ಮಂಗಳವಾರ, ಜನವರಿ 18, 2022
27 °C

ಸಂಪಾದಕೀಯ: ಕಟ್ಟಡ ಯೋಜನೆ ಉಲ್ಲಂಘನೆಗೆ ಉತ್ತೇಜನ ನೀಡುವ ನಡೆ ಸರಿಯಲ್ಲ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು ಮಹಾನಗರವು ವ್ಯವಸ್ಥಿತವಾಗಿ ಅಭಿವೃದ್ಧಿ ಹೊಂದಬೇಕೆಂಬ ಉದ್ದೇಶದಿಂದ ಹಾಗೂ ಲಂಗುಲಗಾಮಿಲ್ಲದೇ ಕಟ್ಟಡ ನಿರ್ಮಿಸುವುದನ್ನು ನಿಯಂತ್ರಿಸುವ ಸಲುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಕಟ್ಟಡ ಉಪವಿಧಿಗಳನ್ನು (ಬೈಲಾ) ರೂಪಿಸಿ, ಜಾರಿಗೊಳಿಸಿದೆ. ಈ ನಿಬಂಧನೆಗಳು ಜಾರಿಯಲ್ಲಿದ್ದರೂ ನಗರದಲ್ಲಿ ಹೆಚ್ಚಿನ ಕಟ್ಟಡಗಳು ಮಂಜೂರಾತಿ ಪಡೆದ ಕಟ್ಟಡ ಯೋಜನೆಯನ್ನು ಉಲ್ಲಂಘಿಸಿವೆ.  ಕಟ್ಟಡ ಯೋಜನೆಗೆ ಮಂಜೂರಾತಿ ಪಡೆದ ಬಳಿಕ ನಿರ್ಮಾಣದ ವೇಳೆ ಶೇ 5ರಷ್ಟು ಉಲ್ಲಂಘನೆ ಮಾಡಿದರೂ ದಂಡ ವಿಧಿಸಿ, ಮುಕ್ತಾಯ ಪ್ರಮಾಣಪತ್ರ (ಸಿ.ಸಿ) ನೀಡಲು ಬಿಬಿಎಂಪಿ ಕಟ್ಟಡ ಉಪವಿಧಿಗಳಲ್ಲಿ ಅವಕಾಶವಿದೆ. ಉಲ್ಲಂಘನೆಯ ಮಿತಿಯನ್ನು ಶೇ 15ಕ್ಕೆ ಹೆಚ್ಚಿಸಲು ಈಗ ತಯಾರಿ ನಡೆದಿದೆ. ಈ ಉದ್ದೇಶದಿಂದ ಕಟ್ಟಡ ಉಪವಿಧಿಗಳಿಗೆ ತಿದ್ದುಪಡಿ ತರುವ ಬಿಬಿಎಂಪಿಯ ಪ್ರಸ್ತಾವಕ್ಕೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಭೆಯಲ್ಲೂ ಅನುಮೋದನೆ ನೀಡಲಾಗಿದೆ ಎಂಬ ವಿಚಾರ ನಿಜಕ್ಕೂ ಆಘಾತಕಾರಿ. ಈ ನಿರ್ಧಾರವು ನಗರದ ವ್ಯವಸ್ಥಿತ ಬೆಳವಣಿಗೆ ಮೇಲೆ ದೀರ್ಘ ಕಾಲದಲ್ಲಿ ತೀವ್ರ ದುಷ್ಪರಿಣಾಮವನ್ನು ಉಂಟುಮಾಡಲಿದೆ. ನಗರದ ಅಭಿವೃದ್ಧಿ ಬಗ್ಗೆ ಆಡಳಿತ ಯಂತ್ರಕ್ಕೆ ಎಷ್ಟರಮಟ್ಟಿಗೆ ಕಾಳಜಿ ಇದೆ ಎಂಬುದನ್ನು ಇದು ತೋರಿಸುತ್ತದೆ. ಉಲ್ಲಂಘನೆಗಳನ್ನು ನಿಗ್ರಹಿಸಬೇಕಾದ ಆಡಳಿತ ಯಂತ್ರವೇ ಅಕ್ರಮಗಳಿಗೆ ಮತ್ತಷ್ಟು ಉತ್ತೇಜನ ನೀಡುವಂತಹ ಅಪಾಯಕಾರಿ ಹೆಜ್ಜೆ ಇಡಲು ಹೊರಟರೆ ಕಾನೂನು ಪಾಲನೆ ಮಾಡುವ ನಗರದ ಜನರ ಪಾಡೇನು? ಕಟ್ಟಡ ನಿರ್ಮಿಸುವಾಗ ನಿಯಮಗಳ ಬಗ್ಗೆ ಬಹುತೇಕರು ಈಗಲೂ ತಲೆಕೆಡಿಸಿಕೊಳ್ಳುತ್ತಿಲ್ಲ. ಪ್ರಸ್ತುತ ಜಾರಿಯಲ್ಲಿರುವ ನಿಯಮಗಳನ್ನು ಉಲ್ಲಂಘಿಸಿ ಮನಸೋಇಚ್ಛೆ ಕಟ್ಟಡ ನಿರ್ಮಿಸುತ್ತಿರುವ ಪ್ರಕರಣಗಳು ನಗರದಲ್ಲಿ ಅವ್ಯಾಹತವಾಗಿ ನಡೆಯುತ್ತಲೇ ಇವೆ. ನಿಯಮ ಉಲ್ಲಂಘನೆ ಮಾಡಿ ನಿರ್ಮಿಸಿದ ಕಟ್ಟಡವನ್ನು ಕೆಡವಬೇಕೇ ವಿನಾ ಅದನ್ನು ಸಕ್ರಮಗೊಳಿಸುವುದು ಸರಿಯಲ್ಲ. ಬಿಬಿಎಂಪಿ ಕಟ್ಟಡ ಉಪವಿಧಿಗಳಿಗೆ ಇಂತಹದ್ದೊಂದು ತಿದ್ದುಪಡಿ ತಂದರೆ ಬಿಬಿಎಂಪಿಯ ಕಟ್ಟಡ ಉಪವಿಧಿಗಳಿಗೆ ಕಿಮ್ಮತ್ತೇ ಇಲ್ಲದಂತಾಗುತ್ತದೆ. ಕಾನೂನು ಉಲ್ಲಂಘನೆ ಮಾಡುವುದಕ್ಕೆ ಇದು ಮತ್ತಷ್ಟು ಪ್ರೇರಣೆ ನೀಡುವುದರಲ್ಲಿ ಸಂಶಯವಿಲ್ಲ. ಉಲ್ಲಂಘನೆ ಮಾಡಿದರೂ ದಂಡ ಕಟ್ಟಿ ಅದನ್ನು ಸಕ್ರಮಗೊಳಿಸಿಕೊಳ್ಳಬಹುದು ಎಂಬ ಭಾವನೆಯನ್ನು ಸ್ವತ್ತಿನ ಮಾಲೀಕರು ಬೆಳೆಸಿಕೊಂಡರೂ ಅಚ್ಚರಿ ಇಲ್ಲ. ಕಟ್ಟಡ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಹೊಣೆ ಹೊತ್ತ ಬಿಬಿಎಂಪಿ ಇದರಲ್ಲಿ ವೈಫಲ್ಯ ಕಂಡಿದೆ. ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಈಗ ಈ ಕಟ್ಟಡ ಉಪವಿಧಿಯನ್ನೇ ಸಡಿಲಗೊಳಿಸು
ವುದು ಸರಿಯಲ್ಲ.

ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿರುವುದಕ್ಕೆ ನಿಯಮ ಮೀರಿ ನಿರ್ಮಾಣವಾಗುತ್ತಿರುವ ಕಟ್ಟಡಗಳೇ ಸಾಕ್ಷಿ. ನಿರ್ಮಾಣ ಹಂತದಲ್ಲೇ ಸ್ಥಳವನ್ನು ಪರಿಶೀಲನೆ ನಡೆಸಿ, ಇಂತಹ ಉಲ್ಲಂಘನೆಗಳನ್ನು ತಡೆಯುವುದು ಬಿಬಿಎಂಪಿ ಅಧಿಕಾರಿಗಳ  ಜವಾಬ್ದಾರಿ. ಉಲ್ಲಂಘನೆಯನ್ನು ತಡೆಯಬೇಕಾದ ಅಧಿಕಾರಿಗಳೇ ಸ್ವತ್ತಿನ ಮಾಲೀಕರ ಜೊತೆ ಶಾಮೀಲಾಗಿ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವವರೆಗೂ ಕ್ರಮ ಕೈಗೊಳ್ಳದೇ ಅಕ್ರಮಗಳನ್ನು ಪೋಷಿಸುತ್ತಿರುವುದು ಗುಟ್ಟಿನ ವಿಚಾರವೇನಲ್ಲ. ಕಣ್ಣೆದುರೇ ನಿಯಮ ಉಲ್ಲಂಘನೆ ಕಾಣಿಸುತ್ತಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ಸಂಖ್ಯೆಯೇ ಜಾಸ್ತಿ ಇದೆ. ಕಟ್ಟಡ ನಿಯಮ ಉಲ್ಲಂಘನೆಗೆ ಅಧಿಕಾರಿಗಳೂ ಪರೋಕ್ಷವಾಗಿ ಸಹಕರಿಸುತ್ತಿರುವುದರಿಂದಲೇ ನಗರ ಅಸ್ತವ್ಯಸ್ತವಾಗಿ ಬೆಳವಣಿಗೆ ಹೊಂದುತ್ತಿದೆ. ಅಧಿಕಾರಿಗಳು ಸಾರ್ವಜನಿಕ ಹಿತಾಸಕ್ತಿಯನ್ನೇ ಮರೆತು ಕಟ್ಟಡ ಬೈಲಾ ಉಲ್ಲಂಘಿಸುವವರ ಬೆಂಬಲಕ್ಕೆ ನಿಲ್ಲುತ್ತಿರುವುದು ವಿಪರ್ಯಾಸವೇ ಸರಿ. ನಿಯಮ ಉಲ್ಲಂಘನೆಯನ್ನು ಸಕ್ರಮಗೊಳಿಸಲು ಇರುವ ಗರಿಷ್ಠ ಮಿತಿಯನ್ನು ಶೇ 15ಕ್ಕೆ ಹೆಚ್ಚಿಸುವ ಬದಲು, ಇಂತಹ ನಿಯಮ ಉಲ್ಲಂಘನೆಗೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳನ್ನು ಮುಲಾಜಿಲ್ಲದೇ ಶಿಕ್ಷೆಗೆ ಗುರಿಪಡಿಸುವ ಕಾನೂನನ್ನು ಇನ್ನಷ್ಟು ಬಿಗಿಗೊಳಿಸುವ ತುರ್ತು ಅಗತ್ಯ ಇದೆ. ‘ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿರುವ ಸ್ವತ್ತಿನ ಮಾಲೀಕರಿಗೆ ಒಂದು ಸಲ ದಂಡ ವಿಧಿಸಿ, ಅದನ್ನು ಸಕ್ರಮಗೊಳಿಸುವುದು ಸಾಧುವಲ್ಲ. ಅದರ ಬದಲು ಅವರು ತಮ್ಮ ತಪ್ಪಿಗೆ ಪ್ರತಿ ವರ್ಷವೂ ದಂಡ ತೆರುವ ರೀತಿ ನಿಯಮ ತಿದ್ದುಪಡಿ ಮಾಡಬೇಕು. ಆಗ ಇಂತಹ ಉಲ್ಲಂಘನೆಗಳಿಗೆ ತನ್ನಿಂದ ತಾನೆ ಕಡಿವಾಣ ಬೀಳಲಿದೆ. ಸಣ್ಣ ಪುಟ್ಟ ಉಲ್ಲಂಘನೆ ಮಾಡುವ ಮುನ್ನವೂ ಹತ್ತು ಬಾರಿ ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ’ ಎಂಬುದು ನಗರ ಯೋಜನಾ ತಜ್ಞರ ಸಲಹೆ. ಈಗಲೂ ಕಾಲ ಮಿಂಚಿಲ್ಲ. ತಪ್ಪುಗಳನ್ನು ಮುಚ್ಚಿಹಾಕುವ ಉದ್ದೇಶದಿಂದ ತಯಾರಿಸಲಾದ ಬಿಬಿಎಂಪಿಯ ಕಟ್ಟಡ ಉಪವಿಧಿಗಳ ತಿದ್ದುಪಡಿ ಪ್ರಸ್ತಾವಕ್ಕೆ ಸಚಿವ ಸಂಪುಟ ಯಾವುದೇ ಕಾರಣಕ್ಕೂ ಅನುಮೋದನೆ ನೀಡಬಾರದು. ಇ‌ದಕ್ಕೆ ಅನುಮೋದನೆ ನೀಡಿದರೆ ಅದು, ಕಾನೂನು ಪಾಲನೆ ಮಾಡುವವರಿಗೆ ಮಾಡುವ ಅವಮಾನ
ವಲ್ಲದೇ ಮತ್ತೇನಲ್ಲ. ಅದರ ಬದಲು ನಿಯಮ ಉಲ್ಲಂಘಿಸುವ ಕಟ್ಟಡ ಮಾಲೀಕರನ್ನು ಹಾಗೂ ಅದಕ್ಕೆ ಸಹಕರಿಸುವ ಅಧಿಕಾರಿಗಳನ್ನು ಶಿಕ್ಷೆಗೆ ಒಳಪಡಿಸುವ ರೀತಿ ನಿಯಮವನ್ನು ಇನ್ನಷ್ಟು ಬಲಪಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು