ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರಕ ತಾಣಗಳಲ್ಲಿ ಸೌಕರ್ಯ ಕಲ್ಪಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿ

Last Updated 10 ಆಗಸ್ಟ್ 2021, 1:06 IST
ಅಕ್ಷರ ಗಾತ್ರ

ನಮ್ಮ ಸಂಸ್ಕೃತಿ, ಪರಂಪರೆ ಕುರಿತು ನಾವು ಬಹಳ ಮಾತನಾಡುತ್ತೇವೆ. ಆದರೆ, ಪಾರಂಪರಿಕ ತಾಣಗಳ ಸಂರಕ್ಷಣೆ ಹಾಗೂ ಅವುಗಳಿಗೆ ಮೂಲ ಸೌಕರ್ಯ ಒದಗಿಸುವಂತಹ ಪ್ರಶ್ನೆ ಬಂದಾಗ ನಿರ್ಲಕ್ಷ್ಯ ತೋರುವ ಪ್ರವೃತ್ತಿಯೇ ನಮ್ಮಲ್ಲಿ ಹೆಚ್ಚು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಸುಪರ್ದಿಯಲ್ಲಿರುವ ರಾಜ್ಯದ ಸ್ಮಾರಕಗಳ ನಿರ್ವಹಣೆ ಈ ಮಾತಿಗೊಂದು ಜ್ವಲಂತ ನಿದರ್ಶನ. ದೇಶದಲ್ಲಿ ಉತ್ತರಪ್ರದೇಶ ಹೊರತುಪಡಿಸಿದರೆ ಅತ್ಯಧಿಕ ಸಂರಕ್ಷಿತ ಸ್ಮಾರಕಗಳಿರುವ ರಾಜ್ಯ ಕರ್ನಾಟಕ. ಐತಿಹಾಸಿಕ, ಸಾಂಸ್ಕೃತಿಕ, ಕಲಾತ್ಮಕ ಹೀಗೆ ಬೇರೆ ಬೇರೆ ವಿಭಾಗಗಳಲ್ಲಿ ವರ್ಗೀಕರಿಸಿದ ಒಟ್ಟಾರೆ 506 ಸ್ಮಾರಕಗಳು ನಮ್ಮ ರಾಜ್ಯದಲ್ಲಿ ಎಎಸ್‌ಐ ವತಿಯಿಂದ ನಿರ್ವಹಣೆ ಆಗುತ್ತಿವೆ. ಈ ಪೈಕಿ ಕುಡಿಯುವ ನೀರು, ಶೌಚಾಲಯದಂತಹ ಅಗತ್ಯ ಸೌಕರ್ಯವನ್ನು ಹೊಂದಿರುವ ಸ್ಮಾರಕಗಳು ಶೇ 15ರಷ್ಟು ಮಾತ್ರ. ಕುಡಿಯುವ ನೀರು, ಶೌಚಾಲಯದ ಸೌಲಭ್ಯಕ್ಕಿಂತ ವೈಫೈನಂತಹ ತಾಂತ್ರಿಕ ಸೌಕರ್ಯ ಒದಗಿಸುವುದೇ ಎಎಸ್‌ಐ ಪಾಲಿಗೆ ‘ಹೆಚ್ಚು ಅಗತ್ಯ’ ಎನಿಸಿರುವಂತೆ ಕಂಡಿದೆ. ಏಕೆಂದರೆ, ದೇಶದಲ್ಲಿ ವೈಫೈ ಸೌಲಭ್ಯ ಇರುವ ಅತಿ ಹೆಚ್ಚು ಸ್ಮಾರಕಗಳು ರಾಜ್ಯದಲ್ಲಿವೆ. ಆದರೆ, ಬಹುತೇಕ ಸ್ಮಾರಕ ತಾಣಗಳಲ್ಲಿ ಪ್ರವಾಸಿಗರಿಗೆ ಕುಡಿಯಲು ನೀರಿಲ್ಲ, ಕುಳಿತುಕೊಳ್ಳಲು ಬೆಂಚುಗಳಿಲ್ಲ. 160 ತಾಣಗಳಿಗೆ ತೆರಳಲು ಸಮರ್ಪಕವಾದ ರಸ್ತೆಗಳೇ ಇಲ್ಲ. ಸ್ಮಾರಕಗಳ ವಸ್ತುಸ್ಥಿತಿ ಅಧ್ಯಯನದಲ್ಲಿ ಇಂತಹ ಹಲವು ಕೊರತೆಗಳು ಎದ್ದುಕಂಡಿವೆ. ಹಾಗಾದರೆ ಇಷ್ಟು ವರ್ಷಗಳ ಕಾಲ ಎಎಸ್‌ಐ ಮಾಡಿದ್ದೇನು, ಪಾರಂಪರಿಕ ತಾಣಗಳಲ್ಲಿ ಕನಿಷ್ಠ ಸೌಕರ್ಯವನ್ನು ಕಲ್ಪಿಸಲೂ ಆಗದಷ್ಟು ಆ ಇಲಾಖೆಗೆ ಹಣಕಾಸಿನ ಕೊರತೆಯೇ ಎನ್ನುವ ಪ್ರಶ್ನೆಯೂ ಏಳುತ್ತದೆ. ಪ್ರವಾಸೋದ್ಯಮ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳು ಅಧ್ಯಯನದ ಹೆಸರಿನಲ್ಲಿ ವಿದೇಶ ಪ್ರವಾಸ ಮಾಡಿ ಬರುತ್ತಾರೆ. ಅಲ್ಲಿ ಸ್ಮಾರಕಗಳನ್ನು ಹೇಗೆ ನಿರ್ವಹಣೆ ಮಾಡಿದ್ದಾರೆ, ಪ್ರವಾಸಿಗರಿಗೆ ಯಾವ ರೀತಿ ಸೌಲಭ್ಯ ಒದಗಿಸಿದ್ದಾರೆ ಎಂಬಿತ್ಯಾದಿ ವಿವರಗಳ ಗೋಜಿಗೆ ನಮ್ಮ ಅಧಿಕಾರಸ್ಥರು ಹೋಗುವುದೇ ಇಲ್ಲ ಎಂದು ತೋರುತ್ತದೆ. ಆದ್ದರಿಂದಲೇ ಇಂತಹ ‘ಅಧ್ಯಯನ’ದ ಪ್ರಯೋಜನ ನಮ್ಮ ಸ್ಮಾರಕ ತಾಣಗಳಿಗೆ ಸೌಲಭ್ಯ ಕಲ್ಪಿಸುವ ವಿಷಯದಲ್ಲಿ ಆಗುವುದಿಲ್ಲ.

ಹಾಗೆ ನೋಡಿದರೆ, ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿರುವ ಹಲವು ದೇಶಗಳಲ್ಲಿ ಪಾರಂಪರಿಕ ತಾಣಗಳೇ ಇಲ್ಲ. ಹೀಗಿದ್ದೂ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಅವು ಯಶಸ್ವಿಯಾಗಿವೆ. ಅಂದರೆ ನಮ್ಮಲ್ಲಿನ ಶಕ್ತಿ, ಸಾಧ್ಯತೆಗಳು ನಮಗೇ ಸರಿಯಾಗಿ ಅರ್ಥವಾದಂತಿಲ್ಲ. ನಮ್ಮ ಸಚಿವರಿಗೂ ಅರ್ಥವಾಗಿಲ್ಲ, ಅಧಿಕಾರಿಗಳಿಗೂ ತಿಳಿದಿಲ್ಲ. ಹಾಗಾಗಿಯೇ ನಮ್ಮ ಪ್ರವಾಸೋದ್ಯಮ ಕ್ಷೇತ್ರ ಸಮಸ್ಯೆಯಲ್ಲಿ ಸಿಲುಕಿಕೊಂಡಿದೆ. ಪ್ರವಾಸಿ ತಾಣಗಳು ಸೌಲಭ್ಯವಿಲ್ಲದೆ ಒದ್ದಾಡುತ್ತಿವೆ. ಪ್ರವಾಸಿಗರಿಗೆ ಸೌಲಭ್ಯ ಒದಗಿಸುವ ವಿಷಯದಲ್ಲಿ ಯುರೋಪಿನ ರಾಷ್ಟ್ರಗಳಿಂದ ನಾವು ಕಲಿಯುವುದು ಬಹಳಷ್ಟಿದೆ. ಸ್ಮಾರಕಗಳನ್ನು ಹೇಗೆ ಸಂರಕ್ಷಿಸಿಕೊಳ್ಳಬೇಕು ಹಾಗೂ ಅಲ್ಲಿ ಹೇಗೆ ಸೌಲಭ್ಯ ಕಲ್ಪಿಸಬೇಕು ಎನ್ನುವುದಕ್ಕೆ ಯುರೋಪಿನ ಸಂರಕ್ಷಿತ ಮಧ್ಯಕಾಲೀನ ನಗರ ಬ್ರೂಗ್ಸ್‌ ತಕ್ಕ ಮಾದರಿ. ಸಂಪೂರ್ಣವಾಗಿ ಸಂರಕ್ಷಿಸಲ್ಪಟ್ಟ ಮಧ್ಯಕಾಲೀನ ವಾಸ್ತುವೈಭವದ ಕಟ್ಟಡಗಳು, ಪಾರಂಪರಿಕ ತಾಣಗಳು, ಹೀಗೆ ಹಲವು ವಿಶೇಷಗಳನ್ನು ಹೊಂದಿರುವ ಬ್ರೂಗ್ಸ್‌ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳಲ್ಲಿ ಒಂದೆನಿಸಲು ಅಲ್ಲಿ ಒದಗಿಸಿರುವ ಸೌಲಭ್ಯಗಳೂ ಕಾರಣ. ಯುರೋಪಿನ ಉದಾಹರಣೆಯನ್ನು ಬಿಡಿ, ನಮ್ಮ ದೇಶದ ಕೇರಳದಲ್ಲಿ ಪ್ರವಾಸೋದ್ಯಮ ಸಾಧಿಸಿದ ಅಭಿವೃದ್ಧಿಯನ್ನೇ ನೋಡಿ. ಹಂಪಿಯಂತಹ ವಿಶ್ವ ಪರಂಪರೆಯ ತಾಣ ಕೇರಳದಲ್ಲಿಲ್ಲ. ನಮ್ಮಲ್ಲಿರುವಂತಹ ವೈವಿಧ್ಯ ಕೂಡ ಅಲ್ಲಿಲ್ಲ. ಆದರೆ, ಅಲ್ಲಿರುವ ಸ್ಮಾರಕಗಳು ಸೇರಿದಂತೆ ಎಲ್ಲ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ವಿಷಯದಲ್ಲಿ ಅಲ್ಲಿನ ರಾಜ್ಯ ಸರ್ಕಾರ ಮುತುವರ್ಜಿ ತೋರಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಆ ರಾಜ್ಯ ಬಜೆಟ್‌ನಲ್ಲಿ ದೊಡ್ಡಮೊತ್ತದ ಅನುದಾನವನ್ನು ಎತ್ತಿಡುತ್ತದೆ. ಹೀಗಾಗಿ ಅಲ್ಲಿನ ಸ್ಮಾರಕ ತಾಣಗಳಲ್ಲಿ ಮೂಲಸೌಕರ್ಯ ಕಲ್ಪಿಸುವುದು ಸಲೀಸಾಗಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ರಾಜ್ಯ ಸರ್ಕಾರದ ಮಧ್ಯೆ ಸಮನ್ವಯ ಇಲ್ಲದಿರುವುದು ಕೂಡ ಸ್ಮಾರಕ ತಾಣಗಳ ಅಭಿವೃದ್ಧಿಗೆ ಇರುವ ದೊಡ್ಡ ಅಡೆತಡೆ. ಈ ಅಂತರವನ್ನು ತುಂಬಲು ರಾಜ್ಯ ಪ್ರವಾಸೋದ್ಯಮ ಸಚಿವರು ಗಮನಹರಿಸಬೇಕು. ಪ್ರವೇಶ ಶುಲ್ಕದಿಂದ ಬರುವ ಸೀಮಿತ ವರಮಾನದಿಂದ ಸೌಲಭ್ಯ ಒದಗಿಸುವುದು ಎಎಸ್‌ಐಗೆ ಕಷ್ಟದ ಕೆಲಸ ಎಂದು ಹೇಳಲಾಗುತ್ತಿದೆ. ಕೇರಳ ಸರ್ಕಾರದಂತೆ ರಾಜ್ಯ ಸರ್ಕಾರವೂ ಎಎಸ್‌ಐ ಜತೆ ಕೈಜೋಡಿಸಿದರೆ ನಮ್ಮ ಸ್ಮಾರಕ ತಾಣಗಳೂ ಬಹುಬೇಗ ಸೌಲಭ್ಯಗಳನ್ನು ಪಡೆಯಲು ಸಾಧ್ಯ. ರಾಜ್ಯದ ಪ್ರಮುಖ ಪ್ರವಾಸಿ ತಾಣಗಳು ಅಭಿವೃದ್ಧಿ ಹೊಂದಿ, ಅಲ್ಲಿಗೆ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಬರುವಂತಾದರೆ, ಅಲ್ಲಿನ ಸಮೀಪದ ಚಿಕ್ಕ-ಪುಟ್ಟ ತಾಣಗಳೂ ಅಭಿವೃದ್ಧಿ ಹೊಂದುತ್ತವೆ. ಹೀಗಾಗಿ ಪ್ರವಾಸಿ ತಾಣಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ನೆರವು ನೀಡಬೇಕು. ಪ್ರವಾಸೋದ್ಯಮ ಬೆಳೆದರೆ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸಿಗಲಿವೆ ಎಂಬುದನ್ನು ನೆನಪಿಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರವು ಸ್ಮಾರಕಗಳ ಮೇಲಿನ ಪ್ರೀತಿಯನ್ನು ಬರೀ ಮಾತಿನಲ್ಲಿ ತೋರದೆ, ಸೌಕರ್ಯ ಕಲ್ಪಿಸುವ ವಿಚಾರದಲ್ಲಿ ತೋರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT