7

ಜೂಜು–ಬೆಟ್ಟಿಂಗ್‌ ನಿಯಂತ್ರಣ ಪರಿಶೀಲನಾರ್ಹ ಸಲಹೆ

Published:
Updated:

ಜೂಜು ಅಥವಾ ಬೆಟ್ಟಿಂಗ್ ಅನ್ನು ಈಗಿನ ಪರಿಸ್ಥಿತಿಯಲ್ಲಿ ಶಾಸನಬದ್ಧಗೊಳಿಸುವುದು‘ಅಪೇಕ್ಷಣೀಯವಲ್ಲ’ ಎಂದಿರುವ ಭಾರತೀಯ ಕಾನೂನು ಆಯೋಗ, ಅಕ್ರಮ ದಂಧೆಯನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಜೂಜನ್ನು ಪೂರ್ಣಪ್ರಮಾಣದಲ್ಲಿ ನಿಷೇಧಿಸಲು ಸಾಧ್ಯವಿಲ್ಲ ಎಂದಾದಲ್ಲಿ, ಅದರ ಪರಿಣಾಮಕಾರಿ ನಿಯಂತ್ರಣವೊಂದೇ ಉಳಿದಿರುವ ದಾರಿ ಎಂದು ಶಿಫಾರಸಿನಲ್ಲಿ ತಿಳಿಸಿದೆ. ಈ ನಿಟ್ಟಿನಲ್ಲಿ ಅದು ಕೆಲವು ಮಾರ್ಗಸೂಚಿ ಹಾಗೂ ರಕ್ಷಣಾ ಕ್ರಮಗಳನ್ನು ಸೂಚಿಸಿರುವುದು ಆಸಕ್ತಿಕರವಾಗಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎಸ್. ಚೌಹಾಣ್ ಅಧ್ಯಕ್ಷತೆಯ ಆಯೋಗವು ‘ಕ್ಯಾಶ್‌ಲೆಸ್’ ವಹಿವಾಟಿನ ಜೂಜಿನ ಸಾಧ್ಯತೆಯ ಮೇಲೆ ಬೆಳಕು ಚೆಲ್ಲಿದೆ. ಆಧಾರ್ ಹಾಗೂ ಪ್ಯಾನ್ ಕಾರ್ಡ್ ಅನ್ನು ವ್ಯವಹಾರಕ್ಕೆ ಜೋಡಿಸುವುದರ ಮೂಲಕ ಜೂಜಾಡುವವರ ಮೇಲೆ ನಿಗಾ ಇಡುವುದು ಅದು ಸೂಚಿಸಿರುವ ಜಾಣ ದಾರಿ. ‘ಪ್ರಾಪರ್ ಗ್ಯಾಂಬ್ಲಿಂಗ್’ ಹಾಗೂ ‘ಸ್ಮಾಲ್ ಗ್ಯಾಂಬ್ಲಿಂಗ್’ ಎಂದು ಎರಡು ಭಾಗಗಳಾಗಿ ಜೂಜನ್ನು ವಿಂಗಡಿಸಬೇಕೆಂಬ ಉಲ್ಲೇಖವೂ ಶಿಫಾರಸಿನಲ್ಲಿ ಇದೆ. ಮೊದಲನೇ ಬಗೆಯದು ಶ್ರೀಮಂತರಿಗೆ ಸಂಬಂಧಿಸಿದ್ದು, ಎರಡನೆಯದು ಕಡಿಮೆ ಆದಾಯ ಇರುವವರಿಗೆ ಅನ್ವಯ. ಈಗ ಬಹುತೇಕ ಜೂಜಾಟಗಳು ಭೂಗತವಾಗಿಯೇ ನಡೆಯುತ್ತಿವೆ. ಇದರಿಂದ ಅಪರಾಧದ ಪ್ರಮಾಣವೂ ಹೆಚ್ಚುತ್ತಿದೆ. ಭೂಗತಲೋಕದ ಪಾತಕಿಗಳನ್ನು ಹಾಗೂ ಜೂಜಾಟ ಮೋಹಿಗಳನ್ನು ಒಟ್ಟಾಗಿ ಹಿಡಿದಿಟ್ಟಿರುವ ಕಬಂಧಬಾಹುಗಳನ್ನು ಸಡಿಲಿಸುವ ದೊಡ್ಡ ಸಾಧ್ಯತೆಯನ್ನು ಈ ಶಿಫಾರಸು ತೆರೆದಿಟ್ಟಿದೆ. ಆದಾಯ ತೆರಿಗೆ, ಜಿಎಸ್‌ಟಿ ಅಡಿಯಲ್ಲಿ ತೆರಿಗೆ ವಿಧಿಸಿ, ಅದರಿಂದ ಬರುವ ಆದಾಯವನ್ನು ಜನಕಲ್ಯಾಣಕ್ಕೆ ಬಳಸಬಹುದು ಎಂದೂ ‘ಲೀಗಲ್ ಫ್ರೇಮ್ ವರ್ಕ್: ಗ್ಯಾಂಬ್ಲಿಂಗ್ ಅಂಡ್ ಸ್ಪೋರ್ಟ್ಸ್ ಬೆಟ್ಟಿಂಗ್ ಇನ್‌ಕ್ಲೂಡಿಂಗ್ ಕ್ರಿಕೆಟ್ ಇನ್ ಇಂಡಿಯಾ’ ಎಂಬ ಹೆಸರಿನ ಈ ವರದಿ ಶಿಫಾರಸು ಮಾಡಿದೆ. ಬೆಟ್ಟಿಂಗ್ ಅಥವಾ ಜೂಜನ್ನು ಹೀಗೆ ನಿಯಂತ್ರಣದ ವ್ಯಾಪ್ತಿಗೆ ತಂದಲ್ಲಿ ಉದ್ಯೋಗಾವಕಾಶ ಸೃಷ್ಟಿಯಾಗಲಿದ್ದು, ವಿದೇಶಿ ನೇರ ಬಂಡವಾಳ ಆಕರ್ಷಿಸುವುದೂ ಸಾಧ್ಯವಾಗುತ್ತದೆ ಎನ್ನುವ ಅಂಶವೂ ಆಶಾದಾಯಕ.

ಟ್ವೆಂಟಿ–20 ಕ್ರಿಕೆಟ್ ಹೆಚ್ಚು ಜನಪ್ರಿಯವಾಗತೊಡಗಿ ವರ್ಷಗಳೇ ಆಗಿದ್ದು, ಅದರ ಜೊತೆ ಜೊತೆಗೇ ಬೆಟ್ಟಿಂಗ್ ದಂಧೆಯೂ ವ್ಯಾಪಕವಾಗಿರುವುದಕ್ಕೆ ಹಲವು ಉದಾಹರಣೆಗಳು ಸಿಗುತ್ತಲೇ ಇವೆ.  ಜೂಜು ನಿಯಂತ್ರಣಕ್ಕೆ ಮಾದರಿ ಕಾನೂನು ರಚಿಸುವ ವಿಚಾರವನ್ನು ಸಂಸತ್‌ ಪರಿಶೀಲಿಸುವುದು ಒಳಿತು ಎಂಬ ಮಾತೂ ಆಯೋಗದ ವರದಿಯಲ್ಲಿದೆ. ಹಲವು ಸ್ತರಗಳಲ್ಲಿ ಅದನ್ನು ಅನುಷ್ಠಾನಕ್ಕೆ ತರಲು ಕೈಗೊಳ್ಳಬೇಕಾದ ಕ್ರಮಗಳ ಚರ್ಚೆಗೂ ಇದು ಸಕಾಲ. ನಾಗಾಲ್ಯಾಂಡ್‌ ಹಾಗೂ ಸಿಕ್ಕಿಂನಲ್ಲಿ ಮಾತ್ರ ‘ಆನ್‌ಲೈನ್‌ ಸ್ಕಿಲ್‌ಗೇಮ್‌’ಗೆ ಅನುಮತಿ ಇದ್ದು, ಅದನ್ನು ನಿಯಂತ್ರಿತ ಮಾದರಿಯಲ್ಲಿ ಉಳಿದ ರಾಜ್ಯಗಳಿಗೂ ವಿಸ್ತರಿಸುವ ಇನ್ನೊಂದು ಸಾಧ್ಯತೆಯ ಮೇಲೂ ಆಯೋಗ ಬೆಳಕು ಚೆಲ್ಲಿದೆ. ‘ಸ್ಕಿಲ್‌ ಗೇಮ್‌’ಗಳನ್ನು ಜೂಜು ನಿಷೇಧ ಕಾನೂನುಗಳ ವ್ಯಾಪ್ತಿಯಿಂದ ಹೊರಗಿಡುವುದು ಹಾಗೂ ಅವುಗಳನ್ನು ಅಶ್ಲೀಲ ಜಾಹೀರಾತುಗಳ ಸೋಂಕಿಲ್ಲದಂತೆ ಮಾಡುವ ಪ್ರಸ್ತಾವವೂ ಸಾಮಾಜಿಕ ಆರೋಗ್ಯದ ದೃಷ್ಟಿಯಿಂದ ಸ್ವಾಗತಾರ್ಹವೇ. ಜೂಜು ಮಹಾಭಾರತದಲ್ಲಿಯೇ ಶಾಸನಬದ್ಧ ಎನ್ನುವಂತೆ ಇತ್ತೆಂಬುದನ್ನೂ ಆಯೋಗ ಉಲ್ಲೇಖಿಸಿರುವುದು ನಮ್ಮ ಸಮಾಜದಲ್ಲಿ ಅದು ಒಪ್ಪಿತ ಎನ್ನುವುದಕ್ಕೆ ಪುಷ್ಟಿ ಕೊಡುತ್ತದೆ. ಮ್ಯಾಚ್‌ಫಿಕ್ಸಿಂಗ್‌ನಂಥ ಪಿಡುಗು ಉಲ್ಬಣಿಸಲು ಕಾರಣವಾಗುತ್ತಿರುವ ಅಕ್ರಮ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ಬೆಳ್ಳಿಗೆರೆಯಂತೆ ಈ ಶಿಫಾರಸುಗಳು ಕಾಣುತ್ತಿವೆ.

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !