ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಬಾಂಡ್‌ ಬೇಕಿದೆ ಪಾರದರ್ಶಕತೆ

Last Updated 22 ನವೆಂಬರ್ 2019, 20:00 IST
ಅಕ್ಷರ ಗಾತ್ರ

ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ರೂಪಿಸಲಾದ ಚುನಾವಣಾ ಬಾಂಡ್‌ ಯೋಜನೆಯು ಸಂಸತ್ತಿನಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಗಿದೆ. ‘ಬಾಂಡ್‌ ಮೂಲಕ ದೇಣಿಗೆ ನೀಡುವವರ ಹೆಸರು ಮತ್ತು ವಿವರಗಳನ್ನು ಗೋಪ್ಯವಾಗಿ ಇಡಬಹುದು ಎಂಬ ನಿಯಮವಿದೆ. ಇದರಿಂದಾಗಿ ಚುನಾವಣಾ ಬಾಂಡ್‌ಗಳ ಮೂಲಕ ಭ್ರಷ್ಟಾಚಾರಕ್ಕೆ ಅಧಿಕೃತ ಮುದ್ರೆ ಒತ್ತಲಾಗಿದೆ. ಕಪ್ಪುಹಣವನ್ನು ಸಕ್ರಮಗೊಳಿಸಲಾಗುತ್ತಿದೆ’ ಎಂದು ವಿರೋಧ ಪಕ್ಷಗಳ ಮುಖಂಡರು ಆರೋಪಿಸಿದ್ದಾರೆ.

ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಆಯ್ದ ಶಾಖೆಗಳಲ್ಲಿ ಮಾತ್ರ ಸಿಗುವ ಈ ಬಾಂಡ್‌ಗಳನ್ನು ಖರೀದಿಸುವವರು ತಮ್ಮ ವಿಳಾಸದ ಯಾವುದಾದರೊಂದು ದಾಖಲೆ ನೀಡಿದರೆ ಸಾಕು, ಹಣದ ಮೂಲವನ್ನು ತೋರಿಸಬೇಕಿಲ್ಲ. ಖರೀದಿಸುವವರ ಹೆಸರನ್ನು ಬಾಂಡ್‌ನಲ್ಲಿ ಬರೆಯಬೇಕಿಲ್ಲ. ಹಾಗೆಯೇ ಯಾವ ಪಕ್ಷಕ್ಕೆ ದೇಣಿಗೆ ಕೊಡುವ ಸಲುವಾಗಿ ಅವರು ಬಾಂಡ್‌ ಖರೀದಿಸುತ್ತಿದ್ದಾರೆ ಎನ್ನುವುದನ್ನೂ ನಮೂದಿಸಬೇಕಿಲ್ಲ. ಚೆಕ್‌, ಡಿ.ಡಿ, ಆರ್‌ಟಿಜಿಎಸ್‌ ಮೂಲಕ ಮತ್ತು ನಗದು ನೀಡಿ ಬಾಂಡ್‌ ಖರೀದಿಸಬಹುದು. ಈ ನಿಯಮಗಳೇ ಈಗ ಚುನಾವಣಾ ಬಾಂಡ್‌ಗಳ ಖರೀದಿಯಲ್ಲಿ ಕಪ್ಪುಹಣ ಬಳಕೆಗೆ ಅವಕಾಶ ಒದಗಿಸುತ್ತಿವೆ ಎಂಬ ಆರೋಪವೂ ಇದೆ. ಅದರಲ್ಲಿ ಸತ್ಯಾಂಶ ಇಲ್ಲದೆಯೂ ಇಲ್ಲ. ‘ತೆರಿಗೆ ತಪ್ಪಿಸುವ ಮೂಲಕ ಶೇಖರಣೆಯಾಗುವ ಕಪ್ಪುಹಣವು ವಿದೇಶಗಳಲ್ಲಿ ಜಡಠೇವಣಿಯಾಗಿ ಕೂರುವ ಬದಲು ದೇಶದಲ್ಲಿ ಚುನಾವಣಾ ಖರ್ಚಿಗಾದರೂ ಬಳಕೆಯಾಗಲಿ ಎಂಬ ಸದುದ್ದೇಶದಿಂದ ಬಾಂಡ್‌ ಯೋಜನೆಯನ್ನು ರೂಪಿಸಲಾಗಿದೆ’ ಎನ್ನುವುದು ಸರ್ಕಾರವು ಈ ಯೋಜನೆ ರೂಪಿಸಿದಾಗ ನೀಡಿದ್ದ ಸಮರ್ಥನೆ. ಸರ್ಕಾರ ಇದನ್ನು ‘ಸದುದ್ದೇಶ’ ಎಂದು ಕರೆದಿದ್ದರೂ ಇದರ ಪ್ರಯೋಜನ ಆಳುವ ಪಕ್ಷಕ್ಕೆ ಮಾತ್ರ ದೊರೆತಿರುವುದು ವಿರೋಧ ಪಕ್ಷಗಳ ಕಣ್ಣು ಕೆಂಪಾಗಿಸಿದೆ. ಚುನಾವಣಾ ಬಾಂಡ್‌ಗಳು ಬಂದ ನಂತರ ಕಂಡುಬಂದಿರುವ ಒಂದೇ ವ್ಯತ್ಯಾಸವೆಂದರೆ, ನಗದಿನ ಬದಲಾಗಿ ಚೆಕ್‌, ಡಿ.ಡಿ ಮತ್ತು ಆರ್‌ಟಿಜಿಎಸ್‌ ಪಾವತಿಗಳ ಬಳಕೆ ಹೆಚ್ಚಾಗಿರುವುದು.

ಚುನಾವಣೆಗೆ ಖರ್ಚು ಮಾಡಲು ಬೇನಾಮಿ ಹಣ ಬಂದರೆ ಯಾವುದೇ ರಾಜಕೀಯ ಪಕ್ಷವೂ ಖುಷಿಯಿಂದ ಪಡೆಯುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಿದ್ದೂ ವಿರೋಧ ಪಕ್ಷಗಳು ಈ ಬಾಂಡ್‌ಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಏಕೆ ಎನ್ನುವುದು ಕುತೂಹಲಕರ. ಈ ಯೋಜನೆಯು ಆಳುವ ಪಕ್ಷಕ್ಕೆ ಹಣದ ಹೊಳೆ ಹರಿಸುತ್ತಿರುವುದೇ ವಿರೋಧಕ್ಕೆ ಮುಖ್ಯ ಕಾರಣ. 2018ರಲ್ಲಿ ಜಾರಿಗೆ ಬಂದ ಚುನಾವಣಾ ಬಾಂಡ್‌ ಯೋಜನೆ ಮೂಲಕ ಈವರೆಗೆ ₹ 6,128 ಕೋಟಿ ಮೊತ್ತವನ್ನು ರಾಜಕೀಯ ಪಕ್ಷಗಳು ದೇಣಿಗೆಯಾಗಿ ಪಡೆದುಕೊಂಡಿವೆ. ಇದರಲ್ಲಿ ಸಿಂಹಪಾಲು ಆಳುವ ಬಿಜೆಪಿಗೆ ಸಿಕ್ಕಿರುವುದು ವಿರೋಧ ಪಕ್ಷಗಳನ್ನು ಕೆರಳಿಸಿದೆ. ಅದರಲ್ಲೂ 2018ರ ಮಾರ್ಚ್‌ನಲ್ಲಿ ಮಾರಾಟವಾದ ಬಾಂಡ್‌ಗಳ ಮೊತ್ತದಲ್ಲಿ ಬಿಜೆಪಿಗೆ ಶೇಕಡ 95ರಷ್ಟು ಪಾಲು ದೊರೆತಿದೆ.

2017–18ರಲ್ಲಿ ಬಿಜೆಪಿಯು ಗೊತ್ತಿರುವ ಮೂಲಗಳಿಂದ ₹ 437 ಕೋಟಿ ದೇಣಿಗೆ ಪಡೆದಿದ್ದರೆ, ಗೊತ್ತಿಲ್ಲದ ಮೂಲಗಳಿಂದ ₹ 553 ಕೋಟಿ ಪಡೆದಿದೆ ಎಂದು ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಸಂಸ್ಥೆ ಬಹಿರಂಗಪಡಿಸಿರುವುದು, ಆಳುವ ಪಕ್ಷಕ್ಕೆ ದೇಣಿಗೆ ನೀಡಲು ಉದ್ಯಮಿಗಳು ತುದಿಗಾಲಲ್ಲಿ ನಿಂತಿರುತ್ತಾರೆ ಎಂಬುದನ್ನು ಸೂಚಿಸುತ್ತದೆ. ಆಳುವ ಪಕ್ಷಗಳಿಂದ ಬೇರೆ ರೂಪದಲ್ಲಿ ಪ್ರತಿಫಲ ಸಿಗಬಹುದು ಎಂಬ ನಿರೀಕ್ಷೆಯೇ ಇದಕ್ಕೆ ಕಾರಣ ಎನ್ನುವುದು ಗುಟ್ಟಿನ ಸಂಗತಿಯೇನಲ್ಲ. ಬಾಂಡ್‌ ಯೋಜನೆಗೆ ಈ ಹಿಂದೆ ಚುನಾವಣಾ ಆಯೋಗ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ ಆಕ್ಷೇಪ ವ್ಯಕ್ತಪಡಿಸಿದ್ದವು.

ಚುನಾವಣೆಯಲ್ಲಿ ಕಪ್ಪುಹಣ ಚಲಾವಣೆ ತಡೆಯಲು ಈ ಯೋಜನೆಯಿಂದ ಹೆಚ್ಚಿನ ಪ್ರಯೋಜನವೇನೂ ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಕೂಡಾ ಅಭಿಪ್ರಾಯಪಟ್ಟಿತ್ತು. ಚುನಾವಣೆಯಲ್ಲಿ ಎಲ್ಲ ಪಕ್ಷಗಳಿಗೂ ಸಮಾನ ಅವಕಾಶ ಒದಗಿಸಬೇಕೆಂಬ ಪ್ರಜಾಪ್ರಭುತ್ವದ ಅಲಿಖಿತ ನಿಯಮಕ್ಕೂ ಈ ಬಾಂಡ್‌ ಯೋಜನೆ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಬಾಂಡ್‌ ಮೂಲಕ ದೇಣಿಗೆ ನೀಡುವ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕಗೊಳಿಸುವ ಅಗತ್ಯವಿದೆ. ಯಾವ ಉದ್ಯಮಿ ಎಷ್ಟು ಮೊತ್ತವನ್ನು ಯಾವ ರಾಜಕೀಯ ಪಕ್ಷಕ್ಕೆ ನೀಡಿದ್ದಾನೆ ಎನ್ನುವುದು ಮತದಾರರಿಗೂ ಗೊತ್ತಾಗಬೇಕು. ಚುನಾವಣೆಯಲ್ಲಿ ಕಪ್ಪು ಹಣದ ಪ್ರಭಾವವನ್ನು ತಗ್ಗಿಸಲು ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT