ್ಯನಿಗೆ ಅನಿವಾರ್ಯ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕೂಡ ಇದನ್ನೇ ಹೇಳಿದೆ. ಕೊರೊನಾ ಸೋಂಕಿತರ ಸಂಖ್ಯೆ ಒಂದು ಸಾವಿರಕ್ಕಿಂತ ಕಡಿಮೆ ಇದ್ದಾಗ ಲಾಕ್‌ಡೌನ್‌ ಘೋಷಿಸಿ, 90 ಸಾವಿರ ದಾಟಿದ ನಂತರ ಲಾಕ್‌ಡೌನ್‌ನಲ್ಲಿ ಬಹಳಷ್ಟು ವಿನಾಯಿತಿಗಳನ್ನು ನೀಡಿರುವ ಭಾರತ ಹೇಳುತ್ತಿರುವುದೂ ‘ವೈರಾಣುವಿನ ಜೊತೆ ಬಾಳುವುದು ಸದ್ಯಕ್ಕೆ ಅನಿವಾರ್ಯ’ ಎಂಬ ಮಾತನ್ನೇ. ಇಂಥದ್ದೊಂದು ವೈರಾಣು ಸೃಷ್ಟಿಸುವ ಸಮಸ್ಯೆಗಳು ದೇಶದ ಇಂದಿನ ತಲೆಮಾರಿಗೆ ತೀರಾ ಹೊಸವು. ಹಾಗಾಗಿ, ಈ ಹಂತದಲ್ಲಿ ದೇಶವಾಸಿಗಳಿಗೆ ವೈರಾಣುವಿನ ಜೊತೆಯಲ್ಲೇ ಬದುಕು ಮುನ್ನಡೆಸುವುದನ್ನು ಕಲಿಸುವುದು ಅತ್ಯಗತ್ಯ; ಇದನ್ನು ಕಲಿಸದಿದ್ದಲ್ಲಿ ಆಗುವ ಪರಿಣಾಮ ತೀರಾ ಅಹಿತಕರವಾಗಿರುತ್ತದೆ. ಇದನ್ನು ಕಲಿಸುವ ಪ್ರಕ್ರಿಯೆಯು ಸಾಮುದಾಯಿಕ ಆಂದೋಲನದ ರೀತಿಯಲ್ಲಿ ನಡೆಯಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದರ ನೇತೃತ್ವ ವಹಿಸಬೇಕು. ಗ್ರಾಮ ಪಂಚಾಯಿತಿಯಂತಹ ಸ್ಥಳೀಯ ಸರ್ಕಾರಗಳನ್ನು ಜೊತೆಯಾಗಿಸಿಕೊಳ್ಳಬೇಕು.ಎನ್‌ಜಿಒಗಳು, ವಿವಿಧ ಸಂಘಟನೆಗಳ ನೆರವನ್ನುಪಡೆದುಕೊಳ್ಳಬೇಕು. ಸಮೂಹ ಮಾಧ್ಯಮಗಳನ್ನು ಬಳಸಿಕೊಳ್ಳಬೇಕು. ಧಾರ್ಮಿಕ ಮುಖಂಡರನ್ನು ಕೂಡ ಈ ಅಭಿಯಾನದಲ್ಲಿ ಜೊತೆಯಾಗಿಸಿಕೊಳ್ಳಬಹುದು. ಎಚ್‌ಐವಿ ಸೋಂಕನ್ನು ಹಣಿಯಲು ಹಳ್ಳಿಹಳ್ಳಿಯಲ್ಲೂ ಜನಜಾಗೃತಿ ಅಭಿಯಾನ ನಡೆಸಿದ ಅನುಭವ ದೇಶಕ್ಕಿದೆ. ಆಗಲೂ ವಿವಿಧ ಎನ್‌ಜಿಒಗಳ, ಸಂಘ–ಸಂಸ್ಥೆಗಳ ನೆರವನ್ನು ಸರ್ಕಾರ ಪಡೆದುಕೊಂಡಿತ್ತು. ಅದನ್ನು ಒಂದು ಪಾಠವಾಗಿ ಈ ರೋಗದ ವಿರುದ್ಧದ ಅಭಿಯಾನದಲ್ಲಿ ಬಳಸಿಕೊಳ್ಳಬಹುದು. ಈಗ ಲಾಕ್‌ಡೌನ್‌ ನಿಯಮಗಳನ್ನು ಸಡಿಲಗೊಳಿಸಿರುವ ಪರಿಣಾಮವಾಗಿ, ದೇಶದೆಲ್ಲೆಡೆ ಕೋವಿಡ್–19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಆಗಬಹುದು. ಇದನ್ನು ಕಂಡು ಜನ ಭೀತಿಗೆ ಒಳಗಾಗದಂತೆ ಮಾಡುವ ಹೊಣೆಯೂ ಸರ್ಕಾರದ ಮೇಲಿದೆ. ಕೋವಿಡ್‌–19ಕ್ಕೆ ಲಸಿಕೆ, ಔಷಧ ಇಲ್ಲದಿರಬಹುದು; ಆದರೆ, ಇದು ಎಲ್ಲರ ಪಾಲಿಗೂ ಮಾರಣಾಂತಿಕ ಅಲ್ಲ. ಕೊರೊನಾ ಜೊತೆ ಬಾಳ್ವೆ ಹೇಗೆಂಬುದರ ಬಗ್ಗೆ ಜನಜಾಗೃತಿ ನಡೆಸುತ್ತಲೇ, ದೇಶದ ಆರೋಗ್ಯ ವ್ಯವಸ್ಥೆಯ ಬಲವರ್ಧನೆಯ ಕಡೆಗೂ ಸರ್ಕಾರಗಳು ಗಮನ ನೀಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಆರಂಭಿಸಿ, ಎಲ್ಲ ಹಂತದ ಆಸ್ಪತ್ರೆಗಳನ್ನೂ ಇಂತಹ ಸಾಂಕ್ರಾಮಿಕಗಳನ್ನು ಎದುರಿಸಲು ಸಶಕ್ತವಾಗುವಂತೆ ಮಾಡಬೇಕು. ಹಾಗಾದರೆ ಮಾತ್ರ, ಭವಿಷ್ಯದಲ್ಲಿ ಲಾಕ್‌ಡೌನ್‌, ಅದರ ಪರಿಣಾಮವಾಗಿ ಉಂಟಾಗುವ ಆರ್ಥಿಕ ಏಟುಗಳ ಗೊಡವೆ ಇಲ್ಲದೆ ಸಾಗಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT