ಭಾನುವಾರ, ಅಕ್ಟೋಬರ್ 24, 2021
29 °C

ಸಂಪಾದಕೀಯ: ಬೆಂಕಿ ಅವಘಡ– ಪಟಾಕಿ ಸ್ಫೋಟ; ಸಂಘಟಿತ ಮುನ್ನೆಚ್ಚರಿಕೆ ಅಗತ್ಯ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಎರಡು ದಿನಗಳ ಅಂತರದಲ್ಲಿ ಬೆಂಗಳೂರಿನಲ್ಲಿ ಸಂಭವಿಸಿರುವ ಅಗ್ನಿ ಅವಘಡ ಹಾಗೂ ಪಟಾಕಿ ಸ್ಫೋಟದ ಘಟನೆಗಳಲ್ಲಿ ನಾಲ್ವರು ಜೀವ ಕಳೆದುಕೊಂಡಿದ್ದಾರೆ. ಈ ದುರ್ಘಟನೆಗಳು ಸುರಕ್ಷಾ ವ್ಯವಸ್ಥೆಯ ಬಗ್ಗೆ ಅನುಮಾನ ಮತ್ತು ಆತಂಕ ಮೂಡಿಸುವಂತಿವೆ. ದೇವರಚಿಕ್ಕನಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ತಾಯಿ–ಮಗಳು ಜೀವ ಕಳೆದುಕೊಂಡಿದ್ದಾರೆ. ಬಾಲ್ಕನಿಗೆ ಅಳವಡಿಸಿದ ಕಬ್ಬಿಣದ ಅಡ್ಡಪಟ್ಟಿಗಳ ಅಡೆತಡೆಯಿಂದ ಹೊರಬರಲಾಗದೆ ಮಹಿಳೆಯೊಬ್ಬರು ಬೆಂಕಿಗೆ ಆಹುತಿಯಾಗಿದ್ದರೆ, ಅವರ ತಾಯಿ ಕೊಠಡಿಯೊಳಗೆ ಸಾವಿಗೀಡಾಗಿದ್ದಾರೆ.

ಚಾಮರಾಜಪೇಟೆಯ ಸೀತಾಪತಿ ಅಗ್ರಹಾರದ ಗೋದಾಮೊಂದರಲ್ಲಿ ಸಂಭವಿಸಿರುವ ಪಟಾಕಿ ಸ್ಫೋಟದಲ್ಲಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಜನನಿಬಿಡ ಪ್ರದೇಶದ ಗೋದಾಮಿನಲ್ಲಿ ಸ್ಫೋಟ ಸಂಭವಿಸಿದ್ದು, ಆ ಕೋಣೆಗೆ ಹೊಂದಿಕೊಂಡಿದ್ದ ಪಂಕ್ಚರ್‌ ಅಂಗಡಿಯ ಮಾಲೀಕ ಅಂಗಡಿಯಿಂದ ಹೊರಗೆ ಹಾರಿಬಿದ್ದು ಸಾವಿಗೀಡಾಗಿದ್ದಾರೆ.

ಇನ್ನೊಂದು ಮಳಿಗೆಗೆ ಸಾಮಗ್ರಿಗಳನ್ನು ಪೂರೈಸಲು ಬಂದಿದ್ದ ಟಾಟಾ ಏಸ್‌ ಚಾಲಕ, ವಾಹನದ ಬಳಿಯಿಂದ ಹಾರಿ ಗೋಡೆಗೆ ಅಪ್ಪಳಿಸಿ ಮೃತಪಟ್ಟಿದ್ದಾರೆ. ಚಹಾ ಅಂಗಡಿಯಲ್ಲಿದ್ದವರು ಹಾಗೂ ರಸ್ತೆಯಲ್ಲಿ ಸಂಚರಿಸುತ್ತಿದ್ದವರು ಕೂಡ ಗಾಯಗೊಂಡಿದ್ದಾರೆ. ದುರ್ಘಟನೆಯಲ್ಲಿ ಸಾವಿಗೀಡಾದವರು ಛಿದ್ರ ಛಿದ್ರವಾಗಿರುವುದು, ಗೋದಾಮಿನ ಮುಂದೆ ನಿಲ್ಲಿಸಿದ್ದ ವಾಹನಗಳು ನಜ್ಜುಗುಜ್ಜಾಗಿರುವುದು ಸ್ಫೋಟದ ತೀವ್ರತೆಯನ್ನು ಸೂಚಿಸುವಂತಿದೆ. ಗೋದಾಮಿನಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಹಾಗೂ ಮಹಾನಗರ ‍ಪಾಲಿಕೆಯ ಅನುಮತಿ ಪಡೆಯದೆ ಪಟಾಕಿಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಆರೋಪದ ಮೇರೆಗೆ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ ಹಾಗೂ ಪ್ರಕರಣ ದಾಖಲಿಸಲಾಗಿದೆ.

ಇವೆಲ್ಲವೂ ದುರ್ಘಟನೆಯೊಂದು ನಡೆದಾಗ ಸಹಜವಾಗಿ ಆಗಬೇಕಾದ ಕಾನೂನು ಪ್ರಕ್ರಿಯೆಗಳು. ಆದರೆ, ವಸತಿ–ವಾಣಿಜ್ಯ ಪ್ರದೇಶದಲ್ಲಿ ಪಟಾಕಿ ಗೋದಾಮು ಇರುವುದು ಹಾಗೂ ಅದು ಯಾರ ಗಮನಕ್ಕೂ ಬಾರದಿರುವುದು ಆಶ್ಚರ್ಯಕರ. ಗೋದಾಮಿನ ಅಕ್ಕಪಕ್ಕದಲ್ಲಿ ಪಂಕ್ಚರ್‌ ಅಂಗಡಿ, ಲಾರಿ ದುರಸ್ತಿ ಮಳಿಗೆ, ಚಹಾ ಅಂಗಡಿ ಹಾಗೂ ಮನೆಗಳಿವೆ.

ಹೀಗಿದ್ದೂ ಪಟಾಕಿ ದಾಸ್ತಾನು ಹಾಗೂ ಮಾರಾಟವನ್ನು ಆರೋಪಿ ಯಾರ ಗಮನಕ್ಕೂ ಬರದಂತೆ ನಡೆಸುತ್ತಿದ್ದ ಎಂದರೆ ಅದನ್ನು ನಂಬಲಾಗದು. ಸ್ಫೋಟ ಸಂಭವಿಸಿದ ದಿನವೂ 15ರಿಂದ 20 ಕೆ.ಜಿ. ತೂಕದ ಪಟಾಕಿಗಳಿದ್ದ 80 ಬಾಕ್ಸ್‌ಗಳನ್ನು ತರಿಸಿ ಗೋದಾಮಿನಲ್ಲಿ ಸಂಗ್ರಹಿಸಲಾಗಿತ್ತು ಎನ್ನುವ ವಿವರವನ್ನು ನೋಡಿದರೆ, ಆ ಚಟುವಟಿಕೆಗಳೆಲ್ಲ ಕದ್ದುಮುಚ್ಚಿ ನಡೆಯುತ್ತಿದ್ದವು ಎಂದು ನಂಬುವುದು ಕಷ್ಟ. ದೇವರಚಿಕ್ಕನಹಳ್ಳಿಯ ಅಪಾರ್ಟ್‌ಮೆಂಟ್‌ ನಿರ್ಮಾಣದಲ್ಲಿ ಕೂಡ ಸುರಕ್ಷಾ ಕ್ರಮಗಳನ್ನು ಸಮರ್ಪಕವಾಗಿ ಪಾಲಿಸಲಾಗಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ, ಪ್ರಸಕ್ತ ದುರ್ಘಟನೆಗಳ ಹೊಣೆಗಾರಿಕೆಯನ್ನು ಸಾರ್ವಜನಿಕರು, ಮಹಾನಗರಪಾಲಿಕೆ ಹಾಗೂ ಪೊಲೀಸ್‌ ವ್ಯವಸ್ಥೆ ಕೂಡ ಪರೋಕ್ಷವಾಗಿಯಾದರೂ ಹೊರಬೇಕಾಗಿದೆ.

ಎಚ್‌ಎಎಲ್‌ ವಿಮಾನ ನಿಲ್ದಾಣ ರಸ್ತೆಯ ಕಾರ್ಲ್‌ಟನ್‌ ಟವರ್ಸ್‌ ಕಟ್ಟಡದಲ್ಲಿ 2010ರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಒಂಬತ್ತು ಮಂದಿ ಸಾವಿಗೀಡಾಗಿದ್ದರು. ಆ ಕಟ್ಟಡದಲ್ಲಿ ಅಗ್ನಿ ಸುರಕ್ಷತೆಗೆ ಸಂಬಂಧಿಸಿದ ಮೂವತ್ತು ನಿಯಮಗಳನ್ನು ಉಲ್ಲಂಘಿಸಲಾಗಿತ್ತು. ಕಟ್ಟಡದ ಎರಡು, ಮೂರು ಮತ್ತು ನಾಲ್ಕನೇ ಮಹಡಿಗಳ ಪ್ರವೇಶದ್ವಾರಗಳು ಮುಚ್ಚಿದ್ದವು. ಕಾರಿಡಾರ್‌ನಲ್ಲಿ ಸರಾಗವಾಗಿ ಸಾಗಲೂ ಅವಕಾಶವಿರಲಿಲ್ಲ.

‘ಕಾರ್ಲ್‌ಟನ್‌ ದುರಂತ’ದ ನಂತರ ಕಟ್ಟಡಗಳಿಗೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸಲಾಯಿತು. ಬಹುಮಹಡಿ ಕಟ್ಟಡಗಳ ನಿರ್ಮಾಣದಲ್ಲಿ ‘ರಾಷ್ಟ್ರೀಯ ಕಟ್ಟಡ ನೀತಿ’ ಹಾಗೂ ಕರ್ನಾಟಕ ಗೃಹ ಸಚಿವಾಲಯ ರೂಪಿಸಿರುವ ಸುರಕ್ಷತೆಗೆ ಸಂಬಂಧಿಸಿದ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಆದರೆ, ಬಹುತೇಕ ಕಟ್ಟಡಗಳಲ್ಲಿ ಸುರಕ್ಷಾ ಕ್ರಮಗಳು ಅಧಿಕಾರಿಗಳ ಕಣ್ಣೊರೆಸುವಷ್ಟಕ್ಕೆ ಸೀಮಿತ ವಾಗಿರುತ್ತವೆ. ತುಂಡು ಭೂಮಿ ಮತ್ತು ಹಣ ಇರುವ ಯಾರು ಬೇಕಾದರೂ ತಮಗೆ ಬೇಕಾದಂತೆ ಕಟ್ಟಡ ನಿರ್ಮಿಸಬಹುದು ಎನ್ನುವ ಸ್ಥಿತಿಯಿದೆ. ಜನಸಾಮಾನ್ಯರ ಜೀವಗಳ ಬಗೆಗಿನ ಕಾಳಜಿಯನ್ನು ರಿಯಲ್‌ ಎಸ್ಟೇಟ್‌ ಉದ್ಯಮವಿರಲಿ, ಕಾನೂನು ಅನುಷ್ಠಾನದ ಹೊಣೆ ಹೊತ್ತ ಪಾಲಿಕೆ–ಪ್ರಾಧಿಕಾರಗಳೂ ಪ್ರದರ್ಶಿಸುತ್ತಿಲ್ಲ. ಈ ಬೇಜವಾಬ್ದಾರಿ ಹಾಗೂ ಭ್ರಷ್ಟತೆಯಿಂದಾಗಿ ಬಹುಮಹಡಿ ಕಟ್ಟಡಗಳಲ್ಲಿ ಅಗ್ನಿ ಆಕಸ್ಮಿಕಗಳು ಸಂಭವಿಸಿ, ಸಾವುನೋವಿನ ಪ್ರಕರಣಗಳು ವರದಿಯಾಗುತ್ತಿವೆ.

ಪಟಾಕಿ ಸ್ಫೋಟ ಅಥವಾ ಬೆಂಕಿ ಅವಘಡಗಳಂಥ ದುರಂತಗಳು ಸಂಭವಿಸಿದಾಗ ನಾಗರಿಕಪ್ರಜ್ಞೆ ಚುರುಕಾಗಿ, ಅಷ್ಟೇ ಬೇಗ ತಣ್ಣಗಾಗುತ್ತದೆ. ದುರ್ಘಟನೆಗಳು ಪದೇಪದೇ ನಡೆಯುತ್ತಿದ್ದರೂ ಕಟ್ಟಡ–ಕಾರ್ಖಾನೆಗಳಲ್ಲಿನ ಸುರಕ್ಷಾ ಕ್ರಮಗಳಲ್ಲೇನೂ ಸುಧಾರಣೆಯಾಗಿಲ್ಲ. ಲಾಭಕೋರತನದ ಕೆಲವು ವ್ಯಾಪಾರಿಗಳು ಅಮಾಯಕರ ಜೀವಗಳೊಂದಿಗೆ ಚೆಲ್ಲಾಟ ಆಡುತ್ತಲೇ ಇರುತ್ತಾರೆ. ಕಾನೂನು ಉಲ್ಲಂಘನೆಯಾಗದಂತೆ ನಿಗಾ ವಹಿಸಬೇಕಾದ ಪಾಲಿಕೆ–ಪ್ರಾಧಿಕಾರಗಳು, ದುರಂತ ನಡೆದಾಗ ತಮ್ಮ ಅಸ್ತಿತ್ವ ಪ್ರದರ್ಶಿಸುವುದನ್ನು ಬಿಟ್ಟರೆ ಉಳಿದ ಸಮಯದಲ್ಲಿ ಕಣ್ಣು ಮುಚ್ಚಿಕೊಂಡಿರುವಂತೆ ವರ್ತಿಸುತ್ತವೆ.

ಸಾರ್ವಜನಿಕರು ಕೂಡ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಅಕ್ರಮ ಅಥವಾ ಶಂಕಾಸ್ಪದ ಚಟುವಟಿಕೆಗಳು ನಡೆಯುತ್ತಿರುವುದು ಗಮನಕ್ಕೆ ಬಂದರೂ, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಇಲ್ಲವೇ ಪೊಲೀಸರಿಗೆ ಮಾಹಿತಿ ನೀಡುವ ಗೋಜಿಗೆ ಹೋಗುವುದಿಲ್ಲ. ಸ್ವಯಂಶಿಸ್ತು ನಾಗರಿಕರಿಗೂ ಬೇಕು, ವ್ಯಾಪಾರಿಗಳಿಗೂ ಬೇಕು. ಕಾನೂನು ಕ್ರಮಗಳು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ಸರ್ಕಾರಿ ಸಂಸ್ಥೆಗಳು ನಿಗಾ ವಹಿಸಬೇಕು. ಸಾರ್ವಜನಿಕ ಕಾಳಜಿಯ ತಾಳಮೇಳ ಸರಿಯಾಗದೆ ಹೋದರೆ, ಸ್ಫೋಟ ಹಾಗೂ ಅಗ್ನಿ ಅವಘಡಗಳು ಮತ್ತೆ ಮತ್ತೆ ಸಂಭವಿಸುತ್ತಲೇ ಇರುತ್ತವೆ; ಅಮಾಯಕರು ಜೀವ ಕಳೆದುಕೊಳ್ಳುತ್ತಲೇ ಇರುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು