ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಎಸ್‌ಐ ಆಸ್ಪತ್ರೆ | ನಿಸ್ಸೀಮ ನಿರ್ಲಕ್ಷ್ಯ; ತುರ್ತಾಗಿ ಬೇಕಿದೆ ಕಾಯಕಲ್ಪ

Last Updated 1 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಕಾರ್ಮಿಕ ಸಮುದಾಯಕ್ಕೆ ಆರೋಗ್ಯ ಸೇವೆ ನೀಡುವ ಇಎಸ್‌ಐ ಆಸ್ಪತ್ರೆಗಳಿಗೆ ಬಲ ತುಂಬಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜತೆಗೂಡಿ ಕೆಲಸ ಮಾಡಬೇಕಾಗಿದೆ

ಬೆಂಗಳೂರಿನ ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯಲ್ಲಿ ಕೋವಿಡ್‌ನಿಂದ ಮೃತಪಟ್ಟ ಇಬ್ಬರ ಪಾರ್ಥಿವ ಶರೀರಗಳು 15 ತಿಂಗಳ ಕಾಲ ಶವಾಗಾರದಲ್ಲೇ ಉಳಿದು ಕೊಳೆತಿರುವುದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಅಮಾನವೀಯ ಘಟನೆ. ಈ ಆಸ್ಪತ್ರೆ ಎಷ್ಟೊಂದು ನಿರ್ಲಕ್ಷ್ಯದಿಂದ ಕೆಲಸ ಮಾಡುತ್ತಿದೆ ಎನ್ನುವುದಕ್ಕೂ ಇದು ದ್ಯೋತಕ. 2020ರ ಜುಲೈನಲ್ಲಿ ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ದುರ್ಗಾ ಎಂಬ ಮಹಿಳೆ ಮತ್ತು ಮುನಿರಾಜು ಅವರ ಪಾರ್ಥಿವ ಶರೀರಗಳು ಯಾರ ಗಮನಕ್ಕೂ ಬಾರದೆ15 ತಿಂಗಳು ಶವಾಗಾರದಲ್ಲೇ ಉಳಿದಿದ್ದವು. ಸಂಬಂಧಪಟ್ಟ ಅಧಿಕಾರಿಗಳು ಏನೇ ಸಬೂಬು ಹೇಳಿದರೂ ಇಂತಹ ಹೊಣೆಗೇಡಿತನ ಅಕ್ಷಮ್ಯ. 2020ರಲ್ಲಿ ಕೋವಿಡ್‌ನ ಮೊದಲ ಅಲೆಯ ಸಂದರ್ಭದಲ್ಲಿ ಸರ್ಕಾರ ಮತ್ತು ಮಹಾನಗರ ಪಾಲಿಕೆಯು ಶವ ಸಂಸ್ಕಾರಕ್ಕೆ ಕಠಿಣ ನಿಯಮಗಳನ್ನು ಪಾಲಿಸುತ್ತಿದ್ದವು. ಕೋವಿಡ್‌ನಿಂದ ಮೃತಪಟ್ಟವರ ದೇಹಗಳನ್ನು ಮೃತರ ವಾರಸುದಾರರಿಗೆ ಒಪ್ಪಿಸದೆ ಮಹಾನಗರ ಪಾಲಿಕೆಯಿಂದಲೇ ಅಂತ್ಯಸಂಸ್ಕಾರ ನಡೆಸಲಾಗುತ್ತಿತ್ತು. ಈ ಇಬ್ಬರೂ ಮೃತರ ಸಂಬಂಧಿಕರಿಗೆ ಇಎಸ್‌ಐ ಆಸ್ಪತ್ರೆಯ ಸಿಬ್ಬಂದಿಯು ಸಾವಿನ ಸುದ್ದಿಯನ್ನು ಮುಟ್ಟಿಸಿದ್ದಲ್ಲದೆ, ಅಂತ್ಯಸಂಸ್ಕಾರವನ್ನು ಪಾಲಿಕೆಯ ಸಿಬ್ಬಂದಿಯೇ ನಡೆಸಿದ್ದಾರೆ ಎಂದೂ ತಿಳಿಸಿದ್ದರು. ಮೃತರ ಸಂಬಂಧಿಕರ ಮನೆಯನ್ನು ಇದೇ ಸಂದರ್ಭದಲ್ಲಿ ಪಾಲಿಕೆಯವರು ‘ಸೀಲ್’ ಮಾಡಿದ್ದರಿಂದ ಸಂಬಂಧಿಕರು ಯಾರೂ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಂತಿರಲಿಲ್ಲ. ಅಂತ್ಯಕ್ರಿಯೆಯೇ ನಡೆದಿಲ್ಲ ಎನ್ನುವುದು ತಿಳಿದಾಗ ಆ ಮನೆಯವರು ಎಷ್ಟು ಸಂಕಟ
ಪಟ್ಟಿರಬಹುದು ಎನ್ನುವುದನ್ನು ಊಹಿಸುವುದೂ ಕಷ್ಟ. ಅಂತ್ಯಸಂಸ್ಕಾರ ನಡೆದಿದೆ ಎಂದು ನಂಬಿ ಆ ಬಳಿಕದ ಉತ್ತರಕ್ರಿಯೆಗಳನ್ನೂ ನೆರವೇರಿಸಿದ್ದ ಕುಟುಂಬದ ಸದಸ್ಯರು ಆಸ್ಪತ್ರೆಯ ನಿಸ್ಸೀಮ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವುದು ಸಹಜವಾಗಿಯೇ ಇದೆ. ಸರ್ಕಾರದ ವ್ಯವಸ್ಥೆಯ ಮೇಲೆ ನಂಬಿಕೆಯಿಟ್ಟ ಜನರಿಗೆ ಪಾಲಿಕೆ ಮತ್ತು ಆಸ್ಪತ್ರೆಯವರು ಈ ರೀತಿಯ ನಂಬಿಕೆದ್ರೋಹ ಎಸಗಿರುವುದನ್ನು ಕ್ಷಮಿಸುವುದಾದರೂ ಎಂತು? ‘ಮೃತರ ಸಂಖ್ಯೆ ತೀವ್ರವಾಗಿ ಏರಿ ಶವಾಗಾರದಲ್ಲಿ ಸ್ಥಳಾಭಾವ ಉಂಟಾದ್ದರಿಂದ ಹೊಸ ಶವಾಗಾರ ಕಟ್ಟಿಸಲಾಗಿತ್ತು. ಈ ಶವಗಳು ಹಳೆಯ ಶವಾಗಾರದಲ್ಲಿ ಉಳಿದುಕೊಂಡದ್ದು ಯಾರ ಗಮನಕ್ಕೂ ಬಂದಿರಲಿಲ್ಲ’ ಎಂದು ಇಎಸ್‌ಐ ನಿಗಮದ ಅಧಿಕಾರಿಗಳು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಹಳೆಯ ಶವಾಗಾರವನ್ನು ಶುದ್ಧೀಕರಣ ಮಾಡುತ್ತಿದ್ದ ಸ್ವಚ್ಛತಾ ಸಿಬ್ಬಂದಿಯ ಮೂಗಿಗೆ ದುರ್ವಾಸನೆ ಬಡಿದು, ತಪಾಸಣೆ ನಡೆಸಿದಾಗ ಈ ಶವಗಳು ಉಳಿದುಕೊಂಡಿದ್ದು ಗಮನಕ್ಕೆ ಬಂದಿದೆ. ‘ಈ ಎರಡೂ ಶವಗಳನ್ನು ಮಹಾನಗರ ಪಾಲಿಕೆಯವರ ವಶಕ್ಕೆ ಒಪ್ಪಿಸಿದ ವಿವರಗಳುದಾಖಲೆಯಲ್ಲಿ ನಮೂದಾಗಿದ್ದು ಬಹುಶಃ ಪಾಲಿಕೆಯವರು ಶವ ಸಾಗಿಸಲು ಮರೆತದ್ದರಿಂದ ಈ ಪ್ರಮಾದ ಸಂಭವಿಸಿರಬಹುದು’ ಎಂದು ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿರುವುದೂ ವರದಿಯಾಗಿದೆ. ಘಟನೆಯ ಕುರಿತು ಸಮಗ್ರ ತನಿಖೆ ನಡೆಸುವುದಾಗಿ ಇಎಸ್‌ಐಸಿ ಪ್ರಾದೇಶಿಕ ನಿರ್ದೇಶಕರು ಭರವಸೆ ನೀಡಿದ್ದಾರೆ. ತನಿಖೆ ನಿಷ್ಪಕ್ಷಪಾತವಾಗಿ ನಡೆದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು.

ಕಾರ್ಮಿಕರ ರಾಜ್ಯ ವಿಮಾ ನಿಗಮದ (ಇಎಸ್‌ಐಸಿ) ಅಧೀನದಲ್ಲಿ ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಈ ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸಲು ಈ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಯತ್ನಗಳಾಗಿದ್ದವು. ಅದರಲ್ಲೂ ರಾಜ್ಯದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಮಿಕ ಮತ್ತು ಉದ್ಯೋಗ ಖಾತೆಯ ಸಚಿವರಾಗಿದ್ದಾಗ ಕರ್ನಾಟಕದ ಬೆಂಗಳೂರು ಮತ್ತು ಕಲಬುರಗಿಯಲ್ಲಿ ಇಎಸ್‌ಐ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಿ ಹಲವು ಸೌಲಭ್ಯಗಳನ್ನು ಒದಗಿಸಲಾಗಿತ್ತು. ಆದರೆ ಎನ್‌ಡಿಎ ನೇತೃತ್ವದ ಈಗಿನ ಸರ್ಕಾರದಲ್ಲಿ ಇಎಸ್‌ಐ ಆಸ್ಪತ್ರೆಗಳಿಗೆ ಅನುದಾನದ ಕೊರತೆ ಕಾಡುತ್ತಿದೆ. ಬೆಂಗಳೂರಿನಲ್ಲಿ ಈಗ ಇಎಸ್‌ಐ ಆಸ್ಪತ್ರೆಗೆ ಬರುವ ಕಾರ್ಮಿಕರಿಗೆ ರೋಗ ಬಾಧೆಗಿಂತ ಸುತ್ತಾಟದ ಸುಸ್ತೇ ಜಾಸ್ತಿಯಾಗಿದೆ. ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವ ದುಃಸ್ಥಿತಿ ಎದುರಾಗಿದೆ. ಚಿಕಿತ್ಸೆಯಲ್ಲಿ ವಿಳಂಬ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ತೆರಳಲು ಬೇಕಾದ ಅನುಮತಿ ಪತ್ರ ನೀಡಲೂ ಸತಾಯಿಸುತ್ತಿರುವುದರಿಂದ ಕಾರ್ಮಿಕರು ಹೈರಾಣಾಗಿದ್ದಾರೆ ಎಂದು ವರದಿಯಾಗಿದೆ. ಇಎಸ್‌ಐ ಆಸ್ಪತ್ರೆಗಳಿಗೆ ತುರ್ತಾಗಿ ಕಾಯಕಲ್ಪ ಬೇಕಿರುವುದನ್ನು ಮೇಲಿನ ಘಟನೆಗಳು ಒತ್ತಿ ಹೇಳುತ್ತವೆ. ಈ ಆಸ್ಪತ್ರೆಗಳ ಸ್ಥಾಪನೆ ಮತ್ತು ನಿಯಂತ್ರಣವು ಇಎಸ್‌ಐ ನಿಗಮದ ಆಧೀನದಲ್ಲಿದ್ದರೂ ವೈದ್ಯರು ಮತ್ತು ಸಿಬ್ಬಂದಿಯ ನೇಮಕಕ್ಕೆ ರಾಜ್ಯ ಸರ್ಕಾರದ ನೆರವನ್ನು ಕೋರಲಾಗುತ್ತಿದೆ. ರಾಜ್ಯ ಸರ್ಕಾರವೇ ತನ್ನ ಆಸ್ಪತ್ರೆಗಳಿಗೆ ಬೇಕಾದಷ್ಟು ವೈದ್ಯರು ಮತ್ತು ಸಿಬ್ಬಂದಿಯನ್ನು ಹೊಂದಿಸಿಕೊಳ್ಳಲಾಗದೆ ಹೆಣಗಾಡುತ್ತಿದ್ದು, ಇಎಸ್‌ಐಗೆ ವೈದ್ಯರ ಎರವಲು ಸೇವೆಯನ್ನು ಸಕಾಲಕ್ಕೆ ಒದಗಿಸಲು ಸಾಧ್ಯವಾಗುತ್ತಿಲ್ಲ. ನಿಗಮ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಕಾರ್ಯನಿರ್ವಹಣೆಯಲ್ಲಿ ಹೊಂದಾಣಿಕೆ ಇಲ್ಲದೇ ಇರುವುದರಿಂದ ಔಷಧ ಪೂರೈಕೆಯೂ ಸಮರ್ಪಕವಾಗಿ ಆಗುತ್ತಿಲ್ಲ. ಅದರ ದುಷ್ಪರಿಣಾಮ ಆಸ್ಪತ್ರೆಯ ರೋಗಿಗಳ ಮೇಲೆ ಆಗುತ್ತಿದೆ. ಕೋವಿಡ್ ಸಂಕಷ್ಟ ಇನ್ನೂ ಪೂರ್ಣ ಪ್ರಮಾಣದಲ್ಲಿ ಪರಿಹಾರವಾಗಿಲ್ಲ. ದೊಡ್ಡ ಪ್ರಮಾಣದಲ್ಲಿರುವ ಕಾರ್ಮಿಕ ಸಮುದಾಯಕ್ಕೆ ಆರೋಗ್ಯ ಸೇವೆ ನೀಡುವ ಈ ಆಸ್ಪತ್ರೆಗಳಿಗೆ ಬಲ ತುಂಬಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜತೆಗೂಡಿ ಕೆಲಸ ಮಾಡಬೇಕಿರುವುದು ಇಂದಿನ ತುರ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT